ಚಿಕ್ಕ ಬೊಟ್ಟು, ಸ್ಪ್ರಿಂಗ್ ಮುಂಗುರುಳು ಮತ್ತು ನಾನು!!
ಯಾಕೋ ಖಾಲಿ ರೂಮಿನ ಮೂಲೆ ಬೇಂಚಿನಲ್ಲಿ ಏಕಾಂಗಿಯಾಗಿ ಕೂತು ಬಿಕ್ಕಳಿಸಿ ಬಿಕ್ಕಳಿಸಿ ಮೌನಿಯಾಗಿದ್ದವಳ ಮನಸ್ಸು ಒದ್ದೆಯಾಗಿತ್ತು. ಪಕ್ಕ ಕೂತು ವಿಷಯ ಕೇಳಿ ಎದೆಗೊಪ್ಪಿ ಕರಗಬಹುದೆಂಬ ದುರಾಲೋಚಿತ ಪೀಠಿಕೆಯಿಂದ ಇಡೀ ಜೀವನದ ಕಾದಂಬರಿಯೇ ಶೀರ್ಷಿಕೆ ವಿರುದ್ಧವಾಗಿ ಸಾಗುವಂತಾದ ಪರಿಯಲ್ಲಿ ಇದೊಂದು ನೆನಪ ಬೇಗುದಿ. ಬಿಳಿ ಕರ್ಚೀಫ್ ಹಿಡಿದ ಮಣ್ಣಿನ ಮಗಳು ನೊಂದ ಮುಖದಲ್ಲು ಚುಂಬನಕ್ಕರ್ಹಳು. ಹಸಿರು ಬಳೆಯವಳಾಗಿ ಕಂಬನಿಗರೆವಾಗ ಸಮಾಧಾನ ಪಡಿಸುವ ನೆವದಿಂದ ಹತ್ತಿರವಾದವನು ಅವನತಿಯಾದದ್ದು ಅಂದೇ.
ಕೊನೆಯ ಬೇಂಚಿನ ಚರ್ಚಾಕೂಟದಿಂದ ಪದೇ ಪದೇ ನಿನ್ನೆಡೆ ನೋಡುವಾಗ ನೀನು ಸ್ವಲ್ಪ ಧಿಮಾಕಿನಿಂದಲೇ ವರ್ತಿಸಿದ್ದು ಕೂಸುಮರಿಗೆಂದೇ ಹೆಗಲೇರಿದ ಮಗು ನಿದ್ರೆಗೆ ಜಾರಿದ ಹಾಗೆ. ನಿನ್ನ ಹಠದ ಗುಡಿಸಲಿಗೆ ನನ್ನ ಹರೆಯ ಕಿಡಿಯು ಬೆಂಕಿ ಹೊತ್ತಿಸಲಿ. ಹಿಡಿದು ನಿನ್ನ ಅಪ್ಪುವ ಕೋಪ ಬೆಪ್ಪಾಗಿ, ಬೆವರಾಗಿ, ಬದುಕಾಗಿ ಬೆನ್ನು ಬೀಳುತ್ತದೆಂದು ನಾನು ಭಾವಿಸಿಯೂ ಇರಲಿಲ್ಲ, ನೀನು ಊಹಿಸಿಯೂ ಇರಲಿಲ್ಲ.ಒಮ್ಮೊಮ್ಮೆ ಅಲೆಮಾರಿಯ ಅಂತರಂಗದಲ್ಲಿ ಬಣ್ಣ ಲೇಪಿತವಾದ ಕನಸುಗಳು ಹೊಸ ಜಗತ್ತನ್ನೇ ಕಪ್ಪು ಬಿಳುಪಿನ ಛಾಯೆಯಲ್ಲಿ ಮೂಡಿಸಿ ನೆಲೆನಿಲ್ಲಲು ಪ್ರೇರೇಪಿಸುವಂತೆ ನಿನ್ನ ಸಹವಾಸದಿಂದ ನಾನು ಅನುರಾಗ ರಂಗಮಂದಿರದಲ್ಲಿ ಜೋಡಿಯಾಗಿ ನಟಿಸಿ ನಾಟ್ಯವಾಡಿ ವೇಷ ಕಳಚಿ ರಂಗದಿಂದ ದೂರಬಂದು ಈಗೀಗ ಹೊಳೆವ ಮರುಳ ಸನ್ನಿವೇಷಕ್ಕೆ ಮತ್ತೆ ನಿನ್ನನ್ನು ಎಳೆಯುತ್ತಿರುವೆ, ಬಾ ಗೆಳತಿ ಮತ್ತೆ ಬಾ. ನಿನ್ನ ಕರಗಳಿಂದೆನ್ನ ಮೊಗವ ಪಿಡಿದು ಹನಿಗಣ್ಣ ಅಮೃತದಿಂದ್ ಪಾವನ ಗೈ, ಎನ್ನ ಪಾವನ ಗೈ,,,,
ಮುಂಗುರುಳು ಸ್ವಲ್ಪ ಜಾಸ್ತಿಯಾಗಿ ಕಪ್ಪುಕಣ್ಣು ಕೊಂಚ ಮರೆಯಾಗಿದ್ದವು. ಮಳ್ಳನ ಹಾಗೆ ಕದ್ದು ಕದ್ದು ನೋಡಿ ಅತೃಪ್ತನಾದ ವಿರಹಿಯ ಬಾಳು ಹೇಳತೀರದು. ಸಮವಸ್ತ್ರ ವಿಶ್ರಾಂತ ಸ್ಥಿತಿಯಲ್ಲಿದ್ದರಿಂದ ಅಂದು ನೀ ಉಟ್ಟು ಬಂದಿದ್ದ ಬೆಳ್ಳನೆ ಬೆಳ್ಳಿಯ ಬಾರ್ಡರ್ ಸೇರ್ಪಡೆಯ ಸೀರೆ ಇಂದಿಗೂ ಕಣ್ಣು ಕುಕ್ಕುತ್ತಿದೆ. ಬಿಳಿ ದಾಸವಾಳದ ನೆನಪು ತರುವ ಆ ಉಡುಗೆಗೆ ಕೊಡುಗೆಯಾಗಿ ನೋಟವನ್ನು ಬಿಟ್ಟರೆ ಮತ್ತೇನನ್ನು ನಾ ಕೊಡಲಾಗಲಿಲ್ಲ. ಅದು ಕಾಲೇಜಿನ ಸಾಂಸ್ಕøತಿಕ ಕಾರ್ಯಕ್ರಮದ ಸಂಭ್ರಮ. ಎಲ್ಲ ಸ್ನೇಹ ಬಳಗದ ಗೊಂದಲದಿಂದ ನೀ ಮರೆಯಾಗಿದ್ದೆ. ಎಲ್ಲಿ ಹೋದಳಪ್ಪ ಎಂದು ತವಕಿಸುವಾಗ ಪ್ರಾಂಶುಪಾಲರನ್ನು ಕರೆತರುವ ಸಲುವಾಗಿ ಆಫೀಸ್ ರೂಂನಿಂದ ಒಬ್ಬಳೆ ನೀಲವೇಣಿಯಾಗಿ ಎಡಗೈಯಿಂದ ಸೀರೆಯ ನೆರಗನ್ನು ಹಿಡಿದು ತಲೆ ಬಗ್ಗಿಸಿ ನೀ ಬರುತ್ತಿದ್ದೆ. ತಲೆ ಎತ್ತಿದ್ದ ತಪ್ಪಿಗೆ ಹೃದಯ ಇನ್ನು ಹತ್ತು-ಇಪ್ಪತ್ತು ಬಾರಿ ಹೆಚ್ಚು ಬಡಿದುಕೊಳ್ಳಲು ತಲೆ ತಗ್ಗಿಸಿದರು ಎಣಿಕೆಗೆ ಅದು ಹಿಂಬರಲಿಲ್ಲ. ಹೋಗಲಿ ಬಿಡು, ನಿನದೇನು ತಪ್ಪಿದೆ? ಸೌಂದರ್ಯ ನಿನದು, ಆಸ್ವಾದನೆ ನನದು. ನಿನ್ನ ಸೌಂದರ್ಯಕ್ಕು ನನ್ನ ಆಸ್ವಾದನೆಗೂ ಮಾತ್ರ ಸಂಬಂದ. ಅಲ್ಲಿ ನನ್ನ ನಿನ್ನ ಸುಳಿವೇ ಇಲ್ಲ. ಹೇಳಬೇಕು ಎಂದುಕೊಂಡಾಗಲೆಲ್ಲ ಹಾಳು ಭಯ ಚಲನೆಯನ್ನು ಕಟ್ಟಿಹಾಕುತ್ತಿತ್ತು.
ಹೇಗಾದರೂ ಮಾಡಿ ನಿನ್ನನ್ನು ಸ್ನೇಹದಿಂದ ಗಳಿಸಿ, ಪ್ರೀತಿಯಿಂದ ಉಳಿಸಿ, ಮೋಹದಿಂದ ಬಳಸಬೇಕೆನ್ನುವ ಚತುರತೆಗೆ, ಕಿಲಾಡಿ ತನಕ್ಕೆ, ನೀ ಬೇಗನೆ ಸಹಿ ಹಾಕಲಿಲ್ಲ. ಮುಜಗರಕೆ ಸುಗ್ಗಿಯಾಗಿ ನಿನ್ನ ಮಡಿಲ ಮೇಲೆ ಮಲಗಿ ಮಾರುಹೋಗಬೇಕೆಂಬ ಹೊಂಗನಸಿಗೆ ಚಾಲನೆ ಸಿಗಲೇ ಇಲ್ಲ. ಸಡಗರಕೆ ಹುಗ್ಗಿಯಾಗಿದ್ದು ಕತ್ತಲೊಲ್ಲದ ಕನಸು ಕತ್ತಲಲ್ಲಿ ಬಂದು ಇಷ್ಟಾರ್ಥ ಲೋಕದಲ್ಲಿ ಬೆತ್ತಲಾದ ಆ ಚಿತ್ತದಲ್ಲಿ ಯಾರಿಗೆ ತಾನೆ ತಡೆಯಾಜ್ಞೆ? ಯಾರಿಗೆ ತಾನೆ ಹಿತಿಮಿತಿಯ ಕಾನೂನು? ನೀನು ನೀನಂದುಕೊಂಡಂತೆ ಅಲ್ಲಿರಲಿಲ್ಲ! ನಾನು ನಾನಂದುಕೊಂಡತೆ ವಾಸ್ತವದಲ್ಲಿಲ್ಲ!
ಯಾವ ಕಡೆಯಿಂದಲೂ ನನ್ನಂತಿಲ್ಲದ ನಿನ್ನನ್ನು ನಾ ನನ್ನದೇ ಬೀದಿಯೊಳಗೆ ಹೊತ್ತು ಮೆರೆದಿದ್ದೆ. ಗುಲಾಬಿ ಗೆಜ್ಜೆಗೆ ಮೊದಲ ಮುತ್ತು ಬೀಳುವಾಗ ಗಲ್ ಎಂದ ಆ ಮಾಯಾವಿ ಮತ್ತೆ ಸಿಗಲಿ. ನೀನುಟ್ಟ ಸೀರೆಗೂ ಸೆರಗಿದೆ ಎಂದು ತಿಳುವಳಿಕೆ ತಂದ ಆ ಬೆರಗುಗಣ್ಣು ಮತ್ತೆ ಸಿಗಲಿ. ಭಾಯಾರಿಕೆಗಿದ್ದ ತುಸು ನೆಮ್ಮದಿಯನ್ನು ಕೊಂದ ಮರೀಚಿಕೆಯೂ ಮತ್ತೆ ಸಿಗಲಿ. ಮಳೆಗಾಲಕ್ಕೆಂದೇ ಅಣಿಯಾಗುತ್ತಿದ್ದ ಪುಟ್ಟ ಬಳ್ಳಿಯ ಹುಚ್ಚು ನಂಬಿಕೆ ಮತ್ತೆ ಸಿಗಲಿ. ಅಂತರದಿಂದ ಆವರಿಸಿ ಸ್ಪರ್ಷಾನುಭವ ಉಂಡ ಆ ಪೋಲಿತನ ಮತ್ತೆ ಸಿಗಲಿ. ಅಳತೆ ಮಾಡಿದ ಹಳ್ಳದಲ್ಲಿ ಆಯತಪ್ಪಿ ಬಿದ್ದ ಕ್ಷಣ ಕ್ಷಣವೂ ಮತ್ತೆ ಸಿಗಲಿ. ಇರುಳು ಮಾಯೆಗೆ ಮೈಯೊಡ್ಡಿ ಮಾಯವಾದ ಚಂದಿರನ ಹೊಂಬೆಳಕೂ ಮತ್ತೆ ಸಿಗಲಿ. ಸನಿಹಕೆ ಸಾಕ್ಷಿಯಾಗಿ ಬಿಸಿಯುಸಿರ ಬಸಿಬಸಿದು ತಂದ ಸಂಜೆಗಾಳಿ ಮತ್ತೆ ಸಿಗಲಿ. ಕಿರುಬೆರಳ ತುದಿಯುಗುರು ಕೊರಳತಾಗಿ ಕರೆಯುವಾಗ ದೂರ ಸರಿದು ಕಂಪಿಸಿದಾಕೆ ನೀನು, ನೀನು. ನೀನೇ ಸಿಗಲಿ. ಮತ್ತೆ ಮತ್ತೆ ನೀ ಸಿಗಲಿ,,,,,
ನೆನಪುಗಳು ವಾಸಿ. ನೀನಾದರೂ ಫಕ್ಕನೆ ತಿರುಗಲು ಹಿಂದೇಟು ಹಾಕುವಾಗಲೂ ಅವು ದಡಾರನೆ ಎದೆಗಪ್ಪಳಿಸುತ್ತವೆ. ಒಲವಿನಲ್ಲಿ ಮುಳುಗಿ ಏಳುವುದು ಪ್ರತೀ ಯೌವನಿಗರ ಚಟ. ಆದರೆ ನಾನು ಮುಳುಗಿ ಏಳಲೇ ಇಲ್ಲವೇನೊ ಅನಿಸುತ್ತದೆ. ಏಕೆಂದರೆ ಯಾವಾಗಲೂ ಮುಂಜಾನೆ, ಮುಸ್ಸಂಜೆ, ನಡುರಾತ್ರಿ ನಡುಹಗಲೆನ್ನದೆ ಕಾಡುವವಳ ಆವರಿಸಿ ಆವರಿಸಿ ಅನುರಾಗಿಯಾಗಿಬಿಟ್ಟೆ. ತೋಟದ ಮೂಲೆಯ ಮಲ್ಲಿಗೆ ಬಳ್ಳಿಯಲ್ಲಿ ಮೊಗ್ಗುಗಳು ಜೇನಂತಾದಾಗ ಮೆಲ್ಲನೆ ಬಿಡಿಸಿ ನಿನ್ನ ಮಡಿಲಿಗೆ ಸುರಿಯಬೇಕೆನಿಸುತ್ತದೆ. ಜಯಂತ್ ಕಾಯ್ಕಿಣಿ ಪದ್ಯ ಓದುವಾಗ ಅವರೆಲ್ಲಿ ನಿನ್ನನ್ನೇ ಕಂಡು ಬರೆದದ್ದ ಎಂದು ಅನುಮಾನ ಮೂಡುತ್ತದೆ. ಜೋರಾಗಿ ಮಳೆಸುರಿದು ಗದ್ದೆಯಾಳುಗಳೆಲ್ಲ ಒದ್ದೆಯಾಗಿ ಕಾಲುದಾರಿಯಲ್ಲಿ ಓಡುವಾಗ ಜೊತೆಗೂಡಿ ಹಾಡಬೇಕೆನಿಸುತ್ತದೆ. ಮಳೆಹೋದ ತರುವಾಯ ಬಾಳೆಗಿಡದ ಎಳೆಗೊನೆಯ ತುದಿಯಲ್ಲಿ ತೊಟ್ಟಿಕ್ಕುತ್ತಿದ್ದ ಹನಿಗಳ ಹೆಕ್ಕಿ ಹೆಕ್ಕಿ ನಿನಗರ್ಪಿಸಬೇಕೆನಿಸುತ್ತದೆ. ಗಣಪತಿ ದೇವಸ್ಥಾನದ ದಪ್ಪ ಹೊಟ್ಟೆ ಅರ್ಚಕರ ಕೊನೆ ಮಗಳು ನಸುನಕ್ಕರು ಅದು ನಿನ್ನಧನಿಯೇ ಎಂದು ಕೊರಳು ಚಡಪಡಿಸುತ್ತದೆ. ಹೀಗೆಲ್ಲ ಹಾಗುವಾಗ ಅದು ಒಲವಲ್ಲದೆ ಮತ್ತೇನನ್ನಲಿ?
ಮತ್ತೆ ಮತ್ತೆ ತಿದ್ದು ಬರೆದ ಪತ್ರಕ್ಕೆ ಪ್ರೇಮ ಪತ್ರವೆಂದು ಹೆಸರು. ಅಂತೂ ಇಂತೂ ಪೋಸ್ಟ್ ಆಫೀಸ್ ಬಳಿ ಗುಮಾಸ್ತನ ಕೃಪೆಯಿಂದ ದೂರದ ಮರದಡಿಯಲ್ಲಿ ಪೋಸ್ಟ್ ಕಾರ್ಯಕ್ಕಾಗಿ ಬರುವವರಿಗೆಂದೇ ಇಟ್ಟಿದ್ದ ಗಂಜಿರೂಪದ ಮೇಣವನ್ನು ಲಕೋಟೆಯ ತುದಿಯಲ್ಲಿ ತೀಡಿ ಅಂಚೆ ಚೀಟಿಯನ್ನೇ ಅಂಟಿಸದೆ ಪತ್ರವನ್ನು ಒಳಗೆ ತಳ್ಳಿ ತೆರೆಯನ್ನು ಹೆಬ್ಬೆರಳಿಂದ ಮಸೆದು ಪೋಸ್ಟ್ ಬಾಕ್ಸ್‍ನಲ್ಲಿಟ್ಟವನು ತುಸುದೂರ ಬರುತ್ತಲೇ ಅಯ್ಯಯ್ಯೋ ಆ ಪತ್ರಕ್ಕೊಂದು ಮುತ್ತು ತಾಕಿಸಲಿಲ್ಲವಲ್ಲ ಎಂದು ಮತ್ತೆ ಮರಳಿ ಬಂದು ಪೋಸ್ಟ್ ಬಾಕ್ಸ್ ಅನ್ನು ಸಾಲದ ರಂಧ್ರ ಕಿಂಡಿಯೊಳಗೆ ಕೈತೂರಿಸಲು ಯತ್ನಿಸುವಾಗ ಯಾರೋ ತಳ್ಳಿದಂತಾಗಿದ್ದೇ ತಡ, ಅಬ್ಬಾ ಎಂದು ಪಾತಾಳಕ್ಕೆ ಬಿದ್ದಂತಾಗಿ ಬೆಚ್ಚಿ ಏದುಸಿರು ಬಿಡುತ್ತಾ ಹೊಸ ಲೋಕಕ್ಕೆ ಬಂದಾಗ ಬರೀ ಕತ್ತಲು. ನನ್ನದೇ ಹೊದಿಕೆ ನನ್ನನ್ನೇ ತ್ಯಜಿಸಿದೆ, ನನ್ನ ತಲೆದಿಂಬಿನ ವಿಳಾಸದಲ್ಲಿ ಬರೀ ಮೈದಾನ, ಅಲ್ಲಲ್ಲಿ ಗೊರ್ ಗೊರ್ ಎನ್ನುವ ಮೂರ್ನಾಲ್ಕು ಪ್ರಾಣಿಗಳ ಆರ್ಥನಾದ, ನಾನೆಲ್ಲಿರುವೆನಪ್ಪ ಎಂದು ಕೈಚಲಿಸುವಾಗ ಪಕ್ಕಕ್ಕೆ ಸಿಕ್ಕ ಮಂಚದ ಕಾಲು ಕಿಲಕಿಲನೆ ನಕ್ಕಂತಾಗಿ ಒಮ್ಮೆಲೆ ಮನೆಗೆ ಮುಂಜಾನೆಯೇ ಬಂದಿದ್ದ ನೆಂಟರಿಸ್ಟರು, ಮಕ್ಕಳು, ನೆನಪಾಗಿ ಈ ಬಿಕ್ಕಟ್ಟಿನ ಪರಿಸ್ಥತಿಯಲ್ಲೂ ಕಾರುಬಾರು ಬೇಕ ನಿಂಗೆ ಎಂದು ನಿನ್ನನ್ನೇ ಕೇಳಿದ್ದೆ!! ನೀ ಅದೆಲ್ಲೋ ಬೀದಿ ಬೆಳಕಿನೊಂದಿಗೆ ಹೊರಗೆ ನಿಂತಂತೆ ಬಾಸವಾಗಿ ಕಲ್ಪಿತಲೋಕದ ಮಾಯಾವಿ ಮರುಳು.
-ಚಂದ್ರು ಎಂ ಹುಣಸೂರು
ಸಿರಿ ಮಾಸ ಪತ್ರಿಕೆ ಸಹ ಸಂಪಾದಕ



No comments:
Post a Comment