Friday 10 March 2017

ಇನ್ನೆರೆಡೇ ಹೆಜ್ಜೆ ----- ಚಂದ್ರು ಎಂ ಹುಣಸೂರು

ಇನ್ನೆರೆಡೇ ಹೆಜ್ಜೆ

ಐತ್ವಾರದಲ್ಲಿ ಮೊಮ್ಮಗ ಶಾಲೆಯ ಚಡ್ಡಿಗೆ
ಹೊಸದೊಂದು ಅಂಗಿತೊಟ್ಟು ತಾತನೊಂದಿಗೆ ಸಿದ್ಧನಾದ
ಇಡೀ ಊರಿಗೆ ಊರೇ ಸಂಭ್ರಮದಿಂದ ನಡೆದಿದೆ
ಊರಿಂದ ಆಚೆ ನಾಲ್ಕೂರ ನಡುವಿನ ಜಾತ್ರೆಗೆ,,

ಹೋಗೋಣ ತಾತ ಎಂದು ಪದೆ ಪದೆ
ಕರೆವ ಕಂದ, ತಾತ ಪಂಚೆಗೆ ಬಿಳಿಷರ್ಟು,
ಬಿಳಿ ಮೀಸೆಯ ತಿರುಗುವಾಗ ಚರ್ಮಸುಕ್ಕು
ತಲೆ ಬೋಳಾಗಿ ಪೂರ್ತಿ ಅನುಭವವೇ ಹೊಕ್ಕು
ಮೊನ್ನೆ ಮೊನ್ನೆ ಬಿದ್ದ ಮಳೆಗೆ ಭೂಮಿ ಹಸುರು
ಬೇಧ, ಬಾವವಿಲ್ಲದ ಸಡಗರ ಕೂಟಕ್ಕೆ ಜಾತ್ರೆ ಹೆಸರು,,

ಬೊಮ್ಮಣ್ಣನ ಮನೆಯವರೆಲ್ಲ ಎತ್ತಿನಗಾಡಿಯಲ್ಲೇ
ಟ್ರಾಕ್ಟರಿನ ಟ್ರಾಲಿಯಲ್ಲಿ ಹೊಂಬಶೆಟ್ರ ಕುಟುಂಬ
ಹೀಗೆ ಕುಟುಂಬ ಸಮೇತರಾಗಿ ಕೂಡಿಕೊಳ್ಳಲು ಆತುರ
ಐಕಳ ಬೈಸಿಕಲ್ಲಿನ ಒಂದು ಗುಂಪು ಟ್ರಿಣ್ ಟ್ರಿಣ್ ಟ್ರಿಣ್,
ಸಂಗಡ ಕೂಡಿಕೊಂಡ ಐದಾರು ಮುದುಕರ ಅನುಭವ ನಡೆ
ಹೆಂಗಸರ ನಗುಮೊಗದ ಚಟಪಟ ಮಾತು,,
ಏನು ಸಂಭ್ರಮ, ಏನು ಸಡಗರ

ಕಿರುಬೆರಳ ಹಿಡಿದೊರಟ ಪುಟ್ಟ ಪುಟ್ಟ ಪಾದ
ಸ್ವಲ್ಪ ದೂರ ಊರ ಹಾದಿಯ ಮೇಲೆ, ತಾತನ ಹೆಗಲ ಮೇಲೆ
ಜಾತ್ರೆ ಸವಿಯಲು ಪುಟ್ಟುವಿನ ಕುತೂಹಲ
ಸಿಕ್ತತಾತ ಜಾತ್ರೆ, ಇನ್ನು ಎಲ್ಲಿ ಎನ್ನುವಾಗ
ತಾತನ ತಿಳುವಳಿಕೆಇನ್ನೆರೆಡೇ ಹೆಜ್ಜೆ

ಆಸುಪಾಸಿನಲ್ಲಿ ಊರಮಂದಿಯ ಜೊತೆ
ಹರಟಿ ಹಟರಿ ಕಂಡೇ ಕಂಡಿತು ಜಾತ್ರೆ
ಸಾರ್ಥಕ ಊರಿನ ಕಲರವ ಯಾತ್ರೆ
ಪಿ ಪಿ, ಡುಂ ಡುಂ ನಾದ, ಜನಸಂದಣಿ ಇಲ್ಲಿಂದಲೇ
ಮನೆ ಹಿತ್ತಲ ಕೆಂಜಿರುವೆ ಗುಂಪಿನಂತೆ
ನಾವು ಸೇರೋಣ ಬಾರ ನಮಗ್ಯಾಕೆ ಸಲ್ಲದ ಚಿಂತೆ,,

ಹೊಕ್ಕೆವಪ್ಪ ಹೊಕ್ಕೆವು ಸಂಭ್ರಮದ ಗೂಡಿಗೆ
ವರ್ಷಕ್ಕೊಮ್ಮೆ ಜರುಗುವ ಹಳ್ಳಿ ಹಳ್ಳಿ ಜಾತ್ರೆಗೆ
ಹೊರಟ ಮಜ್ಜನ, ಬಿಳಿಯ ಬಸವ, ದೇವನಡಿಗೆ
ತಾತನ ಹೆಗಲೇರಿ ಪುಳಕ ಮಗುವಿನ ಮನಕೆ
ಕಂಡು ಕಂಡು ಮಾಗಿರುವ ಇತಿಹಾಸದ ಹೆಗಲ ಮೇಲೆ
ಕುತೂಹಲವೆಂಬ ಮಗುವಿನ ಭವಿಷ್ಯತ್ತಿನ ನೋಟ,,

ಜಾತ್ರೆ ಕಾರು, ಜಾತ್ರೆ ವಾಚು, ಸಿಂಗಾರದ ತೇರು
ಬಣ್ಣ ಬಣ್ಣದ ಷರಬತ್ತಿಗೆ ಸ್ಟ್ರಾನೆ ನಾಗರೀಕತೆಯ ಬೇರು
ಪುರಿ ಗೋಪುರ, ಮೈಸೂರು ಪಾಕು, ಜಿಲೇಬಿ ಗೆಳೆಯ
ಜಾತ್ರೆ ತುಂಬ ಜವನದ ಕಂಪು
ಗದ್ದಲ ಪದವಿಲ್ಲದೆ ಚರಣಕೆ ಇಂಪು
ಸಂಜೆಯ ಹೊತ್ತಿಗೆ ತಾತಗೆ ಸಾಕಾಯ್ತು ಜಾತ್ರೆ
ಕುತೂಹಲವಳಿಯದ ಕಂದಗೆ ಬೇಡವಿತ್ತು ಮನೆಯ ಚಿಂತೆ,,

ಕೊಂಡು ಕೊಂಡ ಪೊಟ್ಟಣಗಳ ಹಿಡಿಹಿಡಿದ ಸಾಲೆ
ಜಾತ್ರೆ ಮುಗಿದದ್ದು ಸಂಭ್ರಮ, ಮತ್ತೆ ಬರುವುದು ವರ್ಷದ ನಾಳೆ
ಮುಗಿದ ಚಂಚಲ, ಸ್ವರ್ಗದ ಹಂಬಲ, ಐಕ್ಯತೆ ಬೆಂಬಲ
ಮತ್ತೆ ಮತ್ತೆ ಬರೋಣು ಬಾರಾ
ಎಳೆಯಲು ಇಂದು ನಿಂತ ಸಂಭ್ರಮದ ತೇರ,,



No comments:

Post a Comment