ಪುಟ ಹರಿದಂತ ಈ ದಿನಚರಿಗೆ, ಇಕೋ ಸೇರಿಸುವೆ ಹೊಸ ಪುರವಣಿಯ,,
ಇನ್ನು ಜೋರಾಗಿ ದೀಪವೆ ಬೆಳಗು, ದೂರ ಕೈಕಟ್ಟಿ ನಿಲ್ಲಲಿ ಸಮಯ,,
ಈ ನೋವಿಗೆ ಕಿಡಿಸೋಕಿಸಿ
ಮಜ ನೋಡಿವೆ ತಾರಾಗಣ,,
ತಂಗಾಳಿಯ ಪಿಸುಮಾತಿಗೆ
ಯುಗವಾಗಿದೆ ನನ್ನಾಕ್ಷಣ,,
ಜಯಂತ್ ಕಾಯ್ಕಿಣಿ ಎಂಬ ನಂದನವನದಲ್ಲಿ ಏಕಾಂಗಿಯಾಗಿ ವಿಹರಿಸೋದು ನನಗಿಷ್ಟ. ಭಾಷಣ, ಬರಹ, ಹಾಡು, ಹರಟೆಯಲ್ಲಿ ಅವರ ಭಾವಾಭಿನಯ ಕಂಡೊಡನೆ ಪುನಹ-ಪುನಹ ಅವರನ್ನು ಆಲಿಸಬೇಕೆಂಬ ಹಂಬಲ ಹೆಚ್ಚಾಗುತ್ತಲೇ ಇದೆ. ಒಬ್ಬ ಕವಿಯಾಗಿ ಅವರು ನನಗಿಷ್ಟ. ಒಬ್ಬ ಭಾಷಣಕಾರನಾಗಿ ಅವರು ನನಗಿಷ್ಟ. ಒಬ್ಬ ಗೀತೆ ರಚನೆಕಾರನಾಗಿ ನನಗವರು ಬಹಳ ಆಪ್ತ. ಡಿ.ಎಡ್ ಮಾಡುವಾಗಿನ ಕಾಲದಿಂದ ಅಂದರೆ 5-6 ವರ್ಷಗಳಿಂದ ಅವರು ನನಗೆ ಗೊತ್ತು. ಹಾಗಂತ ಅವರೊಡನೆ ಅಂತರದಿಂದ ಸ್ವಲ್ಪವೇ ಸ್ವಲ್ಪ ಸಂವಾಧಿಸಲೂ ಇಲ್ಲ. ಹೆಚ್ಚು ನೇರವಾಗಿ ಭಾಷಣ ಕೇಳಲೂ ಇಲ್ಲ. ಊರಿಗೆ ಹತ್ತಿರವಾದವರಂತೂ ಮೊದಲೇ ಅಲ್ಲ. ಮಾಧ್ಯಮಗಳಿಂದ ನನಗವರು ಬಹಳ ಆಪ್ತ. ಅವರ ಹಾಡುಗಳಿಂದ ನನ್ನ ಅವರ ಆಪ್ತತೆ ಹೆಚ್ಚಾಗುತ್ತದೆ. ಅದರ ಮುಖೇನ ತಾನೆ ಜಯಂತ್ ಕಾಯ್ಕಿಣಿಯವರ ಬರಹ, ಭಾಷಣ ಅನುಭವಿಸುವಂತಾಗಿದ್ದು. ಅವರ ಚಟುವಟಿಕೆ, ಚೈತನ್ಯ, ಕಾಣುವಂತಾಗಿದ್ದು..
ಅಂಗೈಯ್ಯ ಮೇಲೆ ಕೂತಿರೋ
ಬಣ್ಣಾದ ಚಿಟ್ಟೆ ಈಕ್ಷಣ,,
ತಲ್ಲೀನನಾಗಿ ಬಾಳಲು
ಇನ್ನೇನು ಬೇಕು ಕಾರಣ,,
ನೆಚ್ಚಿನ ಹಾಡುಗಳ ವಿಳಾಸ ತಿಳಿಯಬೇಕೆಂದು ಅಂದುಕೊಳ್ಳುತ್ತಿದ್ದ ಹಾಗೆ ಬೇಗ ಸಿಕ್ಕವನು ಸೋನು ನಿಗಮ್. ಮೊಬೈಲ್‍ನಲ್ಲಿ ಅವನ ಹಾಡುಗಳು ಮಾತ್ರ. ಉದಯ 2 ಚಾನಲ್ನಲ್ಲಿ ಅವನ ಹಾಡು ಬಂತೆಂದರೆ ಮನೆ ಮುಳುಗುವ ಹಾಗೆ ರಿಮೋಟ್ ಅಂಗೈಯಲ್ಲಿ. ಹುಣಸೂರಿನ ಟಿ.ವಿ ಆರ್.ಸಿ.ಎನ್ ನಲ್ಲಂತೂ ಕೊಟ್ಟ ಹಾಡನ್ನು 20 ಸಲ ಕೊಡದೇ ಅವರು ಕದಲುವುದೇ ಇಲ್ಲ. ‘ಕೇಳಿದ್ದನ್ನೆ ಎಷ್ಟು ಸಲ’ ಎಂದು ಮನೆಯವರು ಉಗಿದದ್ದು ಒಂದೆರಡು ಬಾರಿ ಅಂತು ಅಲ್ಲವೇ ಅಲ್ಲ. ಹಾಗೆ ಆಲಿಸುತ್ತಾ ಆಲಿಸುತ್ತಾ ಅವನ ಹಾಡುಗಳಲ್ಲೇನೋ ಹೊಸತನ ಹತ್ತಿರವಾಗುತ್ತಾ ಸಾಗುತ್ತದೆ. ಪದೇ ಪದೇ ಕೇಳುತ್ತಿದ್ದ, ಗುನುಗುತ್ತಿದ್ದ ಪರಿಣಾಮ ಪದಗಳ ಜೋಡಣೆಯೂ ಸವಿಯಾಗಿದ್ದರಿಂದ, ಸವಿಯ ಕವಿಯಾಗಿ ಬಂದರು ನಮ್ಮ ಬಳಿ ನನ್ನ ಕವಿ ಜಯಂತ್ ಕಾಯ್ಕಿಣಿ. ಒಂದೊಂದೇ ಹಾಡೆಂದೂ ಈವರೆಗೆ ಕಾಯ್ಕಿಣಿಯವರ ಅದೆಷ್ಟು ಹಾಡುಗಳ ತುದಿನಾಲಿಗೆಯ ಮೇಲೆ ನಿಮಿರಿ ನಿಂತು ಹೊಸಗೀತೆಗಾಗಿ ಸುಮ್ಮನಾಗುತ್ತವೆ. ಮತ್ತೇನೋ ಹೊಸ ಕೃಷಿ ಅವರಿಂದ ಬಯಸುತ್ತೇನೆ. ಹಾಡುಗಳೆಂದರೆ ಬರೆಯುವುದೆಂದು ನಾವು ಭಾವಿಸುತ್ತೇವೆ. ಆದರೆ ಜಯಂತರ ಹಾಡುಗಳನ್ನು ಬರೆದು ನೋಡಿದಾಗ ಅವುಗಳನ್ನು ಬರೆದಿರುವುದಲ್ಲ, ಬರೆದು ಕಟ್ಟಿರುವುದು ಎಂದು ನನಗನ್ನಿಸುತ್ತದೆ. ಅಷ್ಟು ನಿಯಮವಾಗಿ, ಲಯಬದ್ಧವಾಗಿ, ಪ್ರಾಸಪಕ್ವತೆಯನ್ನು ನಾನ್ಯಾವ ಅನ್ಯರ ಹಾಡುಗಳಲ್ಲಿಯೂ ಕೇಳಿಲ್ಲ.
ನಿನಗೆಂದೆ ಈ ಸಾಲು ಅಂಗಡಿಯಲಿ
ಹುಡುಗೊರೆಯ ಏನೆಂದು ನಾ ಆಯಲಿ,,
ನಾ ಬಡವ, ಈ ನನ್ನ ಮನಸಲ್ಲಿರೋ
ಸಡಗರದ ಸಿರಿ ಹೇಗೆ ನಾ ನೀಡಲಿ,,
ನನಗೆ ಜಯಂತ್ ಕಾಯ್ಕಿಣಿ ಎಂಬ ಅಭಿರುಚಿಯ ಕವಿ ಸಿಕ್ಕಿದ್ದು ಸತ್ಯವಾಗಿ ಸೋನು ನಿಗಮ್‍ನಿಂದ. ಆದ್ದರಿಂದ ಆತನಿಗೆ ನಾನು ಋಣಿ. ತದನಂತರ ನಾನು ಪಡೆದ ಸುಖವನ್ನು ಹೇಗೆ ಹೇಳಬೇಕೆಂದು ತಿಳಿಯುತ್ತಿಲ್ಲ. ನಾನು ಪಡೆದ ಆನಂದದಾನುಭವವನ್ನು ವರ್ಣಿಸಲೇಗೆ ಎಂಬಂತಾಗಿದೆ ನನ್ನ ಸ್ಥಿತಿ. ಸಂಗೀತದ ಗಂಧವೇ ತಿಳಿಯದ ನನಗೆ ಮೊದಲು ಹಾಡುಗಾರನ ರಾಗವೇ ಇಷ್ಟವಾಗಿದ್ದು. ಅದಾಗಲೇ ಸೋನು ನಿಗಮ್‍ನ ಹಿಂದಿ ಹಾಡುಗಳನ್ನು ಮೊಬೈಲ್‍ನಲ್ಲಿ ತುಂಬಿಕೊಂಡು ಕನ್ನಡ+ಹಿಂದಿ ಹಾಡುಗಳ ಭೇದ ಭಾವವಿಲ್ಲದೆ ಯಾರು ಇಲ್ಲದ ಜಾಗ ನೋಡಿ ನನ್ನ ಗಾರ್ಧವ ಕಂಠದಲ್ಲಿ ಕೂಗಿ ಕೂಗಿ ಹಾಡಿದ್ದು ಮರೆವುದುಂಟೆ. ಹೆಚ್ಚು ಆಪ್ತವಾಗಿ ನನ್ನ ಸಂಗೀತ ಕಛೇರಿ ಏರ್ಪಡುತ್ತಿದ್ದದ್ದು ನನ್ನ ತೋಟದಲ್ಲಿ. ಹೊಲ ಗದ್ದೆಗಳ ಅಂಗಳದಲ್ಲಿ. ಗೌಪ್ಯವಾಗಿ ಹಾಡುವುದರ ಅವಶ್ಯಕತೆ ಬಹಳ ನನಗೆ. ಏಕೆಂದರೆ ಆಗತಾನೆ ನಾನು ತಲ್ಲೀನನಾಗಿ ಹಾಡಲು ಸಾಧ್ಯ. ಮೈಮರೆತು ಕೂಗಲು ಸಾಧ್ಯ. ಹೆಚ್ಚೆಂದರೆ ದೇಹ ಅಲ್ಲಾಡಿಸಲು ಸಾಧ್ಯ. ಆದರೆ ಹಾಗಾಗ್ಗೆ ಅಪರೂಪಕ್ಕೆ ಯಾರಾದರೊಬ್ಬರು ಬಂದೋಗುತ್ತಿದ್ದದು ಕೆಲವೊಮ್ಮೆ ಆಲಿಕೆಗೆ ಬಂದರೆ ಏನಂದುಕೊಳ್ಳುತ್ತಾರೋ ಎಂದು ಸುಮ್ಮನಾಗುತ್ತಿದೆ. ಮೈಮರೆತು ಹಾಡುವಾಗ ಕೆಲವೊಮ್ಮೆ ಯಾರೋ ನೋಡಿ ನಕ್ಕು ಹೋಗುತ್ತಿರುವುದು ಗೊತ್ತಾಗಿ ಪೆಚ್ಚಾಗುತ್ತಿದ್ದೆ. ಒಮ್ಮೊಮ್ಮೆ ಮಾಮೂಲಿಯಾಗಿ ದೂರದ ಕಾಕಯ್ಯ ಕುರಿಕಾಯುತ್ತಾ ಬಳಿಯಾದರೂ ಚಿಂತೆಯಿಲ್ಲ. ಕಿವಿ ಕೇಳದು ಪಾಪ ಅವನಿಗೆ. ನನ್ನ ಸ್ವರಕ್ಕೆ ಅವನ ಕುರಿಗಳು ಕೊಡುತ್ತಿದ್ದ ಗಮನವನ್ನೂ ಅವನು ಕೊಡುತ್ತಿರಲಿಲ್ಲ. ತಲೆಬಗ್ಗಿಸಿ ಓರೆಯಾಗಿ ನೋಡಿ ನೆನ್ನೆ ಮೊನ್ನೆಯ ಹೈದನ ಬಳಿ ನನಗೇನಿದೆ ಮಾತು ಎಂದುಕೊಂಡೋ ಏನೋ ಸುಳಿದು ಕಳೆದೋಗುತ್ತಿದ್ದ. ಏಕಾಂತದ ಮಹತ್ವ, ಏಕಾಂಗಿತನದ ಸುಖ ಅಲ್ಲಿಂದಲೇ ಶುರುವಾಯಿತೆಂದರೆ ಅದು ಸತ್ಯ.
ಸಮೀಪ ಬಂತು ಬಯಕೆಗಳ
ವಿಶೇಷವಾದ ಮೆರವಣಿಗೆ,,
ಇದೀಗ ನೋಡು ಬೆರಳುಗಳ
ಸರಾಗವಾದ ಬರವಣಿಗೆ,,
ಹಾಡುತ್ತಾ ಹಾಡುತ್ತಾ ಅಲೆದಾಡುವ ಮಜವೇ ಬೇರೆ. ಅದು ಹಾಡಿ ಅಲೆವವನಿಗೆ ಮಾತ್ರ ಗೊತ್ತಾಗುತ್ತದೆ. ಮಾದಯ್ಯನ ಹೊಲದ ಮಾವಿನ ಮರದಡಿಯಲ್ಲಿ ಹಳೆ ಮಂದಲಿಗೆ(ಚಾಪೆ) ಬಿದ್ದಿರುತ್ತಿತ್ತು. ಯಾರೇ ತೋಟಕ್ಕೆಂದು ಹೋದವರು ಕೆಲಸವಿಲ್ಲದಾಗ ಅಲ್ಲೇ ಕೂತು ಕಾಲಕಳೆಯುತ್ತಿದ್ದದ್ದು. ಐಕಳ ದಂಡು ತೋಟದಲ್ಲಿ ಗೋಲಿಯಾಡುವುದು, ಮನೆಯ ಕೂಲಿಯಾಳುಗಳ ಎಲೆಯಡಕೆಯ ವಿರಾಮ, ಚೂರು ಸೋನೆ ಬಂದಾಗ ಆಶ್ರಯ, ಬುತ್ತಿಯಲ್ಲಿ ಬಂದ ಊಟ, ತೂಕಡಿಸಿ ಬಂದ ನಿದಿರೆ, ಹೊಲಕ್ಕೆ ಬಂದ ನೆಂಟರೊಂದಿಗಿನ ಸಲ್ಲಾಪ, ಬಿಸಿಲು ಬೇಗೆಯ ನಿವಾರಕವಾಗಿಯೂ ಆ ಮಾವಿನ ಮರದ ತಳಭಾಗ ಅತ್ಯಾವಶ್ಯಕವಾಗಿತ್ತು. ತೋಟಕ್ಕೆಂದು ಬರುವ ಸರ್ವಕಾರಣಗಳಿಗಾಗಿ ಅಪ್ಪ ಇಟ್ಟ ಮಂದಲಿಗೆ ತಾನು ಹಣಕಾಸಿನ, ಸಾಲದಬಾದೆಯ ಚಿಂತಾಮಗ್ನನಾಗಿ ಕೊರಗುವುದಕ್ಕೂ ಅದೇ ನಂತರದಲ್ಲಿ ಬೇಕಾಗಿತ್ತು. ನಮ್ಮ ಬಾಲ್ಯಕ್ಕೆಲ್ಲಿ ಜೀವನದ ಚಿಂತೆ, ಅದರಲ್ಲಿ ಕೂತು, ಮಲಗಿ, ಗೆಳೆಯರೊಂದಿಗೆ ಹರಟುತ್ತಿದ್ದರೇನೋ ಉಲ್ಲಾಸ ಚಿಮ್ಮುತ್ತಿತ್ತು. ಈಗೀಗ ತಿಳಿಯುತ್ತಿದೆ, ಅಪ್ಪನ ಚಿಂತೆಯ ತೂಕ. ಅದಿರಲಿ, ಮುಂದೆ ಆಪ್ತವಾದ ಜಯಂತರ ಹಾಡುಗಳನ್ನು ಅಲ್ಲೆ ಕೂತು ಕೇಳುತ್ತಾ ಕೇಳುತ್ತಾ ಬರೆದುಕೊಳ್ಳುತ್ತಿದ್ದೆ. ಆ ಬರೆದು ಬರೆದು ಹರಿದಿರುವ ಹಳೇ ‘ನಂದಿನಿ ಲಾಂಗ್ ಬೈಂಡ್’ ಇನ್ನು ಹಾಗೆ ಇದೆ. ಹಾಡುಗಳೂ ಇವೆ. ಚಾಪೆಯೂ ಇದೆ, ತನ್ನ ವಾಸಸ್ಥಾನವನ್ನು ಮಾವಿನ ಮರದಡಿ ಬಿಟ್ಟು ಹೊಸದಾಗಿ ಕಟ್ಟಿರುವ ‘ಪಂಪ್ ಸೆಟ್ ಮನೆ’ ಗೆ ವರ್ಗಾವಣೆಯಾಗಿದೆ. ಮಾವಿನ ಮರಕ್ಕೆ ಬೇಸರವಾಗಬಾರದೆಂದು ಮೊನ್ನೆ ಮೊನ್ನೆ ಊರಿಗೆ ಹೋದಾಗ ‘ಬದಲಾಗಿದ್ದ’ ಚಾಪೆಯನ್ನು ಹಿಂದಿನ ಜಾಗಕ್ಕೆ ಮರಳಿಸಿ, ಕೂತು ಮತ್ತದೇ ಹಾಡುಗಳನ್ನು ಕೇಳಿದೆ. ಇಂದಿಗೂ ಅದೇ ಕಂಪನ್ನು ಉಳಿಸಿಕೊಂಡು ಹೋಗುತ್ತಿರುವ ಜಯಂತರ ಹಳೇ ಹಾಡುಗಳು; ಇದೀಗ ಹೊಸಚಿತ್ರಗಳಲ್ಲಿ ಬರುತ್ತಿರುವ ನವನವೀನವಾದ ಜಯಂತರ ಹೊಸ ಹಾಡುಗಳು; ಎರಡೂ ಗುಂಪುಗಳನ್ನು ನೋಡಿದರೆ ಹೊಸತನದಲ್ಲಿ ಬದಲಾವಣೆಯಂತೂ ಖಂಡಿತಾ ಇದೆ. ಆದರೆ ಅವರದ್ದೆ ಹಾಡು ಎಂದು ಗುರುತಿಸುವಷ್ಟರ ಮಟ್ಟಿಗೆ ಅವರ ಹಾಡುಗಳು ಒಂದಕ್ಕೊಂದು ನಂಟನ್ನು ಕಳೆದುಕೊಳ್ಳಲು ಸಿದ್ದವಿಲ್ಲ.
ದಾರೀಲಿ ಹೂಗಿಡವೊಂದು
ಕಟ್ಟಿಲ್ಲ ಹೂಮಾಲೆ,,
ಕಣ್ಣಲ್ಲಿ ಕಣ್ಣಿಡು ನೀನು
ಮತ್ತೆಲ್ಲ ಆಮೇಲೆ,,
ಪದ ಜೋಡಣೆಯಲ್ಲಿ ಪ್ರಸ್ತುತ ಜಯಂತರೇ ನನಗೆ ಆರಾಧ್ಯ ಕವಿ. ಒಲವಿಗನ ಅಥವಾ ಒಲವಿಗಳ ಅಂತರಾಳವನ್ನು ಅರೆದುಕುಡಿದಿರಬೇಕು ಜಯಂತರು. ಅವನ ಕೌತುಕ ಮತ್ತು ಅವಳ ನಾಚಿಕೆ, ಅವನ ಆತುರ ಮತ್ತು ಅವಳ ಬಯಕೆ, ಅವನ ಆಶಯ ಮತ್ತು ಅವಳ ಮೌನ, ಅವನ ಮುತ್ತು ಮತ್ತು ಅವಳ ಸ್ಪರ್ಷ. ಎಲ್ಲವೂ ಜಯಂತರಿಗೆ ತೀರಾ ಸಹಜ.



No comments:
Post a Comment