Tuesday, 12 January 2016

ಆಲಿಂಗನಕ್ಕೊಂದು ಆಮಂತ್ರಣ,,,,(ಅಂಕಣ)-----ಚಂದ್ರು ಎಂ ಹುಣಸೂರು

ಆಲಿಂಗನಕ್ಕೊಂದು ಆಮಂತ್ರಣ
ನನ್ನ ಅನೂ,,
       ಇನ್ನೂ ಬೆಳಗಾಗದ ಹೊತ್ತು, ಹೊರಳಿ ಹೊರಳಿ ಹುರಿದ ಹುರುಳಿಯಾಗಿ ಮುಂದೇನು ಮಾಡುವುದೆಂದು ತಿಳಿಯುವುದರೊಳಗೆ ನನ್ನೊಳಗಿದ್ದವಳು ನೀನು. ಮಗ್ಗುಲಲ್ಲೆ ಮಗುಚಿದ್ದ ಫೋನನು ಸೆಳೆದು ನಿನ್ನ ಛಾಯೆಗೊಂದು ಮುತ್ತು.
      ಹೀಗೆ ಶುರುವಾದ ದಿನ ನೆನಪಲಿಲ್ಲ. ಮುಗಿವ ದಿನ ಬದುಕಿನಲಿಲ್ಲ. ಬೆಳಗಿನ ಜಾವದಲೆ ತುಂಬಿಕೊಳ್ಳುವ ನಿನ್ನ ಬಯಕೆಯಾದರೂ ಏನು ಅನು? ಎಂಥದ್ದಾದರೂ ಆವರಿಸಿಕೊಳ್ಳುವೆ ಹೇಳು ಅನೂ,, ವಾರಕ್ಕೊಮ್ಮೆಯಾದರು, ಒಲವ ವಾಸ್ತು ಸರಿಯಾಗಿದ್ದರೆ ಎರಡು ಸಲವೊ ಭೇಟಿಯಾಗುವಾಗ ಕಣ್ಣು ಹಂಬಲಿಸುವುದೇ ನಿನ್ನ ನಗುವ ಬೆಂಬಲ. ಬರೆದು ಮುಗಿದ ಪ್ರೇಮ ಪತ್ರಕೊಂದು ಕೊನೆಯ ಮತ್ತಿರಿಸದೆ ಹಾಗೆ ಪೋಸ್ಟ್ ಬಾಕ್ಸ್ ನಲ್ಲಿಟ್ಟವನ ಮುಗ್ಧತ್ವ ಕಾಡುತ್ತಿದೆ. ಕೈ ಬೆರಳ ಕಳಚಿ ಆಕಡೆ ಸರಿವಾಗ ನೀನು ಕಷ್ಡವಾದರೂ ನಗಲೇ ಬೇಕಿತ್ತು. ಮತ್ತೊಂದು ಅಮೋಘ ಭೇಟಿ ಇಂದೆಯೋ, ಸಂಜೆಯೋ ಎಂದು ನಿನ್ನ ಕರೆಗಾಗಿ ಹಂಪರೆವವ ನಾನು ನಿನ್ನವನೆಂದೇಳಲು ಮುಗಿಲಗಲ ಬಯಕೆ.

  ಏನೋ ಹೇಳುತ್ತೇನೆಂದು ಗುಟ್ಟೆಂಬಂತೆ ಬಳಿಬಂದು ಹೇಳಿದ್ದು ಕೇಳಲೇ ಇಲ,್ಲ ತಾಕಿ ನಿನ್ನ ಮುಂಗುರುಳು. ಮೈಯ್ಯು ಮಂಜಾಗುವುದು ಅಂದೇ ತಿಳಿಯಿತೆನಗೆ. ಅನು ಇಷ್ಟು ಕಾಡುವ ನೀನು ಎದುರು ಬಂದಾಗ ಹಾಡಬೇಕೆಂದಿದ್ದ ಹಾಡು ಹೃದಯ ತಾಳ ತಪ್ಪಿದುದರಿಂದಲೋ ಏನೋ ಮೂಗನಾಗೆ ಕೇಳಿಸಲೋಗಿ ಅಂದು ಕೊಂಚ ಪೋಲಿಯಾದೆನೇನೊ ಅಲ್ವಾ?? ನೀನೆ ಅಂದೆಯಲ್ಲ ಹಾಗೆ. ಅನು ಈ ಬಾರಿ ತುಂಬ ಪ್ರಶ್ನೆ ಇವೆ. ಕೇಳಯೇ ತೀರಲಿ ಬಿಡು. ತುಂಬುದಿನದ ಅವಕ್ಕೇಕೆ ತುಕ್ಕುತನ. ಒಂದಷ್ಟು ಮನಕ್ಕೆ, ಮತ್ತಷ್ಟು ಮಡಿಲಿಗೆ, ಇನ್ನಷ್ಟು ಮೈಯ್ಯಿಗೆ. ಇರೋ ಈ ಮೂರು ವಿಷಯ ಜೋರಾಗೆ ಸೆಣೆಸುತಿವೆ ನನ್ನ. ಸರಿಸದೆ ನನ್ನ  ಜವಬ್ದಾರಿ ಪೂರ ನೀನೆ ವಹಿಸು...


       ಅತಿಯಾಗಿ ಹೇಳುವವನ ಅತಿಯಾಸೆ ಏನೆಂದು ನೀ ನರಿ ಬೇಗ. ಹಿಡಿಸಿದವಳಿಂದ ವಿರಹದ ಬರಗಾಲಕ್ಕೆ ನೆರವು ಕೋರುವುದು ತಪ್ಪಾ? ಬಳಿಯೇ ಇರಬೇಕು ಅನ್ನೋ ಬೆಳಕಿನ ಕನಸಿಗೆ ಬಳುವಳಿಯಾಗಿ ಏನು ಇಲ್ವಾ?? ಒಮ್ಮೆ ಮಲಗಿಸಿತು ನಿನ್ನ ಮಡಿಲು. ಮಡುಗಟ್ಟಿದೆ ಅಂದಿನಿಂದ ಪ್ರತಿ ರಾತ್ರಿಯ ನಿದಿರೆ. ಒಂದು ಘಳಿಗೆಯ ಆ ನೆಮ್ಮದಿ ಮತ್ತೆ ನನ್ನದಾಗುವುದೆಂತೋ ಈ ಬಾಳಲಿ. ನನ್ನ ತಲೆಗೂದಲ ಗಿರಿಧಾಮದಲಿ ಹಾಯಾಗಿ ವಿಹರಿಸಿದ್ದ ನಿನ್ನ ಕೈ ಬೆರಳುಗಳು, ಅವಕ್ಕೆ ಶೀಘ್ರದಲೆ ಬಿಸಿಮುತ್ತಿನ ಮಾಲೆ, ನಿನ್ನ ಆಕ್ಷೇಪವಿದ್ದರೂ!! ಬಳಿಯಿದ್ದ ಆ ಗಳಿಗೆ ಏದುರಿಸಿತ್ತು ಇಬ್ಬರಲ್ಲು. ಅದು ವಿಪರೀತ ಒಲವಿನ ಭೋರ್ಗರೆತವೋ? ಬಿಸಿವಯಸ ಹಸಿಗನಸ ಈಡೇರಿಕೆಗೋ? ತಕರಾರಿಲ್ಲದೆ ತರಭೇತಿ ಪಡೆದ ಹೊಂದಾಣಿಕೆಯ ಹೊಂಬೆಳಕೋ? ಹೊಸದಾಗೆ ಒಲಿಯುತ್ತಿದ್ದ ಸುಧೀರ್ಘ ಸನಿಹ, ಸರಸ ಸಂಧರ್ಭಾಗಮನಕ್ಕೋ? ಯಾವುದಕ್ಕಾದರಿರಲಿ ಎಂದೆಂದಿಗೂ ನಿನ್ನ ಪೂರ ನಾನೆ ಇರಲಿ, ನಾನೆ ಇರಲಿ ಅನೂ,,

      ನಾನು ಪ್ರಥಮ ಎಮ್ ಎ ಎಮ್ ಸಿ ಜೆ ನೀನು ದ್ವಿತೀಯ ಬಿ ಕಾಂ, ಅದಾವ ನೋಟ್ ಪುಸ್ತಕ ನಾ ನಿನ್ನಲ್ಲಿ ಕೇಳಲು ಬಂದದ್ದು ನಿನ್ನ ಮನೆಗೆ. ಈ ಬಾರಿ ಸಿಗುವಾಗ ಅದನ್ನೆ ತರುತ್ತೇನೆ. ಮತ್ತೆ ನನ್ನಲ್ಲಿ ಇನ್ನೊಮ್ಮೆ ಕೇಳಲು. ಅಕ್ಷರ ಬರೆಯದೆ ಹಾಲಾಗಲಿ ಅದು. ನೀ ಮಾತ್ರ ಖಾಲಿ ಪುಟದ್ದು ಅಂತ ಬಿಸಾಡದಿರು. ನಿನ್ನ ನೋಡುವ ಈ ಉತ್ಪ್ರೇಕ್ಷಕನಿಗೆ ಸಹಾಯ ಹಸ್ತ ನೀಡಿದ್ದೆ ಅದು. ಅದ ಕೇಳಲು ಬಂದ ಅಂದು ನಿನ್ನ ಮನೆಯ ಸೂರಡಿ ನೀನಿರಲಿಲ್ಲ. ಗೇಟ್ ತೆರದೇ ಇತ್ತು. ಸಲೀಸಾಗೆ ಬಂದವಗೆ ಸಂಸ್ಕಾರವಾಗಿ ಕಂಡದ್ದು ನಿನ್ನ ಮನೆ ಮುಂದಿನ ತುಳಸಿ, ಬಳಿದ ಹರಿಶಿಣ, ಸ್ವಲ್ಪ ನಾಮ, ಕರಗಿ ಜರುಗುತ್ತಿತ್ತು ಘಮ, ಗಂಧದ ಕಡ್ಡಿಯ ದೇಹದಿಂದ. ಬಳಿಬಂದು ಒಳಸೇರಲೇನೋ ಉಲ್ಲಾಸ, ಹಿಂಜರಿಕೆ, ಚಂದದ ಚಿಲುಮೆ ಎದೆಯೊಳಗೆ. ನಿಮ್ಮಮ್ಮನೇ ಕರೆದರು ‘ಬಾ ಚಂದ್ರ ಎಂದು’. ಅಪ್ಪಣೆ ಸಿಕ್ಕು ಅಳಿಯನೇ ಆದೆನೆಂಬಷ್ಟು ಸಭ್ಯದ ನಡಿಗೆ ನಂದು. ದೇವರ ಕೋಣೆಯಲ್ಲಿ ಪ್ರಜ್ವಲದ ಪ್ರಾರಂಭದ ಜ್ಯೋತಿ, ನೀರೊಲೆಯ ಕಡೆ ಏನೋ ಮಾಡುತಿದ್ದ ನೀನು ನೀಲವೇಣಿಯಾಗಿ ನಡೆದು ಬಂದದ್ದು ಇಂದಿಗೂ ಕಣ್ಣಲ್ಲೇ ಕೂತಿದೆ. ಪೂಜಾ ಕಾರ್ಯ ನಿನ್ನದೆ. ಹಸಿಯ ಟವೆಲ್ ನಿನ್ನ ಉದ್ದನೆಯ ಜಡೆ ಮುದ್ದೆ ಮಾಡಿ ಪ್ರಸನ್ನಳಾಗಿಸಿದ್ದನ್ನು ನೋಡಿ ತಿಳಿಯಿತು. ಇಷ್ಟು ಸಂಸ್ಕಾರವಂತೆ ನನ್ನ ಸಂಸಾರವಂತಾದರೆ, ನಾನೆಷ್ಟು ಪೂರ್ಣ, ನಾನೆಷ್ಟು ಧನ್ಯ, ನಾನೆಷ್ಟು ಶುಭ, ನಾನೆಷ್ಟು ಲಾಭ?? ಐ ಲವ್ ಯು ಅನೂ, ಅನೂ ಐ ಲವ್ ಯೂ,,,

         ಮುಗುಳ್ನಗುವ ಮೌನಿ ಧ್ಯಾನಕ್ಕೊರಳುವ ಹಾಗೆ ವಾಲಿದಂತಾಯ್ತು ಜಗ. ನನ್ನಿಂದೊರಟ ನಗುವ ಕಿರಣಗಳಿಂದೇನೊ ನಾಚಿಕೆಯೊಡನೆ ನಗುಗೂಡಿಸಿ, ವೈರಿ ಗಾಳಿಜೊತೆ ನಿನ್ನ ಮುಂಗುರುಳ ಸರಸನೋಡಿ ದಂಗಾದ ನನಗೆಂದೇ ಕಾಫಿ ತರಲು ನೀನು ಒಳಗೋದೆ. ನಾನು ಬದುಕಿದ್ದೆ!! ಕೂತ ಸೋಫಾದ ಬಳಿಯ ಕೆಂಪು ಟೆಲಿಫೋನು ರಿಂಗಾಗಲೆಂದು ನಾನು ಮಾಡಿದ ಡಯಲ್,,,ರಿಸೀವ್ ಮಾಡಲು ನಿಮ್ಮಮ್ಮನೇ ಬರ್ಬೇಕ!! ಅಂತೂ ಮೂರ್ಖ,, ಸನಿಹ, ಸ್ಪರ್ಷದಂತಹ ಒಲವ ಮಾಧಕ ವಿಷಯಗಳು ಅಂದು ಅವನತಿ ಹೊಂದಿದ್ದವು. ಅವ್ಯಾವು ಜರುಗದೆ ಮುದಸಿಗದ ಈ ನಿನ್ನ ಮುದ್ದು ಹುಡುಗನ ಪೆದ್ದು ಜಾಣತಕ್ಕೆ ಗಲ್-ಗಲ್ ಎಂದಿದ್ದ ನಿನ್ನ ಗೆಜ್ಜೆ ಸದ್ದೆ ಅಂದಿನಿಂದ ಇಂದಿನ ವಿರಹಕ್ಕೆ ಮದ್ದಾಗಿದೆ. ಅದು ಸಾಲದು ಗೆಳತಿ,,,

         ಪ್ರತಿ ಸಲ ಎದುರಾದಾಗಲು ನನಗೊಂದು ಆಶ್ಚರ್ಯ ಆಗ್ತೈದೆ. ಭೇಟಿಯ ಪ್ರತಿಸಲ ನಿನ್ನ ರೂಪ ಪ್ರಜ್ವಲಿಸೋದು ಹೇಗೆ? ವರುಷದಂತರದಲ್ಲಿ ವ್ಯತ್ಯಾಸ ಕಾಣ್ಬೋದು. ಆದರೆ ದಿವಸಗಳಲ್ಲೆ ಅಷ್ಟು ಬದಲಾವಣೆ! ಈಗೀಗ ನಂಗೆ ಒಂತರ ಬಯ ಶುರುವಾಗಿದೆ ಅನು. ನಾನೇನಾದ್ರು ಸರಿಯಾದವನ ನಿಂಗೆ ಅಂತ. ಪ್ರೀತೀಲಿ ಪ್ರಾಮಾಣಿಕ. ಮಿಕ್ಕಿದ್ದು ಹಣ ಮತ್ತು ಚರಣ. ನನ್ನ ಸ್ಥಿತಿಗೆಂದೆ ಸ್ಥಾಪನೆಯಾದವಳೆಂದೆ ಭಾವಿಸಿರುವ ನನ್ನನ್ನು ಚಂದ್ರ ಹೆಸರಿಗೆ ತಕ್ಕಂತಿದ್ದೀಯಾ ಅಂದೆ ಆವತ್ತು. ಹೆಸರು ಬದಲಾವಣೆಯ ಹೊಣೆ ಹಣೆ ಬರಹವಾಗದಿರಲಿ ಭಗವಂತ ಎಂದೆ ಪ್ರಾರ್ಥಿಸುವೆ ಅನು. ಜೀವನದ ಪ್ರತಿ ಪುಟದಲ್ಲಿಯೂ ಪದೇ ಪದೇ ಕಾಣುವವಳು ನೀನು, ಕಾಡುವವಳು ನೀನು,.,,

         ನೆನೆವ ಮನಕ್ಕೆ ಕೊರೆವ ಚಳಿಯ ಮರೆವ ರೀತಿ ರಂಗೇರಿಸೊ ಗೆಳತಿ. ನಿನ್ನ ಅಂಗಾಲಿಗೀಗಲೆ ಅಚ್ಚರಿಯ ಚುಂಬನ. ತೆರೆದ ಕಣ್ಣಲ್ಲೂ ಕನವರಿಸುವವನ ಅಪ್ಪುಗೆ ಎಂತಾ ಹಿತ. ಅದಕಾಗೆ ಉಳಿದಿರುವೆ ಹುಡುಗಿ ಜೀವ ಸಹಿತ. ಬೇಸರವಾಗಿದೆ ಬಾಸದ ಸ್ಥಿತಿ, ನೆನಪಲ್ಲೆ ಎಲ್ಲ ಬಯಸಿ, ನೆನಪಲ್ಲೆ ಎಲ್ಲ ಸಹಿಸಿ, ನೆನಪಲ್ಲೆ ಎಲ್ಲ ಉಳಿಸೊ ನನ್ನ ನೆನಪೆ ನೀನು. ಕಲ್ಪನೆಯ ಕಾಗುಣಿತ ಸಾಕಾಗಿದೆ. ತಣ್ಣನೆಯ ಈ ಮಿಡಿತ ರಂಗೇರಿದೆ.

         ಮುಂದಿನ ಭೇಟಿ ನೆನೆದು ಮಂದಹಾಸ ಮನಕೆ. ಆಮಂತ್ರಣವಿಲ್ಲದ ಆಲಿಂಗನ, ಪಿಸುಮಾತ ಹೊಸ ರಂಗಿನ ನಡುವೆ ಬಿಸಿಮುತ್ತು, ನನ್ನ ನಿನ್ನ ಲೋಕದ ಒಂದಷ್ಟು ಮಾತು, ಕಣ್ಣು ಕಣ್ಣಿಗೆ ಕಣ್ಣು ಬಿಟ್ಟು ಬೇರೇನು ಕಾಣದಿರಲಿ. ಜಗತ್ತಿನ ಜಾತ್ರೆಯಿಂದ ಒಂದಷ್ಟು ಘಳಿಗೆ ಹೊರಗುಳಿದ ನಮ್ಮಿಬ್ಬರದೆ ಮಿಲನಯಾತ್ರೆ, ನನ್ನ ಓರೆನೋಟ, ನಿನ್ನ ಚೆಂದುಟಿ,, ನನ್ನ ನೆರಳು, ನಿನ್ನ ಮುಂಗುರುಳು,, ನನ್ನ ಬಲಗೈ ಕಿರಿಬೆರಳು, ನಿನ್ನ ಎಡಗೈ ಬಿಳಿ ಗಡಿಯಾರ,, ಯಾರೂ ಇಲ್ಲದ ಮೌನ, ನಮ್ಮಿಬ್ಬರ ನಗು,, ಪಾರ್ಕಿನ ಗುಲಾಭಿ, ಸೂರ್ಯನ ಕಿರಣ,, ಸಂಜೆ ಐದು ಗಂಟೆ, ಇನ್ನೂ ಬಿಳಿ ಬಿಸಿಲು,, ದೂರದ ಸಂತೆ, ಮಾಸದ ನಗು,, ನನ್ನ ಕೌತುಕ, ನಿನ್ನ ನಾಚಿಕೆ,, ದೂರದ ಕಟ್ಟಡ, ಅಸುನೀಗುವ ಬೇಸರ,, ಉದ್ದ ಜಡೆ, ಜೊತೆಯ ನಡೆ,, ಕಾಲ ಗೆಜ್ಜೆ, ತುಸು ಮೌನ,, ಅನಿರೀಕ್ಷಿತ ಸಣ್ಣ ಮಳೆ, ಮರೆತ ಬಣ್ಣದ ಕೊಡೆ,, ತಣ್ಣನೆ ಗಾಳಿ, ಬಿಸಿಯುಸಿರು,, ನೋಕಿಯಾ ಫೋನು, ನಿನಗೆ ನಾನು,, ಮರೆತ ಮಾತು, ಮನೆಯವರ ಕಾಲ್,, ಪದ್ಯದ ಅರ್ಥ, ಸನಿಹದ ವ್ಯರ್ಥ,, ಪರಿಚಿತನ ಹಾಯ್, ಪ್ರಣಯದ ಕನಸು,, ಇದೂ ಒಳ್ಳೆ ಸಿನಿಮಾ, ನಿಂಗಿಸ್ಟ ಅಲ್ವ ಹನುಮ,, ನಿನ್ನಿಂದೊಂದು ಮುತ್ತು, ಟೀಶರ್ಟ್ ಪಡೆದ ಉದ್ದ ಕೂದಲು,, ನಿನ್ನ ಅಕ್ಕನ ಮದುವೆ ತುಯಾರಿ, ಪುಸ್ತಕದ ನವಿಲು ಗರಿ,, ಸಂಜೆಯಾಯ್ತು, ಬಾನಲಿ ಹಕ್ಕಿಗಳ ಪಯಣ, ಇತ್ತ ನನ್ನ ನಿನ್ನ ನಯನ,,,

        ಎದ್ದು ಕೂತವ ಯತಾವತ್ತಾಗಿ ನಿನ್ನ ನೆನಪ ಹಿಡಿದು ಬರೆಯಲೋಸುಗ ಬಂದಂತಹ ನಮ್ಮಿಬ್ಬರ ಒಲವು ಬಲಿವ ಮೆಲುಕು. ಅನೂ ಒಂದಷ್ಟು ನಿನಗೆಂದೆ ನಮ್ಮದನ್ನು ಬರೆದನೆಂದರೆ ತುಸುದೂರ ನಿನ್ನೊಂದಿಗೆ ಹಾಯಾಗಿ ವಿಹರಿಸಿದೆ ಎಂಬಷ್ಟು ಹಿತವೆನಿಸುತ್ತದೆ. ನಾನೊಂಥರ ಸ್ವಾರ್ಥಿ ಅಲ್ಲಾ. ಬರೆದ ಪತ್ರದಲ್ಲಿ ನಮ್ಮಿಬ್ಬರ ಪಾತ್ರವೇ ಪ್ರಾಧಾನ್ಯವಾಗಿರಬೇಕು. ಪ್ರಾಣ, ಪ್ರೀತಿ, ಬದುಕು, ಈ ಮೂರು ನಿನ್ನೊಂದಿಗೆ ನಾನು, ನನ್ನೋಂದಿಗೆ ನೀನು ಅಷ್ಟೆ.

      ಕೇವಲ ಬರೆದಿಡ ಬೇಕೆಂದೇನಲ್ಲ, ಮನದ ನೆನಪು, ಬಯಕೆ, ಇಂಗಿತಗಳ ಪುಟ ತೆರೆದಿಡಬೇಕೆಂದು ಅನು. ಭಾಗ್ಯದಂತೆ ಒಳಬಂದ ಒಲವಿನವಳ ಭೇಟಿಗೆ,,,,

                                                                                                                      ನಿನ್ನ ಚಂದ್ರ..


3 comments: