ಸರ್ಕಾರಿ ಶಾಲೆಯ ನಮ್ಮ ಸಂಭ್ರಮಗಳು
ಪ್ರತಿ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೆಂದರೆ ಅಲ್ಲಿ ಐದಾರು ಕೊಠಡಿಗಳು ಲೆಕ್ಕಕ್ಕಿರುತ್ತವೆ. ನಮ್ಮ ಶಾಲೆಯಲ್ಲಿದ್ದ ಅಷ್ಟೇ ಕೊಠಡಿಗಳು ಒಂದಕ್ಕಿಂದ ಒಂದು ವಿಭಿನ್ನವಾಗೇ ಇದ್ದವು. ಒಂದು ಮಂಗಳೂರು ಹೆಂಚಿನದ್ದಾದರೆ ಮತ್ತೊಂದು ತಾರ್ಸಿ ಕಟ್ಟಡ. ಒಂದರಲ್ಲಿ ಮರದ ಸಲಕರಣೆಗಳಿಂದಲೇ ಹೆಂಚುಗಳನ್ನು ಹೊದಿಸಿದ್ದರೆ ಇನ್ನೊಂದರಲ್ಲಿ ಕಬ್ಬಿಣದ ಉಪಕರಣಗಳ ಮೇಲೆ ಹೆಂಚುಗಳನ್ನು ಹೊದಿಸಿದ್ದರು. ಶಾಲೆಗೆ ಗ್ರಾಮಸ್ಥರ ಅನ್ವಯಿಕೆ ಉತ್ತಮವಾಗೆ ಇದ್ದು ಶಾಲೆಯ ಯಾವೊಂದು ಕಾರ್ಯಕ್ರಮದಲ್ಲೂ ಹಳ್ಳಿಗರ ಆಗಮನ ಸಾಮಾನ್ಯವಾಗಿಯೇ ಇತ್ತು. ಅದರಲ್ಲಿಯೂ ಸ್ವಾತಂತ್ರ್ಯ ದಿನಾಚರಣೆ, ಶಾಲಾ ವಾರ್ಷಿಕೋತ್ಸವ, ಸಮುದಾಯದತ್ತ ಶಾಲೆಯಂತಹ ಕಾರ್ಯಕ್ರಮಗಳಲ್ಲಿ ಊರಮಂದಿಯ ಗೈರುಹಾಜರನ್ನು ನಾ ಕಂಡೇ ಇಲ್ಲ. ಆ ದಿನದ ದಿನಾಚರಣೆಯನ್ನು ಸರಳವಾಗಿ ವರ್ಣಿಸಿದರೆ:- ಆದಿನ ಬೆಳ್ಳಬೆಳಿಗ್ಗೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಕಾರಣ ಶಾಲಾ ಅಂಗಳದ ತುಂಬ ಬಿಳಿ ಬಟ್ಟೆ ತೊಟ್ಟು ಇಲ್ಲಿಂದಲ್ಲಿಗೆ, ಅಲ್ಲಿಂದಿಲ್ಲಿಗೆ ಓಡಾಡುವ ವಿದ್ಯಾರ್ಥಿಗಳದ್ದೆ ಕಾರುಬಾರು. ತರಗತಿಗಳ ಬೇಂಚುಗಳನ್ನು ಅಂಗಳದಲ್ಲಿ ಜೋಡಿಸಿ ವೇಧಿಕೆಯಾಗಿ ಮಾಡಿ ಊರಿನ ಮುಖ್ಯಸ್ಥರನ್ನು, ಶಿಕ್ಷಕರನ್ನು ಸೇರಿಸಿ ತಮ್ಮ ತಮ್ಮ ಮನೆಯ ಹೂಗಿಡಗಳಿಂದ ತಂದ ಹೂಮಾಲೆಯನ್ನು ಗಾಂಧೀಜಿ, ಅಂಬೆಡ್ಕರ್ ಫೋಟೋಕ್ಕೆ ಹಾರಹಾಕಿ, ಧ್ವಜ ಮೇಲೇರಿಸುವ ಮುನ್ನ ಅದರ ತುಂಬ ಬಿಡಿ ಹೂಗಳನ್ನು ತುಂಬಿ, ಬಂದ ಅತಿಥಿಗಳಿಂದ ಧ್ವಜಾರೋಹಣ ಮಾಡಿಸಿ, ಮೇಲೇ ಧ್ವಜ ತೆರೆದುಕೊಳ್ಳುತ್ತಿದ್ದಂತಯೇ ಹೂರಾಶಿಯ ಚೆಲ್ಲುವಿಕೆಯೊಂದಿಗೆ ಶಿಕ್ಷಕರ ಆಜ್ಞೆಯ ಮೇರೆಗೆ ರಾಷ್ಟ್ರಗೀತೆಯನ್ನು ‘ಜೈಭಾರತ ಜನನಿಯ ತನುಜಾತೆ, ಜಯಹೇ ರಸಋಷಿಗಳ ಬೀಡೆ’ ಎಂದು ರಾಗವಾಗಿ ಹಾಡಿ, ‘ಬೋಲೋ ಭಾರತ್ ಮಾತಾಕೀ’ ಎಂದು ಗುರುಗಳು ಕೂಗಿದಾಗ ಒಮ್ಮೆಲೇ ‘ಜೈ’ ಎನ್ನುವ ಉದ್ಘಾರ ನಮ್ಮೆಲ್ಲರಿಂದ ಒಮ್ಮೆಲೆ ಮೊಳಗಿ ಒಂದು ಕ್ಷಣ ಶಾಂತವಾಗುತ್ತಿದ್ದ ಸಭೆಯ ಸುಯೋಗ ನಮಗೆ ಹೆಚ್ಚು ಬಾರಿ ಲಭಿಸಿದೆ. ತದನಂತರ ಕಾರ್ಯಕ್ರಮವನ್ನು ಕುರಿತು ಹಿರಿಯರು, ಗ್ರಾಮಸ್ಥರು, ಶಿಕ್ಷಕರು ಭಾಷಣ ಮಾಡಿ ಸಾಕಿನ್ನು ಭಾಷಣವೆನ್ನುವ ಹೊತ್ತಿಗೆ ಸಾಂಸ್ಕøತಿಕ ಕಾರ್ಯಕ್ರಮ ಪ್ರಾರಂಭ. ಅದಕ್ಕೆಂದೇ ಯಾವುದೋ ರಂಗುರಂಗಿನ ವೇಧಿಕೆ, ಅಗಾಧ ಸಲಕರಣೆಯ ತಂಟೆಗಳಿಲ್ಲದೆ ತೀರ ಸರಳವಾಗಿ ಸ್ವಚ್ಛವಾಗಿ ಸಭಿಕರ ಮುಂದಿನ ಅಂಗಳದಲ್ಲಿಯೇ ಒಂದು ಗುಂಪು ಹಾಡಿದರೆ ಇನ್ನೊಂದು ಗುಂಪು ನೃತ್ಯದಲ್ಲಿ ಭಾಗಿಯಾಗುತ್ತಿತ್ತು.
ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಕದಲಿರ ಉತ್ತುಂಗದ ನಿಲುಕಿನಲ್ಲಿ, ನಿತ್ಯ ಹರಿ ಧ್ವರ್ಣ ವನದ ತೇಗ ಗಂಧ ತರುಗಳಲ್ಲಿ, ನಿತ್ಯೋತ್ಸವ ತಾಯಿ ನಿತ್ಯೋತ್ಸವ, ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ,,
ಹಾಡಿಗೆ ವಿದ್ಯಾರ್ಥಿನಿಯರಿಂದ ನೃತ್ಯ ಜರುಗಿ ಎಲ್ಲರನ್ನು ಒಂದಷ್ಟು ಹೊತ್ತು ತಲ್ಲೀನರಾಗಿ ಆಲಿಸುವಂತೆ ಮಾಡುತ್ತಿದ್ದ ಆ ಕಾರ್ಯಕ್ರಮದ ಮುಂದೆ ಇಂದಿನ ಯಾವ ಡಿಜೆ ಆರ್ಭಟ ಕೂಡ ನಮಗೆ ಮುದ ನೀಡದು. ನಮ್ಮ ನಾಡು ನುಡಿ, ಸಂಸ್ಕøತಿ, ಮಾತೃಭಾಷೆಯನ್ನು ಸರ್ಕಾರಿ ಶಾಲೆಗಳು ಈಗಲೂ ಹಾಗೆಯೇ ಕಾಪಾಡಿಕೊಂಡು ಹೋಗುತ್ತಿವೆ. ಕೆಲವೊಂದು ಲೋಪಗಳು ಇರಬಹುದು(ಇವೆ), ಆದರೆ ನನಗನ್ನಿಸುವಂತೆ ಕನ್ನಡಕ್ಕೆ ಅಲ್ಲಿ ಬಡತನವಿಲ್ಲ. ಖಾಸಗಿ ಶಾಲೆಗಳಲ್ಲಿ ಕನ್ನಡ ಇಲ್ಲ ಎಂದು ನಾ ಹೇಳುತ್ತಿಲ್ಲ. ಆದರೆ ಅಲ್ಲಿ ಜರುಗುತ್ತಿರುವ ದುರಂತಗಳನ್ನು ಕನ್ನಡ ಶಾಲೆಯೊಂದಿಗೆ ಹೋಲಿಕೆ ಮಾಡಿದರೆ:- ಸರ್ಕಾರಿ ಶಾಲೆಯ ಸ್ವಾತಂತ್ರ್ಯ ದಿನಾಚರಣೆಯ ‘ಪೆಪ್ಪರುಮೆಂಟು’ ಖಾಸಗೀ ಶಾಲೆಯಲ್ಲಿ ಚಾಕೊಲೆಟ್ ಆಗಿದೆ, ಅಲ್ಲಿನ ‘ಭಾವುಟ’ ಇಲ್ಲಿ ಫ್ಲ್ಯಾಗ್ ಆಗಿದೆ, ಅಲ್ಲಿನ ‘ಮಾಸ್ಟ್ರು(ಮೇಸ್ಟ್ರು)’ ಇಲ್ಲಿ ಸರ್ ಆಗಿದ್ದಾರೆ, ನಿಮ್ಮಪ್ಪನನ್ನು ಕರೆದುಕೊಂಡು ಬಾ ಅಂತ ಮೇಸ್ಟ್ರು ಹೇಳಿದರೆ ಪೇರೆಂಟ್ಸ್ ಅನ್ನು ಕರೆದುಕೊಂಡು ಬಾ ಅಂತ ‘ಸರ್’ ಹೇಳುತ್ತಾರೆ, ಮಕ್ಕಳ ದಿನಾಚರಣೆಗೆ ಊರ ಪಕ್ಕದ ಬೆಟ್ಟಕ್ಕೋ, ದೇವಸ್ಥಾನಕ್ಕೋ ಸರ್ಕಾರಿ ಶಾಲೆಯ ಗುರುಗಳು ವಿದ್ಯಾರ್ಥಿಗಳನ್ನು ಕರೆದೊಯ್ದರೆ ಚಿಲ್ದ್ರನ್ಸ್ ಡೇಗೆ ಖಾಸಗೀ ಶಾಲೆಯ ಟೀಚರ್ಸ್ ಸ್ಟುಡೆಂಟ್ಸ್ಗಳನ್ನು ಜಿ ಆರ್ ಎಸ್ ನಲ್ಲಿ ಈಜಲೋ ಮಲ್ಟಿಫ್ಲೆಕ್ಸ್ನಲ್ಲಿ ಯಾವುದೋ ಭಾಷೆಯ ಸಿನಿಮಾ ನೋಡಲೋ ಕರೆದೊಯ್ಯುತ್ತಾರೆ. ಹೀಗಾಗಿ ಕನ್ನಡ ಉಳಿಯುತ್ತಿರೋದು ಹಳ್ಳಿಗಳಿಂದ, ಸರ್ಕಾರಿ ಶಾಲೆಗಳಿಂದ. ಕನ್ನಡ ನಾಶವಾಗುತ್ತಿರೋದು ಖಾಸಗೀ ಶಾಲೆಯ ಪಾಶ್ಚಾತ್ಯ ನೀತಿಯನ್ವಯದಿಂದ ಮತ್ತು ನಗರದಲ್ಲಿ ಹೆಚ್ಚಾಗುತ್ತಿರುವ ವಿದೇಶಿ ವ್ಯಾಮೋಹ ಹಾಗೂ ಅನ್ಯನಾಡಿನವರ ಅತಿಯಾದ ಆಗಮನದಿಂದ, ಇಲ್ಲೇ ನೆಲೆಯೂರುತ್ತಿರೋದರಿಂದ!
ಯಾವುದೇ ನಿಗಧಿತ ಸಮಯಕ್ಕೆ ತರಗತಿಗಳು ಸೀಮಿತವಾಗಿರದೆ ಕೆಲವೊಮ್ಮೆ ಬೆಳಗ್ಗೆ ಬಂದ ‘ಮಾಸ್ಟ್ರು’ ಮಧ್ಯಾಹ್ನಕ್ಕೇ ಹೋಗುತ್ತಿದ್ದರು. ಮೊದಲು ‘ಕಡ್ಡಿಬಳಪ’ದಿಂದ ಪ್ರಾರಂಭಿಸಿದ ಬರಹ ನಂತರ ‘ಸೀಮೇಸುಣ್ಣ’ಕ್ಕೆ ತೇರ್ಗಡೆಯನ್ನು ಹೊಂದಿತು. ಸ್ಲೇಟು ಅಕ್ಷರಾಭ್ಯಾಸಕ್ಕೂ ವೈರಿಯೊಂದಿಗಿನ ಗುದ್ದಾಟಕ್ಕೂ ಉಪಯುಕ್ತವಾಗಿತ್ತು. ಶಾಲೆಯ ಎದುರಿಗಿದ್ದ ‘ತೋಪಮ್ಮನ ಅಂಗಡಿ’ಯಲ್ಲಿ ಅದೆಷ್ಟು ಪೆನ್ನುಗಳನ್ನು ಕೊಂಡೆನೋ, ಲೆಕ್ಕ ಸಿಗದು. ಅಪ್ಪನ ಬಿಳಿ ಅಂಗಿಯ ಜೇಬಿನಲ್ಲಿ ಯಾವಾಗಲೂ ಇರುತ್ತಿದ್ದ ರೆಯ್ನೊಲ್ಡ್ಸ್ ಬಿಳಿಯ ಪೆನ್ನು ಮತ್ತು ಅದಕ್ಕೆ ನೀಲಿ ‘ಕ್ಯಾಪು’ ನಮ್ಮತ್ತಿರವಿದ್ದರೆ ನಮಗೊಂದು ಹಿರಿಮೆ ಬರುತ್ತಿತ್ತು. ಅಪ್ಪನೇ ನನಗೊಂದು ರೆಯ್ನೊಲ್ಡ್ಸ್ ಪೆನ್ನನ್ನು ಕೊಟ್ಟಾಗ ಆ ಒಂದು ಪೆನ್ನಿಗೆ ಅದೆಷ್ಟು ‘ರೀಫಿಲ್’ ಬದಲಾದವೋ! ಖಾಲಿ ಪೆನ್ನಿಗೆ ಮಾತ್ರ ನನ್ನ ಬಳಿ ಆಯಸ್ಸು ಅಧಿಕವಾಗೇ ಇರುತ್ತಿತ್ತು. ರೀಫಿಲ್ ಮಾತ್ರ ಬೇಗ ಬೇಗ ಸಾಯುತ್ತಿತ್ತು. ಇಂಕ್ ಲೀಕಾಗುವುದು ಸರ್ವೇ ಸಾಮಾನ್ಯವಾಗಿತ್ತು.
ಊರು ನಾಗರೀಕತೆಯತ್ತ ಸಾಗುತ್ತಿದೆ ಎಂದು ನಮ್ಮ ಸಮಾಜ ಪರಿಗಣಿಸುವುದು ಆ ಊರಿನ ಮರಗಿಡಗಳನ್ನು ಕಡಿದು ಮನೆಮಹಡಿಗಳು ಏಳುತ್ತಿದ್ದರೆ ಮಾತ್ರ ಎನಿಸುತ್ತದೆ. ಅದು ಯಾವ ತರಹದ ನಾಗರೀಕತೆಯೋ, ಪ್ರಗತಿಯೋ, ಪಲ್ಲಟವೋ ನಾ ತಿಳಿಯೆ. ಮನೆ-ಶಾಲೆ ಬಿಟ್ಟರೆ ನಂತರ ಹಸಿರೇ ನಮ್ಮನ್ನು ಸಲಹಿದ್ದು. ಶಾಲೆಯಲ್ಲಿಯೂ ಅಂತಹದ್ದೇ ಹಸಿರ ವಾತಾವರಣವನ್ನು ಗುರುಗಳಾದ ಎ ಎನ್ ಸತೀಶ್ ಮಾಸ್ಟ್ರು ನಮ್ಮಿಂದಲೇ ಸರಿಯಾಗಿ ನಿಭಾಯಿಸುತ್ತಿದ್ದರು. ಕೈತೋಟದ ನಿರ್ವಹಣೆಯಲ್ಲಿ ಅವರು ಬಹಳ ನಿಸ್ಸೀಮರು. ಹೊಸ ಹೊಸ ತಳಿಯ ಹೂ ಗಿಡಗಳು ಶಾಲೆಗೆ ಬಂದವು, ತಿಂಗಳುಗಳಲ್ಲಿಯೇ ಶಾಲಾ ವಾತಾವರಣವನ್ನು ರಂಗಲ್ಲಿ ಮಿಂದಿರುವಂತೆ ಮಾಡಿದವು, ಹಾಗೆ ಕಮರಿ ಹೋದವು. ಆದರೆ ಬಾಳೆ, ತೆಂಗು ಹಾಗೂ ತೇಗದ ಸಸಿಗಳು ನಮ್ಮ ವ್ಯಾಸಾಂಗದ ಅವಧಿಯಲ್ಲಿ ನಮ್ಮಿಂದ ನೀರುಂಡವು, ಗೊಬ್ಬರ ತಿಂದವು, ಕಣ್ಣಿಗೆ ಗೊತ್ತಾಗುವಂತೆ ಬೆಳೆದವು. ಒಂದೊಂದು ಸಸಿಯು ಜಾಗರೂಕವಾಗಿ ಬೆಳೆಯಲು ಮತ್ತೊಂದು ಮುಖ್ಯ ಕಾರಣವೆಂದರೆ ನಮ್ಮ ನಮ್ಮ ಹೆಸರಿಗೆ ಒಂದೊಂದು ಸಸಿಯನ್ನು ಬರೆಯಲಾಗಿತ್ತು. ಈ ಸಸಿ ಚಂದ್ರಂದು, ಈ ಸಸಿ ಸತೀಶಂದು, ಇದು ಚನ್ನಪ್ಪನದು, ಆ ಮೂಲೆ ಬಾಳೆಗಿಡ ರವಿಯದ್ದು ಹೀಗೆ ಒಬ್ಬೊಬ್ಬರಿಗೆ ‘ವಹಿಸಿ’ದ್ದರಿಂದ ಅವಕ್ಕೆ ನಮ್ಮ ಸೇವೆ ವಿಪರೀತವಾಗಿಯೇ ಇತ್ತು. ಕೆಲವೊಮ್ಮೆ ನಮ್ಮ ಅತಿರೇಖ ಸೇವೆಯಿಂದ ಕೆಲವೊಂದು ಗಿಡ ಅತಿಯಾದ ನೀರಿನಿಂದ ಕೊಳೆತೂ ಹೋದವು. ಹಳ್ಳಿ ಎಂದ ಮೇಲೆ ಜೈವಿಕ ಗೊಬ್ಬರಕ್ಕೆಲ್ಲಿ ವಿಳಂಬ? ಹೀಗೆ ರಸವತ್ತಾಗಿ ಬೆಳೆಯುತ್ತಿದ್ದ ಸಸಿಗಳು ಇಂದು ಮರವಾಗಿ ಬಲಿತು, ನೆನಪಲ್ಲಿ ಸಸಿಯೇ ಆಗುತ್ತವೆ. ಪ್ರತಿಯೊಬ್ಬ ವ್ಯಕ್ತಿಯ ಮೊದಲ ಶಾಲಾ ಗುರುಗಳು ಸ್ಮøತಿಯಿಂದ ಸರಿಯುವ ಮಾತೇ ಇರುವುದಿಲ್ಲ ಬಿಡಿ. ಹೀಗೆ ಇಂದಿಗೂ ಮಾರ್ಗದರ್ಶಕರಾಗಿರುವ ಪ್ರಾಥಮಿಕ ಗುರುಗಳನ್ನು ನೆನೆದರೆ ಟಿ.ಲೋಕೇಶ್, ಎ.ಎನ್ ಸತೀಶ್, ಜೆ.ಮಹಾದೇವ್, ಡಿ.ರಮೇಶ್, ದಿ||ರಾಮಯ್ಯ ನಮ್ಮನ್ನು ಕಲಿಕೆಯ ಹಳಿಯ ಮೇಲೆ ತಂದು ನಿಲ್ಲಿಸಿ ‘ಇನ್ನು ನೀವು ಸಾಗಿ’ ಎಂದು ತಿಳಿಸಿ ಮತ್ತಷ್ಟು ಮಗದಷ್ಟು ತೊದಲುಗಳನ್ನು ತಿದ್ದುವ ಕಾಯಕದಲ್ಲಿ ತಲ್ಲೀನರಾಗಿದ್ದಾರೆ. ಈ ಮೂಲಕ ಸರ್ವ ಗುರುವೃಂದಕ್ಕೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.



No comments:
Post a Comment