ನೆನಪಲ್ಲಿ ಜೇನಾಗುವ ಕಬ್ಬಿಣದ ಕಡಲೆ,,
ಕೇಶಿರಾಜನ “ಶಬ್ಧಮಣಿ ದರ್ಪಣಂ” ಕುರಿತಾಗಿ ನನ್ನ ಗುರುಗಳಾದ ಡಾ|| ಚಂದ್ರಕಾಂತ್ ಸರ್ ರವರು ನಿರರ್ಗಳವಾಗಿ ಕೊಡುವ ವಿವರಣೆ ನನ್ನನ್ನು ಮಂತ್ರ ಮುಗ್ಧನನ್ನಾಗಿಸುತ್ತಿತ್ತು. ಪದೇ ಪದೇ ನೆನಪಾಗುವಂತೆ ನನಗೆ ಅದು ಕಬ್ಬಿಣದ ಕಡಲೆಯೇ ಆಗಿ, ಹೋಗುತ್ತಾ ಹೋಗುತ್ತಾ ತುಸುಮಟ್ಟಿಗೆ ಅರ್ಥವಾಗಿ ಹೇಗೋ ಏನೋ ಪರೀಕ್ಷೆಯಲ್ಲಿ ಪಾಸುಮಾಡಿದ್ದೇ ಇಂದಿಗೂ ಕುತೂಹಲ. ಹಳಗನ್ನಡ ಅರ್ಥಮಾಡಿಕೊಳ್ಳುವ ಪಾಂಡಿತ್ಯ ನನಗಂತೂ ಖಂಡಿತವಾಗಿಯೂ ಒಲಿದಿಲ್ಲ. ನಡುಗನ್ನಡ, ನವಗನ್ನಡ ನನ್ನ ಆಸ್ತಿ. ಸಾಧ್ಯವಾದಷ್ಟು ಇಣುಕಿನೋಡಿ ಬಾಲ್ಯದಲ್ಲಿ ಕಲಿತಿದ್ದ ಅ ಆ ಇ ಈ ಮತ್ತು ಕ ಕಾ ಕಿ ಕೀ ಸಹಾಯದಿಂದ ಓದಿಕೊಂಡು ಅದರಿಂದ ರಚಿತವಾಗಿರುವ ಇತ್ತೀಚೆಗಿನ ಸಾಹಿತ್ಯವಾದರೆ ತಲ್ಲಿನನಾಗಿ ಗಧ್ಯವಾಗಲಿ, ಪಧ್ಯವಾಗಲಿ ನಮ್ಮದಾಗಿಸಿಕೊಳ್ಳಬಹುದಾಗಿತ್ತು. ಆದರೆ ಭಾಷೆಯನ್ನು, ಅದಕ್ಕಿರುವ ನಿಯಮವನ್ನು ನೇರವಾಗಿ, ನಿಯಮ ಬದ್ಧವಾಗಿ, ಹಳಗನ್ನಡದಲ್ಲಿ ಹೇಳಿರುವ ಕೇಶಿರಾಜನಿಗೆ ನಿಜವಾಗಿಯೂ ಗೊತ್ತಿರಲಿಲ್ಲವೇನೋ, ಮುಂದೊಂದು ದಿನ ನನ್ನ ಶಬ್ದಮಣೀದರ್ಪಣಂ ಕೃತಿ ಸೋಮಾರಿಗಳಿಗೆ, ಅಲ್ಪ ವಿಷಯಾಗ್ರಹಿಗಳಿಗೆ, ಹಳ್ಳಿಗಾಡಿನ ಮಿಳಮಿಳ ಕಣ್ಣುಗಳಿಗೆ, ಹೊಸದಾಗಿ ಬೆಸೆದುಕೊಂಡ ಇಂಗ್ಲೀಷ್ ಸಂಬಂಧಿಕರಿಗೆ ಕಷ್ಟವಾಗಿ ಪರೀಕ್ಷೆಯಿರಲಿ ತರಗತಿಯಲ್ಲೂ ತಲೆಯೊಳಗಡೆ ಅಲ್ಲೋಲ ಕಲ್ಲೋಲ ಶುರುವಾಗಿ ಪರೀಕ್ಷೆಯಲ್ಲಿ ಸ್ಥಗಿತಗೊಂಡ ಶೌಚಾಲಯದ ಕೊಳವೆಯಂತೆ ಚಲನೆಯಿಲ್ಲದೆ 3 ಗಂಟೆಯಿಂದ ತಮ್ಮ ತಮ್ಮ ಹಿಂಬದಿಯನ್ನು ಬೇಂಚಿನಿಂದ ವಿಮುಕ್ತಿಗೊಳಿಸಲು ಹವಣಿಸಿ ತರುವಾಯ ಫಲಿತಾಂಶದಂದು ನೋಡಿಕೊಳ್ಳವ ಎಂದು ನೆಮ್ಮದಿಯಾಗಿ ಬದುಕಿ ಅಂದೊಂದು ದಿನ ಖಚಿತವಾಗಿ ಅನುತ್ತೀರ್ಣರೇ ಆಗಿ ನನ್ನನ್ನು ಚನ್ನಾಗಿ ನೆನಪಿಸಿಕೊಳ್ಳುತ್ತಾರೆ ಎಂದು!ನಾನು ಬಿ ಎ ವಿದ್ಯಾರ್ಥಿ ಜೀವನದಲ್ಲಿ ಪದೇ ಪದೇ ಅಂದುಕೊಳ್ಳುತ್ತಿದ್ದೆ. ಯಾರಿಗೆ ಬೇಕು ಈ ಹಳಗನ್ನಡ, ನಮ್ಮ ನವ್ಯ ಕನ್ನಡದಲ್ಲಿಯೇ ಭಾಷೆ ಕಲಿಸಬಹುದಲ್ಲ, ಭಾಷೆ ಕುರಿತಾದ ಬರಹಗಳಿಗಾಗಲಿ, ಸಾಮಾಜಿಕ ಕಾದಂಬರಿಗಳಿಗಾಗಲಿ, ಜೀವನ ಚರಿತ್ರೆಗಳಿಗಾಗಲಿ, ಅನುವಾದಗಳಿಗಾಗಲಿ, ಪಧ್ಯಗಳಿಗಾಗಲಿ ನವಗನ್ನಡ ಕೊರತೆಯೇ? ಕ್ಲಿಸ್ಟಕರವಾದ ಈ ಅನ್ಯಭಾಷೆಯಂತೇ ಕಾಣುವ ಹಳಗನ್ನಡ ನಮಗೇಗೆ ಅರ್ಥವಾಗಬೇಕು? ಯಾವುದೋ ಕುಗ್ರಾಮ ಶಾಲೆಯಲ್ಲಿ ಊಟ ಮಾಡಿಕೊಂಡು ಬೆಳೆದು ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯನ್ನು (ನಾನು ಕಣ್ಣಾರೆ ಕಂಡಂತೆ) ಕಾಪಿ ಹೊಡೆದುಕೊಂಡು ಪಾಸಾಗಿ ಬಂದವರ ಗತಿಯೇನು? ಗಾಳದಲ್ಲಿ ತಪ್ಪಿಸಿಕೊಂಡ ಮೀನು ಬಲೆಯಲ್ಲಿ ಬಂಧಿಯಾದಂತೆ!
ಆದರೆ ತರುವಾಯ ಒಮ್ಮೆ ನಮ್ಮ ನಾಡಿನ ಐತಿಹಾಸಿಕ ಕ್ಷೇತ್ರಗಳಿಗೆ ಭೇಟಿನೀಡುವ ಸುಯೋಗ ಬಂದಾಗ ಕ್ಷೇತ್ರ ವೀಕ್ಷಣೆಗೆ ಮನಃ ಹಂಪರೆಯುತ್ತಿತ್ತು. ಏನೋ ಉಲ್ಲಾಸ, ನಿಂತ ಕೆರೆಯ ನೀರು ಬಿಸಿಲಿನ ಹೊಡೆತಕ್ಕೆ ಸುಖಾಸುಮ್ಮನೆ ಆವಿಯಾಗಿ ಜೀವನ ವ್ಯರ್ಥಮಾಡಿಕೊಳ್ಳುವುದರ ಒಳಗೆ ಕಾವೇರಿಯೊಂದಿಗೆ ವಿಲೀನವಾದರೆ ಅದಕ್ಕಾಗುವ ಆನಂದವೆಷ್ಟು? ಪಡೆಯುವ ಅನುಭವವೆಷ್ಟು! ಆ ಹಸುರು, ಈ ಬಂಡೆ, ಪುಣ್ಯಕ್ಷೇತ್ರ, ರೈತ ಗದ್ದೆ, ಪಕ್ಷಿ ಗುಟುಕು, ಮಳೆಯ ಮಾತು, ಅಲೆಯ ಮುತ್ತು, ನದಿಯ ಬೆಸುಗೆ, ಕಡಲ ಮಡಿಲು!! ಹೀಗೆ ನಮ್ಮ ನಾಡಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದೆಂದರೆ ನನಗೂ ಪುಣ್ಯವಿದೆ ಎಂಬ ಬಾಸವಾಗುತ್ತಿತ್ತು. ಅಂತೆಯೇ ಹಂಪಿ, ಶ್ರವಣ ಬೆಳಗೋಳ, ಬೇಲೂರು ಹಳೇಬೀಡು, ಬಾದಾಮಿ, ಹೈಹೊಳೆ, ಪಟ್ಟದಕಲ್ಲು, ಶ್ರೀರಂಗಪಟ್ಟಣ, ಮುಂತಾದ ಕಡೆ ತಿರುಗುವಾಗ ಬಾಲ್ಯ ಬರಿ ವೀಕ್ಷಣೆಗೆ ಮಾತ್ರ ಅವಶ್ಯವಾಗಿತ್ತು. ಅದೇ ಕಾಲಕ್ರಮೇಣ ಮತ್ತೊಮ್ಮೆ ಈಗೀಗ ಹೋಗುವಾಗ ಸ್ಥಳವನ್ನು ನೋಡುವುದು, ಮೂರ್ತಿಗಳನ್ನು ಅವಲೋಕಿಸುವುದು, ಇತಿಹಾಸವನ್ನು ಕೇಳಬಯಸುವುದುವುದರ ಜೊತೆಗೆ ಅಲ್ಲಿನ ಲಿಪಿಗಳು ಕುತೂಹಲವನ್ನು ಹೆಚ್ಚಿಸ ತೊಡಗಿದವು. ಏನೆಂದು ಬರೆದಿದ್ದಾರೆ ಎಂದು ಅವರಿವರನ್ನು ಕೇಳಿದರೆ ಉತ್ತರ ಸಿಗುತ್ತಿರಲಿಲ್ಲ. ಅದನ್ನು ಅಧ್ಯಯನ ಮಾಡಿದವರು ಪುಸ್ತಕಗಳಲ್ಲಿ ಇತಿಹಾಸವನ್ನು ಬರೆಯುತ್ತಾರೆಂಬುದು ಗೊತ್ತಿತ್ತು, ಆದರೆ ಲಿಪಿಗಳಿಂದ ನಿಖರತೆ ದೊರೆಯುತ್ತದೆಂಬುದು ನಿಖರವಾಗುತ್ತಿದ್ದಂತೆಯೇ ಮೂಲ ಭಾಷೆಯ ಅವಶ್ಯಕತೆ, ಅನಿವಾರ್ಯತೆ ಬೆಳಕಾಯಿತು. ನಮ್ಮನ್ನು ಒಬ್ಬ ಮಹಾನ್ ಸಂಶೋಧಕನಾಗಿ, ಪಂಡಿತನನ್ನಾಗಿ ನೋಡುವ ದಿಶೆಯಿಂದಲೇ ಪುಸ್ತಕ ಅಕಾಡೆಮಿ ಅಂತಹ ಪಾಠಗಳನ್ನು ನಮ್ಮ ಮುಂದಿಡುತ್ತಾರೆ. ಅಲ್ಲದೆ ಇತಿಹಾಸವಿಲ್ಲದೆ ಭವಿಷ್ಯತ್ ಹೇಗೆ ತಾನೆ ಹಸನಾಗುವುದು?
ಭಾಷೆಯ ಕುರಿತಂತೆ ಮಾತನಾಡುವಾಗ ಅಂದಿನ ತರಗತಿಯಲ್ಲಿ ಕೇಳಿದ್ದ ಕೆಲವು ಮುಖ್ಯ ವಿಷಯಗಳು ನೆನಪಾಗುತ್ತವೆ. ಅಲಂಕಾರ, ರಗಳೆ, ಷಟ್ಪಧಿ, ತ್ರಿಪಧಿ, ಮಾತ್ರಾಗಣ, ಯಮತರಾಜಬಾನಸಲಗಂ, ಮತ್ತೇಬ ವಿಕ್ರೀಡಿತ, ವಿಭಕ್ತಿ ಪ್ರತ್ಯೇಯ, ಸಂಧಿಗಳು, ಸಮಾಸ, ಛಂದಸ್ಸು. ಆಹಾ ಮನಸ್ಸು ಭೂತಕಾಲದ ಅಮೃತಘಳಿಗೆಗಳನ್ನು ನೆನೆದು ಹಾಗೆ ನಗುತ್ತದೆ. ಒಂದೊಂದು ತರಗತಿಗಳು ಕೂಡ ಎಷ್ಟು ಮೌಲ್ಯವೆಂದು ತರಗತಿಯಲ್ಲಿ ಅಂದರೆ ವಿದ್ಯಾಭ್ಯಾಸ ಮಾಡುವಾಗಲೇ ಅರ್ಥಮಾಡಿಕೊಂಡರೆ ಸೂಕ್ತ. ಸಾಹಿತ್ಯಾಭ್ಯಾಸ ಎನ್ನುವುದು ನಿಜಕ್ಕೂ ಸುಖಕರವಾದ ವಿಷಯ. ಬಿ ಎ ತರಗತಿಯಲ್ಲಿ ನಮಗಂತೂ ಆ ಮೂರು ವರ್ಷ ಎಂತೆಂತಹ ಗಧ್ಯಗಳು, ಪಧ್ಯಗಳು!!



No comments:
Post a Comment