ಸಾಮಾಜಿಕ ಜಾಲತಾಣ+ಸೋಮಾರಿತನ=
ಸಮಯ ನುಂಗುವ ಭಕಾಸುರರು,,,
ಬ್ಯುಸಿನೆಸ್ ಮಾಡುವವರು, ಹಣವುಳ್ಳವರು ಮಾತ್ರ ಮೊದಮೊದಲು ಫೇಸ್‍ಬುಕ್ ಪ್ರಾರಂಭಿಸಿದರು. ನಂತರ ಸಾಮಾನ್ಯವಾಗಿ ವಯಸ್ಸಿಗರ ಸ್ವತ್ತಾಗಿ ವಿಸ್ತರಿಸಿತು. ನಂತರ ಕಾಲೇಜ್ ಯುವಕ ಯುವತಿಯರ ಪಠ್ಯವೇ ಎಂಬಂತೆ ಬದಲಾಯಿತು. ಅದೂ ಸಾಲದೆಂಬಂತೆ ಪ್ರೌಢ ಶಾಲೆಯ ಮಕ್ಕಳು ಆವರಿಸಿದರು. ಇನ್ನೀಗ ಪ್ರಾಥಮಿಕ ಶಾಲಾ ಮಕ್ಕಳು ಬಳಸಿದರು ಆಶ್ಚರ್ಯವಿಲ್ಲ. ವ್ಯಕ್ತಿಗೆ ನೌಕರಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವೆಂಬಂತೆ ಫೇಸ್‍ಬುಕ್ ಚಾಲ್ತಿಯಲ್ಲಿದೆ, ಅವಶ್ಯಕವಾಗಿದೆ, ತನ್ನತ್ತ ಜನಸಾಮಾನ್ಯರನ್ನು ವೇಗವಾಗಿ ಸೆಳೆಯುತ್ತಿದೆ. ವಾಟ್ಸ್‍ಅಪ್ ಕೂಡ ಮಾಹಿತಿ ರವಾನೆಗೆ ಹೆಚ್ಚು ಆಪ್ತವಾಗಿದೆ. ಮನರಂಜನೆಗೆ ಟಿ ವಿ, ಸಿನಿಮಾಗಳು, ಸುತ್ತಾಟ, ನಿಧಾನವಾಗಿ ಹಿಂಬೀಳುತ್ತಿದ್ದು ಅವುಗಳ ಆವರಣವನ್ನು ಫೇಸ್‍ಬುಕ್ ವಾಟ್ಸ್‍ಅಪ್‍ಗಳು ತುಂಬಿಕೊಳ್ಳುತ್ತಿವೆ.
ಅವುಗಳನ್ನು ಕೂಲಂಕುಶವಾಗಿ ಅಧ್ಯಯನ ಮಾಡಿದಾಗ ಬಳಕೆ ಮಾಡುವ ರೀತಿಗಳಲ್ಲಿ ಸಂಭವಿಸುತ್ತಿರುವ ಘಟನೆಗಳು ಅವಾಂತರಗಳಾಗಿ ದಿನೆ ದಿನೇ ಹೆಚ್ಚಾಗುತ್ತಿವೆ. ಆ್ಯಂಡ್ರಾಯ್ಡ್ ಮೊಬೈಲ್‍ಗಳು ತರಾವರಿ ರೀತಿಯಲ್ಲಿ ಮಾರುಕಟ್ಟೆಗಳಲ್ಲಿ ಲಭ್ಯವಿದ್ದು ಕೈಗೆಟಕುವ ಬೆಲೆಗಳಲ್ಲಿ ದಕ್ಕುತ್ತವೆ. ಒಬ್ಬ ಅಪ್ಪ ತನ್ನ ಮಗನನ್ನು ಕಾಲೇಜಿಗೆ ಕಳಿಸುವಾಗ ಪಠ್ಯಪುಸ್ತಕ, ಸಮವಸ್ತ್ರ, ಮುಂತಾದ ಸಲಕರಣೆಗಳನ್ನು ಹೇಗೆ ಒದಗಿಸುತ್ತಾನೆಯೋ ಅದೇ ರೀತಿಯಲ್ಲಿ ಆ್ಯಂಡ್ರಾಯ್ಡ್ ಮೊಬೈಲ್ ಒಂದನ್ನು ಅದರ ಜೊತೆಗೆ ಒಳ್ಳೆಯ ಡೆಟಾ ಪ್ಯಾಕ್ ಆಫರ್ ಇರುವ ಸಿಮ್ ಅನ್ನು ನೀಡಬೇಕಾದ ಕಾಲ ಬಂದಿದೆ. ಅಂತರ್ಜಾಲ ಮಾಧ್ಯಮ ಇಬ್ಬರ ನಡುವಿನ ಅಂತರ ಸಂವಹನಕ್ಕೆ ಮುಖ್ಯ ವಾಹಿನಿಯಾಗಿದೆ. ಆದರೆ ಅದನ್ನು ಅತಿಯಾಗಿ ಬಳಸುವುದು, ದುರ್ಬಳಕೆ ಮಾಡುವುದು ಹೆಚ್ಚಾಗುತ್ತಿದೆ. ಮೌನಕ್ಕೆ, ಭಾವನೆಗೆ, ಪ್ರೀತಿಗೆ ಅರ್ಥ ನಶಿಸುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಮಯ ವ್ಯರ್ಥವಂತೂ ಹೇಳ ತೀರದು. ಕೆಲಸದ ಅವಧಿಯಲ್ಲು ಕೈಯಲ್ಲಿ ಮೊಬೈಲ್ ಇರಲೇ ಬೇಕು. ಸಮಯ ಬಿಡುವಿದ್ದಾಗಲೂ ಬೇರೆಲ್ಲ ಚಟುವಟಿಕೆಗಳಿಗಿನ್ನ ಮೊಬೈಲೇ ಬಹಳ ಆಪ್ತ. ವ್ಯಕ್ತಿಯ ಅವಿಭಾಜ್ಯ ಅಂಗವೇನೋ ಎಂಬಷ್ಟು ಹೊಕ್ಕಿಕೊಂಡಿರುವ ಮೊಬೈಲ್ ನಿಂದಾಗಿ ಅಪಾಯಕಾರಿಯಾದ ಅವಾಂತರಗಳು ನಡೆಯುತ್ತಿವೆ. ಊಟ ಮಾಡಿ ಯಾವುದಾದರೊಂದು ಪುಸ್ತಕವನ್ನು ಹಿಡಿದು ಓದುತ್ತಾ ನಿದ್ರೆಗೆ ಜಾರುವ ಕಾಲವೊಂದಿತ್ತು. ಇಲ್ಲವೆ ಮನೆಯವರೆಲ್ಲ ವಿಷಯವೊಂದರ ಚರ್ಚೆ ಮಾಡುತ್ತಾ ಸಮಯ ಮೀರುತ್ತಿದೆ ಎನಿಸುತ್ತದ್ದಂತೆ ಎಲ್ಲರು ತಮ್ಮ ತಮ್ಮ ಕೋಣೆಗೆ ತೆರಳಿ ಮಲಗುತ್ತಿದ್ದರು. ಈಗ ಊಟಕ್ಕಿಂತ ಮೊದಲು ಮೊಬೈಲ್, ಊಟದ ನಂತರವು ಮೊಬೈಲ್, ಮಧ್ಯರಾತ್ರಿಯಾದರೂ ಮೊಬೈಲ್, ಮುಂಜಾನೆ ಎಬ್ಬಿಸೋದು ಮೊಬೈಲ್, ಒಟ್ಟಿನಲ್ಲಿ ಮೊಬೈಲ್ ನಮ್ಮ ನಮ್ಮ ವಸ್ತ್ರದ ಹಾಗೆ, ಇರಲೇ ಬೇಕು. ಉಪಯೋಗಿಸಲೇ ಬೇಕು ಎಂಬಂತಾಗಿ ಸಮಯವೆಲ್ಲ ಒಡೆದ ಮಡಕೆಯಿಂದ ನೀರು ಮಾಯವಾಗುವ ಹಾಗೆ ಲೀಲಾಜಾಲವಾಗಿ ಪೊಳ್ಳಾಗಿ ಹರಿಯುತ್ತಿದೆ. ಉಪಯುಕ್ತತೆಯಂತೂ ಏನೂ ಇಲ್ಲ.
ಆರೋಗ್ಯದ ದೃಷ್ಟಿಯಿಂದಲೂ, ನೈತಿಕತೆಯ ದೃಷ್ಟಿಯಿಂದಲೂ, ಸಮಯದ ದೃಷ್ಟಿಯಿಂದಲೂ, ಫೇಸ್‍ಬುಕ್ ಮತ್ತು ವಾಟ್ಸ್‍ಅಪ್‍ಗಳು ದುರ್ಭಳಕೆಯಾಗುತ್ತಿವೆ. ಹೆಣ್ಣುಮಕ್ಕಳಿಗೆ ಸೂಕ್ತವೇ ಅಲ್ಲವೆಂದು ಒಮ್ಮೊಮ್ಮೆ ಅನಿಸುತ್ತದೆ. ಫೇಸ್‍ಬುಕ್ ನಲ್ಲಿ ಅಪ್ಲೋಡ್ ಆದ ಫೋಟೋಗಳನ್ನು ಯಾರಾದರೂ ಪಡೆಯಬಹುದು. ಹಂಚಬಹುದು. ಅದಕ್ಕೊಂದು ಕೆಟ್ಟ ತಲೆಬರಹ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಬಹುದು. ಇಂತಹವರಿಗೆ ಕ್ರಮ ಕೈಗೊಳ್ಳುವ ಹೊತ್ತಿಗೆ ಬಳಕೆಯಾದ ವ್ಯಕ್ತಿಯ ಮಾನನಷ್ಟ ಕಟ್ಟುವವರ್ಯಾರು. ಹೇಗೆ, ಏನು ಅಂತ ಗೊತ್ತಿಲ್ಲದವರು ಸ್ನೇಹಿತ-ಸ್ನೇಹಿತೆಯರಾಗುತ್ತಾರೆ. ನಾಜೂಕು ಮಾತುಗಳಿಂದ ಮನವೊಲಿಸಿ ಭೇಟಿ, ಡೇಟಿಂಗ್, ಮುಂದುವರಿದು ಮೈಮರೆಯುವ ಹಾಗಾಗಲೂಬಹುದು. ಈಗಾಗಲೇ ಅಂತಹ ವಿಪರ್ಯಾಸಗಳು, ಅನಾಚಾರಗಳು ನಮ್ಮ ಮುಂದೆ ನಡೆಯುತ್ತಿವೆ. ನಮ್ಮ ಸಂಸ್ಕøತಿ ಹತ್ಯೆಯಾಗುತ್ತಿದೆ. ಭಾರತೀಯ ಪರಂಪರೆ, ಭಾರತೀಯ ಸ್ತ್ರೀ, ಇತಿಹಾಸ ಎಲ್ಲವೂ ವಿದೇಶಿ ವ್ಯಾಮೋಹಕ್ಕೆ ಬೇಗನೆ ಜಾರುತ್ತಿದೆ. ಹೆಣ್ಣು-ಗಂಡುಗಳ ನಡುವಿನ ಸಂಬಂಧಕ್ಕೆ ಅರ್ಥವೇ ಇಲ್ಲವೆಂಬಂತಾಗುತ್ತಿದೆ. ಏಕ ಸಂಬಂಧಗಳು ಅನೇಕಾನೇಕವಾಗುತ್ತಿವೆ. ವಂಚನೆಗಳು ಜಾಸ್ತಿಯಾಗುತ್ತಿವೆ. ಸಮಯವಂತೂ ಹೊಳೆಯಲ್ಲಿ ಹುಣಸೇ ಹಣ್ಣಿನ ಗಾಧೆಗೆ ಹೋಲಿಕೆಯಾಗುತ್ತಿದೆ. ಎಲ್ಲವೂ ಉತ್ತಮವೇ, ಆಲೋಚಿಸಿ, ಚಿಂತಿಸಿ, ಯುವಜನತೆ ನಡೆಯಬೇಕಿದೆ.


No comments:
Post a Comment