ನನ್ನ ಖಾಸಗೀ ವಿಚಾರಗಳನ್ನು ಬೇರೆಯವರು ಕೆದುಕಬಾರದು ಎಂದು ನಾನು ಅಂದುಕೊಳ್ಳುವಾಗ ಇನ್ನೊಬ್ಬರ ಖಾಸಗೀ ಸಂಗತಿಗಳನ್ನು ನಾನು ಗೌರವಿಸಬೇಕಾಗಿರುವುದು ಕರ್ತವ್ಯ.
ಪ್ರತಿಯೊಬ್ಬರಲ್ಲೂ ಪರ್ಸನಲ್ ವಿಷಯಗಳು ನೆಲೆಸಿರುತ್ತವೆ. ಅವು ತಮ್ಮ ಕುಟುಂಬಕ್ಕೆ ಸಂಬಂಧಿಸಿರಬಹುದು, ಸಾಮಾಜಿಕವಾಗಿರಬಹುದು, ವೈಯುಕ್ತಿಕವಾಗಿರಬಹುದು. ಅವುಗಳನ್ನು ಗೌಪ್ಯವಾಗಿ ಕಾಪಾಡಿಕೊಳ್ಳುವುದರಿಂದ ಪ್ರಾಣಿಗಳಿಗಿನ್ನ ಮನುಷ್ಯ ಭಿನ್ನನಾಗಿ ಕಾಣುತ್ತಾನೆ. ಮುಕ್ತವಾದ ಬದುಕು ಎಷ್ಟು ಮುಖ್ಯವೋ ವೈಯುಕ್ತಿಕ ಬದುಕು ಕೂಡ ಅಷ್ಟೇ ಮುಖ್ಯ. ನೇರವಾಗಿ ಎಲ್ಲವನ್ನು ಎಲ್ಲರಲ್ಲಿಯೂ ಯಾರು ಹೇಳಿಕೊಳ್ಳುವುದಿಲ್ಲ. ಒಂದಿಷ್ಟು ಸ್ವಂತದ್ದು, ಹಂಚಿಕೊಳ್ಳಬೇಕೆನಿಸದ ಸಂಗತಿಗೆ ಮನುಷ್ಯ ಜವಬ್ದಾರನಾಗಿರುತ್ತಾನೆ. ವ್ಯವಹಾರಗಳಲ್ಲಿಯೂ ಖಾಸಗೀತನ ಮುಖ್ಯ. ಸಂಬಂಧಗಳಲ್ಲೂ ಖಾಸಗೀತನ ಮುಖ್ಯ. ತನ್ನ ಖಾಸಗೀತನವೂ ಅಷ್ಟೇ ಮುಖ್ಯ.
ಸರ್ ನೀವೇಕೆ ಡಲ್ ಆಗಿದ್ದೀರಿ, ನಿಮ್ಮ ಮನೆಯಲ್ಲಿ ಜಗಳವೆ, ನೀವು ತುಂಬಾ ತೆಳ್ಳಗಿದ್ದೀರಾ, ನೀವೇಕೆ ಹಾಸ್ಪಿಟಲ್ಗೆ ಹೋಗುತ್ತೀರಾ, ನಿಮ್ಮದು ಲವ್ ಮ್ಯಾರೇಜ, ಯಾರ ಬಳಿ ಅಷ್ಟೊತ್ತು ಫೋನಿನಲ್ಲಿ ಮಾತನಾಡುತ್ತೀರಿ, ನೀವು ಲವ್ ಮಾಡುತ್ತಿದ್ದೀರಾ, ನಿಮಗೆ ಈ ಷರ್ಟ್ ಒಪ್ಪುವುದಿಲ್ಲ, ಎಲ್ಲರನ್ನೂ ಗೌರವಿಸಿ- ಈ ಬಗೆಯಾಗಿ ಅನೇಕ ಪ್ರಶ್ನೆಗಳನ್ನು ನಾವು ಕೇಳಬೇಕೆನಿಸುವ, ಹಂಚಿಕೊಳಬೇಕೆನಿಸುವ, ಹೇಳಿಬಿಡುವ ಮುನ್ನ ಒಮ್ಮೆ ಆಲೋಚಿಸಬೇಕು. ನಾವು ಸಂಭಾಷಣೆಗೆ ಬಳಸುತ್ತಿರುವ ವಿಷಯವಸ್ತು, ವ್ಯಕ್ತಿ- ಈ ಎರಡು ವಿಷಯಗಳು ಗಮನದಲ್ಲರಬೇಕು. ಇವರಲ್ಲಿ ಇದನ್ನು ಕೇಳುವ ಅವಶ್ಯಕತೆ, ಯೋಗ್ಯತೆ, ಸಾಮಿಪ್ಯತೆ ನನಗಿದೆಯಾ? ಈ ನನ್ನ ಕೇಳುವಿಕೆಗಳಿಂದ ಅವರಲ್ಲಿ ಏಳಬಹುದಾದ ಅಲೆಗಳ ರೀತಿ ಯಾವುದು? ಅಥವಾ ಕೇಳದೆ ಸುಮ್ಮನಿದ್ದರೆ ಯಾರಿಗಾದರೂ ಲಾಸಿದೆಯಾ? ಇವೆಲ್ಲವನ್ನು ಯೋಚಿಸಬೇಕು. ಈ ಪ್ರಭುದ್ಧತೆ ನಮ್ಮಲ್ಲಿ ಬರುವವರೆಗೂ ನಮ್ಮ ಜ್ಞಾನ ನೀರಲ್ಲಿ ಹುಣಸೇಹಣ್ಣನ್ನು ತೇದಿದಂತೆ.
ಮೊದಲ ಬಾರಿ ಭೇಟಿಯಾದ ವ್ಯಕ್ತಿಯೊಡನೆ ನಾವು ಹೇಗೆ ವರ್ತಿಸುತ್ತೇವೋ ಅದು ನಮ್ಮ ವ್ಯಕ್ತಿತ್ವದ ಟ್ರೇಲರ್ನಂತಾಗುತ್ತದೆ. ಅವರ ಹೆಸರೇನು? ಅವರ ಊರು ಯಾವುದು? ಅವರ ವೃತ್ತಿ ಏನು?- ಅಂತಷ್ಟೇ ತಿಳಿದಿದ್ದ ಮಾತ್ರಕ್ಕೆ ಸುಲಲಿತವಾಗಿ, ನಿರಾಯಾಸವಾಗಿ, ಮನಸ್ಸಿಗೆ ಬಂದಂತೆ ವರ್ತಿಸೋದು ನಮ್ಮ ದಡ್ಡತನ. ವ್ಯಕ್ತಿಗಿಂತ ವ್ಯಕ್ತಿಯಲ್ಲಿನ ಆಲೋಚನೆಗಳು ಭಿನ್ನ. ನಿಮ್ಮಲ್ಲಿ ಯಾವುದೋ ಒಂದು ಗುಣ ಇನ್ನೊಬ್ಬರಿಗೆ ತುಂಬಾ ಇಷ್ಟವಾಗಿದೆ ಎಂದರೆ ಅದು ಎಲ್ಲರಿಗೂ ಹಿಡಿಸಬೇಕೆಂದೇನಿಲ್ಲ. ಅಥವಾ ನಾವು ಮೆಚ್ಚಿಕೊಂಡ ಯಾವುದೋ ತತ್ತ್ವ ಇನ್ನೊಬ್ಬನಲ್ಲಿಯೂ ಪರಿಣಾಮ ಬೀರಲಿ ಅಂದುಕೊಳ್ಳೋದು ಕೂಡ ಕೆಲವೊಮ್ಮೆ ನಮ್ಮನ್ನು ಸೋಲಿಸುತ್ತದೆ. ಬದುಕಿನ ನಾನಾ ಬಗೆಯ ಪಾಠಗಳು ಚಿತ್ರವಿಚಿತ್ರ ರೀತಿಯಲ್ಲಿ ಅನುಭವ ನೀಡುವುದರಿಂದ ಒಬ್ಬೊಬ್ಬನಲ್ಲಿಯೂ ಒಂದೊಂದು ಬಗೆಯ ಅಥವಾ ಅದೇ ತೆರನಾದ ತಿಳುವಳಿಕೆ ಸೃಷ್ಟಿಯಾಗಿರಬಹುದು.
ಇಬ್ಬರ ನಡುವಿನ ಆಪ್ತತೆ, ಸ್ನೇಹ, ಸಮಯ, ಅವಶ್ಯಕತೆ, ಸಂದರ್ಭ ಮಾಗುವವರೆಗೆ ಅನಿಸಿದ್ದನ್ನೆಲ್ಲಾ ಹೇಳುವ ಚಾಳಿಗೆ ಬೀಗ ಜಡಿಯೋದು ಉತ್ತಮ. ನಮ್ಮನ್ನು ನಾವೇ ಸರಿಯಾಗಿ ಅರ್ಥ ಮಾಡಿಕೊಳ್ಳದ ಸಂದರ್ಭದಲ್ಲಿ ನಾವು ಇನ್ನೊಬ್ಬನ ಸಾಧಕಬಾದಕಗಳನ್ನು ಆದಷ್ಟು ದೂರವಿಟ್ಟು ನಮ್ಮ ನಮ್ಮ ಕೆಲಸದಲ್ಲಿ ತಲ್ಲೀನರಾಗೋದು ಒಳಿತು. ಹಂಚಿಕೊಳ್ಳುವ ವಿಷಯಗಳಿಂದಷ್ಟೇ ಇಬ್ಬರ ನಡುವಿನ ಬಾಂಧವ್ಯ ಗಟ್ಟಿಯಾಗೋದು. ಆದರೆ ಅದಕ್ಕೆ ಸಮಯ ಸಂದರ್ಭ ಬಹಳ ಮುಖ್ಯ.
ಸಾಧ್ಯವಾದಷ್ಟು ಅವರವರ ವೈಯುಕ್ತಿಕ ವಿಚಾರಗಳನ್ನು ಕೇಳಿ ಅವರಿಗೂ ಮುಜುಗರ ತಂದು ಬಾಂಧವ್ಯದ ನಡುವೆ ಮನಸ್ತಾಪದ ಗೋಡೆ ಕಟ್ಟಿಸಿಕೊಳ್ಳುವ ಬದಲು ನಮ್ಮ ಯೋಗ್ಯತೆ, ಅರ್ಹತೆ, ಅವಶ್ಯಕತೆ ಎಷ್ಟಿದೆ ಎಂಬುದರ ಕಡೆ ಗಮನ ಹರಿಸೋಣ.
ಇದು ಅನುಭವದಿಂದ ಬರೆದದ್ದು. ಇಂತಹ ತಪ್ಪುಗಳು ಮರುಕಳಿಸದ ಹಾಗೆ ಎಚ್ಚರದಿಂದಿರಲು ನಾನು ಪ್ರಯತ್ನಿಸುವಲ್ಲಿ ಒಂದು ಹೆಜ್ಜೆ..
ಧನ್ಯವಾದ..
ಚಂದ್ರು ಎಂ ಹುಣಸೂರು

No comments:
Post a Comment