Monday, 24 October 2016

‘ಯಾರಿ’, ಕಲ್ಲುಹಾದಿ ಮತ್ತು ಲೈಬ್ರರಿ,(ಅಂಕಣ),-- ಚಂದ್ರು ಎಂ ಹುಣಸೂರು

‘ಯಾರಿ’, ಕಲ್ಲುಹಾದಿ ಮತ್ತು ಲೈಬ್ರರಿ,, 
                 
                  ಯಾರೋ ವಿದೇಶಿ ಸ್ತ್ರೀ. ‘ಯಾರಿ’ ಅಂತಿರಬೇಕು ಅವರ ಹೆಸರು. ಸುಮಾರು 50-55 ಆಸುಪಾಸಿನ ಬೆಳ್ಳನೆಯ ಸಣ್ಣ ಮೈಯವರು. ಎಲ್ಲರು ಮೇಡಂ ಮೇಡಂ ಅಂತಿದ್ದರಿಂದ ಇಂಗ್ಲಿಷ್ ನಲ್ಲಿ ನಮಗೆ ಬೇರಾವ ಸಾಮಾನ್ಯ ಪದದ ಪರಿಪಕ್ವ ಪರಿಚಯವಿಲ್ಲದ ಕಾರಣ ನಾವು ಹಾಗೆಯೇ ಅನ್ನಬಹುದಾಗಿತ್ತು. ಅವರÀ ಉಡುಗೊರೆಯಾಗಿ ಒಂದು ಚಿಕ್ಕ ಪುಸ್ತಕ ಭಂಡಾರ ಸರ್ವಧರ್ಮ ಸಮನ್ವಯ ರಾಷ್ಟ್ರ ಭಾರತದ, ಕಾವೇರಿಯ ತವರು ಕರ್ನಾಟಕ ರಾಜ್ಯದ, ಸಾಂಸ್ಕøತಿಕ ನಗರ ಮೈಸೂರು ಜಿಲ್ಲೆಯ, ತೇಗದನಾಡು ಹುಣಸೂರು ತಾಲ್ಲೂಕಿನ ಒಂದು ಚಿಕ್ಕ ಹಳ್ಳಿ ತಿಪ್ಪಲಾಪುರಕ್ಕೆ, ತಂಬಾಕುವಿನ ತಾಪತ್ರೆಗಳ ತಾಣಕ್ಕೆ ನಂದನವನದ ಸವಿಗನಸಿನ ರೂಪದಲ್ಲಿ ನಾನು ಡಿಗ್ರೀ ಓದುವಾಗ ಮಟಮಟ ಮಧ್ಯಾಹ್ನ ಆಶ್ಚರ್ಯದೊಂದಿಗೆ ಡಾಂಬಾರು ಹಾದಿಯ ಕಲ್ಲುಗಳ ಮೇಲೆ ಧಾವಿಸಿ ಬದಿತ್ತು. ಕಾಲೇಜು ಮುಗಿಸಿ ಬಸ್ಸಿಳಿದು ಗೆಳೆಯ ಸತೀಶ ಮತ್ತು ನಾನು ಮನೆಕಡೆ ದಾಪುಗಾಲಿಡುವಾಗ ದಿಡೀರ್ ಆಮಂತ್ರಣ ಬಂದ ಕಾರಣ ಮಿನಿ ಗ್ರಂಥಾಲಯ ಲೋಕಾರ್ಪಣ ಕಾರ್ಯಕ್ರಮಕ್ಕೆ ದಾವಿಸಬಾಕಾಯ್ತು.
ತಳ-ಬುಡ ಒಂದು ಅರಿಯದ ನಮಗೆ ಗ್ರಂಥಾಲಯ ಯಾವ ಸಂಸ್ಥೆಯ ಸೇವೆಯ ರೂಪ, ಯಾವ ವ್ಯಕ್ತಿಯ ಉಡುಗೊರೆ, ಯಾವ ಅನುಧಾನಿತ ಯೋಜನೆ, ಯಾವ ಮೋಸಗಾರಿಕೆಯ ಬಯಲಾಟ, ಹೀಗೆ ಒಂದು ತಿಳಿದಿರಲಿಲ್ಲ. ಕಾರ್ಯಕ್ರಮದ ಬದಿಯಲ್ಲಿ ಫಳಫಳ ಹೊಳೆಯುತ್ತಿದ್ದ, ಮಿರಮಿರ ಮಿನುಗುತ್ತಿದ್ದ, ನಳನಳ ನಳಿಸುತ್ತಿದ್ದ ಹೊಚ್ಚ ಹೊಸ ಪುಸ್ತಕಗಳ ಕಟ್ಟುಗಳೇ ಅಕ್ಷಿಗೆ ಅತ್ಯಾಕರ್ಷಣೆಯ ಕೇಂದ್ರವಾಗಿದ್ದವು. ‘ಯಾರಿ’ಯಮ್ಮ ಚಟಾರ್ ಪಟಾರ್ ಎಂದು ಇಂಗ್ಲೀಷ್‍ನಲ್ಲಿ ಮಾತನಾಡಿ ನಮ್ಮನ್ನು ದಿಗ್ಭ್ರಾಂತಗೊಳಿಸಿದ್ದಳು. ಎಲ್ಲಕ್ಕಿಂತ ಮಿಗಿಲಾಗಿ ಚಕಚಕ ಅಂತ, ತರಾತುರಿಯಲ್ಲಿ, ಪೂರ್ವಸಿದ್ಧತೆಯಲ್ಲಿದೆ, ಶ್ರದ್ಧೆಯಿಲ್ಲದೆ ರೂಪುಗೊಂಡಿದ್ದ ಆ ಕಾರ್ಯಕ್ರಮದ ಸಭಿಕರ ಸ್ಥಿತಿ-ಗತಿ, ಸ್ಥಾನ ಮಾನ, ವೇಷ-ಭೂಷಣ ಸಾಧಾರಣ ಮತ್ತು ಅಸಾಮಾನ್ಯ. ಏಕೆಂದರೆ ಕಾರ್ಯಕ್ರಮ ಹೇಗೆ ‘ಮಾಡಿದರಾಯ್ತು’ ಎಂಬಂತೆ ರೂಪುಗೊಂಡಿತ್ತೋ ಹಾಗೆ ‘ಕೂತು ಬಂದರಾಯು’್ತ ಎಂಬುವವರÀ ಬಳಗವೇ ಅಲ್ಲಿ ವೀಕ್ಷಕ ಜವಬ್ದಾರಿಯನ್ನು ಅಲಂಕರಿಸಿತ್ತು. ಆ ವೀಕ್ಷಕರು ಓದುಗರೋ, ವಿದ್ಯಾರ್ಥಿಗಳೋ, ಅಕ್ಷರಸ್ಥರೋ, ನೆಮ್ಮದಿಗರೋ ಆಗಿರಲಿಲ್ಲ. ಆಗತಾನೆ ತಂಬಾಕುವಿನೊಂದಿಗೆ ಸರಸವಾಡಿ ಬಂದವರಾಗಿದ್ದ ಹೆಂಗಸರ ದಂಡು ಅದು. ಹಿಂಬದಿಯಿಂದ ಜುಟ್ಟು ಹೆಂಗಸರು ಎನ್ನುತ್ತಿತ್ತು, ಧರಿಸಿಕೊಂಡಿದ್ದ ಷರ್ಟು ಅವರು ಹೆಂಗಸರ ಎಂದು ಸಂಶಿಸಲು ಮೂಲವಾಗಿತ್ತು. ಏಕೆಂದರೆ ತಂಬಾಕುವಿನ ಚಟುವಟಿಕೆಗೆ ಹೆಂಗಸರು ಕೂಡ ಹೆಚ್ಚಾಗಿ ತಮ್ಮವರ ಷರ್ಟುಗಳನ್ನೇ ಧರಿಸುತ್ತಾರೆ. ವಿದೇಶಿಗಳಾದ ‘ಯಾರಿ’ ಇನ್ನೂ ಭಾರತ ಬಡತನದಲ್ಲಿಯೇ ಇದೆ, ಇಲ್ಲಿಗೇನಾದರೂ ಮಾಡಬೇಕು ಎಂದು ಮತ್ತೊಮ್ಮೆ ಕರುಣೆಯಿಂದ ನೊಂದುಕೊಂಡಿದ್ದರೆ ಅದಕ್ಕೆ ಹೆಂಗಸರು ಮಾತ್ರವಲ್ಲದೆ ಅವರ ಅಮಾಯಕ ನಗು, ನೆಲದ ಮೇಲೆ ಅಚ್ಚುಕಟ್ಟಾಗಿಯೇ ಕುಳಿತಿರುವ ಭಂಗಿ, ಅವರ ವಸ್ತ್ರ, ಹಳದಿ ಹಲ್ಲು ಕೂಡ ಮುಖ್ಯ ಪಾತ್ರದಾರಿಗಳಾಗುತ್ತವೆ. ಉರಿಬಿಸಿಲಿನಲ್ಲಿ ಹೊಗೆಸೊಪ್ಪನ್ನು ಗದ್ದೆಯೊಲಗಳ ಅನುಬಂಧದಿಂದ ಬಿಡಿಸಿ ಹದಮಾಡಲು ಮನೆಗೆ ತರುವಲ್ಲಿ ಹೆಂಗಸರ ಕೈ ಬಹಳ ಮುಖ್ಯ. ಆದ್ದರಿಂದ ಎಲ್ಲಾ ಕಾರ್ಯಕ್ರಮ ವೀಕ್ಷಕರು ತಮ್ಮ  ತಮ್ಮ ಕೊಳೆಯೆನ್ನಲು ಹಿರಿದಾದ ಗಲೀಜೆನ್ನಲು ಕಿರಿದಾದ ಹಸ್ತಗಳನ್ನು ಹಿಂಬದಿ ಕಟ್ಟಿಕೊಂಡು ಕುಳಿತಿದ್ದರು. ಬಿಳಿಯ ಹಸ್ತಗಳು ಕಪ್ಪಗಾಗಿದ್ದವು, ಹಿಂದೆ ನಿಂತು ಕಾರ್ಯಕ್ರಮ ವೀಕ್ಷಿಸುತ್ತಿದ್ದ ನಮಗೆ ಅದು ಪ್ರತ್ಯಕ್ಷ ಸಾಕ್ಷಿಯಾಗಿ ಹಾಸ್ಯಮಯವಾಗಿತ್ತು. ಹಾಸ್ಯಮಯವಾಗಿದ್ದು ಗಲೀಜಿನ ಕೈಯಲ್ಲ, ಹಿಂಬದಿಗೆ ಮರೆಮಾಚಿದ್ದ ಸ್ಥಿತಿ. ನಮ್ಮ ಕೈಗಳು ಆ ಕೊಳಕುತನಕ್ಕೆ ಹೊರತಾಗಿಲ್ಲ, ಹೊಗೆಸೊಪ್ಪಿನ ಕೃಷಿ ಬಲ್ಲವರೇ ಬಲ್ಲವರು. ಎಷ್ಟೇ ನೀಟಾಗಿ ಕೆಲಸ ಮಾಡುತ್ತೇನೆ ಅಂದು ಕೊಂಡರು ಹೊಗೆಸೊಪ್ಪು ಹದಮಾಡುವ ಕೃಷಿ ಸ್ವಚ್ಛತೆಯನ್ನು ಹತ್ತಿರ ಸೇರಿಸುವುದೇ ಇಲ್ಲ.
                                   
ಹೀಗೆ ಯಾರಿ ನೀಡಿದ ಲೈಬ್ರರಿ ಕಾಣಿಕೆಗೆ ಮತ್ತೊಬ್ಬರು ಪ್ರಮುಖ್ಯ ಕಾರಣಕರ್ತರು ಪಿ. ಮಲ್ಲೇಶ್ ಎಂಬುವವರು. ಊರಿನ ಪಕ್ಕದದವರು, ಹೆಂಗಸರ ಸ್ವಸಹಾಯ ಸಂಘಗಳಲ್ಲಿ ಸಕ್ರೀಯರು. ದಾನವಾಗಿ ಬರುತ್ತಿದ್ದ ಪುಸ್ತಕ ಭಂಡಾರವನ್ನು ನಮ್ಮ ಹಳ್ಳಿಗೆ ಬರುವಂತೆ ಸಿಫಾರಸ್ಸು ಮಾಡಿದವರು ಅವರೆ. ಅಂದಿನ ಕಾರ್ಯಕ್ರಮದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲವೆಂಬಂತಿದ್ದ ನಾವುಗಳೇ ಪ್ರಮುಖ ವೀಕ್ಷಕರಾಗಿದ್ದು ಅನಿವಾರ್ಯವಾಗಿತ್ತು. ಆ ಇಂಗ್ಲೀಷ್ ಭಾಷಣ ನಮಗಲ್ಲದೆ ನಮ್ಮವರಿಗೆ ಹೇಗೆ ಅರ್ಥವಾಗಬೇಕು. ಹೇಗೋ ಏನೋ ಎ ಬಿ ಸಿ ಡಿ ತಿಳುವಳಿಕೆ ಸ್ವಲ್ಪ ಅರ್ಥಗ್ರಹಿಕೆ ನೀಡಿತ್ತು. ಆದ್ದರಿಂದಲೋ ಏನೋ ‘ಯಾರಿ’ಯವರ ಭಾಷಣವಾಗುತ್ತಿದ್ದಂತೆ ಅವರು ಏನು ಭಾಷಣ ಮಾಡಿದರು ಹೇಳು ಎಂದು ಅಲ್ಲಿನ ನಮ್ಮವರೊಬ್ಬರು ಪಟ್ಟುಹಿಡಿದು ನನ್ನನ್ನು ಪೀಕಲಾಟಕ್ಕೆ ಸಿಲುಕಿಸಿದ್ದರು. ಬಾಯಿಗೆ ಬಂದಂತೆ ಅನಿಸಿದ್ದನ್ನು ತೊದಲಿದ್ದೆ. ಈ ಲೈಬ್ರರಿಯನ್ನು ‘ಯಾರಿ’ಯವರು ತಮ್ಮ ಮೊಮ್ಮಗನ ಹೆಸರಿನಲ್ಲೇನೋ ನೀಡುತ್ತಿದ್ದಾರೆ, ಎಂದು ಭಾಷಣದಲ್ಲಿ ಕೇಳಿದ ನೆನಪು. ಹೀಗೆ ಅಂತೂ ಇಂತೂ ಕಾರ್ಯಕ್ರಮ ಮುಗಿಯುವ ಮುನ್ನ ಚಪ್ಪಾಳೆ ಮಾತ್ರ ಎಲ್ಲರಿಂದಲೂ ಅಜ್ಞಾನಾರ್ಥ ಸೂಚಕವಾಗಿ, ಮಗ್ಗಿಕಾ ಮಗ್ಗಿ ರೂಪದಲ್ಲಿ, ನೊಗ ಸರಿದ ಎತ್ತು ಕೊಸರಿ ದೂರವಾಗುವಂತೆ ಉಪಸಂಹಾರ ಸೂಚಕವಾಗಿ ಪಟಪಟ ಎಂದು ಅಂತ್ಯವನ್ನಾಡಿದವು. ‘ಯಾರಿ’ಯಮ್ಮ ಹೊರಗೆ ಬಂದು ಗುಂಪಾಗಿ ಧಾವಿಸುತ್ತಿದ್ದ ದನಕರುಗಳನ್ನು, ಮುಗ್ಧವಾಗಿ ನೋಡುವ ನನ್ನವರನ್ನು, ಪಾರ್ಥೇನಿಯಮ್, ಸಗಣಿ, ಕಲ್ಲು, ಮತ್ತು ಹಳ್ಳಗಳಿಂದ ಕೂಡಿದ್ದ ರಸ್ತೆಯನ್ನು ನೋಡಿ ಧನ್ಯಳಾದಂತೆ ಭಾವಿಸಿ ಅಂಬಾಸಿಡರ್ ಕಾರ್ ಹತ್ತಿ ಹೊರಟರು. ಗ್ರಂಥಾಲಯ ಮೇಲ್ವಿಚಾರಕರೋ ಉಸ್ತುವಾರಿಯೋ ಆದ ಯಾರೋ ಒಬ್ಬ ಪುಸ್ತಕ ಪಡೆಯಬಹುದು ಎಂದು ಹೇಳಿದ. ಹಾಗೆ ಇದ್ದವರೆಲ್ಲ ಅತ್ತ ಧಾವಿಸಿದೆವು.
ಶಾಲಾ ಮಕ್ಕಳು, ಹಿರಿಯರು ಸೇರಿದಂತೆ ಕೆಲವರು ತಮಗೆ ಚಂದ ಕಾಣಿಸುವ ಆಕರ್ಷಣೆ ಎನಿಸುವ ಪುಸ್ತಕಗಳನ್ನು ಹಿಡಿದು ನೋಟ್ ಒಂದರಲ್ಲಿ ತಮ್ಮ ತಮ್ಮ ಹೆಸರು, ಪುಸ್ತಕದ ಹೆಸರು, ಪುಸ್ತಕ ಪಡೆದ ದಿನಾಂಕವನ್ನು ಭರ್ತಿಮಾಡಿ ವಿಚಿತ್ರವಾದ, ಅಸಾಧ್ಯವೂ ಆದ ಸಹಿಮಾಡಿ ಹೋಗುತ್ತಿದ್ದರು. ಹೊಸ ಪುಸ್ತಕಗಳ ಸುವಾಸನೆ ಸರ್ಕಾರಿ ಶಾಲೆಯಲ್ಲಿ ವಿತರಿಸುತ್ತಿದ್ದ ಪಠ್ಯಪುಸ್ತಗಳಿಂದ ಅನುಭವವಾಗಿತ್ತು. ಆ ‘ಉಚಿತ ವಿತರಣೆಗಾಗಿ’ ಎಂದಿರುತ್ತಿದ್ದ ಪುಸ್ತಕದ ಮುಖಪುಟದ ಮುಖ್ಯ ಬರಹವನ್ನೇ ಹೆಚ್ಚಾಗಿ ನೋಡಿದ್ದ ಕಣ್ಣುಗಳಿಗೆ ಈ ನವನವೀನ ವಿನ್ಯಾಸದ ವರ್ಣರಂಜಿತ ಪುಸ್ತಕಗಳು ಚೈತನ್ಯವಾಗಿ ಸನಿಹ ಸೆಳೆಯುವಲ್ಲಿ ಯಶಸ್ವಿಯಾದವು. ಅಂದು ನನ್ನ ಕೈಗೆ ಸಿಕ್ಕ ಒಂದು ಪುಸ್ತಕ ಎಂದಿಗೂ ಬಿಡಿಸಲಾಗದ ಅನುಭಂದವನ್ನು ನನ್ನಲ್ಲಿ ಸ್ಫುರಿಸುತ್ತದೆ. ಆ ಪುಸ್ತಕದಿಂದ ನಾ ಹೊಂದಿದ ರಸಾನುಭವವೇ ಇಂದಿಗೂ ನನ್ನೂರಿನ ಗ್ರಂಥಾಲಯದ ಲೋಕಾರ್ಪಣಾ ಕಾರ್ಯಕ್ರಮವನ್ನು ವಿವರಿಸಿ ಬರೆವಂತೆ ತಾಲೀಮು ನೀಡಿತು ಎಂದರೆ ತಪ್ಪಾಗಲಾರದು.
ಆರೋಗ್ಯಕ್ಕೆ ಸಂಬಂಧಪಟ್ಟಂತೆ, ಕೃಷಿಗೆ ಅನ್ವಯವಾಗುವಂತೆ, ಸಾಹಿತ್ಯಕ್ಕೆ ನೆರವಾಗುವಂತೆ, ಜ್ಞಾನಕ್ಕೆ ಪ್ರಚೋಧನಾಕಾರಿಯಾಗುವಂತೆ, ಕನ್ನಡ ಸಾಹಿತ್ಯ ಶ್ರೀಮಂತಿಕೆಯನ್ನು ತಿಳಿಹೇಳುವಂತೆ, ಬದುಕನ್ನು ರೂಪಿಸುವಂತೆ ಹೀಗೆ ನಾನಾ ರೀತಿಯಲ್ಲಿ ಜೀವನ ವಿಕಾಸಕ್ಕೆ ನೆರವಾಗುವ ಹಾಗೆಯೇ ಪುಸ್ತಕಗಳಿದ್ದವು. ಸಣ್ಣ ಪುಸ್ತಕ, ದೊಡ್ಡ ಪುಸ್ತಕ, ಬಣ್ಣ ಬಣ್ಣದ ಪುಸ್ತಕಗಳು ಊರಿನ ಗ್ರಂಥಾಲಯ ಬ್ಯಾಂಕ್‍ನಲ್ಲಿ ಜ್ಞಾನದ ಉಳಿತಾಯ ಖಾತೆಯನ್ನು ಹೆಚ್ಚಿಸಲು ಇಂದಿಗೂ ಬೆಚ್ಚಗಿವೆ. ಪಡೆದು ಓದುವವರ ಸಂಖ್ಯೆಮಾತ್ರ ವಿರಳದಲ್ಲಿ ವಿರಳ ಅಥವಾ ಇಲ್ಲವೇ ಇಲ್ಲ. ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಜಿ.ಎಸ್ ಶಿವರುದ್ರಪ್ಪ, ಪೂರ್ಣಚಂದ್ರ ತೇಜಸ್ವಿ, ಪಿ. ಲಂಕೇಶ್, ಎಸ್.ಎಲ್ ಬೈರಪ್ಪ, ರವಿ ಬೆಳಗೆರೆ ಸೇರಿದಂತೆ ಇನ್ನು ಕೆಲವರ ಪುಸ್ತಕಗಳು ನನ್ನ ಹಳ್ಳಿಯ ಗ್ರಂಥಾಲಯದಲ್ಲಿವೆ, ಗರಿಗರಿಯಾಗಿಯೇ ಶುಭ್ರವಾಗಿ ಕೈ ಸೋಕದಂತೆ ಬಂಧನದಲ್ಲಿವೆ.
ನಾ ಅಂದು ಪಡೆದ ಆ ಪುಸ್ತಕ ಇಂದಿಗೂ ಗ್ರಂಥಾಲಯಕ್ಕೆ ವಾಪಸ್ಸು ಮಾಡಲಾಗಿಲ್ಲ. ನಾ ಓದಿದೆ, ನನ್ನ ಗೆಳೆಯ ಕೃಷ್ಣರಾಜನು ಓದಿದ. ನನ್ನಣ್ಣನೂ ಒಂದೆರೆಡು ಪುm ತಿರುವಿದ. ಮತ್ತೆ ಮತ್ತೆ ಓದಬೇಕು ಎನಿಸುವ ಆ ಪುಸ್ತಕವನ್ನು ಮತ್ತೆ ಓದಲು ನನ್ನ ಗೆಳೆಯ ಕೃಷ್ಣರಾಜ ತನ್ನ ಬಳಿಯೇ ಇಟ್ಟುಕೊಂಡಿದ್ದಾನೆ. ಬೆಳ್ಳಗಿದ್ದ ಪುಟಗಳು ಬಣ್ಣ ಬದಲಿಸುವಲ್ಲಿವೆ. ಮೊದಲ ಪುಟದಲ್ಲಿನ ಸೀಲು ಗ್ರಂಥಾಲಯವನ್ನು ಜ್ಞಾಪಿಸುತ್ತದೆ. ಇದಾದ ನಂತರ ನನ್ನ ಸಹವಾಸಕ್ಕೆ ಬಂದ ಗೆಳೆಯ-ಗೆಳತಿಯರಿಗೂ ಆ ಪುಸ್ತಕ ಕೊಂಡು ಓದುವಂತೆ ಪ್ರೇರೇಪಿಸಿ ಸಫಲನಾದೆ. ಇಷ್ಟೆಲ್ಲ ಹೇಳಿಸಿದ ಆ ಪುಸ್ತಕ ನನ್ನ ಕವಿ ‘ಕುವೆಂಪು’ರವರ ‘ಕಾನೂರು ಹೆಗ್ಗಡಿತಿ’.
ಓದುವ ಹವ್ಯಾಸಕ್ಕೆ ಗ್ರಂಥಾಲಯವೇ ಸ್ನೇಹಿತ. ಖಾಲಿ ಖಾಲಿ ಕಾಣುವ ಗ್ರಂಥಾಲಯವೊಂದನ್ನು ಬೆಂಗಳೂರಿನಲ್ಲಿ ನೋಡಿ ಈ ಅಂಕಣ ಹುಟ್ಟಿಕೊಂಡಿತು. ಧನ್ಯವಾದ.....



No comments:

Post a Comment