Friday 10 March 2017

ಟಿಪ್ಪು ಎಕ್ಸ್‍ಪ್ರೆಸ್ ---- ಚಂದ್ರು ಎಂ ಹುಣಸೂರು

ಟಿಪ್ಪು ಎಕ್ಸ್ಪ್ರೆಸ್

ವಲಸೇ ಹೋಗುವವರನ್ನು ನೋಡಿದ್ದೆ
ಥೇಟ್ ನನ್ನ ಸ್ಥಿತಿ ಇಂದು ಹಾಗೆಯೇ
ಲಗೇಜು ಏರಿಸಿಕೊಂಡು ಬೆಂದಕಾಳೂರತ್ತ
ಬದುಕು ಶುರುವಾಯಿತ್ತಪ್ಪ ಎಂದು ಹೆತ್ತವರ ಬಿಟ್ಟು

ಮೈಸೂರಿನಿಂದ ಹೊರಡಲಿರುವ ಟಿಪ್ಪು
ಎಕ್ಸ್ಪ್ರೆಸ್ ಗಾಡಿಯೂ,,ಶಬ್ಧ ಕೇಳುತ್ತಿದ್ದಂತೆಯೇ ನಿಂತೆ
ಕತ್ತಲ ಕನಸಿನಿಂದ ಮನಸ್ಸು ಚಂಚಲ
ಹಿಡಿದ ಬ್ಯಾಗೂ ತುಂಬಾ ಬಾರ
ಮೊದಮೊದಲು ಬೆಂಗಳೂರು ತುಂಬಾ ದೂರ,,

ಸಮಯಕ್ಕೆ ಟಿಪ್ಪು ಎಕ್ಸ್ಪ್ರೆಸ್ಸೆ ಇರೋದು
ಹತ್ತಿಹೊರಡು ಎಂದಿದ್ದ ಕರೆಯಲ್ಲೇ ಶ್ರೀಧರ್ ಅಣ್ಣ
ಅಲ್ಲ ಟಿಪ್ಪು ಐದನೇ ತರಗತಿ ಪಾಠದಲ್ಲಿ ಬಂದಿದ್ದ
ಈಗ ಇಡೀ ಟ್ರೇನಿಗೆ ಅವನ ಹೆಸರು
ಇತಿಹಾಸದಲ್ಲಿ ಅಲ್ಪವಾಗಿದ್ದವ ವಾಸ್ತವದಲ್ಲಿ ಬೃಹತ್ತಿಗನಾದ
ಒಂದೇ ಪುಟದಲ್ಲಿ ಮಿಂಚಿಹೋಗಿದ್ದ, ಹದಿನೆಂಟು ಭೋಗಿಗಳ
ಮುಂದಾಳತ್ವ ಅವನ ಹೆಸರಲ್ಲಿದೆ, ಅಬ್ಬಬ್ಬಾ ಮೈಸೂರು ಹುಲಿ,,

ಕಿಟಕಿಯಂಚಿನ ಬಾಳು, ನೋಡುವ ದೃಷ್ಟಿ
ಎಷ್ಟು ತರಹದ ಬದುಕನ್ನು ನೀಡುತ್ತದೆ,
ಪಕ್ಕದಲ್ಲಿ ಮುಸ್ಲೀಂ ಆಚಿಟಿ ಸೀಟು ಕೇಳಿದರು
ಎದುರು ತಾತ ಪ್ರಜಾವಾಣಿ ಮುಕ್ಕುತ್ತಿದ್ದಾನೆ
ನಿಂತಿರುವ ತಾಯಿಯ ಮಗು ನನ್ನನ್ನೇ ದಿಟ್ಟಿಸುತ್ತಿದೆ
ಮೇಲೆ ಮಲಗಿರುವವನಿಂದ ಒಂದು ರೂಪಾಯಿ ಬಿತ್ತು,

ಟಾಯ್ಲೇಟ್ ಸಮೀಪ ಸೀಟು ದುರ್ಗಂಧ
ಮಾರುವ ಮಲ್ಲಿಗೆ ಘಮ್ ಎನ್ನುವುದರಲ್ಲಿ ಮಾಯ
ಹಲಸಿನ ತೊಳೆಯ ಪುಟ್ಟ ಹುಡುಗ
ಇಡ್ಲಿ, ದೋಸೆ, ರೈಸ್ ಬಾತ್ಗಳ ಜೈಕಾರ
ಬಿಸಿಬಿಸಿ ಮದ್ದೂರು ವಡೆ, ಟೀ ಚಾಯ್,,
ಅಲ್ಲಲ್ಲಿ ಕಾಣಸಿಗುವ ನಿಲ್ದಾಣವಿಲ್ಲದ ಹಳ್ಳಿಗಳು
ಅಯ್ಯಯ್ಯೋ ನಾನು ಇಳಿಯೋದು ಇಲ್ಲೇ ಆಗಬಾರದಿತ್ತೇ,,

ಸೀದಾ ಬಂದು ನಿಂತೆ ಬೆಂಗಳೂರಿಗೆ
ಎಲ್ಲವೂ ಸಾಮಾನ್ಯವಾಗಿರುವ ಕಾಮನ್ಸೆನ್ಸ್ ಬೀಡಿಗೆ
ಟ್ರಾಫಿಕ್ನಲ್ಲೇ ಜೀವಮಾನ ಕಳೆವ ಅಪರೂಪದ ಹಾದಿಗೆ
ನನ್ನದೇ ದಾರಿಯಾಗುವ ಏಕಾಂಗಿ ಸ್ವರ್ಗಕೆ
ಟಿಪ್ಪು ಎಕ್ಸ್ಪ್ರೆಸ್ ಮತ್ತೆ ಮೂರುಗಂಟೆಗಿದೆ, ಇಲ್ಲೆ ಇದ್ದು
ಮತ್ತೆ ಮನೆಕಡೆ ಟಿಕೇಟ್ ಪಡೆಯಲೇ,,


No comments:

Post a Comment