Wednesday 8 December 2021

ತಂಬಾಕು ಮಾರುಕಟ್ಟೆ ಮತ್ತು ರೈತ

 ತಂಬಾಕು ಮಾರುಕಟ್ಟೆಯೋ ಅಥವಾ ಲಂಚ ವಸೂಲಿಗರ ಜೇನುಗೂಡೋ...


ಹುಣಸೂರು ಪಿರಿಯಾಪಟ್ಟಣ ಹೆಚ್ ಡಿ ಕೋಟೆ ತಾಲ್ಲೂಕುಗಳ ಸರಿಸುಮಾರು ಹೆಚ್ಚು ರೈತರ ನೆಚ್ಚಿನ ಬೆಳೆ ತಂಬಾಕು. ಸ್ಥಳೀಯ ಭಾಷೆಯಲ್ಲಿ ಹೇಳುವುದಾದರೆ ಹೊಗೆಸೊಪ್ಪು. ಕಾಸಿನ ಬೆಳೆ ಎಂದೆ ಖ್ಯಾತಿಯಾಗಿರುವ ಬೆಳೆ ಇತ್ತೀಚೆಗೆ ಬಂಡವಾಳ ಬೆಟ್ಟದಷ್ಟು ಆದಾಯ ಅಂಗೈಯ್ಯಗಲ ಅನ್ನುವಂತಾಗಿದೆ. ಕೂಲಿ, ಗೊಬ್ಬರ, ಕೀಟನಾಶಕ, ಪೆಟ್ರೋಲ್ ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ಬದಲಾಗುತ್ತಿರುವ ಹೊತ್ತಿನಲ್ಲಿ ಕೃಷಿಯ ಬಡವಾಳದಲ್ಲಿ ಬಹಳಾ ಬದಲಾವಣೆಗಳಾಗಿವೆ. ಮೂರು ಲಕ್ಷ ಆದಾಯ ಗಳಿಸುವ ರೈತನೊಬ್ಬ ಎರಡು ಲಕ್ಷ ಬಂಡವಾಳ ಹೂಡಬೇಕಿದೆ. ಆ ಒಂದು ಲಕ್ಷ ಲಾಭಕ್ಕಾಗಿ ಇಡೀ ಕುಟುಂಬ ಹಗಲಿರುಳೆನ್ನದೆ, ಮಳೆಬಿಸಿಲೆನ್ನದೆ, ದುಡಿಯಬೇಕು. ಎರಡು ಲಕ್ಷ ಸಾಲದ ಬಡ್ಡಿಗೆ ಸಾಕಾಗುವ ಆದಾಯ ನಂಬಿಕೊಂಡ ರೈತ ಮೈಮುರಿದು ದುಡಿದು ರಾತ್ರಿ ನೆಮ್ಮದಿಯ ನಿದಿರೆಯ ಕನಸು ಕಾಣುವಂತಾಗಿದೆ. 


ಈ ಭಾಗದ ಜನರಿಗೆ ಅನಿವಾರ್ಯವಾಗಿರುವ ಹೊಗೆಸೊಪ್ಪು ಈಗ ಲಾಭದಾಯಕವಲ್ಲದ ಬೆಳೆಯಾಗಿದೆ. ಅಕಾಲಿಕ ಮಳೆ, ಅಧಿಕ ಬಂಡವಾಳ ಮತ್ತು ಹೊಗೆಸೊಪ್ಪಿಗೆ ದೊರಕುವ ಕಡಿಮೆ‌ ಬೆಲೆ ಇದಕ್ಕೆ ಮುಖ್ಯ ಕಾರಣ. ಆದರೂ ಇಲ್ಲಿನ ರೈತ ಹೊಗೆಸೊಪ್ಪಿಗೆ ಜೋತುಬೀಳಬೇಕು. ಬ್ಯಾಂಕಿನ ಸಾಲ, ವ್ಯವಸ್ಥೆ, ಅನುಭವ ಹಾಗೂ ಕುಶಲತೆ ಹೊಗೆಸೊಪ್ಪಿನ ಕೃಷಿಯನ್ನೇ ಅವಲಂಭಿಸಲು ಕಾರಣಗಳು. ಬೇರೆ ತರಕಾರಿ ಬೆಳೆಗೆ ಮರಳಲು ಮಾಡಿಕೊಂಡಿರುವ ಸಾಲ, ಆ ಹೊಸ ಬೆಳೆಗಳ ಅನಿಶ್ಚಿತ ಬೆಲೆ, ಮಾರುಕಟ್ಟೆಯ ಅನ್ಯಾಯ ಅಡ್ಡಿಯಾಗಿವೆ. 


ಏನೇನೊ ಜಂಜಾಟದ ಜೊತೆಗೆ ಸಾಕಷ್ಟು ಲಾಭದ ನಿರೀಕ್ಷೆಯಿಂದಲೇ ಬಂಡವಾಳದಲ್ಲಿ ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳುವ ರೈತ ದುಡಿದು ದುಡಿದು ನಾನಾ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಅಪೌಷ್ಟಿಕ ಆಹಾರ, ಒತ್ತಡ, ಹೊಗೆಸೊಪ್ಪಿನ ಹದದಲ್ಲಿ ಮಾನವ ಆರೋಗ್ಯದ ಮೇಲಿನ ಪರಿಣಾಮ, ಸಾಲ ಇದಕ್ಕೆ ಮುಖ್ಯ ಕಾರಣಗಳು. ಇದು ಇಂದು ನೆನ್ನೆಯದಲ್ಲ. ಇಲ್ಲಿನ ನಿಜಸ್ಥಿತಿ ಮತ್ತು ವಾಸ್ತವ ಸತ್ಯ. 


ಬೆಳೆಯನ್ನು ತನ್ನ ಮಿತಿಗಳಲ್ಲಿ ಬೆಳೆದು ಮಾರುಕಟ್ಟೆಗೆ ಬರುವ ರೈತ ಮುಕ್ತವಾಗಿ ಶೋಷಣೆಗೆ ಒಳಗಾಗುತ್ತಿದ್ದಾನೆ. ಹೊಗೆಸೊಪ್ಪನ್ನು ಹದವಾಗಿ ಬೇಲ್ ( ಹೊಗೆಸೊಪ್ಪಿನ ನೂರು ಕೆಜಿಯ ಕಟ್ಟು) ಮಾಡಿಕೊಂಡು ಮಾರುಕಟ್ಟೆಗೆ ಬರುವ ರೈತನಿಗೆ ತಂಬಾಕು ಮಂಡಳಿಗಳು ತಕ್ಕಮಟ್ಟಿಗೆ ಉತ್ತಮ ವ್ಯವಸ್ಥೆಯನ್ನೇನೊ ಕಲ್ಪಿಸಿವೆ. ನಂತರದಲ್ಲಿ ಬೆಡ್ಡಿಂಗ್ ನಡೆಯುತ್ತದೆ. ಎಲ್ಲಾ ಬೇಲುಗಳನ್ನು ಅವುಗಳ ಗುಣಮಟ್ಟದ ಆಧಾರದಲ್ಲಿ ಬೆಲೆ ನಿಗಧಿಯಾಗುತ್ತದೆ. ಉತ್ತಮ ಗುಣಮಟ್ಟದ ಸೊಪ್ಪು ಒಂದು ಕೇಜಿಗೆ 185, ಮಧ್ಯಮದ ಸೊಪ್ಪು ಒಂದು ಕೇಜಿಗೆ 160, ಕೆಳದರ್ಜೆಯ ಸೊಪ್ಪು 100. ಹೀಗೆ ಸೊಪ್ಪಿನ ಗುಣಮಟ್ಟಕ್ಕೆ ತಕ್ಕನಾದ ಬೆಲೆ ಆಗುತ್ತದೆ. ಆದರೆ ಬೆಲೆ ಹೇರಿಕೆಯ ಬಗ್ಗೆ ಯಾರೂ ಮಾತನಾಡುತ್ತಿನಲ್ಲ. ಹೇಳಬೇಕಂದರೆ ಈ ಬೆಲೆ ರೈತನ ಶ್ರಮಕ್ಕೆ ತಕ್ಕನಾದುದಲ್ಲ. ಕೋಟಿಗಳು ಲೆಕ್ಕವಿಲ್ಲದಷ್ಟು ಸಂಪಾದಿಸುವ ತಂಬಾಕು ಕೊಳ್ಳುವ ಕಂಪನಿಗಳು ಬೆಲೆ ಏರಿಸುವಲ್ಲಿ ಬಹಳ ಹಿಂದೆ ಬೀಳುತ್ತದೆ. ಈ ವಿಷಯ ಮುಂದೆ ಚರ್ಚಿಸೋಣ. 


ಈ ಬೆಡ್ಡಿಂಗ್ ಮುಗಿದ ಮೇಲೆ ಆಯಾ ಕಂಪನಿಗಳ ನೌಕರರು ಬೇಲ್‌ಗಳನ್ನು ಪರೀಕ್ಷಿಸುತ್ತಾರೆ. ಈ ಪರೀಕ್ಷಿಸುವ ಸಂದರ್ಭದಲ್ಲಿ‌ ನೇರವಾಗಿ ರೈತನ ಮೇಲೆ ದಾಳಿಯಿಡುವ ಈ ನೌಕರರು ಕಂಪನಿಯ ಕಾರ್ಮಿಕರೆ. ಸಂಬಳಕ್ಕಾಗಿ ದುಡಿಯುತ್ತಿರುವವರೆ. ಆದರೆ ಅವರಿಗೆ ಈ ಸಂಬಳದ ಬಗ್ಗೆ ಯಾವ ಗೌರವವೂ ಇಲ್ಲ. ಆಯಾ ದಿನ ಬೇಲನ್ನ ಪರೀಕ್ಷಿಸುವಾಗ ರೈತನನ್ನು ಕಾಡಿಸಿ ಪೀಡಿಸಿ ಐವತ್ತು ನೂರಿನಿಂದ ಹಿಡಿದು ಐನೂರರ ತನಕ ಪಡೆಯುವುದೇ ಇವರ ನಿಜವಾದ ಕಸುಬುಗಾರಿಕೆ. ಒಬ್ಬ ರೈತ ಐದು ಬೇಲನ್ನು ಕೊಂಡೊಯ್ದರೆ ಐನೂರು ರೂಗಳನ್ನು ಇಂತವರ ಬಾಯಿಗೆ ಹಾಕಲು ಸಿದ್ದಪಡಿಸಿಕೊಳ್ಳುತ್ತಾನೆ. ಯಾವ ಮುಚ್ಚು ಮರೆಯೂ ಇವರಲ್ಲಿಲ್ಲ. ರೈತನ ಕಷ್ಟ ಹೇಳುವವರು ಕೇಳುವವರೂ ಯಾರೂ ಇಲ್ಲ. ಕಡಿಮೆ‌ ಎಂದರೆ ಐವತ್ತು ರೂಗಳನ್ನು ಒಂದು ಬೇಲಿಗೆ ಕೊಡಲೇಬೇಕು. 


ಈ ಭ್ರಷ್ಟಾಚಾರಕ್ಕೆ ಕೊನೆಯಿಲ್ಲವೇ?

ತಂಬಾಕು ಮಂಡಳಿ ಇದರ ಸುಧಾರಣೆಯಲ್ಲಿ ತೊಡಗಬಾರದೇಕೆ?

ತಂಬಾಕು ರೈತರಿಗೆ 'ತಂಬಾಕು ಬೆಳೆಗಾರರ ಸಂಘ'ದ ಅವಶ್ಯಕತೆ ಇದೆಯೆ?

ತಾಲ್ಲೂಕಿನ ಎಂ ಎಲ್ ಎ, ಎಂ ಪಿ ಗಳಿಗೆ ಈ ಅಕ್ರಮ ಗೊತ್ತೇ ಇಲ್ಲವೆ?

ಸಂತೆಯಂತ ಮಾರುಕಟ್ಟೆಯಲ್ಲಿ ಸಾರಾಸಗಟಾಗಿ ಲಂಚ ಕೊಡುವ ರೈತನ ಅಸಹಾಯಕತೆಗೆ ಕಾರಣ ಯಾರು? 


- ಈ ಎಲ್ಲಾ ಪ್ರಶ್ನೆಗಳು ಮಾರುಕಟ್ಟೆಗೆ ಹೊಸದಾಗಿ ಭೇಟಿಕೊಟ್ಟ ನನ್ನಂತಹವನಿಗೆ ಉದ್ಭವಿಸದೇ ಇರಲಾರವು. ಭ್ರಷ್ಟಾಚಾರ ಮುಕ್ತ ವ್ಯವಹಾರಕ್ಕೆ ಖರ್ಚಾಗುವುದೇನು? ಈ ಕೃತ್ಯವನ್ನು ಬಲ್ಲ ತಂಬಾಕು ಮಂಡಳಿ ಮೌನವಾಗಿರುವುದೇಕೆ? 


ತಂಬಾಕು ಬೆಳೆವ ರೈತರು ಸಾಧ್ಯವಾದಷ್ಟು ಶೇರ್ ಮಾಡಿ. ಅಥವಾ ಆಡಳಿತಗಾರರ ಸಂಪರ್ಕದಲ್ಲಿರುವವರು ಹಂಚಿಕೊಳ್ಳಿ. ಇದು ನನ್ನೊಬ್ಬನ ನೋವಲ್ಲ, ಕೂಗಲ್ಲ, ಸಂಕಟವಲ್ಲ. ಸ್ವಾಭಿಮಾನ ಬದುಕಿನ ಕನಸು ಕಾಣುವ ಪ್ರತಿಯೊಬ್ಬ ರೈತನ ಧನಿ. ಭ್ರಷ್ಟಾಚಾರ ಮುಕ್ತ ಸಮಾಜದ ಆಶಯ ಹೊಂದಿರುವ ಎಲ್ಲರ ಅಭಿಪ್ರಾಯ. ಇನ್ನಾದರೂ ತಂಬಾಕು ಬೆಳೆಗಾರರಾದರೂ ಜವಾಬ್ದಾರರಾಗಬೇಕಿದೆ. ಬಡವನ ಕಷ್ಟ ದವಡೆಗೆ ಮೂಲ ಅನ್ನುವ ಕಾಲದಲ್ಲಿ ನಾವಿಲ್ಲ. ಸಂವಿಧಾನ ಎಲ್ಲರಿಗೂ ಸಮಾನ ಬದುಕಿನ ಅವಕಾಶ, ಕಾನೂನು ಕಲ್ಪಿಸಿದೆ‌. ಅಕ್ರಮಗಳು ಎಲ್ಲೆ ನಡೆದರೂ ಯಾರು ಬೇಕಾದರೂ ಪ್ರಶ್ನಿಸಬಹುದು. ಲಂಚ ಪಡೆವುದು ಮಾತ್ರ ಅಪರಾಧವಲ್ಲ, ಕೊಡುವುದೂ ಕೂಡ ಅಪರಾಧ. ಒಗ್ಗಟ್ಟಿನಲ್ಲಿ ಬಲದ ನಂಬಿಕೆ ಇರುವವರು ಶೇರ್ ಮಾಡಿ. ಕೆಲವೇ ಕೆಲವು ಭ್ರಷ್ಟ ಮನಸ್ಸುಗಳನ್ನು ಬದಲಾಯಿಸಲು ರೈತನ ಒಗ್ಗಟ್ಟು ಸಾಕು. 


ಧನ್ಯವಾದಗಳು,


- ಚಂದ್ರು ಎಂ ಹುಣಸೂರು

MAMCJ in Mysore open university, former journalists in Kannada news papers..


No comments:

Post a Comment