ಚಲುವಾಂಬ ಬದುಕಿನ ಒಂದೆರೆಡು ಹನಿ,,,
ಮಧ್ಯರಾತ್ರಿಯ ಸಮೀಪ ಮೈಸೂರು ಚಲುವಾಂಬ ಆಸ್ಪತ್ರೆಯ ಮುಂಭಾಗ ಆ್ಯಂಬುಲೆನ್ಸ್ ಒಂದು ಒಂದೇ ಸಮನೆ ಸರ್ರನೆ ಬಂದು ನಿಂತು ಕೂಗಿಕೊಳ್ಳುವಾಗ ಬಿಳಿವಸ್ತ್ರ ಸಿಬ್ಬಂಧಿ ಒಬ್ಬ ಓಡಿಬಂದ. ಆಗತಾನೇ ತೂಕಡಿಸಿ ತೂಕಡಿಸಿ ಸೋತಿದ್ದ ಎಂದು ಹೊಸದಾಗಿ ನಾನೇನು ಹೇಳಬೇಕಾಗಿಲ್ಲ. ಪಾಪ ಈಗತಾನೆ ಇವನಿಗೇ ಹೆರಿಗೆಯಾಗಿದೆ ಎಂಬಂತೆ ಕೆದರಿದ ಕೂದಲು, ಬಿಳಿ ಬಣ್ಣ ಬದಲಿಸಿದ್ದ ಯೂನಿಫಾರ್ಮ್, ಚೈತನ್ಯ ಸತ್ತಿರುವ ಮುಖಭಂಗಿ, ಚಲನೆಯಲ್ಲಿನ ಸೋಲು ಇವೆಲ್ಲವೂ ಹಾಸ್ಯ ಮಾಡುತ್ತಿದ್ದವು. ಸರಸರನೆ ಅವನ ಸಾಲಿನಿಂದ ಮತ್ತೊಬ್ಬ ಸ್ವಲ್ಪ ಚೈತನ್ಯದಿಂದಲೇ ಬಂದು ಆ್ಯಂಬುಲೆನ್ಸ್‍ನಲ್ಲಿ ಬಂದ ಅತಿಥಿಯನ್ನು ಸೀದಾ ಮಲಗಿಸಿ ಕರೆದೊಯ್ಯುವ ಗಾಲಿಯುಳ್ಳ ಕಬ್ಬಿಣದ ಹಾಸಿಗೆಯನ್ನು ಸುಯ್ ಎಂದು ತಳ್ಳಿಕೊಂಡು ತನ್ನ ಕಾರ್ಯಪ್ರಾವಿಣ್ಯತೆಯನ್ನು, ಅನುಭವವನ್ನು, ಅಭ್ಯಾಸವನ್ನು ಸಾಭೀತು ಪಡಿಸಿಯೇ ಬಿಟ್ಟ. ಮಲಗಿದ ಬಸುರಿ ಇನ್ನೇನೋ ತಾಯಿಯಾಗುತ್ತೀನೆಂಬ ಸಂಭ್ರಮಕ್ಕೆ ಸ್ವಲ್ಪವೂ ಗಮನ ಕೊಡದೆ ಒಳಗಿನ ಸಂಕಟಕ್ಕೆ ನಿಡುಸುಯ್ಯುತ್ತಾ ಮಲಗಿದವಳನ್ನು ಸಿಬ್ಬಂಧಿ ಕರೆದೊಯ್ದರು. ಬಸುರಿಯ ವಾರಸುದಾರರು ಇತ್ತ ಸಂತಸವೆನ್ನಲೂ ಆಗದಂತಹ ಅತ್ತ ಸಂತಾಪವೆನ್ನಲು ಆಗದಂತಹ ಸ್ಥಿತಿಯಲ್ಲಿ ಹೊಳಗೊಳಗೆ ಸಿಕ್ಕ ಸಿಕ್ಕ ದೇವರನ್ನು ನೆನೆಯುತ್ತಾ ಅವರನ್ನು ಹಿಂಬಾಲಿಸಿದರು.
ಹೆರಿಗೆ ಕೊಠಡಿಯ ಸಮೀಪ ಬಾಗಿಲ ಬಳಿಯಲ್ಲಿ ಕುಟುಂಬದವರು ನಿಂತು, ತುಸು ಹೊತ್ತಿನಲ್ಲಿ ಅಲ್ಲಲ್ಲಿಯೇ ಕುಳಿತಿದ್ದಾರೆ. ಮೊದಮೊದಲ ಗದ್ದಲಕ್ಕೆ ಯಾವೊಂದು ಸ್ವರವೂ ಮುಂದಾಗಿರಲಿಲ್ಲ. ಆದರೆ ‘ಶಾಂತಿ’ ಬರುತ್ತಿದ್ದಂತೆಯೇ ಒಂದೊಂದೇ ಕೂಗುಗಳು ಕೇಳ ಬಂದವು. ಇದೇ ಮೊದಲಬಾರಿಗೆ ಹೆರಿಗೆ ಆಸ್ಪತ್ರೆಗೆ ಬಂದಿದ್ದ ಮಡದಿಯ ಗಂಡ ಉತ್ತಮ ಫಲಿತಾಂಶಕ್ಕೆ ‘ಏನಾಗುವುದೋ’ ಎಂಬ ಋಣಾತ್ಮಕ ಆಲೋಚನೆಯಿಂದ ಮಂಕಾಗಿದ್ದಾನೆ. ಎಷ್ಟೋ ಅನುಭವಗಳನ್ನು ಕಂಡಿರುವ ಅಜ್ಜಿ ‘ಏನೂ ಆಗದು’ ಎಂಬ ನಿಸ್ಸಂದೇಹ ಸ್ಥಿತಿಯಲ್ಲಿ ಶಾಂತಿಯಾಗಿದ್ದಾಳೆ. ನವಮಾಸದ ಅಸುಗೂಸನ್ನು ಒಡಲಲ್ಲಿ ಹೊತ್ತು ಬಂದಿರುವವಳನ್ನು ತನ್ನ ಒಡಲಿಂದ ಇಳಿಸಿ, ಸಾಕಿ, ಸಲಹಿ ಆಕೆ ತಾಯಿಯಾಗುವ ಸುಸಂದರ್ಭವನ್ನು ಆಧ್ಯವಾಗಿ ಬಯಸಿದ್ದ ಗರ್ಭಿಣಿಯ ತಾಯಿ ‘ಒಳ್ಳೆಯದಾಗಲಪ್ಪ’ ಎಂದು ಹಾಗಾಗ ಹನಿಗಣ್ಣಾಗುತ್ತಿದ್ದಾಳೆ. ಏನಾಗುತ್ತಿದೆ ಎಂಬುದರ ಅರಿವೇ ಇಲ್ಲದ ಮನೆಯ 4 ವರ್ಷದ ಮಗು ಬಂದಾಗ ದಿಗ್ಭ್ರಾಂತಿಗೊಂಡದ್ದು ಈಗ ಮಡಿಲಲ್ಲಿ ಮಲಗಿದೆ, ಎಳೆತುಟಿಯಿಂದ ಗಲ್ಲಕ್ಕೆ ಜೊಲ್ಲು ಸುರಿಸುವುದರ ಜೊತೆಗೆ. ಆ ಕಡೆಯಿಂದ ಹಾರಿಬಂದ ಕೂಗು ತನ್ನ ಮಗಳದ್ದೇ ಎನ್ನುವ ತಾಯಿಯ ದಿಗಿಲಿಗೆ ಎಲ್ಲರ ಮೌನವೇ ಉತ್ತರ. ಆ ಮೌನವನ್ನು ನನ್ನ ಪ್ರಕಾರ ಭಗವಂತನೂ ಅರಿಯಲಾರ. ಇಕ್ಕಟ್ಟಿನ ಸಾಗರದಲ್ಲಿ ಒಬ್ಬಂಟಿ ದೋಣಿಗನಂತೆ ಅಥವಾ ಹರಿತದೆ ಕತ್ತಿಗೆ ಕುತ್ತಿಗೆಯಿಟ್ಟವನಂತೆ!!
ಅದೆಷ್ಟೋ ನವಜಾತ ಶಿಶುಗಳ ಜನ್ಮದಿಂದ ಪುಣ್ಯಸ್ಥಳವಾಗಿದ್ದ ಚಲುವಾಂಬಕ್ಕೆ ಇಂತಹ ಕೇಸುಗಳು, ಕೂಸುಗಳು, ಕೂಗುಗಳು, ದುಗಡಗಳು, ನಿರಾಶೆಗಳು, ಮೌನಗಳು, ಸಂಭ್ರಮಗಳು, ನಿತ್ಯಸೂರ್ಯನಂತೆ ಮಾಮೂಲಿಯಾಗಿತ್ತು. ಮುಂದೇ ಉತ್ತಮನಾಗುವ, ಅಧಮನಾಗುವ, ಪೋಲಿಯಾಗುವ, ಪಾಪಿಯಾಗುವ, ಧಾನಿಯಾಗುವ, ದ್ರೋಹಿಯಾಗುವ, ಸಜ್ಜನನಾಗುವ ಮತ್ತೇನೇನೋ ಆಗುವ ಅದೆಷ್ಟೋ ಹೆಮ್ಮರಗಳಿಗೆ ಚಲುವಾಂಬ ‘ಮೊಳಕೆ ತಾಣ’ವಾಗಿದೆ.
‘ಚಲುವಾಂಬ ಮಕ್ಕಳ ಆಸ್ಪತ್ರೆ’ ಎಂಬ ಕಟ್ಟಡದ ಬಲಬದಿಯ ನಾಮಫಲಕ ಅಳಿಸಿ ಹೋಗಿ ಮೊದಲಿಂದ ಅಲ್ಲಿಗೆ ಬರುತ್ತಿದ್ದವರು, ವರುಷಗಳ ಹಿಂದೆಯೇ ಗಮನಿಸಿದ್ದವರು ಮಾತ್ರ ಅದನ್ನು ಸಲೀಸಾಗಿ ಓದಬಹುದು ಎಂಬಂತೆ ಪಳೆಯುಳಿಕೆಯ ಪಾತ್ರದಲ್ಲಿದೆ ಅದು. ಜನಜನಿತವಾಗಿರುವ ಹೆಸರದು; ಅನಕ್ಷರಸ್ಥನು ತನ್ನ ಫೋನಿನ ಕರೆಯಲ್ಲಿ ಯಾರೋ ಎಲ್ಲಿದ್ದೀರ ಎಂದಾಗ ‘ಚಲುವಾಂಬ ಚಲುವಾಂಬ ಹತ್ರ’ ಅಂತ ನಿರ್ಭಯವಾಗಿ, ನಿಸ್ಸಂಕೋಚವಾಗಿ, ನಿರ್ಧಾಕ್ಷೀಣ್ಯವಾಗಿ, ನೇರವಾಗಿ ನುಡಿಯುತ್ತಾನೆ. ಯಾವುದೇ ಧರ್ಮದ ಕಟ್ಟಪ್ಪಣೆಯಿಲ್ಲದೆ ಎಲ್ಲಾ ಧರ್ಮೀಯರು ಭಯ ಭಕ್ತಿಯೊಡನೆ ಬಂದು ಪ್ರೀತಿ ವಿಶ್ವಾಸದಿಂದಲೇ ಸಾಗುತ್ತಾರೆ. ಕೆಲವರು ಶೋಕಿತರಾಗಿ ಹೋಗುತ್ತಾರೆ. ದಿನವೂ ಅಂತಹ ಸಂತೋಷಗಳನ್ನು, ದುಃಖಗಳನ್ನು ಅನುಭವಿಸುವವರನ್ನು ನೋಡುವ ಸಿಬ್ಭಂದಿ ಮಾತ್ರ ಅಂತಹ ವಿಶೇಷ ಪ್ರತಿಕ್ರಿಯೆಯನ್ನೇನು ನೀಡುವುದಿಲ್ಲ. ಅದೇನೋ ಹೇಳುತ್ತಾರಲ್ಲ, “ನಿತ್ಯವೂ ಸಾಯೋರಿಗೆ ಅಳೋರು ಯಾರು”?. ಹಾಗೆ ಅದು!.
ಒಳಗೆ ಹೋದ ಮಗಳಿಗೆ ಈಗಲೇ ಹೆರಿಗೆಯಾಗುವ ಯಾವ ಮುನ್ಸೂಚನೆಯೂ ಇಲ್ಲವೆಂದು ಆಯಾ ಒಬ್ಬಳು ನಲಿದು ಬಂದು ಹೇಳಿ ಹೋದಳು. ಎಲ್ಲರೂ ಗೊಣಗುತ್ತಾ ಗೊಣಗುತ್ತಾ ಗೋಡೆ ಒರಗಿಯೇ ಮಲಗಿದರು, ಆಗಾಗ ಕಣ್ಣು ಬಿಡುತ್ತಾ!. ಮುಂಜಾನೆ 4:30 ರ ಹೊತ್ತಿಗೆ ನೋವು ಕಾಣಿಸಿಕೊಂಡು ಡಾಕ್ಟರುಗಳು, ಆಯಾಗಳು ಓಡಾಡುತ್ತಿರುವುದನ್ನು ಗಮನಿಸಿದ ಅಜ್ಜಿ ಎಲ್ಲರನ್ನು ಎಚ್ಚರಿಸುತ್ತಿದ್ದಾಳೆ. ಇದೇ ಸಮಯದಲ್ಲಿ ಮೂವರಿಗೆ ಹೆರಿಗೆಯಾಗುತ್ತಿದೆ, ನಿಮ್ಮ ಮಗಳಿಗೆ ಮಾತ್ರವಲ್ಲ, ಎಲ್ಲರೂ ಓಡಾಡುವುದನ್ನು ನೋಡಿ ಗಾಬರಿಯಾಗ ಬೇಡಿ ಎಂದು ನೀಲಮ್ಮ ಆಯಾ ಧೈರ್ಯ ಕೊಟ್ಟಳು, ಹಳ್ಳಿಗರ ಹಗಲಗಣ್ಣುಗಳನ್ನು ನೋಡಿ. ಅಲ್ಲೆ ಟೀ, ಕಾಫಿ ಹಿಡಿದು ಬಂದವನನ್ನು ನೋಡಿ ಎಲ್ಲರೂ ಕುಡಿದರು. ಮುಂಜಾನೆಯ ಚಳಿಗೆ, ಮನಸ್ಸಿನೊಳಗಿನ ಬಿಸಿಗೆ ತುಂಬಾ ಆಹ್ಲಾದಮಯವಾಗಿತ್ತು ಆ ಚಾಯ್. ಬಿಳಿಯ ಚಿಕ್ಕ ಪ್ಲಾಸ್ಟಿಕ್ ಲೋಟ ನಿಮಿಷದಲ್ಲಿ ಖಾಲಿಯಾಗಿದೆ. ನೋಡು ನೋಡುತ್ತಾ ಇನ್ನೂ ಇಂತಹುದೇ ಹತ್ತಾರು ಕೇಸ್‍ಗಳು ಬಂದುದನ್ನು ಗಮನಿಸಿದ ಕುಟುಂಬಸ್ಥರು ‘ಇದು ಈಗಲೇ ಹೆರಿಗೆಯಾಗಲ್ಲ, ಅಯ್ಯೊ ಮೊದಲ ಹೆರಿಗೆಯೇನೋ, ನಮ್ಮ ಮಗಳಂತೆಯೇ ಇದ್ದಾಳಲ್ಲ’ ಎಂಬ ನಾಣ್ಣುಡಿಗಳನ್ನು ಹೇಳುತ್ತಾ ತಮಗೆ ತಾವೇ ಕಾಲ ತಳ್ಳುವ ಕೆಲಸ ಮಾಡುತ್ತಿದ್ದಾರೆ. ನೀಲಮ್ಮ ಆಯಾಳಿಂದ ಸುವಾರ್ತೆ ಬಂತು, ಹೆರಿಗೆಯಾಯಿತು ನಮ್ಮ ಮಗಳಿಗೆ! ಮಗು ಯಾವುದು ಹೇಳಲಿಲ್ಲ.
ಸುಂದರವಾದ ಲೇಡಿ ಡಾಕ್ಟರ್ ಮಗುವನ್ನು ತಂದು ಎಲ್ಲರಿಗೂ ತೋರಿಸಿ ಒಳಗೋದರು. ಲಿಂಗ ಯಾವುದೆಂಬುದನ್ನೇ ಪ್ರಾಧಾನ್ಯವಾಗಿಟ್ಟುಕೊಂಡಿದ್ದ ಮನೆಯವರಿಗೆ ತಾವಂದುಕೊಂಡದ್ದೆ ಮುದ್ದಾಗಿ ಹುಟ್ಟಿದೆ. ಯಾರ ತರಹ ಎಂದು ಹೇಳುವುದು ಕಷ್ಟ. ಪುಟ್ಟ ಪುಟ್ಟ ಬೆರಳು, ಕೆಂಪು ಪಾದ, ರೇಶಿಮೆಗಿನ್ನ ನುಣುಪಾದ ಹಾಗು ವಿರಳವಾದ ತಲೆಗೂದಲು, ಮುಚ್ಚಿರುವ ಕಣ್ಣು, ಒಕ್ಕುಳು ಬಳ್ಳಿಯಲ್ಲಿ ಏನನ್ನೋ ಬೆಳ್ಳಗೆ ಸಿಕ್ಕಿಸಿದ್ದಾರೆ, ಹಸಿ ಮೈ, ಸ್ವಲ್ಪವೇ ಸ್ವಲ್ಪ ಅಲುಗಾಡುತ್ತಿದೆ, ಎಲ್ಲರೂ ಚೀ ಕಳ್ಳ, ಅಚ್ಚಚ್ಚೂ, ಹೊಯ್ ಎಂದು ಮೆಲ್ಲಗೆ ಚಿಟಕೀ ಹೊಡೆಯುವಾಗಲೇ ಸಾಕು ಸಾಕು ಎಂದು ಮಗುವನ್ನು ಡಾಕ್ಟರ್ ಒಳಗೊಯ್ದಿದ್ದರು. ಆತ್ಮತೃಪ್ತಿಯಾದಂತೆ ಮಗುವಿನ ತಂದೆ ಹಸನ್ಮುಖಿಯಾಗಿದ್ದಾನೆ. ಹೆಂಗರಳು ಪಾಪ ಸಂತಸಕ್ಕೆ ತನ್ನವರಿಗೆ ಕರೆಮಾಡಿ ಮಾತಿನ ಸಿಹಿ ಹಂಚುತ್ತಿದ್ದಾನೆ. ಸ್ತ್ರೀವರ್ಗ ಮಗುವಿನ ರೂಪವನ್ನು, ಯಾರ ರೀತಿ ಎಂಬುದನ್ನು, ಅದರ ಗಾತ್ರವನ್ನು, ನನಗೆ ಮೊದಲೇ ಗೊತ್ತಿತ್ತು ಇದೇ ಆಗುತ್ತದೆ ಎಂಬುದನ್ನು, ಏನೋ ಒಳ್ಳೆಯದಾಯಿತಲ್ಲ ಬಿಡು ಎಂಬುದನ್ನು ತಮ್ಮ ತಮ್ಮ ಶೈಲಿಯಲ್ಲಿ ಸಂವಹಿಸುತ್ತಾ ಬೆಚ್ಚಗಾಗುತ್ತಿದ್ದಾರೆ. ಇವರ ಸಂತೋಷವನ್ನು ಕಂಡು ಮಗ್ಗುಲಲ್ಲೇ ಕುತೂಹಲವಾಗಿ ನೋಡುತ್ತಿರುವ ಮಗುವಿಗೂ ಸಂತೋಷ, ಅರೆನಿದಿರೆಯಿಂದ ಕೊಂಚ ಬೇಸರದಲ್ಲಿದೆ. ಮುಂಜಾನೆಯ ಸೂರ್ಯ ಮುಗಿಲಿನಲ್ಲಿ ಇಣುಕಿದ್ದರು ಪೇಟೆಗೆ ಕಂಗೊಳಿಸಲು ಹಿಂದು-ಮುಂದು ನೋಡುತ್ತಿದ್ದಾನೆ. ಹಳ್ಳಿಗಳಲ್ಲಿ ಮೊದಲು ಅರಳುವ ಆಸೆ ಅವನಿಗೆ. ಹಕ್ಕಿಗಳು ಆಸ್ಪತ್ರೆಯ ಒಳ ಪಾರ್ಕಿನಲ್ಲಿ ಹಾರಾಡುತ್ತಾ, ಸದ್ದು ಮಾಡುತ್ತಾ ‘ಬೆಳಗಾಗಿದೆ’ ಎಂಬುದನ್ನು ಒಳಗೆ ನೀರಸವಾಗಿರುವವರಿಗೆ ಸಾರುತ್ತಿವೆ.
ಬೆಳಿಗ್ಗೆ ತಮ್ಮ ಸಂಬಂಧಿಕರು ವಿಷಯ ತಿಳಿದು ಸಂಭ್ರಮದಿ ಬಂದು ‘ನಾರ್ಮಲ್ ವಾರ್ಡಿ’ನಲ್ಲಿ ತಾಯಿ ಮಲಗಿದ್ದ ಕಬ್ಬಿಣದ ಮಂಚದ ಬಳಿ ನಿಂತು ಮಗುವನ್ನು ಇಣುಕಿ ನೋಡಿ ತಾಯಿಯನ್ನು ನಗಿಸುತ್ತಿದ್ದಾರೆÉ. ಎಲ್ಲರಿಗೂ ಯಾವುದೋ ಯುದ್ಧದಲ್ಲಿ ಗೆದ್ದ ಸಂತಸ, ಸಣ್ಣದೋಣಿಯಲ್ಲಿ ದಿಕ್ಕು ತೋಚದೆÀ ಸಾಗರ ಮಧ್ಯದಿಂದ ಒಂದೇ ಸಮನೆ ತೊಳಲಾಡುತ್ತಿದ್ದವರಿಗೆ ಊರಿನ ಬೀದಿ ದೀಪ ಕಣ್ಣಿಗೆ ಬಿದ್ದಂತೆ, ಸರಿಯಾಗಿ ಬರೆಯದೆ ಡೌಟಿನಲ್ಲಿದ್ದ, ಭಯದಲ್ಲಿದ್ದ ಪರೀಕ್ಷಾರ್ಥಿ ಉತ್ತಮ ದರ್ಜೆಯಲ್ಲಿ ಪಾಸಾದಂತೆ, ಜೀವಾವಧಿಯಾಗಬಹುದೆಂದು ಊಹಿಸಿದ್ದ ಖೈದಿಗೆ ಅಲ್ಪಾವಧಿ ಶಿಕ್ಷೆ ದೊರೆತಂತೆ!!
ಹೆತ್ತವಳಿಗೂ ಹೊರೆ ಇಳಿಸಿದ ನೆಮ್ಮದಿ. ತನ್ನವರಿಗೆ ಬೇಕಾದ ಮಗುವೇ ಹುಟ್ಟಿರುವುದು ಇನ್ನೂ ಸಂತಸ. ತಾ ಬಯಸುವವರೆಲ್ಲರೂ ಪಕ್ಕದಲ್ಲಿಯೇ ಇರುವುದು ಇನ್ನೂ ಸಂತಸ, ತನ್ನ ಪತಿಯ ಮುಖದಲ್ಲಿ ಅರಳುತ್ತಿರುವ ಒಂದೊಂದು ಚೈತನ್ಯ ಅವಳಿಗೆ ಅಸಂಖ್ಯಾತ ತೃಪ್ತಿಯ ಹೊರೆಯಾಗಿ, ಕಣ್ಣಿನಿಂದ ಬಂದ ಆ ಹನಿ ಮುಖದಲ್ಲಿ ಪ್ರದರ್ಶನವಾಗದೆ ತನ್ನ ದಾರಿಯನ್ನು ಕಿವಿಯ ಭಾಗಕ್ಕೆ ಬದಲಿಸಿ ಅಲ್ಲಿಂದ ಆಸ್ಪತ್ರೆಯ ಹಾಸಿಗೆಯು ಮಡಿಯಾಗಿರುವುದಿಲ್ಲ ಎಂದು ಮನೆಯಿಂದ ತಂದಿದ್ದ ನುಣುಪಾದ ಅಜ್ಜನ ಶಾಲಿನಲ್ಲಿ ಇಂಗಿಹೋಗುತ್ತಿದೆ!
ಆದರೆ ಆ ವಾರ್ಡಿನಲ್ಲಿದ್ದ 15-20 ತಾಯಂದಿರ ತಾಯ್ತನದ ಒಂದೊಂದು ಕಥೆಯು ಹೊಸಬನಿಗೆ ನಿಜಕ್ಕೂ ಆಶ್ಚರ್ಯಕರವಾಗಿಯೇ ಇತ್ತು. ಈ ತಾಯಿಗೆ ಆರೋಗ್ಯವಂತ ಬಯಸಿದ ಮಗು; ಎಲ್ಲರಿಗೂ ಸಂತಸ, ಆ ತಾಯಿಗೆ ಅವಳೀ ಮಕ್ಕಳು; ಎರಡು ಖುಷಿ, ಮತ್ತೊಬ್ಬಳಿಗೆ ಮೊದಲ ಲಿಂಗದ ಮಗುವೇ ಹುಟ್ಟಿದೆ; ಪರವಾಗಿಲ್ಲ, ಇನ್ನೊಬ್ಬಳಿಗೆ ಇದು ಕೂಡ ಹೆಣ್ಣು; ಸಂತಸದಿಂದ ಬೇಸರ, ಆಕೆಯ ಮಗು ಹುಟ್ಟುವಾಗಲೇ ತೀರಿಕೊಂಡಿತ್ತು; ದುಃಖ-ದುಮ್ಮಾನದ ನರಕ, ಈಕಡೆಯ ಹೆಂಗಸಿಗೆ 16 ವರ್ಷದ ಬಳಿಕ ಮತ್ತೊಂದು ಮಗು; ನರ್ಸ್‍ಗಳ ಕೇಕೆ, ಅಲ್ಲೊಬ್ಬಳಿಗೆ ಮೊದಲೆರಡು ಮಗು ಸತ್ತಿದ್ದು ಇದೂ ಕೂಡ ಸತ್ತು ಹೋಗಿದೆ; ಮೊದಲವು ಹೆಣ್ಣುಗಳು-ಇದು ಗಂಡಾಗಿತ್ತು!, ಆ ಕಡೆಯಿಂದ ಮೂರನೇ ತಾಯಿಗೆ ಚೊಚ್ಚಲ ಹೆರಿಗೆ; ಮಗು 7 ತಿಂಗಳಿಗೆ ಹುಟ್ಟಿದ್ದರಿಂದ ಸಾವು ಬದುಕಿನ ನಡುವ ಹೋರಾಟ ಇಬ್ಬರಲ್ಲು, ಇಲ್ಲೊಬ್ಬ ತಂದೆ ಸಿಹಿ ಹಂಚುತ್ತಿದ್ದಾನೆ; ಬಯಸಿದಂತೆ ಹೆಣ್ಣು ಮಗುವಾಗಿದೆಯಂತೆ, ಅಯ್ಯೋ ಆಕಡೆಯಿಂದ ಗೋಳಿನ ಕೂಗು, ಹೆರಿಗೆಯಲ್ಲಿ ತಾಯಿ ಸತ್ತಳÀಂತೆ!! ಮಗು ಬದುಕಿದೆ.
ಒಂದು ಹೆರಿಗೆ ವಾರ್ಡಿನಲ್ಲಿಯೇ ಅನುಭವಿಸಬಹುದಾದ ಭಾವಗಳು ಹೆಚ್ಚು. ಅಮಾನವೀಯ ಘಟನೆಗಳು ಹೊರತಲ್ಲ. ಹೆಣ್ಣು ಹೆತ್ತಳೆಂದು ಬಳಿಯೇ ಬರದ ಗಂಡ. ಮಗು ಸತ್ತಿತೆಂದು ಜರಿದು ನೋಡುವ ಅತ್ತೆ, ಇದೂ ಹೆಣ್ಣಾಯಿತಲ್ಲ ಎಂದು ಬೇಸರ ಪಡುವ ಹೆತ್ತವಳ ತಾಯಿ. ಸಮಯಕ್ಕೆ ಸರಿಯಾಗಿ ತಮ್ಮ ಆರೈಕೆಯಿಲ್ಲದೆ, ತಾಯಿಯ ನಿಶ್ಯಕ್ತಿಯಿಂದ, ಇಬ್ಬರ ಜೀನ್‍ಗಳ ಹೊಂದಾಣಿಕೆಯಿಂದ, ಪರಿಸರದ ವೈಪರೀತ್ಯಗಳಿಂದ, ಅಜ್ಞಾನದಿಂದ, ಅಂಧಕಾರದಿಂದ, ಅವಿವೇಕದಿಂದ, ಆತುರದಿಂದ ಸಂಭವಿಸುವ ಅವಗಡಗಳಿಗೆ ಕೊನೆಗೆ ಆ ತಾಯಿಯನ್ನೇ ಕಾರಣೀಭೂತಳಾಗಿ ನಮ್ಮ ಸಮಾಜ ನಿಲ್ಲಿಸುತ್ತದೆ. ಎಲ್ಲರೂ ಯೋಚಿಸಬೇಕಲ್ಲವಾ, ಅಂದು ಮಗುಮಾತ್ರ ಹುಟ್ಟಲಿಲ್ಲ; ಅವಳೂ ಹುಟ್ಟಿದ್ದಾಳೆಂದು!!


No comments:
Post a Comment