Monday 17 April 2017

ಸಾಬರ ತೋಟದ ರಾತ್ರಿಯಲ್ಲಿ-- ಚಂದ್ರು ಎಂ ಹುಣಸೂರು

ಸಾಬರ ತೋಟದ ರಾತ್ರಿಯಲ್ಲಿ



ಒಳಗಡೆ ತುಂಬಿದ್ದ ತೆಂಗಿನ ಕಾಯಿಗಳು ಒಂದೊಂದಾಗಿ ಖಾಲಿಯಾಗುತ್ತಿದುದು ಜುಲ್ಪಾಕರ್ ಸಾಬರಿಗೆ ಯಾರು ಹೇಳದೆಯೇ ಗೊತ್ತಾಗುತ್ತಿತ್ತು. ಅರ್ಜೆಂಟರ್ಜೆಂಟಾಗಿ ತೋಟದಲ್ಲಿ ಬಿದ್ದ ಕಾಯಿಗಳನ್ನು ಅಲ್ಲೆ ಇದ್ದ ಪಾಳು ಮನೆಯಲ್ಲಿ ಎಸೆಯುವಾಗ ಒಂದಾರು ತಿಂಗಳಿಂದ ಜೀತವೋ, ಕೂಲಿಯೋ, ಗುತ್ತಿಗೆಯೋ ಎಂಬ ಯಾವೊಂದು ಒಪ್ಪಂದಕ್ಕು ಸೇರದ ಹಾಗೆ ಕೆಲಸ ಮಾಡಿಕೊಂಡಿದ್ದ ಕೆಂಗಾಲುವಿಗೆ ಹೇಳಿ ಹೋಗುತ್ತಿದ್ದದು ಪ್ರಯೋಜನವಾಗಿರಲಿಲ್ಲ. ಅಕ್ಕಪಕ್ಕದವರೆಲ್ಲ ಹೋದಮ್ಯಾಲೆ ಹೊರಡೋ, ಕಳ್ಳ ಬಡ್ಡಿ ಮಕ್ಕಳಿಗೆ ಸಿಕ್ಕಾಕೊಂಡ್ರೆ ನಾನ್ಯಾರು ಅಂತ ತೋರಿಸ್ತೀನಿ, ಕಳ್ಳ ನನ್ನ ಮಗ ಯಾರು ಅಂತ ಗೊತ್ತು! ಉದ್ದಾರ ಆಗೋದಿಲ್ಲ ಕಚಡಾಗಳು ಎಂದು ಗುನುಗಿ ಕೊಸರಿಕೊಂಡು ಸೆಕೆಂಡ್ ಹ್ಯಾಂಡ್ ವಿಕ್ಟರ್ ಬೈಕಿನಲ್ಲಿ ಜುಲ್ಪಾಕರ್ ಸಾಬರು ಹೊರಡೋದು ಮಾತ್ರ ಕೆಂಗಾಲುವಿಗೆ ತೀರಾ ಸಾಮಾನ್ಯವಾದ ಒಂಚೂರಾದರೂ ಗಮನಕೊಡಬೇಕೆನಿಸದ ಪ್ರಸಂಗವಾಗಿತ್ತು. ಜುಲ್ಪಾಕರ್ ಆ ಕಡೆ ಹೋದ ಕೂಡಲೆ ಕೆಂಗಾಲು ಇತ್ತ ಹಳ್ಳ ಬಿದ್ದು ಇದ್ದ ಒಂದೇ ಒಂದು ಜರ್ಸಿ ಹಸುವನ್ನು ಹಿಡಿದುಕೊಂಡು ಬಿಲ್ಜಾಲ (ನೀರು ಹೆಚ್ಚಾಗಿರುವ ಮೈಸೂರಿನ ವಲಯಗಳಲ್ಲಿ ಕಾಣಸಿಗುವ ಒಂದು ಮುಳ್ಳಿನ ಜಾತಿಯ ಮರ)  ಮರದ ಚಿಕ್ಕ ಕಾಡಿನ ಕಿರುದಾರಿಯಲ್ಲಿ ಸಾಗಿ ಮನೆಯ ಹಿಂಬದಿಯ ಕೊಟ್ಟಿಗೆಗೆ ಬಿಗಿದು ನೀಲವ್ವನ ಹೆಸರಿಲ್ಲದ ಬರಕ್ಲಿ ಸಿಗರೇಟು ಪ್ಯಾಕ್ ಜಾಹೀರಾತು ನೇತಾಡುವ ಟೀ ಅಂಗಡಿಗೆ ಹೊತ್ತು ಮುಳುಗುವುದರೊಳಗೆ ಹಾಜರಾಗಿಬಿಡುತ್ತಿದ್ದ. ಬಜ್ಜಿ, ಬೋಂಡಾ, ಮಕ್ಕಳ ಬಿಸ್ಕತ್ತು, ಸಿಗರೇಟು, ಹರಟೆ, ಊರಿನ ಲೆಕ್ಕವಿಲ್ಲದಷ್ಟು ಉಸಾಬರಿ ಮಾತು, ಬೀಡಿಯ ಹೊಗೆ, ಗೊರ್ ಎನ್ನುವ ಸೀಮೆಎಣ್ಣೆ ಸ್ಟೌನ ಸೌಂಡು, ತೆಂಗಿನ ಗರಿಯ ಮೇಲೊದಿಕೆಯಿಂದ ಹಾದು ಬಂದ ಬಿಸಿಲು ಕೋಲು, ನೊಣ ಮುತ್ತಿರುತ್ತಿದ್ದ ಟೀ ಕುಡಿದ ಲೋಟಗಳು, ಚೆಲ್ಲಿರುವ ನೀರು, ಮಂಡಿ ಕಾಣುವಂತೆ ಸೀರೆ ಎತ್ತಿಕಟ್ಟಿದ್ದ ನೀಲವ್ವ ಇತ್ಯಾದಿ ಇತ್ಯಾದಿಗಳಿಗೆ ಆ ಅನಾಮದೇಯ ಟೀ ಅಂಗಡಿ ಫೇಮಸ್ಸು.

ಈ ಸುಂಟಿಕೊಪ್ಪದ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು ಒಂದು ಹಂತಕ್ಕೆ ಆರಾಮು ಜೀವನ ನಡೆಸುತ್ತಿದ್ದ ಕೆಂಗಾಲು ಅಲ್ಲೇನು ಅವಾಂತರ ಮಾಡಿಕೊಂಡನೋ ಏನೋ ಏಕಾಏಕಿ ಕೆಲಸ ಬಿಟ್ಟು ಹುಣಸೂರಿನ ಕಟ್ಟೆಮಳಲವಾಡಿಯ ಜುಲ್ಪಾಕರ್ ಸಾಬರ ತೋಟ, ಗದ್ದೆಯ ಜೊತೆಗೆ ಮನೆಯ ಕೆಲಸ ಮಾಡಿಕೊಂಡಿರಲು ಅದು ಹೇಗೆ ಸೇರಿಕೊಂಡನೋ ಭಗವಂತನಿಗೆ ಗೊತ್ತು. ಹೇಳಬೇಕೆಂದರೆ ಸುಂಟಿಕೊಪ್ಪದ ಕಾಫಿ ತೋಟದ ಕಗ್ಗತ್ತಲಲ್ಲಿ ಕುಳಿತು ಪಿಳಪಿಳ ಕಂಗಳಿಂದ ಗೋಚರಿಸುತ್ತಿದ್ದ ನಾಗರಹಾವು, ಕೇರೆ ಹಾವು, ಮಂಡಲದಾವು, ಮರಿಹಾವುಗಳ ಸಹವಾಸದಿಂದ ಬಚಾವಾಗಿದ್ದ. ಯಾವಾಗಲೂ ನಸುಗತ್ತಲೆ ಆವರಿಸುತ್ತಿದ್ದ ಜಾಗದಲ್ಲಿ ಇಂತಹದ್ದೆ ಎಂದು ಹೇಳಲೂ ಸಾಧ್ಯವಾಗದ ಹಾವುಗಳು ಫಕ್ಕನೆ ಸಿಕ್ಕು ಮರೆಯಾಗುತ್ತಿದ್ದವು. ಜೊತೆಗೆ ಆ ಕಾಫಿ ತೋಟದಲ್ಲಿ ಇವನಿಗೆ ಅಂತಲೇ ಆ ಸಾಹುಕಾರ ನೀಡಿದ್ದ ಚಿಕ್ಕ ಮನೆಯಲ್ಲಿ ಗೊಯ್ ಎನ್ನುತ್ತ ರಾತ್ರಿ ಹಗಲೆನ್ನದೆ ಕಡಿಯುತ್ತಿದ್ದ ಸೊಳ್ಳೆಗಳಿಂದಲೂ ಪಾರಾಗಿದ್ದ. ಆರು ಅಡಿಯ ಕೆಂಗಾಲು ಯಾವಾಗಲೂ ಮಂಡಿ ಮುಚ್ಚುವಂಗೆ ಪಂಚೆ ಉಟ್ಟವನೇ ಅಲ್ಲ. ಕೆರೆದು ಕೆರೆದು ಕಾಲುಗಳು ಬಿಳಿ ಗೆರೆಗಳನ್ನು ಉಳಿಸಿಕೊಂಡು ಕಜ್ಜಿಯಾಗದೆ ಇದ್ದದ್ದು ಆಶ್ಚರ್ಯವೇ ಸೈ.
ಇಂತಹ ಭಯದ ಪರಿಸ್ಥಿತಿಗಳನ್ನು ದಿನಂಪ್ರತಿ ಕಂಡವನಿಗೆ ಇತ್ತೀಚೆಗಿನ ಸಾಬರ ತೋಟ ನಿರ್ಭಯ ಜಾಲವೇ ಆಗಿತ್ತು. ಹಾಗಾಗಿ ರಾತ್ರಿ ಎಂದಾದರೂ ತೋಟಕ್ಕೆ ಹೋಗಿ ಕಳ್ಳಕಾಕರ ಉಪಟಳವನ್ನು ತಿಳಿಯಬೇಕೆಂದಿದ್ದರೆ ಜುಲ್ಪಾಕರ್ ಸಾಬರೊಂದಿಗೆ ಮರುಮಾತಾಡದೆ ಬೈಕ್ ಏರುತ್ತಿದ್ದ. ಇಂತಹ ಮೊಂಡತನವನ್ನು ಜುಲ್ಪಾಕರ್ ಚನ್ನಾಗಿಯೇ ಬಳಸಿಕೊಂಡಿದ್ದ. ತೋಟದ ಬದಿಯ ಹಳ್ಳದ ಗದೆಗ್ದೆ ಇಡೀ ರಾತ್ರಿ ನೀರಾಯಿಸುವಾಗ, ಕುಯಲಿನ ಭತ್ತ ಕಣದಲ್ಲಿ ಉಳಿದಾಗ, ಶುಂಠಿ ಬೆಳೆಯನ್ನು ಹಂದಿಗಳು ಹಾಳುಮಾಡುವಾಗ, ಮೊಲಕ್ಕೆಂದು ಬಲೆ ಇಟ್ಟಾಗ ಇನ್ನೂ ಕೆಲ ದಿನಗಳಲ್ಲಿ ರಾತ್ರಿ ಪೂರ ಕೆಂಗಾಲು ತೋಟದಲ್ಲಿರುತ್ತಿದ್ದ. ಒಂದು ರಾತ್ರಿ ಆರಾಮಾಗಿ, ಲೀಲಾಜಾಲವಾಗಿ ಇವನು ಇದ್ದದನ್ನು ಕಂಡ ಜುಲ್ಪಾಕರ್ ಇಂತಹ ಪ್ರಸಂಗಗಳನ್ನು ಪದೇ ಪದೇ ಸೃಷ್ಟಿಸತೊಡಗಿದ್ದ. ಆದರೆ ತೋಟದಲ್ಲಿ ಕಾಣೆಯಾಗುತ್ತಿದ್ದ ತೆಂಗಿನ ಕಾಯಿಗಳ ವಿಳಾಸ ಮಾತ್ರ ಗೊತ್ತಾಗುತ್ತಿರಲಿಲ್ಲ.
ಆಗಾಗ ಮನೆಯಿಂದ ಹೊರಗುಳಿದು ತಮಗೆ ಬೇಕಾದ್ದನ್ನು ಮಾಡಿ ತಿನ್ನಲು, ವಾರಕ್ಕೆ ಮೂರು ಬಾರಿ ಎಣ್ಣೆ ಹೊಡೆಯಲು, ಮ್ಯಾಚೇ ಆಗದ ಅಂಗಿಗೆ ದುಬಾರಿ ಪ್ಯಾಂಟನ್ನು ಕೊಳ್ಳಲು, ಕನ್ನಾಯಕನಹಳ್ಳಿಯಲ್ಲಿ ವಯಸಿನ ತೆವಲಿಗೆ ಹಗ್ಗವಾಗಿ ಸಿಕ್ಕುವ ಸೆರಗು ಸೇವೆ ಪೂರೈಸಿಕೊಳ್ಳಲು ಈ ನಾಲ್ವರಿಗೆ ಸಾಬರ ತೋಟವೇ ಆದಾಯದ ಮೂಲವಾಗಿತ್ತು. ಈ ನರಪೇತಲ ಮೈಯ ವೈರಮುಡಿ, ಊರ ಯಜಮಾನರಾದ ಕಾಳಪ್ಪನ ಮನೆ ದನ ಮೇಯಿಸುವ ನಂಜ, ಈಗಾಗಲೇ ಎರಡು ಬಾರಿ ಮರದಿಂದ ಬಿದ್ದು ಕೈ ಮುರಿದುಕೊಂಡರು ಬುದ್ಧಿ ಬರದ ಮರಿಸಿಂಗ, ಜುಲ್ಪಾಕರ್ ಸಾಬರ ಬಳಿ ದಿನಗೂಲಿಯಾಳಾಗಿದ್ದು ಅವರ ತೋಟದಲ್ಲಿನ ತೆಂಗಿನ ಕಾಯಿ ಕಳುವಿಗೆ ವೈರಮುಡಿ, ನಂಜ, ಮರಿಸಿಂಗರನ್ನು ಉರಿದುಂಬಿಸಿ ಕಳ್ಳತನಕ್ಕೆ ಸಮಯ ನಿಗಧಿ ಪಡಿಸುವ ಮೂಲ ಕುತಂತ್ರಿ ನಾಗೇಶ  – ಇವರುಗಳ ಈ ಅಸಾಧಾರಣ ಸಾಹಸಕ್ಕೆ ದಟ್ಟವಾದ ತೋಟ, ಬಿಲ್ಜಾಲದ ಕಿರುಗಾಡು, ಅಮವಾಸ್ಯೆ ಹತ್ತಿರದ ಕತ್ತಲು, ಒಂದು ತಿಂಗಳ ಹಿಂದೆ ನೇಣು ಬಿಗಿದುಕೊಂಡು ಗೆಂಡೆ ಕೆರೆಯ ಏರಿಯ ಮೇಲೆ ಸತ್ತಿದ್ದ ಮಾಚಪ್ಪನ ಪ್ರೇತದಂತಹ ಭಯಬೀಳಿಸುವ ಕಲ್ಪನೆಗಳು ದಿಕ್ಸೂಚಿಯಾಗಿಯೂ, ಊರುಗೋಲಾಗಿಯೂ, ಆಸರೆಯಾಗಿಯೂ, ರಕ್ಷಣೆಯಾಗಿಯೂ, ಬೆಂಗಾವಲಾಗಿಯೂ ಇದ್ದವು. ಇಂತಹ ಭಯದ ಕಾರಣಗಳಿಂದಾಗಿ ಸಾಬರ ತೋಟವೆಂದರೆ ಅಷ್ಟಾಗಿ ಯಾರು ರಾತ್ರಿಯ ಸಮಯ ಅತ್ತ ಸುಳಿಯುತ್ತಿರಲಿಲ್ಲ. ಈ ವಿಷಯಗಳು ಕೆಲಸಕ್ಕೆ ಬರುವ ಆಳುಗಳಿಂದ  ಗೊತ್ತಾದರು ಕೆಂಗಾಲು ಅಂಜದೆ ತೋಟದ ತುಂಬೆಲ್ಲ ರಾತ್ರಿಯಾದರೂ ಓಡಾಡುತ್ತಿದ್ದದ್ದು ಜುಲ್ಪಾಕರ್ ಸಾಬರಿಗೆ ಹೆಮ್ಮೆಯ, ಧೈರ್ಯದ ಸಂಗತಿಯಾಗಿತ್ತು. ಹಾಗಾಗಿ ಸಂಜೆಯಾಗುತ್ತಿದ್ದಂತೆ ಮನೆಕಡೆ ಪೇರಿ ಕೀಳುತ್ತಿದ್ದ ಜುಲ್ಪಾಕರ್ ಈಗೀಗ ಮೇಲೆ ಹೇಳಿದ ಕೆಲ ಸಂದರ್ಭಗಳಲ್ಲಿ ರಾತ್ರಿಪೂರ ಇದ್ದು ಕೆಲಸ ಕಾರ್ಯಗಳನ್ನು ನಿರ್ಭೀತಿಯಿಂದ ಮಾಡಿ ಮುಗಿಸುತ್ತಿದ್ದ. ಆದರೇನು ಪ್ರಯೋಜನ? ತೆಂಗಿನ ಕಾಯಿಗಳು ಮಾಯವಾಗುವ ಚಕ್ರವ್ಯೂಹ ಮಾತ್ರ ಭೇದಿಲಸಾಧ್ಯವೇ ಆಗಿತ್ತು. ಇವತ್ತು ಸಾಬರು ತೋಟಕ್ಕೆ ಬರುತ್ತಾರೆ, ಇವತ್ತು ಬರಲ್ಲ ಎಂಬ ಸುಳಿವುಗಳು ನೇರವಾಗಿ ನಾಗೇಶನಿಗೆ ಗೊತ್ತಾಗುವಾಗ ಚಕ್ರವ್ಯೂಹ ಭೇದಿಸಲು ಯಾರಿಂದ ಸಾಧ್ಯ ಹೇಳಿ.

ಅಂದು ಬೇಸ್ತ್ವಾರ(ಗುರುವಾರ) ಸಂತೆಗೆ ಹೋಗಿದ್ದ ಜುಲ್ಪಾಕರ್ ಸಾಬರು ಮಾಮೂಲಿ ಡಾಂಬರು ರಸ್ತೆಯಲ್ಲಿ ಬರದೆ ಹುಣಸೂರಿನಿಂದ ಹೊಲಕ್ಕಿರುವ ಕಾಲುರಸ್ತೆಯಲ್ಲಿಯೇ ಬೈಕ್ ಚಾಲು ಮಾಡುತ್ತಾರೆ ಎಂಬ ಸುದ್ಧಿ ಯಾರಿಗೆ ತಾನೆ ಗೊತ್ತು?. ಹುಣಸೂರಿನಿಂದ ಕಟ್ಟೆಮಳಲವಾಡಿಯ ಮಾರ್ಗವಾಗಿ ಬರುವಾಗ ಹತ್ತಿ ಫ್ಯಾಕ್ಟರಿಯ ಬಳಿ ಎಡಕ್ಕೆ ತಿರುಗಿ ಅಂತ್ಯದಲ್ಲಿ ಬಲಕ್ಕೆ ಬಾಗಿ ರಸ್ತೆ ಸಾಗುವಂಗೆ ಸಾಗಿ ರಸ್ತೆ ಕೊನೆಯಾಗುವಾಗ ಬೈಕ್ ನಿಲ್ಲಿಸಿ ಆ ಬಿದಿರು, ಕೃಷ್ಣಯ್ಯನ ಅಡಕೆ ತೋಟ ಮತ್ತು ಸಣ್ಣ ಸೇತುವೆಯನ್ನು ದಾಟಿದರೆ ಸಾಬರ ತೋಟ ಎದುರಾಗುತ್ತಿತ್ತು. ಎಂದಾದರೂ ಒಮ್ಮೊಮ್ಮೆ ಹಾಗೆಯೇ ಬರುತ್ತಿದ್ದ ಅವರು ಈವತ್ತು ಬಂದದ್ದು ಮಾತ್ರ ವೈರಮುಡಿ, ನಂಜ, ಮರಿಸಿಂಗ ಮತ್ತು ನಾಗೇಶರಿಗೆ ಕಂಠಕವಾಗುತ್ತದೆ ಅಂತ ಅಲ್ಲೆ ಇದ್ದ ಕರಿಕಲ್ಲಿನ ಗುಡಿಯೊಳಗೆ ಯಾರೋ ಪೂಜೆಗೆಂದು ಇಟ್ಟಿದ್ದ ಮೂರ್ತಿರೂಪಕ ಮೂರು ಸಣ್ಣ ಕಲ್ಲು, ಅವಕ್ಕೆ ಬಳಿದ ನಾಮ, ಒಂದು ಸಿಲ್ವಾರದ ಘಂಟೆ, ಅರ್ಧಕ್ಕೆ ನಿಂತ ಗಂಧದ ಕಡ್ಡಿಗಳು, ಅಪರೂಪಕ್ಕೊಮ್ಮೆ ದರ್ಶನ ನೀಡುತ್ತಿದ್ದ ಹಳೇ ನಾಗರಹಾವು, ತರಗೆಲೆಯಂತೆ ಒಣಗಿ ಹೋಗಿದ್ದ ಮಲ್ಲಿಗೆ ಹೂವಿನ ಸಣ್ಣ ಹಾರ, ಮುಂತಾದವುಗಳಿಂದ ಕಾಡುದೇವತೆಯೆಂದು ಹೆಸರುವಾಸಿಯಾಗಿದ್ದ ಮಾದಾಪುರದಮ್ಮ ದೇವಿಗೂ ಗೊತ್ತಿರಲಿಲ್ಲವೇನೋ!

ಸಂಜೆ ಸರಿಸುಮಾರು ಐದೂವರೆ ಇರಬಹುದು. ಹತ್ತಿ ಫ್ಯಾಕ್ಟರೀ ಮಾರ್ಗವಾಗಿ ಬಂದು ಸಣ್ಣ ಸೇತುವೆ ದಾಟಿದ ಸಾಬರು ಸೊಂಟದ ಮೇಲೆ ಕೈ ಇಟ್ಟು ಒಮ್ಮೆ ಸುತ್ತಮುತ್ತ ನೋಡಿ ಇನ್ನೇನು ಸಾಗಬೇಕೆಂದಾಗ ಮಾದಾಪುರದಮ್ಮನ ಗುಡಿಯ ಮಾರ್ಗವಾಗಿ ಯಾವನದ್ದೊ ಹಳೇ ಬೈಕಲ್ಲಿ ವೇಗವಾಗಿ ಬಂದ ನಾಗೇಶ ಮತ್ತು ವೈರಮುಡಿ ಬೈಕ್ ನಿಲ್ಲಿಸಿ ಹಳ್ಳದ ಝರಿಯನ್ನು ಆತುರಾತುರವಾಗಿ ಹಾದು ತೋಟದ ಒಳಹೊಕ್ಕುತ್ತಿದ್ದದ್ದು ಕಣ್ಣಿಗೆ ಬಿತ್ತು. ಮುಂಬರಿಯದಂತೆ ಅಲ್ಲೆ ಇದ್ದ ಬೇಲದ ಮರದ ಬುಡದಲ್ಲಿ ಕಣ್ಮರೆಯಾಗಿ ನಿಂತ ಜುಲ್ಪಾಕರ್ ಕುತೂಹಲಿಯಾಗಿ ದಿಟ್ಟಿಸಿ ನೋಡ ತೊಡಗಿದರು. ‘ಹೋ, ಈ ನನ್ನ ಮಕ್ಕಳು ಏನೋ ಮಳ್ಳಗೆಲಸ ಮಾಡಕ್ಕೆ ಬರ್ತಾ ಇರೋ ಹಂಗದೆ’ ಎಂದು ಶಿಸ್ತಾಗಿ ನಿಂತು ಏಕಾಗ್ರತಾ ಪ್ರಜ್ಞರಾದರು. ಕಾಲುಪಾಠವಾಗಿದ್ದ ತೋಟದ ಅಂಗಳದಲ್ಲಿ ಲೀಲಾಜಾಲವಾಗಿ ಓಡಾಡುತ್ತಿದ್ದ ನಾಗೇಶ ಅಲ್ಲೊಂದು ಬೇಲಿಯಲ್ಲಿ ಹುದುಗಿಸಿಟ್ಟಿದ್ದ ತೆಂಗಿನ ಕಾಯಿಗಳನ್ನು ಪತ್ತೆ ಮಾಡುತ್ತಿದ್ದ. ತೆಂಗಿನ ಕಾಯಿಗಳು ಬೆಳ್ಳಬೆಳಗ್ಗೆ ಸಿಕ್ಕಾಗ ಅವಸರದಲ್ಲಿ ಎಸೆದು ಹೋಗಿರುವುದರಿಂದ ನಿಖರವಾಗಿ ಈಗ ಬೇಗ ಸಿಗುತ್ತಿರಲಿಲ್ಲ. ಒಂದೆರೆಡು ನಿಮಿಷ ಅಂಡು ಸುಟ್ಟ ಬೆಕ್ಕಿನ ಹಾಗೆ ಅಲ್ಲಲ್ಲಿಯೇ ಓಡಾಡುವಾಗ ಕಣ್ಣಿಗೆ ಬೀಳಲೇ ಬೇಕಿದ್ದ ಕಾಯಿಗಳು ಇಂದೇಕೋ ಗೋಚರಿಸಲು ಸ್ವಲ್ಪ ಹಿಂದುಮುಂದು ನೋಡುವಾಗ ದಡಾರನೇ ಗೆಂಡೆ ಕೆರೆಯ ಕಡೆಯಿಂದ ಯಾರೋ ಬಾತುಕೋಳಿಗೆ ಹೊಡೆದ ಈಡಿನ ಶಬ್ಧ ತಲ್ಲಣಮಯವಾಗಿ ಸಿಡಿಯಿತು. ಒಂದು ಕ್ಷಣ ತೆಂಗಿನ ಕಾಯಿಗಳನ್ನು ಮರೆತು ಸುತ್ತಮುತ್ತ ನೋಡಿದ ನಾಗೇಶ ಇನ್ನೊಂದು  ಕಡೆ ಹುಡುಕಾಟದಲ್ಲಿದ್ದ ವೈರಮುಡಿಯನ್ನು ನೋಡುತ್ತಾನೆ, ಅಲ್ಲಿ ಅವನಿಲ್ಲ. ಕಾಯಿಗಳನ್ನು ಹುಡುಕುವಾಗ ಝರಿಯಲ್ಲಿ ಕಂಡ ದೊಡ್ಡ ನಳ್ಳಿ(ಏಡಿ)ಯನ್ನು ಹಿಡಿಯಲು ವೈರಮುಡಿ ಮುಂದಾಗಿದ್ದಾನೆ. ‘ಲೋ ವೈರು, ವೈರು ಎತ್ತಾಗೋದ್ಲ’ ಎಂದು ನಾಗೇಶ ಕಿರುಧ್ವನಿಯಲ್ಲಿ ಕೂಗುವಾಗ ‘ಇಲ್ಲೆ ಇವ್ನಿ, ಬಂದೆ ನೋಡ್ ನೋಡು’ ಎಂದು ವೈರು ಆಲಿಯಾಸ್ ವೈರಮುಡಿ ಭ್ರಮೆಯ ಭರವಸೆ ಕೊಟ್ಟು ಸ್ವಲ್ಪ ನೀರಿದ್ದರಿಂದ ಬೊಗಡ(ತಿಳಿನೀರು ಚಟುವಟಿಕೆಯಿಂದ ಮಣ್ಣು ಮಿಶ್ರಿತ ನೀರಾಗಿ ಕಲುಶಿತವಾದದ್ದು) ಎದ್ದು ಮಾಯವಾದಂತೆ ಮಾಸಲು ಮಾಸಲಾಗಿ ನಳ್ಳಿ ಕಾಣದಂತಾಗಿದ್ದಕ್ಕೆ ‘ಬೋಳೀಮಗ, ಯಾವಾಗ್ ಕೂಗ್ಬೇಕ್ ಅಂತ ಗೊತಾಯ್ಕಿಲ, ಹೋಯ್ತಲ್ಲಪ್ಪ ನಳ್ಳಿ, ಇನ್ ಸಿಕ್ಕಕ್ಕಿಲ ಬುಡು” ಎಂದು ಮತ್ತೆ ಹುಡುಕ ತೊಡಗಿದ. ಆಕಾಶದಲ್ಲಿ ಈಡಿನ ಶಬ್ಧಕ್ಕೆ ಹಾರಿದ ಬೆಳ್ಳಕ್ಕಿ ಹಿಂಡು ಸೀದಾ ಬಂದು ಜುಲ್ಪಾಕರ್ ನಿಂತಿದ್ದ ಬೇಲದ ಮರದ ಮೇಲೆ ಕುಳಿತವು. ಈಡಿನ ಶಬ್ಧದಿಂದ ಸ್ವಲ್ಪ ವಿಚಲಿತನಾಗಿದ್ದ ಜುಲ್ಪಾಕರ್ ಆ ಅವಿತುಕೊಳ್ಳುವ ನೌಖರಿಗೆ ರಾಜೀನಾಮೆ ನೀಡಿ ವಿಶಾಲವಾಗಿ ಬೆಳಕು ಚನ್ನಾಗಿ ಬೀಳುವ ಹಾದಿಯಲ್ಲಿ ಹೊಸ ನೌಖರಿ ಹಿಡಿದಿದ್ದ. ಅವನಿಗದು ಹಳೇ ಹಾದಿಯಾಗಿದ್ದರೂ ಆತ ಮಾಮೂಲಿಯವನಾಗಿ ನೋಟ ಬೀರುತ್ತಿರಲಿಲ್ಲ. ಏನೋ ಕಳ್ಳಸಂಚು ಮಾಡುತ್ತಿದ್ದ ನಾಗೇಶ ಮತ್ತು ವೈರಮುಡಿಯನ್ನು ಚಾತಕ ಪಕ್ಷಿಯಂತೆ ವೀಕ್ಷಿಸುತ್ತಿದ್ದ. ಇನ್ನೊಂದು ಸ್ವಲ್ಪ ಹೊತ್ತು ಹಾಗೆ ಇದ್ದಿದ್ದರೆ ಕಳ್ಳರ ಕರಾಮತ್ತು ಗೊತ್ತಾಗುತ್ತಿತ್ತೇನೋ! ‘ನೋಡುವ, ಇನ್ನು ಸ್ವಲ್ಪ ಹೊತ್ತು ಕಳ್ಳಬಡ್ಡಿ ಮಕ್ಕಳು ಏನ್ ಮಾಡ್ತಾರೆ’ ಅಂದುಕೊಂಡ ಜುಲ್ಪಾಕರ್ ನನ್ನು ‘ಓ ಸಾಬ್ರೆ, ಯಾಕ್ ಇಲ್ಲೆ ನಿಂತ್ಬುಟ್ರಿ; ಈಕಡೆನೇಯ ಬಂದ್ರ; ಕೆಂಗಾಲು ಎತ್ಲಾಗೋದ; ಎಂದು ತನಿಖಾರ್ಹವಾದ ಧಾಟಿಯಲ್ಲಿ ಬೇಲದ ಮರದ ಓನರ್ ಕೃಷ್ಣಯ್ಯ ರಾಗ ಎಳೆದ. ಎಡಕ್ಕೆ ಫಕ್ಕನೆ ನೋಡಿ ‘ಇವನಾ’ ಅಂದುಕೊಂಡ ಜುಲ್ಪಾಕರ್ ‘ಇಲ್ಲ ಕೃಷ್ಣ, ನಿತ್ಕೊಂಡೆ.. ಎಂದ.

ಕೃಷ್ಣಯ್ಯನ ರಾಗ ಅಲೆಅಲೆಯಾಗಿ ನಾಗೇಶನನ್ನು ತಲುಪಿ ಜುಲ್ಪಾಕರ್ ಬಂದಿರುವ ಸುದ್ಧಿ ಮುಟ್ಟಿಸಿತ್ತು. ಒಡನೆಯೇ ಅಲ್ಲಿಂದ ಪರಾರಿಯಾಗುತ್ತಿದ್ದ ಇಬ್ಬರನ್ನು ಓರೆ ನೋಟದಲ್ಲಿ ಗಮನಿಸುತ್ತಿದ್ದ ಜುಲ್ಪಾಕರ್‍ಗೆ ಇವರು ಮಳ್ಳಗೆಲಸಕ್ಕೆ ಬಂದರೆಂಬುದು ಖಾತರಿಯಾಗಿ ಹೋಗಿತ್ತು. ಸ್ವಲ್ಪ ಹೆಚ್ಚು ಹೆಚ್ಚು ವೇಗವಾಗಿ ನಡೆದ ಪರಿಣಾಮ ‘ಮುಟ್ಟಿದರೆ ಮುನಿ’ ಗಿಡದ ಮುಳ್ಳು ಗೀರಿ ಸಣ್ಣಗೆ ರಕ್ತ ಬರುತ್ತಿರುವುದನ್ನು ಜುಲ್ಪಾಕರ್ ಗಮನಿಸುವ ಗೋಜಿಗೆ ಹೋಗಲಿಲ್ಲ. ನಾಗೇಶ ಹುಡುಕುತ್ತಿದ್ದ ಜಾಗದಲ್ಲಿ ಅಚಾನಕ್ಕಾಗಿ ಕಂಡ ಏಳು ತೆಂಗಿನ ಕಾಯಿಗಳು ಜುಲ್ಪಾಕರ್ ಮನದಲ್ಲಿ ನಿರ್ವಿವಾದ ತೀರ್ಪನ್ನು ಹೊರಡಿಸಿದ್ದವು. ಈವರೆಗೆ ತೋಟದಲ್ಲಿ, ತೋಟದ ಮನೆಯಲ್ಲಿ ಕಾಣೆಯಾಗುತ್ತಿರುವ ಕಾಯಿಗಳಿಗೆಲ್ಲ ಇವರೆ ಕಾರಣ ಎಂಬುದನ್ನು ಅರಿತು ಆ ಏಳು ಕಾಯಿಗಳನ್ನು ಅಲ್ಲೆ ಬಿಟ್ಟು ತೋಟ ಬಳಸಿ ಬೇಗ ಬೇಗನೆ ಮನೆಕಡೆ ದಾವಿಸಲು ಮುಂದಾದರು.

ಜುಲ್ಪಾಕರ್ ಬರುತ್ತಿರೋದು ನಾಗೇಶನಿಗೆ ಕಾಯಿಯನ್ನು ಹುಡುಕುವಾಗ ಕೃಷ್ಣಯ್ಯನ ಕೃಪೆಯಿಂದ ಹೇಗೆ ಗೊತ್ತಾಯಿತೋ ಹಾಗೆಯೇ ನಾಗೇಶ ಮತ್ತು ವೈರಮುಡಿ ಓಡಿಹೋಗಿ ಝರಿಯ ಹಳ್ಳದಲ್ಲಿ ನಿಂತಿರೋದು ಜುಲ್ಪಾಕರ್‍ಗು ಗೊತ್ತಾಯಿತು. ಅದಕ್ಕಾಗಿ ಆ ಏಳು ಕಾಯಿಗಳನ್ನು ಅಲ್ಲೆ ಕಂಡು ಕಾಣದಂಗೆ ಬಿಟ್ಟು ಜುಲ್ಪಾಕರ್ ಸಾಗಿದ್ದು. ಅವ ತೋಟ ಸುತ್ತುವಾಗ ಈ ಇಬ್ಬರು ಬಂದ ದಾರಿಗೆ ತಕ್ಷಣಕ್ಕೆ ಸುಂಕವಿಲ್ಲ ಎಂಬುದನ್ನು ತಿಳಿದು ಸ್ವಲ್ಪ ಅನುಮಾನಾಸ್ಪದವಾಗಿ ಹೆಜ್ಜೆ ಹಾಕುತ್ತಾ ‘ನಮ್ಮ ಕಂತ್ರಿ ಕೆಲಸ ಜುಲ್ಪಾಕರ್‍ಗೆ ಗೊತ್ತಾಗಿರ್ಬೋದ’ ಎಂಬ ಪ್ರಶ್ನೆಯನ್ನು ತಾವೇ ಕೇಳಿಕೊಳ್ಳತ್ತಾ ‘ಏ ಇಲ್ಲ ಇಲ್ಲ, ಕಾಯ್ಗಳು ಕಂಡಿಲ, ಇನ್ನು ನಮ್ ಇಸ್ಯಾ ಹೆಂಗ್ ಗೊತ್ತಾದದು? ಕೇಳಿದ್ರೆ ಬುತಾಳಿ ಗೆಡ್ಡೇಲಿ ಜೇನಿತ್ತು ಅಂದ್ರಾಯ್ತು’ ಎಂದು ಉತ್ತರವನ್ನು ಕಂಡುಕೊಳ್ಳುತ್ತಾ ಬೈಕ್ ಹತ್ತಿ ಈ ಕಾಮಗಾರಿಯನ್ನು ಈ ರಾತ್ರಿಯೇ ಬಂದು ಪೂರ್ಣಗೊಳಿಸುವ ಯೋಜನೆಯನ್ನು ಮನದಲ್ಲಿ ಎಣಿಸುತ್ತಾ ಸಾಗಿದರು. ಇಬ್ಬರು ಹೋಗಿದ್ದು ಗೊತ್ತಾದ ಮೇಲೆ ಉಣ್ಣಿಬೇಲಿಯ ಮರೆಯಿಂದ ಜುಲ್ಪಾಕರ್ ಹೊರಬಂದು ಮನೆಕಡೆ ಧಾವಿಸಿದ್ದು!
ಕರು ಸತ್ತು ಪುತ್ರ ವಿಯೋಗದಿಂದ ಹಸು ನರಳುತ್ತಿರಬೇಕೆಂಬ ಸಂಶಯ ಜುಲ್ಪಾಕರ್ ಹೆಂಡತಿ ಮುಜಾಮಿಲ್ಲಳಿಗೆ. ಜರ್ಸಿ ಹಸು ಎಂದರೆ ಒಂದು ಏಳೆಂಟು ಲೀಟರ್ ಹಾಲಾದರೂ ಕೊಡಬೇಕಿತ್ತು. ಆದರೆ ಇದು ಎರಡು ಲೀಟರ್ ಗೆ ಕೆಚ್ಚಲು ಬಡಿದಾಡುವಾಗ ಅವಳ ಸಂಶಯ ಅವಳಿಗೆ ನಿಜವಾಗುತ್ತಿತ್ತು. ಮೊದಲು ಹೆಚ್ಚು ಹಾಲು ಸುರಿಯುವಾಗ ತಾನೇ ನಿಂತು ಹಾಲು ಕರೆಯುತ್ತಿದ್ದ ಮುಜಾಮಿಲ್ ಎರಡೂ ಲೀಟರ್‍ಗೆ ಪುತ್ರ ವಿಯೋಗ ಕಾರಣ ಎಂಬುದು ಗೊತ್ತಾದ ಮೇಲೆ ಕೆಂಗಾಲುವಿನ ಪಾಲಿಗೆ ತಗಲಾಕಿದ್ದಳು. ಅವನೇ ಮಾಲೀಕನಾಗಿ ಹಿಂಡಿ, ಬೂಸಾ, ಬಾನಿ(ಮನೆಯವರು ತಿಂದು, ಉಂಡು ಮಿಕ್ಕಿದ ಆಹಾರವನ್ನು, ಕೈತೊಳೆದ ನೀರನ್ನು ಶೇಖರಿಸಿಟ್ಟ ಸಿಲ್ವಾರದ ಪಾತ್ರೆ) ಎಲ್ಲವನ್ನು ನೀಡಿ ಹಾಲು ಕರೆದು ಡೈರಿಗೆ ಹಾಕುತ್ತಾ ಸಮಯ ಬಂದಾಗ ನೀಲವ್ವನಿಗೂ ಸುರಿಯುತ್ತಾ ಸ್ವಾಮಿ ಕಾರ್ಯ ಸ್ದಕಾರ್ಯ ಎರಡನ್ನೂ ಮಾಡಿಕೊಂಡು ಸುಖಿಯಾಗಿದ್ದ. ಮನೆಯ ಬಳಿ ಒಡೆಯನ ಬೈಕು ಬಂದ ಶಬ್ಧ ಕೇಳಿ ಹಾಲಿಲ್ಲದ ಹಸುವಿನ ಎದೆಯನ್ನು ಹಿಂಡುವುದನ್ನು ನಿಲ್ಲಿಸಿ ತಟಪಟನೆ ಹೆಜ್ಜೆ ಹಾಕಿ ಬ್ಯಾಗನ್ನು ಕಸಿದುಕೊಂಡು ಒಳಹೋದನು. ಜುಲ್ಪಾಕರ್ ಬೈಕನ್ನು ಮನೆ ಮುಂದಿನ ಅಂಗಳದಲ್ಲಿ ನಿಲ್ಲಿಸಿ ಟೋಪಿಯನ್ನು ತೆಗೆದು ಬೆವತಿದ್ದ ತಲೆ ಕೆರೆದುಕೊಳ್ಳುತ್ತಾ ಒಳಹೋಗದೆ ‘ಕೆಂಗಾಲು ಲೋ ಕೆಂಗಾಲು’ ಎಂದು ಕೂಗತೊಡಗಿದನು.
ದನ ಮೇಯಿಸಲು ಹೋಗಿದ್ದ ನಂಜ ಹಾಗೂ ಮಾರೀಗುಡಿಯ ಬಳಿ ಕಾಲಕಳೆಯುತ್ತಿದ್ದ ಮರಿಸಿಂಗ ಇಬ್ಬರನ್ನು ಕೂಡಿಕೊಂಡು ರಾತ್ರಿ ಬೇಟೆಗಾಗಿ ನಾಗೇಶ ಮತ್ತು ವೈರಮುಡಿ ಯೋಜನೆ ರೂಪಿಸಿಕೊಳ್ಳತೊಡಗಿದರು. ಎಸೆದಿದ್ದ ಏಳು ಕಾಯಿ ಮತ್ತು ತೋಟದಲ್ಲಿ ಪಾಳು ಮನೆಯಲ್ಲಿರಬಹುದಾದ ಐವತ್ತು ಕಾಯಿಗಳನ್ನು ಸೇರಿಸಿ ಲೆಕ್ಕ ಹಾಕುತ್ತಾ ಮಾರಿದರೆ ಎಷ್ಟು ದುಡ್ಡಾಗುತ್ತದೆ, ಒಬ್ಬೊಬ್ಬರಿಗೆ ಎಷ್ಟೆಷ್ಟು ಬರುತ್ತದೆ ಎಂಬುದನ್ನು ಎಣಿಸಿ ಎಣಿಸಿ ಮನದೊಳಗೆ ಗಣಿತದ ಮೇಷ್ಟ್ರಾಗಿ ಹೋಗಿದ್ದರು. ಮನೆಯೊಳಗೆ ಮುನ್ನೂರು ಕಾಯಿಗಳಿದ್ದರೂ ಇಷ್ಟು ದಿನದ ಕಳ್ಳತನದಲ್ಲಿ ಯಾವತ್ತೂ ಪೂರ್ತಿ ಕದ್ದಿರಲಿಲ್ಲ. ಹಾಗಾಗಿ ಕಳ್ಳತನ ಲೇಟಾಗಿ ಬಯಲಾಗಿದ್ದು. ಐವತ್ತು ಕದ್ದರೆ ಗೊತ್ತಾಗುವುದಿಲ್ಲ ಎಂಬ ನಾಗೇಶನ ಕುತಂತ್ರದಿಂದ ಲಾಭವೇ ಆಗಿದ್ದರೂ ಕಳ್ಳತನ ಯಾವತ್ತಿಗೂ ಹರಿತವಾದ ಕತ್ತಿಯ ಆಮಂತ್ರಣವೇ ಅಲ್ಲವಾ!

ಇತ್ತ ಕೆಂಗಾಲನನ್ನು ತರಬೇತಿಗೊಳಿಸಿ ಬೈಕಲ್ಲಿ ಬಂದರೆ ಗೊತ್ತಾಗುತ್ತದೆ ಅಂತ ಬಿಲ್ಜಾಲ ಕಿರುಗಾಡಿನ ಕಾಲುದಾರಿಯಲ್ಲಿ ನಡೆದುಕೊಂಡೆ ಜುಲ್ಪಾಕರ್ ಹೆಜ್ಜೆ ಹಾಕಿದ್ದರು. ಅತ್ತ ನಾಲ್ವರೂ ಸೇರಿ ಆ ಏಳು ಕಾಯಿ, ಈ ಐವತ್ತು ಕಾಯಿಯ ಜೊತೆಗೆ ಕತ್ತಲು ಚನ್ನಾಗಿರುವುದರಿಂದ ಮರದಿಂದ ಕೀಳುವ ಸಾಹಸವನ್ನು ಮಾಡಲು ತುರ್ತಾಗಿ ರೆಡಿಯಾದರು. ಐವತ್ತೇಳು ಕಾಯಿಗಳಿಗೆ ಬೇಕಾದ ಮೂರು ಚೀಲಗಳ ಬದಲಿಗೆ ಐದು ಚೀಲಗಳನ್ನು ತಂದಿದ್ದರು. ದುಬೈನಿಂದ ಜುಲ್ಪಾಕರ್‍ನ ದೊಡ್ಡಪ್ಪನ ಮಗ ತಂದುಕೊಟ್ಟಿದ್ದ ಟಾರ್ಚು, ಎರಡು ಬಿಗಿಯಾದ ದೊಣ್ಣೆ(ಬಿದಿರು ಕೋಲು), ಒಂದು ಮಚ್ಚು, ನೋಕಿಯಾ ಮೊಬೈಲು ಜುಲ್ಪಾಕರ್ ಮತ್ತು ಕೆಂಗಾಲುವಿನ ಬಳಿಯಲ್ಲಿದ್ದವು. ತೋಟಕ್ಕೆ ಸಮೀಪವಾಗುತ್ತಿದ್ದಂತೆ ಬೇಟೆಗೆ ಹೊಂಚುಹಾಕುವ ಹುಲಿಯಂತೆ ಹೆಚ್ಚು ಶಬ್ಧವಿರದ ಹೆಜ್ಜೆಹಾಕುತ್ತಾ ಬಳಿಯಾದರು. ಇಬ್ಬರು ಒಬ್ಬರನ್ನೊಬ್ಬರು ಕಾಣದಂತಿದ್ದರು ನೋಡಿಕೊಂಡು ತೋಟದಲ್ಲಿ ಏನೂ ಚಟುವಟಿಕೆ ಇಲ್ಲದನ್ನು ಗಮನಿಸಿ ಕಳ್ಳರು ಇಂದು ಬರುತ್ತಾರೋ ಇಲ್ಲವೋ, ಇಷ್ಟು ಹೊತ್ತಿನಲ್ಲಿ ಬಂದಿದ್ದು ವ್ಯರ್ಥವಾಗುತ್ತದೋ ಏನೋ ಎಂದು ಲೆಕ್ಕಾಚಾರ  ಮಾಡಿಕೊಳ್ಳುತ್ತಾ ಮೌನವಾಗಿ ಊರಿನ ಉಸಿರು ಮತ್ತು ಕಾಡಿನ ಏದುಸಿರಿಗೆ ವ್ಯತ್ಯಾಸ ಆಲಿಸುತ್ತಿದ್ದರು.

ಮೊದಲು ಏಳು ಕಾಯಿಗಳನ್ನು ನೋಡಿ ಕಾಣದಾದಾಗ ಇವಿರಲಿ, ಮನೆಯೊಳಗೆ ತುಂಬೋಣ ಎಂದು ಮೆಲ್ಲನೆ ನಂಜನನ್ನು ದಬಾಯಿಸಿ ಎತ್ತಿ ಸೂರು ಕಟ್ಟಿನ ಮಾರ್ಗವಾಗಿ ಮಾಮೂಲಿಯಾಗಿ ಮಂಗಳೂರು ಹಂಚುಗಳನ್ನು ತೆಗೆದು ಇಳಿಯುತ್ತಿದ್ದಿದ್ದ ಜಾಗದಿಂದ ಇಳಿಸಿಕೊಂಡು ಕಿಟಕಿಯ ಮೂಲಕ ಒಂದೊಂದೆ ಕಾಯಿಗಳನ್ನು ಹೊರ ಹಾಕಿಸಿಕೊಳ್ಳಲ್ಪಟ್ಟರು. ಈ ಕೆಲಸಕ್ಕೆ ನಂಜ ಮತ್ತು ವೈರಮುಡಿ ಸಾಕೆಂದು ಅರಿತ ನಾಗೇಶ ಮರಿಸಿಂಗನನ್ನು ಕರೆದುಕೊಂಡು ಯಾವುದಾದರೂ ಮರದಲ್ಲಿ ಕಾಯಿ ಕೀಳುವ ಅಂತ ಹೊರ ಕರೆತಂದ. ಇಬ್ಬರಿಗೂ ಗೊತ್ತಿದ್ದ ವಾಸ್ತವ ಸತ್ಯವೆಂದರೆ ಯಾವ ಮರಕ್ಕೆ ಹತ್ತಿದರೂ ಕಾಯಿಗಳಿವೆ ಎಂಬುದು. ಆದರೆ ಭಯದ ವಿಚಾರವೆಂದರೆ ಈ ಮೊದಲು ಹೀಗೆಯೇ ಕಾಯಿ ಕೀಳಲು ಮರವೇರಿದಾಗ ಅಲ್ಲಿ ಅನಿರೀಕ್ಷಿತವಾಗಿ ಕಂಡ ದೊಡ್ಡ ನಾಗರಹಾವಿಗೆ ಹೆದರಿ ಅವಸರವಾಗಿ ಇಳಿಯುವಾಗ ವೈರಮುಡಿ ಬಿದ್ದು ಕೈ ಮುರಿದುಕೊಂಡದ್ದು. ಆ ಘಟನೆ ನಡೆದ ಮೇಲೆ ‘ಉಷಾರು’ ಎಂಬ ಭಯಮಿಶ್ರಿತ ಅನುಭವ ನುಡಿ ಎಲ್ಲರಲ್ಲಿಯೂ ಮನೆ ಮಾಡಿತ್ತು. ಯೋಚನೆಗೆ ಜಾಸ್ತಿ ಗಮನ ಕೊಡದೆ ಮರಿಸಿಂಗನನ್ನು ಬಳಿಯಲ್ಲಿದ್ದ ಮರಕ್ಕೆ ಹತ್ತುವಂತೆ ಸೂಚಿಸಿ ತಂದಿದ್ದ ತಲೆಗೆ ಕಟ್ಟಿಕೊಳ್ಳುವ ಟಾರ್ಚನ್ನು ಕಟ್ಟಿ ಅಮಂಗಳ ಕಾರ್ಯಕ್ಕೆ ನಾಗೇಶ ಚಾಲನೆ ನೀಡಿದ. ಒಂದೇ ಸಮನೆ ಗಾಬರಿಯಿಂದ ಮರವೇರಿದ ಮರಿಸಿಂಗ ಕೈಗೆ ಕಾಯಿಗಳು ಸಿಕ್ಕ ಕೂಡಲೆ ಎಳೆದು ಉದುರಿಸತೊಡಗಿದ. ಕೆಳಗೆ ತುಸು ದೂರಲ್ಲಿಯೇ ನಿಂತಿದ್ದ ನಾಗೇಶ ಇತ್ತ ಸುಗಮವಾಗಿ ಸಾಗುತ್ತಿದ್ದ ಮನೆಯೊಳಗಿನ ಕೃಷಿ ಹಾಗೂ ಮರದ ಮೇಲಿನ ಕೃಷಿಗಳಿಗೆ ಹರ್ಷ ಚಿತ್ತನಾಗಿ ಸುತ್ತಲೂ ಯಾವುದಾದರೂ ಬೆಳಕು ಕಾಣುತ್ತದಾ ಅಂತ ನೋಡತೊಡಗಿದ.

ಕೆಂಗಾಲು ಕೆರೆದುಕೊಳ್ಳುವ ಜೊತೆಜೊತೆಗೆ ದಪ್ ದಪ್ ಎಂದು ಬೀಳುತ್ತಿದ್ದ ಕಾಯಿಗಳ ಶಬ್ಧವನ್ನು ಗಮನಿಸಿ ದಣಿಗೆ ವಿಷಯ ಮುಟ್ಟಿಸಿ ಇಬ್ಬರು ಒಂದೊಂದೇ ಹೆಜ್ಜೆ ಹಾಕಲು ಮುಂದಾದರು. ಬೆಳಕಿಲ್ಲದ ಹಾದಿ ಸುಗಮವಾಗಿದ್ದರೂ ಅಲ್ಲೊಂದು ಕಾಡು ಹಂದಿ ಮಲಗಿದ್ದು ದಡಕ್ಕನೆ ಎದ್ದು ಚಿಮ್ಮಿ ಮಾಯವಾಗುವ ಬರದಲ್ಲಿ ಯಾವ ದಿಕ್ಕಿಗೆ ಹೋಗಬೇಕು ಎಂಬ ಆಲೋಚನೆ ಮಾಡದೆ ಜುಲ್ಪಾಕರ್ ಕಾಲಿನ ಸಂದುವನ್ನು ಹಾದು ‘ನಾನು ಸಿಕ್ಕಿಕೊಂಡೆನಾ’ ಎಂಬ ಭಯದಿಂದ ಸೆಕೆಂಡಿನಲ್ಲಿ ಮಾಯವಾಯಿತು. ಒಂದೇ ಸಲ ಸರಕ್ಕೆಂದು ಹಂದಿ ನುಗ್ಗಿದ ಪರಿಣಾಮ ಅಷ್ಟೇನು ಉದ್ದವಿಲ್ಲದ ಜುಲ್ಪಾಕರ್ ಹಿಡಿತ ತಪ್ಪಿ ‘ಅರೆ ಅಲಾ’್ಲ ಎನ್ನುತ್ತಾ ಮುಗ್ಗರಿಸಿ ಬಿದ್ದು ಮೂರು ಉರುಳು ಸೇವೆಯನ್ನು ಮಾಡಿದ. ಕ್ಷಣದಲ್ಲಿ ನಡೆದ ಪ್ರಸಂಗಕ್ಕೆ ಹೇಗೆ ವರ್ತಿಸಬೇಕು ಎಂದು ತೋಚದ ಕೆಂಗಾಲು ಅಯ್ಯಾ,,, ಎನ್ನುತ್ತಾ ಉರುಳುತ್ತಿರುವವರನ್ನು ಎತ್ತಲೋದನು. ನಾಗೇಶನಿಗೆ ಈ ‘ಅರೆ ಅಲ್ಲಾ, ಅಯ್ಯಾ,,, ಶಬ್ಧಗಳು ನಿಸ್ಸಂಶಯವಾಗಿ ಯಾರೋ ಬರುತ್ತಿದ್ದಾರೆಂಬುದನ್ನು ತಿಳಿಸಿದವು.  ವಿಷಯ ಗೊತ್ತಾಗುತ್ತಿದ್ದಂತೆ ಟೀಮ್ ಅನ್ನು ಬಚಾವುಗೊಳಿಸಬೇಕೆಂಬ ಒಗ್ಗಟ್ಟ ತನದಿಂದ, ಯಾರಾದರೂ ಬಂದರೆ ಕೂಗಬೇಕೆಂಬ ಒಪ್ಪಂದದಂತೆ ‘ಹೋ,,, ಎಂದು ಕೂಗಿಟ್ಟನು. ಹಾಳಾದವನು ಹಾಗೆಂದು ಕೂಗಿ ಅತ್ತ ಓಡಿ ಹೋಗಿದ್ದರೆ ರಕ್ತ ಸುರಿಯುವ ಅನಾಹುತವಾಗುತ್ತಿರಲಿಲ್ಲವೇನೋ! ಸಿಕ್ಕ ಸೂಚನೆಯಿಂದ ಸಿಕ್ಕಿ ಹಾಕಿಕೊಂಡು ಬಿಡುವೆನೇನೋ ಎಂಬ ಗಾಬರಿಯಿಂದ ಮರಿಸಿಂಗ ಎಳೆದು ಕೈಗೆ ಬಂದಿದ್ದ ತೆಂಗಿನ ಕಾಯಿಯನ್ನು ಅಸಾಧ್ಯವೆಂಬಂತೆ ಎತ್ತಲೋ ಬಿಸಾಕಿದ. ಅದು ಅಲ್ಲಿಯೇ ಎಲ್ಲರೂ ಬಂದ ತಕ್ಷಣ ಓಡಿ ಹೋಗುವ ಎಂದು ಕಾತರನಾಗಿ ಬೋನಿಗೆ ಸಿಕ್ಕ ಚಿರತೆಯಂತೆ ಓಡಾಡುತ್ತಿದ್ದ ನಾಗೇಶನ ತಲೆಯ ಮೇಲೆ ವಕ್ರ ವಕ್ರವಾಗಿ ಬಂದು ಅಪ್ಪಳಿಸಿತು. ಮನೆಯೊಳಗಿದ್ದ ವೈರಮುಡಿ ಬೇಗನೆ ಹೊರಬಂದು ಏನಾಯಿತು ಎಂದು ನೋಡುವಷ್ಟರಲ್ಲಿ ನಾಗೇಶನಿಗೆ ಮಾತ್ರ ಗೊತ್ತಾಗುತ್ತಿದೆ, ತನ್ನ ತಲೆಯಿಂದ ಸುರಿಯುತ್ತಿರುವ ದಾರಾಕಾರ ರಕ್ತದ ಪ್ರಮಾಣ ಎಷ್ಟೆಂದು!

No comments:

Post a Comment