ಮಡಿಲು
ನಾನೆನ್ನುವ ಈ ಜೀವವ
ಹಿಂಡುತಿಹುದೊಂದೊಲುಮೆ
ಕಾಡುತಿಹುದೊಂದೊಲುಮೆ
ಕರೆಯುತಿಹುದಾ ನನ್ನ ಸೀಮೆ??
ನಾ ಚಿಗುರೊ ಬಳ್ಳಿಯಂಬು
ಮಿಂಚಿನಿಂದೊಡೆದೊಡೆದು ಬಂದು ನಿಂತೀಕಡೆಗೆ,,
ಹಾಲೆರೆದ ಅವ್ವನಾಮೃತ ಝೇಂಕಾರಕೆ
ಕಿವಿಗೊಡದೆ ಮನಹಿಂಡಿ ಕಂಬನಿಯ ತುಂಬುನಗೆ,,
ಸಾಲ್ಗಂಬದ ಎನ್ನ ಕೋಟೆ, ಕಣಕಣವೂ ಕೆಬ್ಬೆ
ಹಸಿಹಸಿರ ನೆನೆನೆನೆದು ಗುನುಗುನುಗೊ ರಾಗ,,
ಹೊಲಗದ್ದೆ ಗಿಡಪೈರು, ಮುಗ್ಧ ಜಾನುವಾರು
ಬದುಕಿನ ಹಿತಶ್ರಮವದು ಕೃಷಿಯೋಗ,,
ತಬ್ಬಲಿಗನಲ್ಲದ ನಾನು ಕಣ್ತೆರೆದೆ
ತಬ್ಬಲಿಗನನುಭವವ ಕಂಡು,,
ಜೀವ ನೀಡಿದವಳ ‘ಮಡಿಲ’ ತಂಪು
ಬಲಿತ ಮನವ ಮಗುವಾಗಿಸಿತಿಂದು,,
ಕರುಳಬಳ್ಳಿ ಕರುಣಿಸಿದಾ ಫಲ
ಶ್ರಮಧಾನ, ಸತ್ಯ, ಸದ್ಗುಣವೇ ಭಾಗ್ಯ,,
ಇನ್ನೂ ನಾನಾಗಬೇಕು ಅವರಂತರಾಳದಲ್ಲಿ
“ಹೆತ್ತಂತ ಈ ಜೀವ ನಮ್ಮಂತೆ ಯೋಗ್ಯ”
ಅರೆನಿದಿರೆಯಲ್ಲಿಂದು ನೆನೆವಾಗ ಭೇಗುದಿ
ಹಗಲು ಇರುಳಾದಿಯೂ ಅಲೆದಾಡಿದ ಗೂಡ,,
ತಾಯೊಲವೆಂದೇ ಎಂದೆಂದೂ ಭಾವಿಸಿ
ಭೂತಾಯ ಬಳಿಸುರಿದ ಹನಿಹನಿಯ ಹಾಡ,,
ನನ್ಹವರ್ಹೇಗಿಹರೆಂದೆನಗೆ ತುಡಿತ
ಸಂಕಟದ ಸಂಗತಿಯು ಸೋಕದಿರೆ ಉಚಿತ,,
ಬಿಗಿದೇಹ, ಅಕ್ಷರವು ತಾಯ್ತಂದೆ ಭಿಕ್ಷೆ
ಸುಖ ಸೊಗಸು, ಹೊಸ ನನಸು ನಾವ್ನೀಡೊ ರಕ್ಷೆ,,
No comments:
Post a Comment