Tuesday, 20 December 2016

ಚಿಗುರಿದ ಕನಸು(ಅನಿಸಿಕೆ):---- ಚಂದ್ರು ಎಂ ಹುಣಸೂರು

“ಚಿಗುರಿದ ಕನಸು”

‘ಕಡಲ ತೀರದ ಭಾರ್ಗವ’ ಡಾ. ಶಿವರಾಮ ಕಾರಂತರ ಕಾದಂಬರಿ ಆಧಾರಿತ ಚಿತ್ರ...
ಕನ್ನಡ ಭಾಷೆಗಿರುವ ಶ್ರೀಮಂತಿಕೆಯನ್ನು ನಾನಾ ರೂಪಗಳಲ್ಲಿ ಈವರೆವಿಗೂ ಮುಖ್ಯವಾಗಿ ಸಾಹಿತ್ಯ ಮತ್ತು ಸಿನೆಮಾಗಳಲ್ಲಿ ನಾವು ನೋಡುತ್ತಾ ಬಂದಿದ್ದೇವೆ. ಅಂತಹ ಸಾಹಿತ್ಯದ ಕಂಪನ್ನು ಸೂಸುವ, ನಮ್ಮ ಕನ್ನಡತನದ್ದೇ ಆದ ಒಂದು ಸಿನಿಮಾ ನನ್ನನ್ನು ಬಹವಾಗಿ ಕಾಡುತ್ತದೆ. ಸಿನಿಮಾದ ಹೆಚ್ಚು ಭಾಗ ಹಸಿರಿನಿಂದ, ಬೆಟ್ಟಗಿರಿಗಳಿಂದ, ನದಿನೀರಿನಿಂದ, ಸ್ವಚ್ಛ ಕನ್ನಡ ಸಂಭಾಷಣೆಯಿಂದ ನಮ್ಮನ್ನು ಸೂರೆಗೊಳ್ಳುವಲ್ಲಿ ಆ ಚಿತ್ರ ಎಂದೋ ಯಶಸ್ಸಾಗಿದೆ. ಈಗ ಕಣ್ಣುಬಿಡುತ್ತಿರುವ ನನಗೆ ಕಂಡಿದ್ದು ಮಾತ್ರ ಈಗ. ಜಯಂತ್ ಕಾಯ್ಕಿಣಿಯವರ ಆರಾಧಕನಾಗಿರುವ ನನಗೆ ಅವರ ಹಾಡುಗಳು ಪಂಚಪ್ರಾಣ. ಇದಕ್ಕು ಮುಂಚೆಯೇ ಅವರು “ಚಿಗುರಿದ ಕನಸು” ಚಿತ್ರಕ್ಕೆ ಸಂಭಾಷಣಾಕಾರರಾಗಿ, ಜೊತೆಗೆ ಹಾಡನ್ನು ಬರೆದಿದ್ದು ವಿಳಂಬವಾಗಿ ತಿಳಿದಿತ್ತು. ಅಂದಿನಿಂದ ಜಯಂತರ ಅಭಿಮಾನ ಕಾರಣಾಂತರವಾಗಿ ಚಿಗುರಿದ ಕನಸನ್ನು ನೋಡಬೇಕಾಯಿತು. ಸ್ವಚ್ಛ ಸಂಭಾಷಣೆ ಸಿನಿಮಾ ಪೂರ ನನ್ನನ್ನು ಅಲುಗಾಡಲು ಬಿಡಲಿಲ್ಲ.
   ವೈಯುಕ್ತಿಕವಾಗಿ ನಾನು ಹೆಚ್ಚಾಗಿ ಮೆಚ್ಚಿಕೊಳ್ಳುವ, ಕನ್ನಡವನ್ನೇ ಅಚ್ಚಿಕೊಂಡ ಕನ್ನಡ ಸಿನೆಮಾ ನಿರ್ದೇಶಕರು ಟಿ.ಎಸ್ ನಾಗಾಭರಣ. ‘ಜನುಮದ ಜೋಡಿ’, ‘ಮೈಸೂರು ಮಲ್ಲಿಗೆ’, ಮತ್ತು ‘ನಾಗಮಂಡಲ’ ಚಿತ್ರಗಳಿಂದ ನನ್ನಲ್ಲಿ ಅಳಿಸಲಾಗದ ಆನಂದಾನುಭವವನ್ನು ಉಂಟುಮಾಡಿದ್ದ ಅವರು ಚಿಗುರಿದ ಕನಸಲ್ಲಿಯೂ ತಮ್ಮ ಛಾಪನ್ನು ಹಾಗೆಯೇ ಕಾಪಾಡಿಕೊಳ್ಳುತ್ತಾರೆ. ಇನ್ನು ಹಾಡುಗಳು, ಸಂಗೀತಕ್ಕೆ ಬಂದರೆ ವಿ. ಮನೋಹರ್ ರವರು ಮೈಮರೆಸುವಂತ, ಕಂಬನಿಗರೆವ ಮಟ್ಟಿಗೆ ಭಾವನೆಯುಕ್ತ ಪ್ರಸಂಗಗಳ ಹಿನ್ನೆಲೆಗೆ ನೆಲೆನಿಂತು ನನ್ನನ್ನು ಏಕಾಂತ ವೀಕ್ಷಕ ಸ್ಥಿತಿಯ ಸಂದರ್ಭ ಅತಿರೀಖಗೊಳಿಸುವಲ್ಲಿ, ಅನಿರ್ವಚನೀಯ ಸುಖ ಉಂಟುಮಾಡುವಲ್ಲಿ ಯಶಸ್ಸಾಗುತ್ತಾರೆ. ಹಾಡುಗಳು ಕನ್ನಡತನಕ್ಕೆ ಪದೇ ಪದೇ ಅಪ್ಪಳಿಸಿ ಇಂದಿಗೂ ಅಂತರಾಳದಲ್ಲಿ ಗುನುಗದಿರಲಾರವು.
   “ಶಂಕರ”ನ ಪಾತ್ರವಾಗಿ ಸಿನಿಮಾ ಪೂರ್ತಿ ತನ್ನ ಮೂಲದ ಉಳಿವಿಗಾಗಿ ಹಾತೊರೆಯುವ ಶಿವಣ್ಣನ ಅಭಿನಯ ನಿರ್ವರ್ಣನೀಯವಾದದ್ದು. ದಿಲ್ಲಿಯಲ್ಲಿದ್ದು ಸಂಗಾತಿಗಾಗಿ ಕನ್ನಡ ಕಲೆತು, ಮೂಲದ ಸೆಳೆತದಿಂದ ಕರ್ನಾಟಕದ ಬಂಗಾಡಿಗೆ ಬಂದು ಅಜ್ಜಿಯ ಪ್ರೀತಿಗಾಗಿ, ಅಜ್ಜಿಯ ಕನಸಿಗಾಗಿ, ಬಂಗಾಡಿ ಗ್ರಾಮದ ರೈತರ ಹಿತಕ್ಕಾಗಿ ವೈಜ್ಞಾನಿಕ ಪ್ರಯೋಗಗಳಿಂದ ಸೇತುವೆ ಕಟ್ಟಿ, ವಿದ್ಯುತ್ ಹರಿಸಿ, ಅಜ್ಜಿ ಮತ್ತು ತನ್ನನ್ನು ಪ್ರೀತಿಸುವ ಶ್ರೀಮತಿಯನ್ನು ಕಳೆದುಕೊಂಡು ಒಂಟಿಯಾಗಿ, ಮತ್ತೆ ಬದುಕು ಪ್ರಾರಂಭಿಸುವ ಶಿವಣ್ಣ(ಶಂಕರ್) ಕಥಾಹಂದರದುದ್ದಕ್ಕೂ ತಮ್ಮ ಸ್ವಾಭಾವಿಕ ಅಭಿನಯದಿಂದ ಹತ್ತಿರವಾಗುತ್ತಾರೆ. ಶಿವಣ್ಣನಿಗೆ ಪ್ರಚೋದಕವಾಗಿ ನಿಲ್ಲುವ ಅಜ್ಜಿ, ಮುತ್ತಯ್ಯ ಸಿನಿಮಾಕ್ಕೆ ಆಧಾರಸ್ಥಂಭಗಳು. ಸ್ನೇಹಿತನ ಪಾತ್ರಧಾರಿಯಾಗಿರುವ ರಾಜು ಅನಂತಸ್ವಾಮಿಯವರನ್ನು ಈ ಕ್ಷಣ ನೆನೆಯಲೇ ಬೇಕು. ಅಂತಹಾ ಪ್ರತಿಭಾವಂತ ಇಂದು ನಮ್ಮೊಂದಿಗಿಲ್ಲವೆಂದರೆ ನಂಬಲಾಗದು. ಒಟ್ಟಾರೆ “ಚಿಗುರಿದ ಕನಸು” ಚಿತ್ರಕ್ಕೆ ನಾ ಬಹುವಾಗಿ ಒಲಿದಿದ್ದೇನೆ.
  ನನ್ನ ಸಾಹಿತಿ ಜಯಂತರು ಬರೆದಿರುವ “ಚಿಗುರಿದ ಕನಸು” ಚಿತ್ರದ ಸಂಭಾಷಣೆಯ ಈ ಕೆಳಗಿನ ಸಾಲುಗಳು ನನ್ನಲ್ಲಿ ಉತ್ತೇಜನವನ್ನೋ, ಉಲ್ಲಾಸವನ್ನೋ, ಉನ್ಮಾದವನ್ನೋ, ಉತ್ಪ್ರೇಕ್ಷೆಯನ್ನೋ ಉಂಟುಮಾಡಿರಬಹುದು.

“ನೇತ್ರಾವತಿ ಸೆರಗಿನಲ್ಲೇ ಇದೆ ಬಂಗಾಡಿ”
“ದಾರೀನೆ ಇಲ್ಲ, ತಪ್ಪೋದ್ ಏನ್ ಬಂತು”
“ಮನ್ಸಲ್ ಬತ್ತೋಗಿದ್ದ ಆ ಕಾಲದ್ ನದಿನೀರಪ್ಪ ಇದು, ಹರೀಲಿ ಬಿಡು, ಹರೀಲಿ ಬಿಡು”
“ಈ ಜೀವಕ್ಕಿರೋದು ಒಂದೇ ಹಂಬಲ ಮಗು, ಮತ್ತೆ ಆ ಬಂಗಾಡಿ ಮನೆ ಮೊದಲಿನ್ ಹಾಗ್ ಹಾಗ್ಬೇಕು. ಅಲ್ ಒಲೆ ಉರಿಬೇಕು. ಮನೆತುಂಬ ಜನ ಇರ್ಬೇಕು. ಮತ್ತೆ ನಾನಲ್ಲಿಗ್ ಹೋಗ್ಬೇಕು. ಈಗ ನೀನ್ ಬಂದಿದ್ದೀಯಲ್ಲ, ಮನೆ ಕಟ್ಟು ಮಗು...”
“ನಾನು ಹಿಂತಿರುಗಿ ನೋಡಲಾರದಷ್ಟು ಮುಂದೆ ಬಂದಿದ್ದೀನಿ, ಯಾರಿಗೊತ್ತು ನಾನ್ ಹಿಂತಿರುಗಿ ನೋಡಿದ್ರು ನಂಗೇನು ಕಾಣಿಸ್ದೆ ಹೋಗ್ಬೋದು”
“ನಮ್ ಭೂಮಿ ಪಾಳ್ ಬಿದ್ದಿದೆ ಅಲ್ಲಿ, ನಮಗಾಗ್ ಕಾಯ್ತಿದೆ, ಅದನ್ನೋಡ್ಕೋಳ್ಳೋಕ್ ಹೋಗ್ತಿದೀನ್ ನಾನು”
“ಮೂಲದ ತುಡಿತ ನಾನ್ ತಿಳ್ಕೊಳ್ಬಲ್ಲೆ ಶಂಕರ್. ಆದ್ರೆ ಹಾಗಂತ ನದಿ ತನ್ನ ದಿಕ್ಕನ್ನೆ ಉಲ್ಟಾ ಮಾಡಿ ಮೂಲದ ಕಡೆ ಹೋಗೋದಿಲ್ಲ. ನಾವು ಹಾಗೆ ಮೂಲದ ಜೊತೆ ನಂಟಿಟ್ಕೊಂಡೆ ಮುಂದ್ ಮುಂದಕ್ ಹರಿಬೇಕು.”
“ಬಂಗಾಡಿ ಮಣ್ಣು, ಪಾಳು ಬಿದ್ದ ನಮ್ಮನೆ ಒಲೆ ಮಣ್ಣು”
“ವರು ನಾವ್ ಮತ್ತೆ ಮನೆ ಕಟ್ಟೋಣ, ಒಲೆ ಉರ್ಸೋಣ”
“ಆ ನೆಲದ್ ತಾಳ್ಮೆ ಎದುರು, ಅಜ್ಜಿ ತಾಳ್ಮೆ ಎದುರು ನಂದ್ಯಾವ್ ಲೆಕ್ಕ ಹೇಳಿ ಚಿತ್ತಾರ್ರೆ? ಕಣ್ಮುಚ್ ದುಡಿತೀನಿ. ಕಣ್ ತೆರದ್ ಕಾಯ್ತೀನಿ.”
“ಜೀವ ಇರೋತನ್ಕ ದುಡಿತೀವಿ ದತ್ತಣ್ಣ”
“ಸಾವನ್ನ ಎದುರಾಕ್ಕೊಂಡು 80 ವರ್ಷ ಬದುಕಿದ್ದೀನಿ. ಇದ್ಯಾವ್ ಲೆಕ್ಕ”
“ವೇಷ ಕಟ್ಕೊಂಡು ಯಾವಾಗ್ಲು ಓಡ್ತಾ ಇರೋ ಜನ ಅವ್ರು”
“ಕೂಗಿನಿಂದ ಯಾವ ಸತ್ಯಾನು ಮುಚ್ಚಿಡೋಕ್ ಸಾಧ್ಯ ಇಲ್ಲ”
“ಈ ನೆಲದಲ್ಲಿ ಎಷ್ಟೊಂದ್ ಪ್ರೀತಿ ಇದೆ; ಈ ಹಸಿರ್ನಲ್ಲಿ ಎಷ್ಟೊಂದ್ ಸೌಂದರ್ಯ ಇದೆ; ಆದ್ರೆ ಇದೇ ನೆಲದಲ್ ಹುಟ್ಟಿರೋ ಮನುಷ್ಯರಲ್ಲಿ ಯಾಕಿಷ್ಟು ಕ್ರೌರ್ಯ?”
“ಬಾ ನಮ್ಮನೇಗ್ ಹೋಗೋಣ”
“ಅವನಿಗೆ ಅವನ್ ಲಕ್ಷ ಸಿಕ್ಕಿದೆ ಅಲ್ಲಿ, ಅವ್ನ್ ಖಂಡಿತ ಬರೋದಿಲ್ಲ. ನೀನು ಅವನಿಗೋಸ್ಕರ ಇಲ್ಲಿ ಕಾಯ್ಬೇಡಮ್ಮ”
“ಶಂಕರ, ಗದ್ದೆ ಇದ್ದಮೇಲೆ ಕಳೆ ಇದ್ದದ್ದೆ. ಕಳೆ ಇದೆ ಅಂತ ಗದ್ದೆ ಕೆಲಸ ಬಿಟ್ಬಿಡೋದ; ಕಳೆ ತೆಗ್ದು ಕೆಲಸ ಮುಂದುವರಿಸ್ಬೇಕು”
“ಈ ಹೊಲ, ಗದ್ದೆ, ಮನೆ ಎಲ್ಲ ನೋಡಿ ಸಮಾಧಾನದಿಂದ ಹೋಗಿದಾಳೆ ಅಜ್ಜಿ. ಹೌದು! ಅವಳ್ನ,, ಸಮಾಧಾನದಿಂದ್ಲೆ ಕಳಿಸ್ಕೊಡ್ಬೇಕು. ಅಳ್ಬಾರ್ದು ನಾವು, ಅಳ್ಬಾರ್ದು.”
“ನಮ್ಮ ನಮ್ಮ ಆತ್ಮಸಾಕ್ಷಿ ಹೇಳಿದಾಗ್ ನಾವು ನಡ್ಕೊಂಡ್ರೇನೆ ನೆಮ್ಮದಿ”
“ಹೀಗೆ ನೀವು ಮೇಲಾಧಿಕಾರಿಗಳ್ನ ಹಾಳ್ ಮಾಡೋದು. ಕೊಡೆ ಹಿಡ್ದು ಹಿಡ್ದು,,
“ನಾನ್ಯಾಕ್ ಬಂದೆ ಇಲ್ಲಿಗೆ, ಬಂದು ಏನನ್ನ ಸಾದಿಸ್ದೆ? ಎಲ್ಲಾರ್ನು ನಂಬಿ ಬಂದ ನಾನು ಹಾಗೆ ಇದೀನಿ. ಆದ್ರೆ ನನ್ನನ್ ನಂಬ್ಕೊಂಡ್ ಬಂದ್ ಅಜ್ಜಿ, ಶ್ರೀಮತಿ ಯಾಕ್ ಕಣ್ಮರೆಯಾದ್ರು? ನನ್ನ ಕೈಯಿಡ್ದು ಕೆಲಸಕ್ ಅಚ್ದೋರೆ ಯಾಕ್ ದೂರ ಹೋರ್ಟೋದ್ರು? ನಂಗ್ ಒಂದು ಅರ್ಥ ಆಗ್ತಿಲ್ಲ.”
“ನನ್ನನ್ನೋಡೋ.. ಮೊಮ್ಮಕ್ಕಳ ಸಾವನ್ನ ಕಣ್ಣಾರೆ ಕಂಡಿದೇನೆ. ಆದ್ರು ಏನು ಆಗ್ದೆ ಯಾಕಿನ್ನು ಬದ್ಕಿದ್ದೀನಿ?”
“ನಾವು ಬದ್ಕೀದ್ದೀವಿ ಅನ್ನೋ ಒಂದ್ ಕಾರಣ ಸಾಕು ಮಗ ಇನ್ನು ಚನಾಗ್ ಬದ್ಕೋದಕ್ಕೆ, ನಡಿನಡಿ ಕೆಲಸ ಶುರು ಮಾಡುವಾ”
“ನಿನ್ನ ಮುಂಗುರುಳನ್ನು ನೇವರಿಸಿ ಬೀಸ್ತಾ ಇರೋ ಗಾಳಿಯಲ್ಲಿ ಅಜ್ಜಿ ಹುಸಿರಿದೆ. ಇಲ್ಲಿನ ಪ್ರತಿ ಹೊಸ ಚಿಗುರಿನಿಂದ ಶ್ರೀಮತಿ ನಿನ್ನನ್ ನೋಡ್ತಿದಾಳೆ”
“ನೀನು ಕನ್ನಡದಲ್ ಮಾತಾಡ್ತಾ ಇದ್ರೆ ಎಷ್ಟೋ ವರ್ಷಗಳಿಂದ ಮುಚ್ಚಿಹೋದ ಒಂದು ಪ್ರಪಂಚದ ಬಾಗಿಲು ತೆರದಾಗ್ ಆಗ್ತದೆ, ಮಾತಾಡು ಶಂಕರ,”
--ಚಂದ್ರು ಎಂ ಹುಣಸೂರು
   ಸಿರಿ ಸಹ ಸಂಪಾದಕ

No comments:

Post a Comment