ಶೀರ್ಷಿಕೆ:- ಚಪ್ಪಲಿ ಏಟು!!
ರಜೆಯ ಕಾರಣದಿಂದ ಶಶಿಯು ಅಜ್ಜಿಯನ್ನು ಕಂಡುಬರುವ ದಿಸೆಯಿಂದ ಕಲ್ಲೂರಿಗೆ ಹೋಗದಿದ್ದರೆ ಇಂದು ಅವನು ನಮ್ಮ ಹಿಂದಿನವರ ಆಚರಣೆಯನ್ನು ಮೂಢನಂಬಿಕೆಯನ್ನು ಚಪ್ಪಲಿಯಿಂದ ಹೊಡೆಯಬೇಕು ಎಂದುಕೊಳ್ಳುತ್ತಿರಲಿಲ್ಲ.
ಬಣ್ಣದಲ್ಲಿ ಖಾಖಿಯಾಗಿದ್ದು ಹೆಗಲಿಗೆ ನೇತು ಹಾಕಿಕೊಳ್ಳಲು ಸೂಕ್ತವಾಗಿತ್ತು ಆ ಬ್ಯಾಗು. ಅದರಲ್ಲಿ ಅಸುಗೂಸುಗಳ ಬಣ್ಣಬಣ್ಣದ ಬಟ್ಟೆಗಳನ್ನು ತುಂಬಿಕೊಂಡು ಜೊತೆಗಿಷ್ಟರಂತೆ ಮಾರುವ ಆಸಾಮಿಯೊಬ್ಬ ಶಶಿಯ ಪಕ್ಕದಲ್ಲಿ ಬಂದು ಕುಂತ. ಹುಣಸೂರಿನಿಂದ ಕೆ ಆರ್ ನಗರಕ್ಕೆ ಹೋಗುವ ಕೆಎಸ್ಆರ್ಟಿಸಿ ಕೆಂಪು ಬಸ್ಸಿನಲ್ಲಿ ಅಜ್ಜಿಯೂರಿಗೋಗಲು ಬೆಳ್ಳಂಬೆಳಿಗ್ಗೆ ಸ್ನಾನ ಮಾಡಿಕೊಂಡು ಬಂದದ್ದರಿಂದ ಶಶಿ ರಮಣೀಯವಾಗಿ ಕಾಣುತ್ತಿದ್ದದ್ದು ಆ ಆಸಾಮಿ ಸ್ವಲ್ಪ ಮುಜುಗರದಿಂದ ತಾಕಿಯೂ ತಾಕದಂತೆ ಕೂರಲು ಪ್ರಮುಖ ಕಾರಣವಾಗಿತ್ತು. ಶಶಿ ಒಮ್ಮೆ ಆ ಅಪರಿಚಿತನನ್ನು ನೋಡಿ ಮಾಮೂಲಿಯಾಗೆ ಕೂತರು ತನಗೆ ಯಾವ ತೊಂದರೆಯೂ ಇಲ್ಲ ಎಂಬುದನ್ನು ಹುಸಿನಗೆಯ ಮೌನದಿಂದ ತಿಳಿಸಿದ್ದ. ಕಿಟಕಿಯಾಚೆಗಿನ ಬಸ್ಟ್ಯಾಂಡಿನಲ್ಲಿ ನೋಡುವಂತಹ ಬದುಕು ಶಶಿಗೆ ತುಂಬಾ ಇದ್ದುದ್ದರಿಂದ ಬಸ್ಸು ಸ್ಟ್ಯಾಂಡನ್ನು ಬಿಟ್ಟು ಹೋಗುವವರೆಗೂ ಪಕ್ಕದ ಆಸಾಮಿಯನ್ನು ಪರಿಚಯಿಸಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ಪಕ್ಕದಲ್ಲಿ ಬಂದು ನಿಂತ ಗ್ರಾಮೀಣ ಸಾರಿಗೆಯಲ್ಲಿ ಹಳ್ಳಿಗರೇ ಇದ್ದದ್ದು ಮಲ್ಲಿಗೆ ಸುವಾಸನೆಯೂ ಅಷ್ಟೇ ಹೇರಳವಾಗಿ ನುಗ್ಗಿ ಬರಲು ಕಾರಣವಾಗಿತ್ತು. ಮುದುಕಿಯೊಬ್ಬಳು ಬಿದಿರಿನ ಕುಕ್ಕೆಯಲ್ಲಿ ಮಲ್ಲಿಗೆ ಮೊಗ್ಗಿನ ಹಾರವನ್ನು ತುಂಬಿಕೊಂಡು ಇಳಿದು ಯಾವ ದಿಕ್ಕಿಗೆ ಸಂತೆಯೆಂದು ನೋಡುವಾಗ ಹಿಂಬದಿಯಿಂದ ಬೂದುಬಾಳೇಗೊನೆ, ಒಂದು ಮೂಟೆ ಎಲೆಕೋಸನ್ನು ಇಳಿಸಿಕೊಂಡ ಮಧ್ಯವಯಸ್ಸಿಗನೊಬ್ಬ ಅಜ್ಜಿಯನ್ನು ಸಾಗಿಸಿಕೊಂಡು ಎತ್ತಿನಗಾಡಿಯ ಬಾಡಿಗೆಯಲ್ಲಿ ಹೊರಟ. ವೀಳ್ಯಾದೆಲೆ, ಬೀನೀಸ್, ತೆಂಗಿನಕಾಯಿ ಬಸ್ಸಿನಿಂದ ಪಟ್ಟಣಕ್ಕೆ ಶುಭ್ರವಾಗಿ ಬಂದು ತಮ್ಮ ತಮ್ಮ ಯಜಮಾನರೊಡನೆ ಸಂತೆಯೆಡೆಗೆ ಮುಖಮಾಡಿದವು. ರಾಜ್ಯದ ಕೆಲವು ದಿನಪತ್ರಿಕೆಗಳನ್ನು ಹಂಚಿಕೆದಾರರು ಚಿಕ್ಕ ಚಿಕ್ಕ ಹೈಕಳನ್ನು ಕೂಡಿಕೊಂಡು ವಿಶೇಷ ಸಂಚಿಕೆಯನ್ನು ಸೇರಿಸಿ ಸೇರಿಸಿ ಮನೆಮನೆಗೆ ತಲುಪಿಸಲು ಅಣಿಮಾಡುತ್ತಿದ್ದಾರೆ. ಯಾವ ಯಾವ ಪತ್ರಿಕೆಯಿರಬಹುದು ಎಂದು ಇಣುಕಿ ನೋಡುವಷ್ಟರಲ್ಲಿ ಬಸ್ಸು ಹಿಂದಕ್ಕೆ ಚಲಿಸಿ ಎಡಕ್ಕೆ ತಿರುಗಿ ಹೊರಟಿತು.
ಕಂಡಕ್ಟರ್ ಟಿಕೇಟ್ ನೀಡುವಾಗ ಚಿಲ್ಲರೆಯನ್ನು ಅದರ ಹಿಂಬದಿಯಲ್ಲಿ ಬರೆದು ಪೆನ್ನನ್ನು ತನ್ನ ಕಿವಿಯಲ್ಲಿ ಸಿಕ್ಕಿಸಿಕೊಳ್ಳುವವರೆಗೂ ಮೌನಿಯಾಗಿದ್ದ ಶಶಿ ಒಮ್ಮೆಲೆ ಪಕ್ಕದವನೊಡನೆ ಮಾತಿಗೆರಗಿದ. ‘ಹೆಲ್ಲೋ ಸರ್’ ಎಂದಾಗ ಅವ ಕಕ್ಕಾಬಿಕ್ಕಿಯಾದ! ‘ನಮ್ದು ಏಜ್ ಜಾಸ್ತಿ ಅಂತ ಎಲ್ಲ ತಾತ, ಹೊಯ್ ಅಂತಾರೆ. ನೀನು ಸರ್ ಅಂದಿದ್ದು ನಮ್ದು ಅಂತ ಗೊತ್ತಾಗಿಲ್ಲ ಎಂದ ಆತ ಶಶಿಯನ್ನೇ ಕೊಂಚ ಚಕಿತಗೊಳಿಸಿದ. ಆತನ ಹೆಸರು ಜುಲ್ಪಾಕರ್ ಅಂತ, ಮುಸಲ್ಮಾನ. ತನ್ನ ಐದು ಹೆಣ್ಣು ಮಕ್ಕಳನ್ನು ಸಾಧಾರಣವಾಗಿ ಉತ್ತಮರಿಗೆ ಮದುವೆ ಮಾಡಿಕೊಟ್ಟು ಈಗೀಗ ಆ ಮಕ್ಕಳು ಒಬ್ಬೊಬ್ಬರಾಗಿ ಹೊಟ್ಟೆತುಂಬಿಕೊಂಡು ಮನೆಗೆ ಬರುವಾಗ ತನ್ನ ಮಡದಿ ಸತ್ತದ್ದರಿಂದ ಮತ್ತೊಂದು ಕೊನೆ ಮದುವೆ ಮಾಡಿಕೊಂಡಿದ್ದ!. ‘ಒಬ್ದು ಮಗಳ್ದು ಗಂಡ ಲೋಪರ್ ಕುಡ್ಕ, ನಾವೇ ನೋಡ್ಕೋಬೇಕು ಅವ್ರ್ದು, ಇನ್ನೆಲ್ಲ ನಮ್ದೇನು ಇಲ್ಲ, ಅವ್ರ್ ಅವ್ರ್ಗೆ ಚನಾಗೆ ಇದಾರೆ, ಈ ಹೊಸ ಷಾದಿ ಆಯ್ತಲ್ಲ ಸುಮ್ನೆ ಸುಮ್ನೆ ಏನೋ ಬಿಡ್ಕೋತಾರಲ್ಲ ಅಂಗಾಯ್ತು. ಏನು ಮಾಡೋದು ನಮ್ದು ಗ್ರಹಚಾರ ಅಂತಾರಲ್ಲ ಸರೀಗೆ ಇಲ್ಲ
ಕಣೊ, ಈಗಲೆ ಮನೆತುಂಬ ಬರೀ ಬಸುರಿಗಳ್ದೇ, ಈಗ ಮಾಡಿಕೊಂಡ ನಮ್ ಹೊಸ ಬೀವಿಗೂ ಹಂಗೆ ಆದ್ರೆ ನಮ್ದು ಪಾಡು ಅಲ್ಲಾಗೆ ಚಂದ, ಸುಮ್ನೆ ಇರೋದು ಆಗಲ್ಲ ನಮ್ಗೆ ಎಂದು ಜೀವನ ವೃತ್ತಾಂತವನ್ನು ಸ್ವಂತದ್ದು ಎಂಬುದನ್ನು ನೋಡದೆ ನಿರಂತರವಾಗಿ ಹೇಳಿ ಶಶಿಯನ್ನು ಮಂತ್ರಮುಗ್ಧನನ್ನಾಗಿಸಿದ್ದ. ‘ಕೊನೆಯ ಬೀವಿಗೂ ಆದ್ರೆ ನಮ್ದು ಪಾಡು’ ಎಂದು ಗೊಳ್ಳನೆ ನಕ್ಕ ಸಾಬರನ ಹಾಸ್ಯಚಟಾಕಿ ಶಶಿಗೆ ಅರ್ಥವಾಗಿರಲಿಲ್ಲ. ಸ್ವಲ್ಪ ಹೊತ್ತು ಸುಮ್ಮನೆ ಕೂತು ಬಗೆಹರಿಯದ ನಿಘಂಟಿನ ಶಬ್ಧಕ್ಕೆ ಅದೂ ಏನೂ ಬೀವಿಗೂ ಅಂದ್ರೆ ಅಂತ ಕೇಳಿಯೂ ಬಿಟ್ಟ. ‘ಹೆಂಡತಿ’ ಅಂತ ಹೇಳಿ ನೋಡೋದಕ್ಕೆ ಚನ್ನಾಗೆ ಇದಾರೆ ನೀವು ಎಂದು ಜುಲ್ಪಾಕರ್ ಹೊಗಳುವ ಸಮಯಕ್ಕೆ ಕೆ ಆರ್ ನಗರದ ಬಸ್ಟ್ಯಾಂಡ್ ಬಂದಿತ್ತು.
ಬೆಳಗ್ಗಿನ ಪಯಣದಲ್ಲಿ ಎಲ್ಲರೂ ಚೈತನ್ಯದಿಂದಲೇ ಇಳಿಯುತ್ತಾ ಇಳಿದ ಮೇಲೆ ತಮ್ಮ ತಮ್ಮ ಲಗೇಜುಗಳ ಕಾಟದಿಂದ ನಿಮಿರಿ ನಿಮಿರಿ ನಡೆಯುತ್ತಾ ಸಾಗುತ್ತಿದ್ದರು. ಟಿಕೇಟ್ ಕೊಟ್ಟು ಚಿಲ್ಲರೆ ಪಡೆದು ಜುಲ್ಪಾಕರನಿಗೊಂದು ಬಾಯ್ ಹೇಳಿ ಶಶಿ ನಡೆದು ಆಕಡೆ ಹೊರಟ. ತಂದ ಬ್ಯಾಗನ್ನು ತೆರೆದು ಹಸಿಮಕ್ಕಳ ಬಟ್ಟೆ ಕಾಣುವಂತೆ ಮಾಡಿ ಮಕ್ಕಳ್ದು ಬಟ್ಟೆ, ಮಕ್ಕಳ್ದು ಬಟ್ಟೆ ಎನ್ನುತ್ತಾ ಮಂದಿಯಿದ್ದ ಜಾಗಗಳಲ್ಲಿ ಜುಲ್ಪಾಕರ್ ಅಲೆಯ ಹೊರಟ.
ಮೊದಲಿಂದಲೂ ಕೆ ಆರ್ ನಗರದ ಬಸ್ಟ್ಯಾಂಡಿನಿಂದ ಟ್ರೈನು ಸ್ಟ್ಯಾಂಡಿಗೆ ನಡೆದುಕೊಂಡೇ ಹೋಗಿದ್ದು ಅಭ್ಯಾಸವಾಗಿದ್ದರಿಂದ ಆಟೋ, ಆಟೋ ಎನ್ನುತ್ತಿದ್ದ ಕೂಗು ಶಶಿಯನ್ನು ಸೆಳೆಯುವಲ್ಲಿ ವಿಫಲವಾಯಿತು. ದಟ್ಟಣೆಯಲ್ಲಿ ಬಿರುಸಿನ ದೊಡ್ಡ ದೊಡ್ಡ ಹಾಗೂ ಸಣ್ಣ ಸಣ್ಣ ವಾಹನಗಳು ಚಲಿಸುವ ರಸ್ತೆಯಿಂದ ನಡೆದು ನಾಗರೀಕ ಕುಟುಂಬಗಳ ಏರಿಯಾಗಳಿಗೆ ಬಂದಾಗ ಹೊಸಬಗೆಯ ಅನುಭವ ಎಂತವರಿಗೂ ಆಗುತ್ತದೆ. ಹಾಗೆಯೇ ಶಶಿಗೆ ಟ್ರೈನು
ಸ್ಟ್ಯಾಂಡಿಗೆ ಹೋಗೋ ರಸ್ತೆಯ ಬದಿಯಲ್ಲಿ ಸಲಾಗಿರೋ ತಾರ್ಸಿ ಮನೆಗಳ ಮುಂದೆ ಬಣ್ಣ ಬಣ್ಣದ ಚಿಕ್ಕ ಚಿಕ್ಕ ರಂಗೋಲಿ ಕಾಣುತ್ತಿವೆ. ಶಬ್ಧ ಮೌನವಾಗಿರಲು ಯತ್ನಿಸುತ್ತಿದೆ. ಒಂದು ಗ್ಯಾಸ್ ಅಂಗಡಿ ಅದಾಗಲೇ ತೆರೆದು ಗಿರಾಕಿಗಳಿಂದ ತುಂಬಿದೆ. ಒಬ್ಬ ಗೃಹಿಣಿ ಸ್ನಾನವಾದ್ದರಿಂದ ತಲೆಗೆ ಬಿಗಿದು ಬಣ್ಣದ ವಸ್ತ್ರವೊಂದನ್ನು ಕಟ್ಟಿದ್ದಾಳೆ. ಅದೂ ಒದ್ದೆಯಾಗಿದೆ; ಬಾಗಿ ರಂಗೋಲಿ ಬಿಡುವಾಗ ಇಣುಕಿದವನ್ನು ನೋಡಿ ಜಲ್ ಎಂದುಕೊಂಡು ಮತ್ತೆ ಮತ್ತೆ ನೋಡುವ ಮನಸಾಗಿ ತಪ್ಪು ಎಂದು ಕೊಂಡು ಒಮ್ಮೆ ತಿರುಗಿ ಮನಸ್ಸನ್ನು ಕಲಸಿಕೊಂಡು ಸಾಗಿಬಿಟ್ಟ!.
ಅದಾಗಲೇ ಒಂದಿಬ್ಬರು
ಟಿಕೆಟ್ ಕೌಂಟರ್ ನಲ್ಲಿ ನಿಂತಿದ್ದಾರೆ. ಇನ್ನು ಸಮಯವಿದ್ದದ್ದರಿಂದ ಟಿಕೆಟ್ ಮಾಸ್ಟರ್ ಬಂದಿರಲಿಲ್ಲ.
ಮೈಸೂರಿನಿಂದ ಹಾಸನಕ್ಕೆ ಹೋಗುವ ಗಾಡಿಯೊಂದು ಕೂ,, ಎನ್ನುತ್ತಾ ನಿಧಾನವಾಗಿ ನಿಂತಿತು. ಹೆಚ್ಚು ಪ್ರಯಾಣಿಕರು
ಇಳಿಯಲೂ ಇಲ್ಲ, ಏರಲೂ ಇಲ್ಲ. ಕೌಂಟರ್ ನಲ್ಲಿ ಕೇವಲ 5 ರೂಪಾಯಿ ನೀಡಿ ಟಿಕೆಟ್ ಪಡೆದು ಕೆಳಗಿಳಿಯಬೇಕು
ಎನ್ನುವಾಗ ಹೂವಿನ ಭುಟ್ಟಿಯನ್ನು ನೋಡಿ ಯಾಕೆ ಸುಮ್ಮನೆ ಎಂದುಕೊಳ್ಳುತ್ತಾನೆ. ಅಜ್ಜಿಯ ಪತಿ ಅದಾಗಲೇ
ಕೆಲ ವರ್ಷಗಳಿಂದೆಯೇ ಹೋಗಿದ್ದಾನೆ. ತನ್ನ ಚಿಕ್ಕಿಗಾದರೂ ಬೇಕಲ್ಲ ಎಂದು ನೆನೆದು ಒಂದೊ ಮೊಳ ಮಲ್ಲಿಗೆ
ಖರೀದಿಸಿ ಚೌಕಾಶಿ ಮಾಡದೆ ಫ್ಲ್ಯಾಟ್ ಫಾರ್ಮ್ ಗಳತ್ತ ನಡೆದ. ಟ್ರ್ಯಾಕ್ ಬಳಿಗೆ ಇಳಿಯುತ್ತಿದ್ದಂತೆ
ಇಡ್ಲಿಯ ಸುವಾಸನೆ ಗಮ್ ಎನ್ನಲು ತಿನ್ನುವ ಗೋಜಿಗೆ ಹೋಗದೆ ಅಜ್ಜಿ ಮನೆಯಲ್ಲೇ ಎಲ್ಲಾ ಆಗುತ್ತದಲ್ಲ ಎಂದು
ಉಳಿತಾಯ ಮಾಡಿಬಿಟ್ಟ.
ಕೆ ಆರ್
ನಗರದ ಟ್ರೈನು ಸ್ಟ್ಯಾಂಡಿನಲ್ಲಿ ಬೆಳಿಗ್ಗೆ ಎಂಟು ಗಂಟೆಗೆ ಬರುವ ಗಾಡಿಗಾಗಿ ಕಾಯಲು ಕಬ್ಬಿಣದ ಚೇರಿನಲ್ಲಿ ಆಗ ತಾನೆ ಕುಳಿತು ಒಂದು ದಮ್ಮು ಸಿಗರೇಟನ್ನು ಹಚ್ಚಿಕೊಂಡು ಹೊಗೆ ಬಿಡುತ್ತಿದ್ದಾನೆ ಶಶಿ. ಆ ಕಡೆಯಿಂದ ಬರುತ್ತಿದ್ದ ಪೊಲೀಸಿನವ ಕಡಲೆಕಾಯಿ ಮಾರುವವನ ಬಳಿ ಮಾಮೂಲಿ ವಸೂಲಿ ಮಾಡಲು ಒಂದು ಘಳಿಗೆ ನಿಂತದ್ದನ್ನು ಗಮನಿಸಿ ಜೋರಾಗಿ ಒಂದು ದಮ್ಮು ಎಳೆದು ಉಳಿದ ಸಿಗರೇಟಿನ ಉದ್ದವನ್ನು ಒಮ್ಮೆ ನೋಡಿ ಬಿಸಾಕಿದ. ಅದು ಅಲ್ಲಿ ಸಣ್ಣಗೆ ಹೊಗೆಯಾಡಿ ಸತ್ತುಹೋಯಿತು. ಪೊಲೀಸಿನವ ಯಾಕೊ ಅತ್ತಲೇ ಮತ್ತೆ ಹೋದದ್ದನ್ನು ನೋಡಿ, ಈಕಡೆಯ ಸತ್ತ ಸಿಗರೇಟನ್ನು ನೋಡಿ ಸ್ವಲ್ಪ ವಿಲವಿಲ ಎಂದು ಸುಮ್ಮನಾದ. ಒಬ್ಬ(ಳು) ಮಂಗಳಮುಖಿ ಇತ್ತಲೇ ಬರುತ್ತಿದ್ದಾಳೆ(ನೆ). ‘ಚಿಲ್ಲರೆ ಇಲ್ಲ ಎಂದು ಹೇಳುವ’ ಎಂದು ಸುಳ್ಳೊಂದನ್ನು ರೆಡಿಮಾಡಿಕೊಂಡು ದೈರ್ಯವಂತನಂತೆ ಭಂಗಿಯನ್ನು ದೃಢಪಡಿಸಿಕೊಂಡ. ಇವನ ಬಳಿ ಕೇಳಲೆ ಇಲ್ಲ ಅವನು(ಳು), ಸೀದಾ ಉಂಡೆಯಿಲ್ಲದ ಎದೆಯನ್ನು ಕಾಣುವಂತೆ ಸೆರಗ ಸರಿಸಿ ಚಾಚಿಕೊಂಡೇ ಹೆಣ್ಣಿನ ನಡಿಗೆಯ ರೀತಿಯಲ್ಲೇ ಪಾಸಾಗಿಬಿಟ್ಟ(ಟ್ಲು). ಏನೋ ಶನಿ ಹೋಯಿತಪ್ಪ ಎಂದುಕೊಂಡು ತನ್ನ ಎಡಬದಿಯಿಂದ ಬರುತ್ತಿದ್ದ ಚುಕುಬುಕು ಟ್ರೈನನ್ನು ನೋಡಿ ಹರ್ಷನಾದ. ಅದು ಅವನು ಬಾಲ್ಯದಿಂದಲೂ ಸಂಚರಿಸುತ್ತಿದ್ದ ಟ್ರೈನು. ಆಗ ಯಾರಾದರೂ ಜೋಪಾನವಾಗಿ ಅವನನ್ನು ಕರೆದುಕೊಂಡು ಹತ್ತಿಸಿಕೊಂಡು ಇಳಿಸುತ್ತಿದ್ದರು. ಈಗ ಇವನೇ ಒಂದೆರೆಡು ಬಾರಿ ಉಕ್ಕಡದಮ್ಮನಿಗೆ ಪರ ಮಾಡಲೆಂದು ಟ್ರೈನಿನಲ್ಲಿ ಕುಟುಂಬ ಸಮೇತ ಬಂದಾಗ ಚಿಳ್ಳಂಪಿಳ್ಳೆಯ ಮರಿ ಹೈಕಳನ್ನು ಹತ್ತಿಸಿ ಇಳಿಸಿದ್ದಾನೆ.
ಕಿಟಕಿಯ ಪಕ್ಕದಲ್ಲಿ ಕೂರುವ ಹೊತ್ತಿಗೆ ಎದುರಿಗಿದ್ದ ಬಿಳಿಕೇಶದ ಮುದುಕ ತಡೆದ. ಇದಾರೆ, ಇದಾರೆ ಎಂದು ಮುನ್ಸೂಚನೆ ನೀಡಿ ಟಾಯ್ಲೆಟ್ ಕಡೆಗೆ ನೋಡಿದ. ತಡಮಾಡದೆ ಶಶಿ ಮುಂದೆ ಸಾಗಿ ಕಿಟಕಿಯಂಚಿನ ನಂಟನ್ನು ಮರೆತು ಕುಳಿತುಕೊಳ್ಳಲು ನೋಡಿದ. ಅರೇ ಇಲ್ಲೆ ಕಿಟಕಿಯ ಜಾಗ ಖಾಲಿಯಿದೆ ಎಂದುಕೊಳ್ಳುತ್ತಾ ಬೇಗ ಬ್ಯಾಗನ್ನು ಬಿಸಾಕಿ ಜಾಗ ಖಾತರಿ ಪಡಿಸಿಕೊಂಡು ಕುಳಿತ. ಕೆ.ಆರ್ ನಗರದಿಂದ ಕಲ್ಲೂರಿಗೆ ಬರುವಾಗ ಸಾಗರಕಟ್ಟೆ ಜಲದೇವಿಯ ಸೊಬಗನ್ನು ನೋಡಿ ಬಾಲ್ಯದಿಂದಲೂ ಅನುಭವಿಸುತ್ತಿದ್ದ ಸೀನುಗಳು ಯತಾವತ್ತಾಗಿ ಮತ್ತೆ ಹಾಗೆ ಇವೆಯಲ್ಲ ಎಂದುಕೊಂಡು ಪುಳಕವಾಗುವ ಸದುದ್ದೇಶ ಅವನದು. ಕಿಟಕಿಯ ಬಳಿ ಕೂತರೆ ತಾನೆ ದೂರದಲ್ಲಿ ಒಂಟಿ ದೋಣಿ ನಡೆಸುವವನನ್ನು ದಿಟ್ಟಿಸಿ ನೋಡಬಹುದು. ಹೊಲ ಉಳುಮೆ ಮಾಡುವವನು ಮತ್ತು ಆತನಿಗೆ ಭುತ್ತಿಯನ್ನು ಹೊತ್ತು ಬರುತ್ತಿರುವ ತಾಯಿಗೂ ಇರುವ ಅಂತರ ಎಷ್ಟು ಎಂದು ಗೇಣು ಹಾಕಬಹುದು. ಕಲ್ಲೂರು ಟ್ರೈನು ಸ್ಟ್ಯಾಂಡಿಗೆ ಮೊದಲೇ ಸಿಗುವ ಅಜ್ಜಿಯ ತೋಟ, ಮಾವಿನ ಮರ, ಮಲ್ಲಿಗೆ ಬಳ್ಳಿ, ಗಿಡವಾಗಿದ್ದು ಈಗ ಮರವಾಗಿ ಬೆಳೆದಿರುವ ಆ ಸೀತಾಫಲವನ್ನು ನೋಡಿ ತನ್ನದು ಎಂದುಕೊಳ್ಳಬಹುದು!!
ಗಂಡನನ್ನು ಕಳೆದುಕೊಂಡು ಗಂಡಬಿಟ್ಟುಹೋದ ಮನೆಯಲ್ಲಿ ಗಂಡನನ್ನು ಬಿಟ್ಟುಬಂದಿರುವ ಮಗಳ ಜೊತೆ ವಾಸಿಸುತ್ತಿರುವ ಅಜ್ಜಿಗೆ ಶಶಿಯೆಂದರೆ ಇನ್ನಿಲ್ಲದ ಅಕ್ಕರೆ. ಮೊನ್ನೆ ಮೊನ್ನೆ ಚಲುವಾಂಬ ಆಸ್ಪತ್ರೆಯಲ್ಲಿ ಹುಟ್ಟಿದ ಇವನನ್ನು ಮೊದಲ ಶುಶ್ರೂಷೆ ಮಾಡಿದ್ದು ಇವಳೆ. ಮೊದಲು ಸಿಸ್ವಾರ(ಶಿಸು ವಿಹಾರ) ಕ್ಕೆ ಹೋಗಿದ್ದು ಇಲ್ಲೆ. ಎಲ್ಲಂದರಲ್ಲಿ ಕೂತು ಜಾಗ ಕೆಡಿಸುವಾಗ ಸುತ್ತಿನವರ ಗೊಣಗುಗಳನ್ನು ಸಹಿಸಿಕೊಂಡು ಲೆಕ್ಕವಿಲ್ಲದಷ್ಟು ಬಾರಿ ಅಂಡನ್ನು ತೊಳೆದವಳು ಇವಳೆ, ಕೆಆರ್ಎಸ್ ನ ಸಂತೆಯ ಪಕ್ಕದ ಜವಳಿ ಅಂಗಡಿಯಲ್ಲಿ ಮೊದಲ ಷರ್ಟು ಹೊಲಿಸಿದವಳು ಇವಳೆ, ಉಣ್ಣುವ ಹೊತ್ತಾದರು ‘ಹಟ್ಟಿಗೆ ಬರದೆ ಗೋಲಿಯಾಡುವಾಗ ಗೂಸಾ ಕೊಟ್ಟವಳು ಇವಳೆ!.
ಹಿರಿಮಗಳ ಮಗನಾದ್ದುದ್ದರಿಂದ ಮೊದಮೊದಲು ಹೆಚ್ಚುಕಾಲ ಶಶಿಗೆ ಅದು ತವರಾಗಿತ್ತು. ಸ್ಕೂಲು, ಕಾಲೇಜಿಗೆಂದು ದೂರವಾಗಿದ್ದವನಿಗೆ ಪ್ರತಿಸಲ ಅಜ್ಜಿ ಮನೆಗೆ ಹೋಗುವುದೆಂದರೆ ಚೈತನ್ಯ ಬಂದು ಬಿಡುತ್ತಿತ್ತು. ಈಗಲೂ ಅದೇ ಚೈತನ್ಯದೊಂದಿಗೆ ನಿಂತ ಟ್ರೈನಿನಿಂದ ಇಳಿದು ಬೀಸಿದ ಊರಿನ ಗಾಳಿಯನ್ನು ಹಿಡಿದು ಊರಿನೆಡೆಗೆ ಕಾಲುದಾರಿಯಲ್ಲಿ ನಡೆದ. ಅವನ ಹಿಂಬದಿಯಲ್ಲೇ ಬರುತ್ತಿದ್ದ ರಂಗಪ್ಪಜ್ಜನ ನೆನಪು ಇವನಿಗಿದ್ದರು ಆ ಮುದುಕನಿಗಿರಲಿಲ್ಲ. ಗೋಲಿಯಾಡುವಾಗ ‘ಮೂಗನಯಾಸ’ ಮಾಡಿ ಹೆದರಿಸಿ ಹೋಡಿಸುತ್ತಿದ್ದವ ಈಗ ಸ್ವಲ್ಪ ಬಾಗಿ ನಡೆಯುತ್ತಿದ್ದಾನೆ, ಚಡ್ಡಿಯಲ್ಲಿಯೇ ಬೀದಿ ಬೀದಿ ಅಲೆಯತ್ತಿದ್ದ ಶಶಿ ಈಗ ಟಿಪ್-ಟಾಪ್ ಆಗಿದ್ದಾನೆ. ಪ್ರತೀ ಸಾರಿ ಬಂದಾಗ ಎಲ್ಲರನ್ನು ನೋಡಲಾಗುತ್ತಿರುತ್ತಿಲ್ಲವಲ್ಲ ಹಾಗಾಗಿ ರಂಗಪ್ಪಜ್ಜನಿಗೆ
ಶಶಿ ಮಾಸಿ ಹೋಗಿದ್ದ. ಮಾತನಾಡಿಸುವ ಎಂದು ಬಯಸಿ, ರಂಗಪ್ಪಜ್ಜನ ಸ್ವಾಭಾವಿಕ ಸಿಟ್ಟುಮೋರೆಯನ್ನು ನೋಡಿ ಬಿರಬಿರ ನಡೆದುಬಿಟ್ಟ. ಜನಿವಾರಯ್ಯನ ಮನೆಯ ರಂಗೋಲಿ ದಾಟಿ, ಸಿಗುವ ಗಲ್ಲಿಯಲ್ಲಿ ಮಲಗಿದ ನಾಯಿಯನ್ನು ದಾಟಿ, ಮೂಲೇ ತಿರುವಿನ ಬಾವಿಯನ್ನು ಬಳಸಿ ಬಲಕ್ಕೆ ತಿರುಗಿದರೆ ಅಜ್ಜಿಯ ಕೈಯಂಚಿನ ಮನೆ.
ಜೀವನದುದ್ದಕ್ಕೂ ಜಂಜಾಟಗಳಲ್ಲೇ ರೋಸುಹೋಗಿ ಛಲಬಿಡದೆ ನಿಂತವಳು ಶಶಿಯ ಅಜ್ಜಿ ರುಕ್ಕಮ್ಮಣ್ಣಿಯಮ್ಮ. ಅನಿರೀಕ್ಷಿತ ಆಗಮನಕ್ಕೆ ನಗೆಬೀರಿ ‘ಈಗ್ ಬಂದ್ಯಪ್ಪಾ’ ಎನ್ನುವಲ್ಲಿದೆ ಶಶಿಗೆ ನಿಜದ ಸ್ವರ್ಗ. ಇವ ನೋಡನೋಡುತ್ತಲೇ ಗಾತ್ರ
ಕ್ಷೀಣಿಸುತ್ತಾ ಚರ್ಮ ಹೆಚ್ಚು ಸುಕ್ಕುಸುಕ್ಕಾಗಿ ಮುದುಕಿಯಾದವಳು ಅಜ್ಜಿ. ಅಜ್ಜಿಯ ಮಾತಿಗೆ ಹೂ, ‘ಏನ್ ಮಾಡ್ತಿದ್ಯವ್ವ’ ಎಂದು ಗ್ರಾಮೀಣತೆಯಲ್ಲಿ ಮಿಂದು ಸಂವಾಧಿಸುವುದಕ್ಕೆ ಮುಲಾಜಿರಲಿಲ್ಲ. ಅಜ್ಜಿಯನ್ನು ಅನುಕರಣೆಯ ದೆಸೆಯಿಂದ ಬಾಲ್ಯದಿಂದಲೂ ಅವ್ವ ಎಂದೇ ಕರೆದು ಅಭ್ಯಾಸ. “ಅವ್ವಾ” ಎಂದು ಕೂಗುವಲ್ಲಿನ ಬೆಚ್ಚನೆ ಸ್ವರ ಕೇಳುಗಳಿಗೂ ಇಂಪು, ಕೂಗುವವನಿಗೂ ಇಂಪು. ಬ್ಯಾಗನ್ನು ಚಿಕ್ಕಕಾಲಿನ ಹಳೇಕಾಲದ ದಿವಾನ್ ಕಾಟಿನ ಮೇಲೆ ಬಿಸಾಡಿ ಬಚ್ಚಲಲ್ಲಿ ಕಾಲು ತೊಳೆವಾಗ ಇಲಿ ಕಚ್ಚಿ ಹಾಳು ಮಾಡುತ್ತಾವೆಂದು ಬಚ್ಚಿಟ್ಟಿದ್ದ ಸೋಪನ್ನು ಅಜ್ಜಿ ತಂದಿಟ್ಟು ಅಲ್ಲಿನ ಪುಟ್ಟ ಗೋಡೆಯಲ್ಲಿ ಚೌಕ(ಟೆವಲ್) ಮಡುಗಿ(ಇಟ್ಟು) ‘ಹ್ಯಾಂಗವ್ರೆ ಮನೇಲಿ’ ಎಂದಳು. ಎಲ್ಲಾ ಚನಾಗವ್ರೆ, ಏನೋ ಉಷಾರಿಲ್ಲ ಅಂತಿದ್ರಲ, ಪರ್ವಾಗಿಲ್ವ ಎಂದ. ನಮ್ದೇನ್ ಮಾಮೂಲಿ ಅಲ್ವಪ, ಊರ್ ಹೋಗು ಅಂತದೆ, ಕಾಡ್ ಬಾ ಅಂತದೆ ಎಂದು ನಾಣ್ಣುಡಿಯನ್ನು ಹೇಳಿ ಕೋಣೆಯಲ್ಲಿ ಸಪ್ಪಳಮಾಡತೊಡಗಿದಳು. ಮುಖ ಒರೆಸಿ ತಂದಿಟ್ಟ ಮುಸರೇ ಚಕ್ಕುಲಿಯನ್ನು ಬಾಯಾಡುತ್ತಾ ಮನೆಯನ್ನೆಲ್ಲಾ ಹಾಗೆ ನೋಡಿ ತಾತನ ಫೋಟೊವನ್ನೊಮ್ಮೆ ನೋಡಿದ. ಇರುಳಾಗತ್ತಿದ್ದಂತೆ ಶ್ರೀನಿವಾಸಜ್ಜ ಕೈಯಲ್ಲಿ ಏನಾದರೂ ಹಿಡಿಯದೆ ಬರುತ್ತಿದ್ದವನಲ್ಲ. ಗಾರೇ ಮೇಸ್ತ್ರಿಯಾಗಿದ್ದ ಅಜ್ಜ ಕಡ್ಲೆ ಮಿಠಾಯಿ, ಬೆಣ್ಣೆ ಬಿಸ್ಕೋತು, ಕಲ್ಲುಸಕ್ಕರೆ, ಬೇಕರಿಯ ದಪ್ಪಕಾರ, ಸಿಹಿಬನ್ನು, ಪುರಿ ಉಂಡೆಗಳು ನಿತ್ಯ ನೂತನವಾಗಿ ತರುತ್ತಿದ್ದನು. ತಿನ್ನಿಸಿ ತಿನ್ನಿಸಿ ನಮ್ಮನ್ನು ಬೆಳೆಸಿ ಅವ ಒಂಟುಹೋದ. ಈಗ ಫೋಟೋದಲ್ಲಿ ಹಸನ್ಮುಖಿಯಾಗಿ ನಗುತ್ತಿದ್ದಾನೆ.
‘ಚಿಕ್ಕಿ ಮುಳುಗಡೆ ಈರೇಗೌಡಂತಾವ ಇಟ್ಗೆ ಒರ್ತಾವ್ಳೆ, ಪಾಪಿ ಮುಂಡೇದು ಮಗ-ಸುಖ ಇಲ್ಲ. ಯಂಗ್ ಹುಟ್ಟುದ್ಲೋ ಬರೀ ಗೋಳೆ ಆಗೋಯ್ತು ಅವ್ಳ್ ಬಾಳು. ನನ್ನ ಸಾಕಕ್ಕೆ ಅಂತಾ ಆ ಭಗವಂತ್ನೆ ಕಳ್ಸಿದ್ನೋ ಏನೋ, ಒಂದಿನಾನು ಕುಂತ್ಕಳ್ನಿಲ್ಲ, ಒಂದಿನ ನಂಗ್ ಹೊಸ ಸೀರೆ ಬೇಕು ಅನ್ನಿಲ್ಲ, ಗೇದಿದ್ನೆಲ್ಲ ತಂದ್ ನನ್ ಎದೆಮೇಲ್ ಹಾಕ್ತಾವ್ಳೆ, ಒಂದು ರುಪಾಯ್ನು ಮಡಿಕಳಕಿಲ ಮೊಗ’ ಎಂದು ಶಶಿಯ ಚಿಕ್ಕಮ್ಮ ಗಿರಿಜಾಳ ಬಗ್ಗೆ ಅಜ್ಜಿ ಕೊಂಡಾಡಿದಳು, ಹಾಗೆ ನೊಂದುಕೊಂಡಳು. ಅದೇ ರಾಗವನ್ನು ಮೊದಲಿಂದ ಕೇಳುತ್ತಿದ್ದವನು ಹೆಚ್ಚೇನು ಹೇಳದೆ ಹಾ, ಹೂ, ಅಂತಾನೇ ಚರ್ಚಿಸಿ ‘ಯಾವಾಗ ಹಿತವಾಗುವುದು ನನ್ನವ್ವ’ ಎಂದುಕೊಳ್ಳುತ್ತಾ ಹಾಗೇ ಮೊಬೈಲ್ ನೋಡಿ ಮೌನಿಯಾದ.
ಇಂದು ತನ್ನ ತಮ್ಮ ಶಂಕರನ ಮಗನ ಮಗುವಿನ ತಿಥಿಗೆ ಹೋಗಬೇಕಾಗಿರುವುದನ್ನು ಮಗು ಸಾವಿಗೆ ಕಾರಣವನ್ನು ಸಾಂಗವಾಗಿ ಹೇಳಿ ನೀನು ಬಾ ಎಂದು ಊಟಕ್ಕಿಕ್ಕಿದಳು.
ಅದೇ ಊರಿನ ಈಶಾನ್ಯ ದಿಕ್ಕಿನ ಪಿತ್ರಾರ್ಜಿತ ತೋಟದಲ್ಲಿ ವಾಸವಿದ್ದ ಶಂಕರಪ್ಪ ಮಕ್ಕಳನ್ನು ಮದುವೆ ಮಾಡಿ ಅವರವರಿಗೊಂದು ಮನೆಮಾಡಿ ಬೇರೆ ಓಡಿಸಿದ್ದ. ಒಗ್ಗಟ್ಟಿದ್ದಾಗ ಕಿತ್ತಾಡುತ್ತಿದ್ದವರು ಬೇರೆಯಾದಾಗ ನೆಮ್ಮಿದಿಯಾಗಿದ್ದರು. ಸ್ವಲ್ಪದಿನದಲ್ಲಿ ತಮ್ಮ ತಮ್ಮ ವ್ಯವಹಾರ ಅಲ್ಲೋಲ ಕಲ್ಲೋಲವಾಗಲು ಶುರುವಾದಾಗ ಶಂಕರಪ್ಪನೇ ನಿಂತು ಎಲ್ಲ ಸರಿ ಮಾಡಿದ್ದ. ತಮ್ಮ ಜಮೀನಿನಲ್ಲಿ ತಿರುಗಬಾರದೆಂದು ತಕರಾರು ಮಾಡಿದ್ದ ಸೂರಪ್ಪಶಾಸ್ತ್ರಿಗೆ ರಂಪಮಾಡಿ ನಮಗೆ ತಿರುಗಲು ಹಕ್ಕಿದೆ ಎಂಬುದನ್ನು ಸಾಭೀತು ಮಾಡಿದ್ದ. ಗಂಡಹೆಂಡಿರ ಜಗಳದಿಂದ ತವರತ್ತ ಮುಖಮಾಡಿದ್ದ ಸೊಸೆಯನ್ನು ಹೇಗೋ ಸಮಾಧಾನವನ್ನು ಮಾಡಿದ್ದ. ಹೀಗಿರುವಾಗ ಕಿರಿಯ ಮಗನ ಚೊಚ್ಚಲ ಮುದ್ದಾದ ಗಂಡು ಮಗು ಸತ್ತಿದ್ದರಿಂದ ಅದರ ಕಾರ್ಯದಲ್ಲೂ ಇವನೇ ಮುಂದಾಗಿದ್ದ. ಮಗನ ಮನೆಯ ಪಕ್ಕದಲ್ಲಿ ತಾರ್ಸಿಮನೆಯೊಂದು ಏಳುತ್ತಿದ್ದು ಕಾರ್ಯಗಳೆಲ್ಲವೂ ಸುಗಮವಾಗಿ ನಡೆಯುತ್ತಿದ್ದವು. ತಳಪಾಯದ ಕೆಲಸ ಮುಗಿದು ಮುಂದಿನ ಕೆಲಸಕ್ಕೆ ನೀರಿನ ಅವಶ್ಯಕತೆ ತುಂಬಾ ಇದೆ ಎಂದು ನೀರಿನ ಸಂಪನ್ನು ನಿರ್ಮಿಸಿದ್ದರಿಂದ ಆಟವಾಡಲು ಸಂಜೆಯಲ್ಲಿ ತೆರಳಿದ್ದ ಮಗು ಆ ಸಂಪಿನಲ್ಲಿ ಬಿದ್ದು, ಮುಳುಗಿ ಸತ್ತು ಹೋಗಿತ್ತು. ಮಗು ಮನೆಗೆ ಬರದಿದ್ದಾಗ ಎತ್ತ ಹೋಯಿತು ಎಂದು ಎಲ್ಲರು ಚಕಿತರಾಗಿ ಹುಡುಕುವಾಗ ಯಾರೂ ಈ ಅಚಾತುರ್ಯವನ್ನು ಊಹಿಸಿರಲಿಲ್ಲ. ನೋಡುವ ಎಂದು ಸುಮ್ಮನೆ ಅತ್ತ ಒಮ್ಮೆ ಬ್ಯಾಟರಿ ಅರಿಸಿದ ಮಗುವಿನ ದೊಡ್ಡಪ್ಪ ಮಂಜನ ಕಣ್ಣಿಗೆ ಆ ನಿರ್ದಾಕ್ಷೀಣ್ಯ ಕೃತ್ಯ ಬಯಲಾಗಿ
ಇಡೀ ಕುಟುಂಬವೇ ರೋಧಿಸಿತ್ತು, ತಾಯಿಮಾತ್ರ ರೋಧಿಸುವ ರೋಗಬಂದವಳಾಗಿ ಶಕ್ತಿ ಬಂದಾಗಲೆಲ್ಲ ನಿಶ್ಯಕ್ತಿಯಾಗುವವರೆಗೂ,
ಗಂಟಲು ಕಟ್ಟುವವರೆಗೂ ಕೂಗಿ, ಅತ್ತು ಬೇಯುತ್ತಿದ್ದಳು.
ಎಳೆಕಂದನ ತಿಥಿ ಕಾರ್ಯವೆಲ್ಲ ಮುಗಿಸಿ ಮನೆಯ ಬಳಿ ನೆಂಟರಿಷ್ಟರಿಗೆ ಊಟೋಪಚಾರವನ್ನು ಮಾಡಿಸುತ್ತಿದ್ದಾಗ ಒಮ್ಮಿಂದೊಮ್ಮೆಲೆ ತಾಯಿಯ ಕೂಗು ಗಗನಕ್ಕಾರುತ್ತಿತ್ತು. “ಅಯ್ಯೋ ಚಿನ್ನೂ”ಎಂದು. ವಿಧಿ-ವಿಧಾನ ಕಾರ್ಯಗಳನ್ನು ಮಾಡುವಾಗ ಸೋತು ಸೊರಗಿ ಹೋಗಿ ನಿಶ್ಯಕ್ತಿಯಿಂದ ಕುಸಿದು ಬಿದ್ದು ಮೌನವಾಗೆ ಬಾಯ್ಬಡಿದು ಮನೆಸೇರಿ ಸೋಲುತ್ತಿದ್ದ ಮಗುವಿನ ತಾಯಿ ಸ್ವಲ್ಪ ಆಯಾಸದಿಂದ ಸುಧಾರಿಸುತ್ತಲೇ ಮಗುವಿನ ನೆನಪಿಗೆ ಕಟ್ಟಿದ
ಗಂಟಲಿನ ನಿರ್ವಚನೀಯ ರಾಗ ಹಾಗೂ ಭಂಗಿಯಲ್ಲಿ ರೋಧಿಸುತ್ತಿದ್ದಳು. ಮನೆಯ ಒಂದು ಮೂಲೆಯಲ್ಲಿ ಹಳೇಕಾಲದ ಬೀಟೇ ಮಂಚದ ಮೇಲೆ ಆಕೆ ರೋಧಿಸುತ್ತಿದ್ದಾಳೆ. ನಡುಮನೆಯ ವಿಶಾಲದಲ್ಲಿ ನೆಂಟರು ಭೋಜನಕ್ಕೆ ಅಣಿಯಾಗಿ ಕೂತಿದ್ದಾರೆ. ಹೊರಗಡೆಯೇ ನಿಂತು ಸಾವಿನ ಕೌತುಕವನ್ನು, ಸಾವು ಸಂಭವಿಸಿರಬಹುದಾದ ರೀತಿಯನ್ನು, ಇದೇ ರೀತಿಯಲ್ಲಿ ಅಲ್ಲೆಲ್ಲೋ ಒಂದು ಮಗು ಹೀಗೆ ಸತ್ತಿತ್ತೆಂದು, ಜಾಗರೂಕರಾಗಿರಬೇಕಾಗಿತ್ತೆಂದು, ಹಾಳು ದೇವರಿಗೆ ಕಣ್ಣಿಲ್ಲವೆಂದು ಶಪಿಸುವ, ಹೇಳುವ, ವಿವರಿಸುವ ನೆಂಟರಿಷ್ಟರ ನಡುವೆ ಶಶಿ ನಿಂತಿದ್ದಾನೆ.
ಒಂದು ಪಂಕ್ತಿ ಉಂಡೆದ್ದು ಬಂದ ಮೇಲೆ ಇನ್ನೊಂದು ಪಂಕ್ತಿ ಕೂರುವ ಸರಧಿಯಲ್ಲಿ ಕೂರುವಂತೆ ಅಜ್ಜಿ ಆಜ್ಞಾಪಿಸಿದಳು. ಕೊಂಚ ಮುಜುಗರದಿಂದಲೇ ಒಳಹೋದವನು ಕಂಡ ಖಾಲಿ ಜಾಗದಲ್ಲಿ ಬಿಳಿಪಂಚೆಯ ಮುದುಕನೊಬ್ಬನ ಬಳಿ ಊಟಕ್ಕೆ ಕೂತ. ಪದ್ಧತಿಯಂತೆ ತಿಥಿ ಕಾರ್ಯಕ್ಕೆ ಮಾಂಸದಡುಗೆ ಜೋರಾಗಿದೆ. ಮನೆಯ ನೆಂಟರಿಷ್ಟರೇ ಆದುದ್ದರಿಂದ ಮನೆಯ ತಟ್ಟೆಯಲ್ಲಿಯೇ ಬಡಿಸುತ್ತಿದ್ದಾರೆ. ಯಾವನೋ ಬಿಕನಾಸಿ ಕುಡಿದು ಬಂದು ಉಣ್ಣಲು ಕೂತು ತೂಕಡಿಸಿ ತೂಕಡಿಸಿ ಬೀಳುತ್ತಿದ್ದಾನೆ. ಶಂಕರಪ್ಪ ಒಳಗೆ ಹೊರಗೆ ಏನೋ ಮಾಡುತ್ತಾ ಓಡಾಡುತ್ತಿದ್ದಾನೆ. ಶಶಿಯ ಕಣ್ಣು ಒಮ್ಮೆ ತಾಯಿಯ ಬಳಿ ಹೋಗಿಬಂದವು. ಲೋಕದಲ್ಲಿ ಇವನು ಒಮ್ಮೆಯೂ ನೋಡಿರದ ಶಾಂತದೃಷ್ಟಿ ಬೀರುತ್ತಾ ತಾಯಿ ಕುಳಿತಿದ್ದಾಳೆ. ತನ್ನ ವಸ್ತ್ರದ ಮೇಲಿನ ಸಂಪೂರ್ಣ ಗಮನ ಬಿಟ್ಟಿದ್ದಾಳೆ. ಕೂದಲೆಲ್ಲ ಚಲ್ಲಾಪಿಲ್ಲಿಯಾಗಿ ಕೆದರಿಹೋಗಿದೆ. ಮಗು ಸತ್ತಂದಿನಿಂದ ಜ್ವರ ಹಿಡಿದು ಬಿದ್ದವಳು ಸಾವಿಗೆ ಹತ್ತಿರವಾಗುತ್ತಿದ್ದಾಳೆ. ಯೌವ್ವನಿಗಳ ಯಾವೊಂದು ಲಕ್ಷಣವೂ ಗೋಚರವಾಗದೆ ಮನುಷ್ಯ ಕಸವಾಗಿದ್ದಾಳೆ. ನೊಣಗಳು ಸರಿದಾಡಿ ಅವಳನ್ನು ಚಟುವಟಿಕೆಯಿಂದಿರುವಂತೆ ಪ್ರೇರೇಪಿಸುತ್ತಿವೆ, ಅವಕ್ಕೆಲ್ಲಿ ಗೊತ್ತು ಇವಳ ಒಡಲ
ಸಂಕಟ!.
ಹೆಂಗಸೊಬ್ಬಳು ಅನ್ನ ಹಾಕಿ ಹೋದಳು, ಅನುಕ್ರಮದಂತೆ ಇನ್ನಿಬ್ಬರು ಹೆಣ್ಣು ಮಕ್ಕಳು ಮಿಕ್ಕ ಮಿಕ್ಕ
ಭಕ್ಷ್ಯವೈವಿದ್ಯಗಳನ್ನು ಬಡಿಸಿ ಮರೆಯಾದವು. ತಟ್ಟೆಯಲ್ಲಿ ಅನ್ನಾಹಾರಕ್ಕಿಂತ ಮಾಂಸವೇ ಮುಂದಾಗಿದೆ. ಸಾಲಿನ ಎಲ್ಲರು ಮಾಂಸವನ್ನು ಹಲ್ಲಿನಿಂದ ಸಿಗಿಯುವಲ್ಲಿಯೂ, ಅನ್ನವನ್ನು ಚಪ್ಪರಿಸುವುದರಲ್ಲಿಯೂ, ಆಗಾಗ ನೀರನ್ನೆತ್ತುವುದರಲ್ಲಿಯೂ, ಇನ್ನೇನೋ ಕೇಳಿ ಬಡಿಸಿಕೊಳ್ಳುವುದರಲ್ಲಿಯೂ ಕಾರ್ಯ ಮಗ್ನರಾಗಿದ್ದಾರೆ. ಬೆವರು ಲೀಲಾ ಜಾಲವಾಗಿ ಶಶಿಯ ಪಕ್ಕದ ತಾತನಲ್ಲಿ ಸೋರುತ್ತಿದೆ. ಅದರ ಉಲ್ಲೇಖಕ್ಕೆ ಗಮನಕೊಡದ ತಾತ ಅಂಗೈಯಿಂದಾಚೆ ಮೊಣಕೈ ಮಣಿಕಟ್ಟಿಗೂ ಎಂಜಲು ತಾಕಿಸಿಕೊಂಡು ಉಣ್ಣುತ್ತಿದ್ದಾನೆ. ಪರಿಸ್ಥಿತಿಯ ವಾಸ್ತವಕ್ಕೆ ನೇರಗಳನ್ನು ಗಮನಿಸಹೋದ ಶಶಿಗೆ ಎಲ್ಲವೂ ಗೊಂದಲವಾಯಿತು. ಈಗೀಗ ತಾನು ಓದಿಕೊಳ್ಳುತ್ತಿದ್ದ ‘ಕಾನೂರು ಹೆಗ್ಗಡಿತಿಯ’ ಹೂವಯ್ಯ ಒಮ್ಮೆ ಅವನಾಲೋಚನೆಯಲ್ಲಿ ಬಂದು ಹೋದ. ಕುವೆಂಪು
ಸೃಷ್ಠಿಪಾತ್ರವಾದ ಹೂವಯ್ಯನ ತತ್ತ್ವಗಳು ಕಾದಂಬರಿಯಲ್ಲಿ ಬಿಟ್ಟರೆ ಇಲ್ಲಿ ಯಾವ ಕಡೆಯಿಂದ ನೋಡಿದರೂ ಅವನಿಗೆ ಕಾಣಿಸದಾದಾಗ ಜ್ಞಾನವು ಅಡಗಿಹೋಗಿ, ಅಂಧಕಾರ ಆಳ್ವಿಕೆಯಲ್ಲಿದೆ ಎಂಬ ದೊಡ್ಡ ದೊಡ್ಡ ವೈಚಾರಿಕ ಚಿಂತನೆಗಳು ಶಶಿಯನ್ನು ಕಲಸತೊಡಗಿದವು. ಏನನ್ನೋ ಚಿಂತಿಸುತ್ತಾ ಸುಮ್ಮನೆ ಕುಳಿತಿರುವ ಶಶಿಯನ್ನೊಮ್ಮೆ ಅಜ್ಜಿ ಎಚ್ಚರಿಸಿ ಬೇಗ ಬೇಗ ತಿನ್ನುವಂತೆ ತಿಳಿಸಿ, ಇನ್ನು ಕೈ ಹಾಕದ ಆಹಾರ ಗುಂಪಿಗೆ ಇನ್ನು ಒಂದಷ್ಟು ಮಾಂಸದ ತುಂಡುಗಳನ್ನು ಸೇರಿಸಿ ಹೋದಳು. ತನಗೆ ಹೊಳೆಯುತ್ತಿರುವ ತತ್ವಗಳನ್ನು ಪಾಲಿಸಲೋಗುವ ಸೂಕ್ತ ಪರಿಸ್ಥಿತಿ ಇದಲ್ಲವೆಂದು ತಾನು ತಿಂದುಂಡೇಳುವುದೇ ಒಳಿತೆಂದು ಭಾವಿಸಿ ಕೈ ಹಾಕಲೋಗುವಾಗ ಕುದಿವ ಬೆಂಕಿಯ ಮಳೆ ಮೈಮೇಲೆ ಬಿದ್ದವಳಂತೆ ಮಗುವ ತಾಯಿ ಚೀರಕೊಂಡಳು. ಶಶಿಯ ಬಲಗೈ ಹಸ್ತ ಹಿಂದಕ್ಕೆ ಬಂದು ಬಂದಿಯಾಯಿತು. ಒಂದಿಬ್ಬರು ಹೆಂಗಸರು ಬಂದು ತಾಯಿಯನ್ನು ಸಮಾಧಾನ ಮಾಡಲು ಮುಂದಾದರು. ಶಶಿ ಕೂತಿರುವ ಬಾಗಿಲ ಹೊರಭಾಗದಲ್ಲಿ ಮಗುವ ತಂದೆ ಬಿಕ್ಕಳಿಸಿ ಬಿಕ್ಕಳಿಸಿ ಮೌನಿಯಾಗುತ್ತಿದ್ದಾನೆ. ಒಂದು ಕ್ಷಣ ಆ ಕಡೆ ನೋಡಿದ ಪಂಕ್ತಿಯವರು ಮತ್ತೆ ತಮ್ಮ ತಮ್ಮ ಮಾಮೂಲಿಯಲ್ಲಿ ತಲ್ಲೀನರಾದರು. ಒಬ್ಬ ಆಸಾಮಿ ಕುಡಿದು ತೂಕಡಿಸುತ್ತಿದದವನು ಅಲ್ಲೇ ವಾಂತಿ ಕಾರಿಕೊಂಡ. ಮಗ್ಗುಲಲ್ಲೇ ಇದ್ದ ಅವನ ಸಂಬಂಧಿ ಅವನನ್ನಿಡಿದು ಹೊರಗೆಳೆದುಕೊಂಡು ಹೋದ. ಬಡಿಸುವವರು ವಾಂತಿಯ ಮೇಲೆ ಗೋಣೀಚೀಲವನ್ನು ಹೊದಿಸಿ ನೆಮ್ಮದಿಯಾದರು. ಗಡಿಯಾರ 5 ಎಂದು ಬಡಿಯಲಾರಂಭಿಸಿತು. ಇದು ಶೋಕವೋ, ಸಂಭ್ರಮವೋ, ಎಂಬ ತತ್ವಾಲೋಚನೆಗೆ ಮುಂದಾಗಿ ತನ್ನವರ ಈ ರೀತಿಯ ಸಂಸ್ಕಾರಕ್ಕೆ ತಾನೇ ಹುಸಿನಕ್ಕು ಅನುಭವಿ ಜೀವಿಗಳಿಗೆ ಕರೆದು ಕೆರದಲ್ಲಿ ಹೊಡೆದು ಬುದ್ಧಿಹೇಳಬೇಕೆಂಬ ತೀರ್ಮಾನಕ್ಕೆ ಬಂದ. ಮೊದಲಿಂದಲು ಮಾಂಸ ಪ್ರಿಯನಾದ ಶಶಿಗೆ ಈ ‘ಶೋಕ ಭೋಜನಾ ಕೂಟ’ ಹೆರಿಗೆ ನೋವಿನ ತಾಯಿಗೆ ಹೊಸ ಜುಮುಕಿಯನ್ನು ತೊಡಿಸಲೋದಂತಾಯಿತು. ಸೀದಾ ಎದ್ದು ಹೊರಬಂದು ಆಕಾಶವನ್ನೊಮ್ಮೆ ನೋಡಿ ತನ್ನ ಲೆದರ್ ಬೆಲ್ಟಿನ ಚಪ್ಪಲಿ ಹಾಕಿಕೊಂಡು ಕೈ ತೊಳೆದು ಅಲ್ಲಿಂದ ನಡೆದ. ಶಶಿಯ ಪಕ್ಕದಲ್ಲಿದ್ದ ಅಜ್ಜ ಹುಡುಗನ ತೊಳಲನ್ನು ಎಣಿಸದೆ ಎದ್ದು ಹೋದದ್ದಕ್ಕೆ ಕಾರಣವನ್ನು ಕೆಣಕದೆ ಶಶಿಯ ತಟ್ಟೆಯಲ್ಲಿದ್ದ ಮಾಂಸದ ತುಂಡುಗಳನ್ನು ತಾನೇ ಬಡಿಸಿಕೊಂಡು ಜಡಿಯತೊಡಗಿದ. ರುಕ್ಕಮ್ಮಣ್ಣಿಯಮ್ಮ ಪಂಕ್ತಿಯಲ್ಲಿ ಮೊಮ್ಮಗನ ಕಾಣದೆ ತಟ್ಟೆಯಲ್ಲಿನ ಅನ್ನ ಹಾಗೆ ಇದೆ ಎಂದುಕೊಳ್ಳುತ್ತಾ ಹೊರ ಬಂದಳು. ಅಲ್ಲೆ ಇದ್ದ ಶಂಕರಪ್ಪನನ್ನು ‘ಮೊಗ ಎತ್ತಾಗ್ ಹೋದ’ ಎಂದು ಕೇಳಿದಾಗ ಆತ ‘ನಾನ್ ನೋಡ್ಲಿಲ್ಲಕ್ಕ’ ಎಂದ.
ಹಾದಿಯುದ್ದಕ್ಕೂ ನಾವಿನ್ನು ಯಾವ ಹೀನದಲ್ಲಿದ್ದೇವೆ? ನಮ್ಮ ಸಂಸ್ಕತಿ ಸರಿಯಿಲ್ಲ, ಶೋಕಾಚರಣೆಯನ್ನು ಹೀಗೆ ಯಾಕೆ ಆಚರಿಸಬೇಕು? ತಾಯಿಯೆದುರೇ ಪಂಕ್ತಿ ಸಂಪೂರ್ಣ ಭೋಜನ ಸರಿಯೇ? ಸತ್ತ ಮಗುವಿಗಾಗಿ, ಅದರ ಹೆಸರೇಳಿಕೊಂಡು ಇನ್ನೊಂದು ಪ್ರಾಣಿಯನ್ನು ಕೊಂದು ತಿನ್ನುವುದಾವ ಆಚಾರ? ಶೋಕ ಸ್ಥಿತಿಯ ಕಾರ್ಯಕ್ಕೂ ಕುಡಿದು ಬರುವ ನಮ್ಮ ಹೀನರುಗಳನ್ನು ಕೊಂದೇ ಬಿಡಬೇಕು! ಹೀಗೆ ಒಮ್ಮೊಮ್ಮೆಗೆ ಸಾಗಿ ಬರುತ್ತಿದ್ದ ಆಲೋಚನೆಗಳನ್ನು ತಾಳೆ ಹಾಕುತ್ತಾ ಬಿರುಸಾಗಿ ನಡೆವಾಗ ಹಳ್ಳಿ ರಸ್ತೆಯಲ್ಲಿ ನಿಮಿರಿಕೊಂಡಿದ್ದ ಕಲ್ಲೊಂದಕ್ಕೆ ಕಾಲು ಎಡಗಿ ಹೆಬ್ಬೆಟ್ಟಿನ ಉಗುರುಸಂದಿಯಿಂದ ರಕ್ತ ಸೋರ ತೊಡಗಿತು. ಎದೆಯಲ್ಲೆಲ್ಲ ಕೆಂಡಬಿದ್ದಂತಾಗಿ ಕುಸಿದು ರಕ್ತ ಒರೆಸಿಕೊಂಡು ಮತ್ತೆ ನಡೆಯುತ್ತಿದ್ದಾನೆ. ಕೈಯಲ್ಲಿ ರಕ್ತ ಹಿಂಗಿದ್ದರಿಂದ ಅಂಟಂಟಾಗಿ ಅಸಹ್ಯವೆನಿಸಿದರೂ ಹಾಗೆ ನಡೆದ. ಚಪ್ಪಲಿಗೂ ರಕ್ತವಾಗಿದ್ದು ಕೋಪಕ್ಕೆ ಗಮನಿಸಿಯೂ ಇಲ್ಲದಂತೆ ಆವಿಯಾಯಿತು. ಬೆಳಿಗ್ಗೆ ಟ್ರೈನಿನಲ್ಲಿ ಬರುವಾಗ ಕಂಡಿದ್ದ ಅಜ್ಜಿಯ ತೋಟದಲ್ಲಿ ಹಳೇ ಕಾಲದವರು ತೋಡಿದ್ದ ಬಾವಿಯ ತಿಳಿ ನೀರಿನಿಂದ ಕೈ ತೊಳೆದುಕೊಂಡು ಮಾವಿನ ಮರದ ಬುಡದಲ್ಲಿ ನೆಮ್ಮದಿಗಾಗಿ ಕುಳಿತ.
ಅಲ್ಲೊಂದು ಅಳಿಲು ಸರಸರನೆ ತೆಂಗಿನ ಮರದಿಂದ ಇಳಿದು ಮತ್ತೆ ಮತ್ತೆ ಏರುತ್ತಿದೆ. ಸಂಜೆ ಸೂರ್ಯ ಬಾನನ್ನು ಕೆಂಪಾಗಿ ಬದಲಿಸಿ ಹೋಗುತ್ತಿದ್ದಾನೆ. ಒಂದೆರಡು ಬಿಳಿ ಮೋಡಗಳು ಪಿಶಾಚಿಗಳಂತೆ ಸಾಗುತ್ತಿವೆ. ಯಾವ ಮರದಿಂದ ಎಂದು ಹೇಳಲು ಕಷ್ಟವಾಗುವ ರೀತಿಯಲ್ಲಿ ಕೋಗಿಲೆಯೊಂದು ಕೂಗುಟ್ಟುತ್ತಿದೆ. ಹಸಿವಾದ್ದರಿಂದ ಎದ್ದು ಮನೆಕಡೆ ನಡೆವ ಎಂದುಕೊಂಡು ಮೇಲೆದ್ದ ಕೂಡಲೆ ದಪ್ ಎಂದು ಮಾವಿನ ಹಣ್ಣೊಂದು ಮಗ್ಗುಲಿನಲ್ಲೆ ಬಿದ್ದಿತು. ಮೇಲೆ ನೋಡುವಾಗ ಗಿಳಿಯೊಂದು ಇವನನ್ನೇ ದಿಟ್ಟಿಸಿ ಚಂಗ್ ಚಂಗ್ ಎಂದು ಹಾರಿಹೋಯಿತು. ಬಾಗಿ ಹಣ್ಣನ್ನು ಎತ್ತಿಕೊಂಡು ಗಿಳಿ ಕಚ್ಚದೆ ಉಳಿದಿದ್ದ ಭಾಗಕ್ಕೆ ಬಾಯಾಕಿದ.
>>>>>>>>>>>>>>
ಮುಕ್ತಾಯ
<<<<<<<<<<<<<<<<<<<

No comments:
Post a Comment