Monday 10 April 2017

ಒಂದು ರಾತ್ರಿ:-- ಚಂದ್ರು ಎಂ ಹುಣಸೂರು

ಒಂದು ರಾತ್ರಿ

ಅವನು ಖಂಡಿತಾ ಸುಖಿಸಲೇ ಬಂದು ಲೈಟ್ ಆಫ್ ಆದ ನಂತರ ಕಣ್ಣು ಮುಚ್ಚಿ ನಾನು ಜಡವಾಗುವ ಹೊತ್ತಿಗೆ ನನ್ನನ್ನು ಬೆತ್ತಲು ಮಾಡಿ ರಕ್ಕಸನಂತೆ ಎರಗಿ ಒಂದೆರೆಡು ಕಡೆ ಉಗುರಿನಿಂದ ಗುರುತಾಗುವಂತೆ ಗೀರಿ ಸಾಧ್ಯವಾದರೆ ಅವನಿಗನಿಸಿದರೆ ಸಿಗರೇಟಿನಲ್ಲಿ ಸುಟ್ಟು ಅದಕ್ಕೊಂದಷ್ಟು ಟಿಪ್ಸು ಅಂತ ಕೊಟ್ಟು ದಣಿದು ಹೋಗಿದ್ದರೆ ತೀರ ನಾನು ಹೆಣ್ಣು ಎಂಬುದು ನನಗೇ ಅರಿವಾಗುತ್ತಿರಲಿಲ್ಲವೇನೋ!.

ಎಷ್ಟೊಂದು ಬಗೆಯ ಎದೆಯ ರೋಮಗಳು ಇಷ್ಟವಿಲ್ಲ ಬೇಡವೆಂದರೂ ಹಾಸಿಗೆಯಲ್ಲಿ ಉದುರುವಾಗ ಅಲ್ಲಿ ಬಿಳಿ ರೋಮಗಳೂ ಇದ್ದವು. ಅವನೊಂದಿಗೆ ಮೊದಲ ಸಲದ ಹಾಸಿಗೆಯಲ್ಲಿ ಉದುರಿದ ರೋಮಗಳು ನಿಜಕ್ಕೂ ಎದೆಯವಾಗಿರಲಿಲ್ಲ. ಅವು ತಲೆಯವು. ಮಾಮೂಲಿಯಂತೆ ಗಿರಾಕಿ ಭರಗೆಟ್ಟ ವರ್ತನೆ ತೋರದವನಾಗದೇ ಮುಜುಗರದವನಾಗಿಬಿಟ್ಟರೆ ಅದನ್ನು ಸಂಭಾಣಿಸೋದು ಊಟ ಇಟ್ಟಾಗ ನೀರನ್ನು ಇಡುವಂತಹ ಸಹಜ ಜ್ಞಾನದಿಂದ ಅರ್ಥೈಸಿಕೊಂಡು ನಾನೇ ಬೆತ್ತಲಾಗೋದು ಕಸುಬು ಕಲಿಸಿದ ಪಾಠ. ಹಾಗೆ ಸೆರಗನ್ನು ಸರಿಸುವಾಗಲೇ ಯಾವುದೋ ತನ್ನದಲ್ಲದ ವಿಳಾಸಕ್ಕೆ ಬಂದವನಂತೆ, ಟಿಕೇಟ್ ಪಡೆಯದೆ ಕದ್ದು ಬಸ್ಸಿನಲ್ಲಿ ನುಸುಳಿರುವವನಂತೆ, ಇನ್ನೇನೋ ತನ್ನ ಮರಣದಂಡನೆ ತೀರ್ಪಿಗೆ ಅದೊಂದು ಸಾಕ್ಷಿ ಸಿಕ್ಕದಿರಲಪ್ಪ ಎಂದು ಪರದಾಡುವವನಂತೆ, ಹಪಹಪಿಸುವಂತೆ, ಒಳ ಬಂದುಬಿಟ್ಟೆನಲ್ಲಾ ಎಂಬ ನರಕದಲ್ಲಿ ಬೇಯುವವನಂತೆ ಹೆಜ್ಜೆ ಇಟ್ಟು ಬಂದು ಅವ ಕಾರ್ಯಸಿದ್ಧಿ ಕೈಗೊಳ್ಳಲು ಮುಂದಾಗಲಿಲ್ಲ. ಎಷ್ಟೊಂದು ಪಳಗಿರುವ ನಾನು ಇದು ಒಂದು ಸಾಮಾನ್ಯ ರೋಮ ಎನ್ನುವ ಉದಾಸೀನತೆಯಲ್ಲಿ ಮುಂದೆ ಹೋಗಿ ಕರೆದುಕೊಂಡು ಬಂದು ಕಾಣುವ ಚೂರು ಬೆಳಕಿನ ಕಡೆ ಮುಖ ನೋಡಿದೆ. ದೈನಂದಿನ ವ್ಯವಹಾರದ ನಾಜೂಕಿನ ಪ್ರಭಾವದಿಂದ!. ಕೈ ಹಿಡಿಯುವಾಗ ನಾಡಿ ಮಿಡಿತಕ್ಕೆ ಬೆರಳು ಆನಿಸಿ ಗಿರಾಕಿಯ ಗುಂಡಿಗೆ ವೀಕ್ಷಿಸಿದೆ. ಒಂದೇ ಓಡುತ್ತಿತ್ತು. ಕಾಲು ಮಾತ್ರ ನಿಧಾನವಾಗಿ ನಾ ಕರೆದಲ್ಲಿ ವಾಲಿ ವಾಲಿ ಚಲಿಸಿತ್ತು. ಆ ಕತ್ತಲ ನೀರವ ಮೌನದಲ್ಲಿ ಎಷ್ಟೊಂದು ನರಕ ಸದೃಷ ಶಬ್ಧಗಳು, ಅಶ್ಲೀಲ ಪದಗಳು, ವ್ಯಕ್ತಿಯ ಜೀವನದಲ್ಲಿ ಕಡಿಮೆ ಬಾರಿ ಬರಬಹುದಾದ ಉದ್ಘರಿಸುವಂತ ಸಂಗೀತವನ್ನು ನಾನು ನಿತ್ಯವೂ ಕೇಳುತ್ತಿದ್ದೆ. ಅನುಭವಿಸುತ್ತಿದ್ದೆ. ಹಗಲೊತ್ತಿನಲ್ಲೇ ಮಲಗುವ ಬ್ಯುಸಿನೆಸ್ಸಿನಲ್ಲಿ ಸೂರ್ಯನಿಗೆ ನಾ ಬೇಡವಾದೆ. ಚಂದ್ರನಿಗೂ ಕಿಟಕಿಯಲ್ಲಿ ಎಷ್ಟೋ ಬಾರಿ ಹನಿಗಣ್ಣ ಪತ್ರ ಬರೆದೆ. ಅಲ್ಲಲ್ಲಿ ಸಿಗುವ ಸಿಗರೇಟು ಪೀಸುಗಳು ಯಾವ ಕಂಪನಿಯವು ಅಂತ ಗೊತ್ತಾಗದಷ್ಟು ಸುಟ್ಟು ಹೋಗಿದ್ದು ನನ್ನ ಜೀವನದ ಒಡನಾಡಿಗಳೇ ಆಗಿವೆ. ನನ್ನನ್ನು ಸುಟ್ಟವೂ ಕೂಡ ನನಗೆ ಆಪ್ತ. ಆ ರೀತಿ ಸುಟ್ಟಂತಹ ಸಿಗರೇಟುಗಳ ಕಿಡಿ ಭಾಗದಲ್ಲೇ ಒಂದಷ್ಟು ಟಿಪ್ಸು ಇತ್ತಲ್ಲ!. ತೊಡೆ ಭಾಗದಲ್ಲಿ, ಬೆನ್ನಿನ ಕೆಳನಡು, ಎದೆಯ ಒಳಭಾಗ- ಹೀಗೆ ಒಂದೊಂದು ಭಾಗವೂ ಸುಡಲು ಒಬ್ಬೊಬ್ಬರಿಗೆ ಇಷ್ಟ. ಮೊದಮೊದಲು ಸಿಗರೇಟಿನಲ್ಲಿ ಸುಟ್ಟಿಸಿಕೊಳ್ಳುವುದೂ ಯಮಯಾತನೆಯಾಗಿ ಒಂದೆರೆಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲೂ ಪ್ರಯತ್ನ ಪಡಲು ಕಾರಣವಾಗಿದ್ದು ಈಗೀಗ ಅರ್ಥಾತ್ ಜ್ವರಕ್ಕೆ ಕುಂಡಿಯಲ್ಲಿ ಚುಚ್ಚಿಸಿಕೊಳ್ಳುವ ಇಂಜಕ್ಷನ್ನಿನಷ್ಟೇ ಹಿಂಸೆಯಾಗಿಯೂ ಯಾವುದೋ ಹೆಣಕ್ಕೆ ಗೆಲುವು ನೀಡುವ, ಆ ಬಾನಿಗೊಂದು ಬದುಕು ನೀಡುವ, ಈ ಕಡಲಿಗೊಂದು ಕನಸು ನೀಡುವ, ಏನೋ ಪಡೆಯುತ್ತೇನೆ- ಏನು ಪಡೆಯುತ್ತೇನೆ- ಯಾಕೆ ಪಡೆಯುತ್ತೇನೆ ಎಂಬ ಯಾವೊಂದು ನಿಲುವಿಗೂ ಬರಲಾಗದೆ ‘ಒಟ್ಟಿನಲ್ಲಿ ಪಡೆಯುತ್ತೇನೆ’ ಎಂತಷ್ಟೇ ಸಮಾಧಾನವಾಗಿ ಸುಡುವ ಸಿಗರೇಟಿನ ತುದಿಯಲ್ಲಿ ಕಿಡಿಗಳು ಕಡಿಮೆಯಾಗಲೆಂದೇ ಬಯಸುತ್ತೇನೆ. ಅದು ಸುಟ್ಟರೂ ಸುಡದಿದ್ದರೂ ಮುಲುಗುಟ್ಟುತ್ತೇನೆ. ಬಂದವ ಕಾಮ ಪ್ರಿಯನಾಗಲೀ, ಸ್ತ್ರೀ ಪ್ರಿಯನಾಗಲೀ, ಷೋಕಿವಂತನಾಗಲಿ ಸುಡೋದು ಆ ನಾನು ಮುಲುಗುಟ್ಟುವ ಶಬ್ಧಕ್ಕಾಗಿ ಅಂತ ನನಗೆ ಅರ್ಥವಾಗಿ ಹೋಗಿದೆ. ಇಡುತ್ತಿದ್ದಂತೆ ಕೂಗುತ್ತೇನೆ ಮೆಲ್ಲಗೆ. ಅದು ಆ ಕ್ಷಣದ ಉರಿಗಲ್ಲ, ಆ ಕ್ಷಣದ ಭಯಕ್ಕಲ್ಲ, ಆ ಕ್ಷಣದ ಋಣಕ್ಕಲ್ಲ, ಆ ಕ್ಷಣದಿಂದ ಪಾರಾಗಲಲ್ಲ- ನನಗೂ ಇದು ಕಷ್ಟವಾಗುತ್ತಿದೇ ಅಂತ. ಏಕೆಂದರೆ ಇದೆಲ್ಲ ತುಂಬಾ ಕಷ್ಟ ಅಂತ ನನಗೀಗ ಅನಿಸುತ್ತಿದೆಯಲ್ಲ ಆ ಅನಿಸಿಕೆಗೆ ನಾ ಬದುಕಿರೋದು. ಇದಕ್ಕೆಲ್ಲ ಅಂಜದೇ ಸತ್ತ ಎಂದು ಗೊತ್ತಾದಾಕ್ಷಣ ‘ಯಾಕೆ ಸತಾ’್ತ? ಎಂದು ಕೇಳುವ ತೀರ ಕ್ಷುಲ್ಲಕವಾದ, ಸಾಮಾನ್ಯವಾದ, ಸಂಬಂಧವಿಲ್ಲದವನೂ ಸಂಭೋಧಿಸುವ ಪ್ರಶ್ನೆಯಷ್ಟೇ ಸಹಜವಾಗಿ ನನಗಾಗುತ್ತಿರುವ ಪರಿಪರಿ ಹೀನಾಯ ಕಷ್ಟಗಳನ್ನು ಪರಿಗಣಿಸಲಾರೆ. ಹಾಗೆಂದು ಸತ್ತಿದ್ದಾನೆ ಅಂತ ಗೊತ್ತಿದ್ದರೂ ‘ಇಲ್ಲ ನಾನು ಬಿಡೋದೆ ಇಲ್ಲ’ ಎಂದು ಹೆಣವನ್ನು ತಬ್ಬಿಕೊಂಡ ಕರುಳು ಗೋಳಾಡುವುದನ್ನು ಟೀಕಾರ್ಹ ಹೃದಯದವನೊಬ್ಬ ‘ಅದು ಹೇಗೆ, ಸತ್ತವ ಮತ್ತೆ ಬರ್ತಾನಾ, ಈಯಮ್ಮಗೆಲ್ಲೋ ಹುಚ್ಚು’ ಅನ್ನುತ್ತಾ ಬದುಕೇ ಹರಿದ ಬಾನಿನಂತಾದರೂ ಇದೆಲ್ಲ ಕಾಮನ್ ಎನ್ನುವ ಹಾಗೆ ಬಿಟ್ಟು ಬಿಡುವ ಧೋರಣೆಯನ್ನು ತಾಳಲಾರೆ. ಸತ್ತವನ ನೆನಪನ್ನು ಮತ್ತು ಅವನ ಕನಸನ್ನು ನೇಯುವುದು ನನ್ನ ನೆಮ್ಮದಿ. ಹಾಗಾಗಿ ಹಾಸಿಗೆಯಲ್ಲಿರುವ ಕಲೆಗಳನ್ನು ದಿನಚರಿಯಾಗಿ ಮಾಡಿಕೊಂಡು ಅಂಗಾತ ಮಲಗುವ ಕ್ರೀಡೆಯಲ್ಲಿ ಆ ಕಪ್ಪು ಫ್ಯಾನಿನಲ್ಲಿ ಕೂತ ಧೂಳಿನ ಕಣಗಳ ಬದಲಾವಣೆ ನೋಡಿ ಕೊರಗುತ್ತೇನೆ. ಟ್ಯೂಬ್ ಲೈಟಿನ ಸಂಧಿಯಲ್ಲಿ ಮೊದಲು ಇಣುಕಿದ ಹಲ್ಲಿ ತನ್ನಂತೆಯೇ ಇನ್ನು ಏಳೆಂಟು ಹಲ್ಲಿಗಳನ್ನು ಹುಟ್ಟಿಸಿ ಅದರ ವಂಶಾಭಿವೃದ್ಧಿಯಲ್ಲಿ ತೊಡಗಿ ಇಷ್ಟಗಲದಲ್ಲೇ ಎಷ್ಟೊಂದು ಚಟುವಟಿಕೆಯಿಂದಿದೆ ಎಂದು ಸುಮ್ಮನೆಯೂ ಆಗುತ್ತೇನೆ.

ನನಗೆ ಬಂದ ಯಾವೊಬ್ಬ ಗಿರಾಕಿಯ ಮೇಲೆ ಬೇಸರವಾಗೋದು ಅವ ಸುಮ್ಮನೆ ಮಲಗಿ ಹಣಕೊಟ್ಟು ಹೋದಾಗ. ಪುಕ್ಕಟೆ ದುಡ್ಡು ನನ್ನನ್ನು ನಿಜವಾಗಿ ವೇಶ್ಯೆ, ಸೂಳೆ ಅಂತ ಸಾಭೀತು ಪಡಿಸುತ್ತದೇನೋ ಅಂತ ತಿಳಿದಿದ್ದೀನಿ. ಅದು ನನಗೆ ಬೇಡ. ಅವನಿಗೆ ಯಾಕೋ ಎರಗುವ ಮನಸಿರಲಿಲ್ಲ. ಪಿಂಕ್ ಟೀಷರ್ಟಿನ ಕ್ವಾಲಿಟಿ ನೋಡಿ ಆಸಾಮಿಯ ಅಂತಸ್ತನ್ನು ಅಳೆಯಲೂ ನಾ ಹೋಗಲಿಲ್ಲ. ತಿರಬೋಕಿಯಂತೆ ಕಂಡ. ತಲೆಗೂದಲು ನುಣುಪಿಗೆ ಕಂಗೊಳಿಸಿ ಯಾಕೋ ಮುಟ್ಟಬೇಕೆನಿಸಿತು. ಅರೆ! ನನಗೇಕೆ ಈ ಬಗೆಯ ಬಯಕೆಯಾಗುತ್ತಿದೆ! ಎಂದು ಆಶ್ಚರ್ಯಳಾದೆ. ಬಯಕೆಗಳೆಲ್ಲ ಬಣ್ಣ ಇಲ್ಲದ ರೈಲು ಕಂಬಿಗಳಂತೆ, ಸಾಬರ ಕೈಯಲ್ಲಿ ಅರ್ಧ ರೆಡಿಯಾಗಿ ಬೀದಿಯಲ್ಲಿ ಮಗುಚಿ ಬಿದ್ದಿರುವ ಬೀರುವಿನಂತೆ, ಪುಟ್‍ಪಾತಿನಲ್ಲಿ ಸತ್ತ ಹೆಗ್ಗಣದ ಹೊಟ್ಟೆಯಿಂದ ಕಾಗೆಯೊಂದು ಕೊಕ್ಕಿನಲ್ಲಿ ಈಜಿ ತೆಗೆಯುತ್ತಿರುವ ಕರುಳಿನಂತೆ ಗೌಣವಾಗಿ, ಯಾವುದೇ ನೀರಡಿಕೆಗಳಿಲ್ಲದ ದಾಹದಂತೆ, ನಾಲ್ಕು ವರ್ಷಕ್ಕೊಮ್ಮೆ ಫೆಬ್ರವರಿಯಲ್ಲಿ ಬರುವ 29 ನೇ ತಾರೀಖಿನಂತೆ ಒಂದು ಹೀನ ವಸ್ತುವಿನ ತೀರ ಚಿಕ್ಕ ಕಣದ ಮೌಲ್ಯವು ಇಲ್ಲವಾಗಿಬಿಟ್ಟಿದೆ. ಹೀಗಿರುವಾಗ ನಾನು ಯಾಕೆ ಅವನನ್ನು ಮುಟ್ಟಲಿ ಅಂದುಕೊಳ್ಳುತ್ತಾ ಮುಟ್ಟಿದೆ. ನೋಡಿದ. ಒಬ್ಬಳೇ ಮಲಗಿಬಿಡೋದು ವಾಸಿ ಎಂದುಕೊಳ್ಳುತ್ತಲೇ “ಮಲಗೋಣವಾ” ಎಂದೆ. ಅಧಿಕ ಷೆಕೆಗಾಗಿ ನನ್ನ ಅಪ್ಪ ಒಂದಾನೊಂದು ಕಾಲದಲ್ಲಿ ಷರ್ಟು ತೆಗೆಯುವಂತೆಯೇ ಈಗ ಈತ ಟೀಷರ್ಟ್ ತೆಗೆದ. ಅವ ನಿಜಕ್ಕೂ ಬೆವತಿದ್ದ. ನನಗೆ ನಾನು ಈಗ ಏನು ಮಾಡಬೇಕು ಎಂಬುದೇ ತೀರಾ ಉನ್ನತವಾದ ಹೈಕೋರ್ಟಿನ ಫೈಲಿನ ಪ್ರಶ್ನೆಯಾಯಿತು. ನಾನು ಮೌನಿಯಾದೆ. ಈಗ ಅವ ಮುಟ್ಟಿದ. ಮುಂದುವರೆಯುತ್ತಾನೆ ಅಂದುಕೊಂಡು ಸೆರಗು ಎಳೆದು ಎದೆಯ ಗುಂಡಿಗೆ ಕೈ ಹಾಕಿದೆ. ಬಿಕ್ಕಳಿಸಿದ. ಅವನ ಕಣ್ಣೀರು ಹಾಯುವುದು ಶಬ್ಧವಾಗಲಿಲ್ಲ. ಅವನ ಎದೆ ಮೇಲೆ ಬಿದ್ದವೋ, ಹಾಸಿಗೆಯಲ್ಲಿ ಅಧಿಕ ಕಾಲದಿಂದ ಇದ್ದ ನನ್ನ ಮತ್ತು ಗಿರಾಕಗಳ ನಾನಾ ಬಗೆಯ ಕಲೆಗಳೊಂದಿಗೆ ವಿಲೀನವಾಗಿ ಆ ಕಲೆಗಳಿಗೆ ‘ಇದೇನಿದು, ಗಂಡಸಿನ ಕಣ್ಣೀರು’ ಅಂತ ಗೊಂದಲವಾಯಿತೇನೋ. ತೀರಾ ತಡವರಿಸುತ್ತಾ ಈತ ಹೋಗಿ ಸ್ವಿಚ್ ಒತ್ತಲೂ ಪಟ್ ಪಟ್ ಅಂತ ಗೊತ್ತಿಲ್ಲದೆ ಎಲ್ಲವನ್ನೂ ಒತ್ತಿದ, ಬೆಳಕು ಬಂತು. ಎಷ್ಟೋ ಜನರ ಬದುಕು ಹೀಗೆ ಅನಿಸುತ್ತದೆ. ಯಾವುದನ್ನೋ ಅರಸಬೇಕು ಎಂಬುದು ಗೊತ್ತಿಲ್ಲದೆ ಗೊತ್ತು ಎಂದು ನಾನಾ ಪ್ರಕಾರ ಅರಸಿ ಹೊತ್ತಿಕೊಳ್ಳುತ್ತಾರೆ, ಇಲ್ಲವೇ ಅರಸುತ್ತಲೇ ಇರುತ್ತಾರೆ. ಅದು ಕಾಣದ ಕಡಲಿನ ಕವಿತೆಯ ಹಾಗೆ. ಬೆಳಕಿನಲ್ಲಿ ನನಗವ ಚನ್ನಾಗಿ ಕಂಡ. ಒಂದು ಬಗೆಯ ಹೊಸದಾದ ಮುಜುಗರ, ಈ ಕಸುಬಿಗೆ ನಾನು ಹೊಸಬಳೇನೋ ಅನ್ನುವಷ್ಟು ಚಂಚಲತೆ, ನೋಡುವಾಗ ನನ್ನ ಇಣುಕಿದ್ದ ಎದೆ ಮುಚ್ಚಬೇಕು ಎನಿಸಿತು. ನನ್ನ ರೂಮೇಕೆ ಇಷ್ಟು ಅಸ್ವಸ್ಥವಾಗಿದೆ ಅನಿಸಿತು. ಒಂದೆರೆಡು ಜಿರಲೆ ಕಿಟಕಿಯಲ್ಲಿ ಹಾದು ಮಾಯವಾದೊ. ಅವ ಬಂದ. ಕಣ್ಣೀರು ಕಾಣುತ್ತಿಲ್ಲ. ಒರೆಸಿಕೊಂಡನೇನೋ, ಅಥವಾ ಕಣ್ಣೀರು ನಿಂತಿರಬೇಕೇನೋ ಗೊತ್ತಾಗಲಿಲ್ಲ. ಸ್ವಲ್ಪ ವಾಲುವ ಹಾಗೆ ಕುಳಿತೆ. ಆ ಕುಳಿತ ಭಂಗಿಯಲ್ಲಿ ನನ್ನ ಮಂಡಿಗಳು ಮಕ್ಕಳ ಜಾಮಿಟ್ರಿ ಬಾಕ್ಸಿನ ಕೈವಾರದ ಸ್ಕ್ರೂ ಜಾಗದಂತೆ ಉಂಡೆಯಾಗಿ ಕಾಣುವಂತೆ ಮೇಲೆದ್ದವು. ಕೈ ಇಟ್ಟು ನನ್ನ ಕಾಲನ್ನು ನೇರ ಮಾಡಿದ. ತಲೆಯಿಟ್ಟು ತೊಡೆಯ ಸೀರೆಯ ಅಲೆಗಳಲ್ಲಿ ಅವಿತುಕೊಂಡ. ಎಷ್ಟೋ ಕೊಳಕಿನ ಗೂಡಲ್ಲಿದ್ದರೂ ನನ್ನ ಉಡುಗೆಗಳಲ್ಲಿ ನಾಜೂಕು ಉಳಿಸಿಕೊಳ್ಳೋದು ನಾನು ಕಲಿತ ಈ ವೃತ್ತಿಯ ಪ್ರಮುಖ ವಿದ್ಯೆಯಾಗಿತ್ತು. ಅದರಲ್ಲಿ ಇವ ಲಾಭ ಹೊಂದಿದನಾ, ಸೀರೆಯ ಗಮಲಿನಲ್ಲಿ ಕರಗಿ ಹೋದನಾ, ನಾನು ಬದುಕಿರುವೆನಲ್ಲಾ, ನನಗೂ ಸ್ವರವಿದೆಯಾ, ಇವನು ಯಾವ ಬಗೆಯ ಗಂಡಸು?

ಹಾಗೆ ರಾತ್ರಿಯ ವಾರೆಗಣ್ಣಿನೊಂದಿಗೆ ಕಿಟಕಿಯಾಚೆಗೆ ಇಣುಕಿದೆ. ಇವನ ಮನೋವ್ಯಾಕುಲತೆ ಅರ್ಥವಾಗಲಿಲ್ಲ. ಏಳಿಸಿ ಮುಖದ ಮೇಲೆರೆಡು ಬಿಡಲಾ, ಎಂದಿನಂತೆ ಸುಮ್ಮನೆ ಕಣ್ಮುಚ್ಚಲಾ, ಕಿಟಕಿಯಾಚೆಯ ಬೆಳಕನ್ನು ಧೈರ್ಯಕ್ಕಾಗಿ ರೂಮೊಳಗೆ ಕರೆಯಲಾ, ಅ ಲೈಟು ಕಂಬದ ಹಳದೀ ದೀಪಕ್ಕೆ ನಕ್ಷತ್ರದೊಂದಿಗೆ ಸಂಬಂಧ ಬೆಳೆಸಲಾ, ಅಲ್ಲೆಲ್ಲೋ ಅರಚಿಕೊಳ್ಳುತ್ತಿರುವ ನನ್ನ ಪ್ರಕಾರ ಕಪ್ಪು ಬಣ್ಣದ ನಾಯಿಯ ನಾಳಿನ ಜೀವನ ವಹಿವಾಟು ಊಹಿಸಲಾ, ಸೊಯ್ ಎಂದು ಸುತ್ತುತ್ತಾ ಸುತ್ತುತ್ತಾ ಕೂತ ಸೊಳ್ಳೆಯ ಕಗ್ಗೊಲೆ ಕೈಗೊಳ್ಳಲಾ, ನನ್ನ ನೆರಳು ಪ್ರಾಧಾನ್ಯವಾಗಿರುವ ಆ ಗೋಡೆಗೆ ಈತನನ್ನು ಸೇರಿಸಿಕೊಳ್ಳುವಂತೆ ಹೊಟ್ಟೆಕಿಚ್ಚು ಪಡಲಾ- ಯಾಕೋ ಎದ್ದು ಕೂತು ಕೈ ಹಿಡಿದ. ನಿನಗೆ ನಾನು ಎಷ್ಟನೆಯವನು? ನಿನ್ನ ಹೆಸರೇನು? ನಿನ್ನ ರೇಟಿನಲ್ಲಿ ರಾಜಿಯಿಲ್ಲವೇ? ಮುಂದೆ ಬಂದಾಗ ನೀನೇ ಸಿಗು ಅಂತೇನೂ ಹೇಳಲಿಲ್ಲ-ಕೇಳಲಿಲ್ಲ. ಕಣ್ಣು ಒದ್ದೆ ಮಾಡಿಕೊಂಡಿದ್ದ. ನನ್ನ ತೊಡೆಯ ಸೀರೆಯನ್ನು ಅವನಿಗೆ ಗೊತ್ತಾಗದಂತೆ ಬೆರಳಿಂದ ಸಂಚರಿಸಿದೆ. ತುಸು ಒದ್ದೆಯಾಗಿದೆ. ಏನಾಯ್ತು ಎಂದುಬಿಟ್ಟೆ. ತಾಯಿ ತೀರಿಕೊಂಡಳು ಎಂದ. ಯಾಕೆ ಉಸಿರುಬಿಟ್ಟೆ ಎನಿಸಿತು. ನನಗೂ ಅಳು ಬಂತು. ಅಪ್ಪಿಕೊಳ್ಳೋಣ ಅನಿಸಿತು. ತಾಯಿ ಸತ್ತಳು ಎಂಬುದು ಅವನಿಗೆ ಅವನ ತೀರಾ ಖಾಸಗೀತನದ ಪ್ರಮುಖ ಗೋರವಾದದ್ದೇ. ಆದರೆ ನನಗೆ ಅದ್ಯಾವುದೂ ಇಲ್ಲ. ಅಲ್ಲ, ನಾನ್ಯಾಕೆ ಅತ್ತೆ ಎಂಬುದೂ ಗೊತ್ತಿಲ್ಲ. ಕಣ್ಣೀರು ಬಂತು. ಹನಿ ಜಾರುವುದು ಗೊತ್ತಾಗುತ್ತಿದ್ದಂತೆ ಒರೆಸಿಕೊಂಡೆ. ಆ ಹಾಸಿಗೆಯ ಕಲೆಗಳಲ್ಲಿ ತೀರಾ ಸಾಮಾನ್ಯವಾಗಿರುವ ನನ್ನ ಕಂಬನಿಯ ಅವಶ್ಯವಾದರೂ ಏನೂ ಇಲ್ಲ. ಆದರೆ ಅದಕ್ಕಲ್ಲ ನಾ ಕಣ್ಣೀರು ಒರೆಸಿಕೊಂಡದ್ದು. ಟಾಯ್ಲೆಟ್ ಎಲ್ಲಿ ಎಂದ-ಅಲ್ಲಿ ಎಂದು ಕೈ ಮಾಡಿದೆ. ಅದಾದರೂ ಸ್ವಚ್ಛವಾಗಿದೆ ಎಂಬ ಸಮಾಧಾನ ನನ್ನಲ್ಲಿರಲಿಲ್ಲ. ಆದರೆ ಅದು ಸ್ವಚ್ಛವಾಗಿತ್ತು. ಮನೆಯಂಗಳ ಗುಡಿಸಿ ರಂಗೋಲಿ ಬರೆದು ಸ್ನಾನದ ನಿಮಿತ್ತ ಹಸಿಗೂದಲ ಹಿಂಡನ್ನು ¨ಟ್ಟೆಯಲ್ಲಿ ಕಟ್ಟಿ ಪ್ರದರ್ಶನಕ್ಕಿರಿಸಿ ವಯ್ಯಾರದಿಂದ ಈ ರಂಗೋಲಿಗಿಂತ ನಾಳೆ ಬರೆಯಲಿರುವ ರಂಗೋಲಿಯನ್ನು ನೆನೆದು ಸಂಭ್ರಮಿಸುವ ‘ಮಹಿಳೆ’ಯ ಬಾಳು ನನ್ನದಲ್ಲವಲ್ಲ!. ಅದಕ್ಕೇ ಪದೇ ಪದೇ ಟಾಯ್ಲಟ್ಟನ್ನೇ ತಿಕ್ಕಿ ತೀಡಿ ತೊಳೆಯುತ್ತಿದ್ದೆ. ಇದ್ದ ಕೋಪವನ್ನೆಲ್ಲ ರೂಮಿನ ಧೂಳಿಗೂ, ಸೊಳ್ಳೆಗಳಿಗೂ, ಜಿರಲೆಗಳಿಗೂ, ಹಲ್ಲಿಗಳಿಗೂ, ಇಣುಕಿ ಹೋಗುವ ಹೆಗ್ಗಣಗಳಿಗೂ, ತಡೆದು ನಿಲ್ಲಿಸಿದ ಕಿಟಕಿಯ ಬೆಳಕಿನ ಕೋಲಿನ ತಾಳ್ಮೆಗೂ, ಅಸಾಮಾನವಾದ ಮಂಚದ ಕಾಲಿಗೆ ಕೊಟ್ಟ ಪೇಪರ್‍ನ ಉಂಡೆಗೂ, ನನ್ನ ಹೆಸರಿನ ಮುಂದೆ ಇರುವ ಅಸಂಬಂಧ, ಅಪ್ರಯೋಜಕ ಆರ್ ಎಂಬ ಇನ್ಷಿಯಲ್‍ಗೂ, ಕಾಲುಂಗುರ ಪೋಣಿಸದ ಕಾಲ್ಬೆರಳಿಗೂ ಹಂಚಿದ್ದೆ. ಎಷ್ಟೋ ಬಾರಿ ನನ್ನ ಚರ್ಮದ ಮೇಲೆ ಕೂತ ಸೊಳ್ಳೆಯ ಹೊಟ್ಟೆ ನನ್ನ  ರಕ್ತದಿಂದಲೇ ದಪ್ಪವಾಗುವುದನ್ನು ನೋಡಿ ಸುಮ್ಮನಾಗಿದ್ದೇನೆ. ನಾಜೂಕಿನಿಂದ ಬಂದ ಹಲ್ಲಿ ಪೆದ್ದು ಪೆದ್ದಾಗಿ ಕೂತ ಕೀಟಕ್ಕೆ ಕಣ್ಣುಹಾಕಿ, ಹೊಂಚು ಹಾಕಿ ಅಷ್ಟು ನಿಷ್ಠೂರ ಶಾಂತಿಯಿಂದ ಅದರ ಕಾಯುವಿಕೆಯನ್ನು ಕಾದಿದ್ದೇನೆ, ಜಿರಲೆಯನ್ನು ಕಂಡು ಬೆಚ್ಚುವ ಕೆಚ್ಚಲೆದೆಯು ತಂದುಕೊಂಡ ಧೈರ್ಯ ನೋಡಿ ಮರುಗಿದ್ದೇನೆ. ಧೂಳಿನ ನೆಲದಲ್ಲಿ ಗೀಚಿದ ನನ್ನ ಹೆಸರು ನಾನೇ ಅಳಿಸಿ ಪರಿತಪಿಸಿದ್ದೇನೆ. ಮತ್ತೆ ಅಲ್ಲೇ ಧೂಳು ಕೂಡುವುದನ್ನು ಕಂಡಿದ್ದೇನೆ.

ಟಾಯ್ಲೆಟ್ಟಿನಲ್ಲಾದ ಶಬ್ಧದಿಂದ ಅವ ಮುಖ ತೊಳೆಯಲೋದದ್ದು ಎಂಬುದು ಅರ್ಥವಾಯಿತು. ಪ್ರಸನ್ನನಾಗಿ ಕಂಗೊಳಿಸಿದ್ದ. ಅವನ ಹೆಸರು ಕೇಳಬೇಕೆನಿಸಿತು. ಎದ್ದುನಿಂತೆ, ಒಮ್ಮೆ ಹಾಸಿಗೆಯ ಬೆಡ್‍ಶೀಟ್ ತೆಗೆದು ಒದರಿದೆ. ಧೂಳು ರಿಲೀಸಾಗಿ ಹೊಮ್ಮುತ್ತಿತ್ತು. ಹಾಸಿಗೆಯ ಮೇಲಿದ್ದ ಒಂದೆರೆಡು ಸಿಗರೇಟಿನ ಪೀಸನ್ನು ಕೈಯಲ್ಲಿ ಸರಿಸಿ ಅವನನ್ನು ನೋಡಿದೆ. ಅವ ಯಾತಕ್ಕಾಗಿ ಎನ್ನುವಂತೆ ನೋಡುತ್ತಿದ್ದ. ಒಂದು ಕಡೆಯಿಂದ ರೂಮಿನ ಕಸ ಗುಡಿಸಿದೆ. ಹೊಸದಾಯಿತು. ನಾನು ಮುಖ ತೊಳೆದುಕೊಂಡು ಸಿಂಧೂರವಿಲ್ಲದೆ ಹಣೆ ಚನ್ನಾಗೇ ಇದೆ ಎಂದುಕೊಂಡೆ. ಕೂತುಕೊಳ್ಳುವಂತೆ ಹೇಳಿದೆ. ಅವ ಮಲಗಿದ. ನಿದ್ದೆ ಹೋದ. ಗೋಡೆಗೊರಗಿ ಬಾಳನ್ನು ಕೆದಕಲು ಹೋಗಿ ಛೀಮಾರ ಹಾಕಿಸಿಕೊಂಡು ಕಕ್ಕಾಬಿಕ್ಕಿಯಾದೆ. ಧೂಳು ಶಾಂತಿಯಾಗುವಲ್ಲಿ ಜಯಶೀಲನಾಗಿತ್ತು. ದೀಪ ಆರಿಸಿ ಬಂದು ಮಗ್ಗುಲಾದೆ. ಥೇಟ್ ಗೃಹಿಣಿಯಂತೆ ಅನಿಸುತ್ತಿತ್ತು. ಗೃಹಿಣಿಯಾಗದ ನಾನು ಅದರ ಅನುಭವವಿಲ್ಲದ ನಾನು ಸಮಾಜ ಒಪ್ಪುವಂತಹ ಲೈಂಗಿಕ ಹಿತಾಶಕ್ತಿಯಲ್ಲಿ ಎಳ್ಳಷ್ಟು ಪ್ರಾಮಾಣಿಕತೆಯಿಲ್ಲದ ನಾನು ಇದು ಲೈಂಗಿಕತೆಯೋ, ಹಿಂಸೆಯೋ, ಹೀನ ಕೃತ್ಯವೋ ಎಂಬ ಗೊಂದಲದಲ್ಲಿರುವ ನಾನು ಅದು ಯಾವ ಹಕ್ಕಿನಿಂದ ‘ಗೃಹಿಣಿಯಂತೆ’ ಎಂಬ ಪದ ಬಳೆಸಿದೆನೋ! ತಬ್ಬಿಕೊಂಡೆ, ಅವ ಏನಾದರೂ ದೂರ ತಳ್ಳಿದರೆ ಮತ್ತೆ ರೂಮಿನಲ್ಲಿ ಕಸಗಳನ್ನೆಲ್ಲ ತಂದು ಎರಚಿ ಆದರಗಿತ್ತಿಯ ತಂಗುದಾಣಕ್ಕೆ ಯೋಗ್ಯತೆ ನೀಡುವೆ ಎಂದುಕೊಂಡು ದೂರ ಸರಿದು ಮಲಗಿದೆ.

ಎಷ್ಟೋ ಹೊತ್ತಾದ ಮೇಲೆ ಎಚ್ಚರಗೊಂಡೆ. ಅವನ ಕಾಲು ನನ್ನ ಮೇಲಿತ್ತು. ನನ್ನ ಬಟ್ಟೆ ಕದಡಿಲ್ಲ. ವಿಚಿತ್ರ ನೋವಿಲ್ಲ. ಹಿಸುಕಿದ ಹಣಬೆಯಂತೆ ನನಗೆ ನಾ ಬಾಸವಾಗುತ್ತಿಲ್ಲ. ಒಂದು ಬಗೆಯ ಸಂತಸ. ಒಂದು ಬಗೆಯ ಸಂಕಟ. ಕಾಲೇಕೊ ಈಗ ಭಾರವಾಗುತ್ತಿದೆ. ಮೆಲ್ಲ ಸರಿಸಿಕೊಳ್ಳಲು ಕೊಸರಾಡುವಾಗ ಎದ್ದ. ಅಂತಹ ಗಾಢ ನಿದ್ರೆಯಲ್ಲಿ ಅವನಿದ್ದಂತೆ ಅನಿಸಲಿಲ್ಲ. ಪಕ್ಕ ಬಂದು ಪುರಾಣ ಪ್ರಾರಂಭಿಸಿದ. ಬೇರೆ ದಾರಿಯಿಲ್ಲದೆ ಕೇಳಿದೆ. ಅವ ಮೌನವಾಗೇ ಇದ್ದಷ್ಟು ಹೊತ್ತು ನಾನು ಕಳೆದುಹೋಗುತ್ತಿದ್ದೆ. ಈಗ ನಿದಿರೆ ಬರುವಂತೆ ಸೋತಂತೆ ಅನಿಸಿ ಒಂದೆರೆಡು ಬಾರಿ ಜಗ್ ಜಗ್ ಎಂದು ಎಚ್ಚೆತ್ತುಕೊಂಡೆ. ಒಂದು ಬಗೆಯ ಹೀನತೆಯಲ್ಲಿಯೇ ಹದವಾಗಿದ್ದ ನಾನು ನಿಜವಾದ ಹದದ ಭಾವನೆಗೆ ಒಗ್ಗಿಕೊಳ್ಳಲಾಗದೆ ಪ್ರಯತ್ನಿಸುತ್ತಿದ್ದೆ. ಆಗುತ್ತಿರಲಿಲ್ಲ. ನನ್ನದು ನಾಟಕೀಯವೇನೋ ಎನಿಸಿತು. ಆದರೂ ಹೂಂ, ಹೂಂ ಅನ್ನುತ್ತಿದ್ದೆ. ನಿನಗೆ ಬೇರೆ ಕೆಲಸ ಒಗ್ಗುವುದಿಲ್ಲವಾ ಅಂದ, ರೇಗಿದೆ. ನಕ್ಕ. ಮತ್ತೂ ರೇಗಿದೆ, ತಬ್ಬಿಕೊಂಡ. ಸುಮ್ಮನಾದೆ. ಇನ್ನೇನು ಬೆಳಕನ್ನು ಕರೆಯುವುದರಲ್ಲಿದ್ದ ಜಗತ್ತು ನನಗಾದಿನ ಮೋಸ ಮಾಡಲು ಕಾದಿತ್ತು. ಸೆರಗು ಸರಿಸುವ ಅಪ್ಪುಗೆ ಅದಾಗಿರಲಿಲ್ಲ. ಯಾಕೋ ಮೈ ರೋಮಾಂಚನವಾಗಲು ಪ್ರಾರಂಭಿಸಿತ್ತು. ನಾನೇ ದುಡ್ಡುಕೊಟ್ಟು ಅವನನ್ನು ಸುಖಿಸಲ ಅನ್ನುವಷ್ಟು ಬದಲಾಗುತ್ತಿದ್ದೆ. ಅಪ್ಪುಗೆ ಗಟ್ಟಿಯಾಯಿತು. ಪರ್ಸು ತೆಗೆದು 3000 ಕೊಟ್ಟ. ಅವನಿಗೆ ದುಡ್ಡು ಕೊಡುವುದು ಕಷ್ಟವಾಗಿತ್ತು. ನನಗೆ ಪಡೆಯೋದು ಯಮಯಾತನೆಯಾಗಿತ್ತು. ಎಷ್ಟಿದ್ದರೂ ನಮ್ಮಿಬ್ಬರದು ಒಂದು ರಾತ್ರಿಯ ವ್ಯವಹಾರ ಎಂಬುದು ಅಸಹನೀಯವಾಗಿ, ಅನಿರ್ವಚನೀಯವಾಗಿ ಕೊಲ್ಲುತ್ತಿತ್ತು. ದುಡಿದ ದುಡ್ಡು ಅಂತ ಅವನಿಗನಿಸಲು ಶುರುವಾಗಿತ್ತೇನೋ, ಪ್ರೀತಿಗೆ ಕಾಸು ಪಡೆದೆನಾ ಅನಿಸಲು ನನಗೆ ಶುರುವಾಗಿತ್ತು. “ಇಲ್ಲಿಯ ಈ ನರಕದಿಂದ ಹೊರಬರುವುದಾದರೆ ನನ್ನ ಗೆಳತಿಯ ಗಾರ್ಮೆಂಟಿನಲ್ಲಿ ದುಡಿಸುತ್ತೇನೆ. ಈಗ ಸಿಗುವಂಗೆ ಕೈತುಂಬಾ ಸಿಗದಿದ್ದರೂ ಹೊಟ್ಟೆ ತುಂಬುವಷ್ಟು ಸಿಗುತ್ತದೆ. ನನ್ನ ಏರಿಯಾದಲ್ಲೇ ಪಿಜಿ ಒಂದಿದೆ. ನಾನೇ ಮಾತನಾಡುತ್ತೇನೆ. ಆದಷ್ಟು ಬೇಗ ಹೇಳು” ಎಂದು ಅವನ ದೂರವಾಣಿ ಸಂಖ್ಯೆ ಕೈಗಿತ್ತ. “ಅಮ್ಮನ ಸಾವಿನಿಂದ ಸೋತಿದ್ದೇನೆ, ಒಂದೆರೆಡು ವಾರದಲ್ಲಿ ಹೊಸಬನಾಗಲು ಮುಂಬಯಿಯ ನನ್ನ ಚಿಕ್ಕಪ್ಪನನ್ನು ಅರಸಿ ಹೋಗುತ್ತಿದ್ದೇನೆ, ಯಾವ ಕ್ಷಣ ಇಲ್ಲಿಂದ ಹೊರಡುತ್ತೀಯೋ ಆ ಕ್ಷಣದಿಂದ ನಿನ್ನ ಬಾಳು ಬದಲಾದೀತು” ಎಂದು ಒಬ್ಬ ಒಳ್ಳೆಯ ಜ್ಞಾನಿಯ ನುಡಿಗಳನ್ನು ನುಡಿದು ಯಾಕೋ ಕೆಟ್ಟವನಾದ. ಬಿಟ್ಟು ಹೋಗುತ್ತಿರುವನಲ್ಲಾ ಎಂದುಕೊಳ್ಳುತ್ತಾ ವಾಸ್ತವಕ್ಕೆ ನಾ ಮರಳಿ ಬಂದೆ. ತುಂಬಾ ದೊಡ್ಡ ಮನುಷ್ಯನಾದ. ಆ ನಂಬರನ್ನು ನೋಡುತ್ತಾ ಇವು ನನ್ನ ಹಣೆಬರಹದ ಕುರುಹುಗಳಾ ಅನಿಸಿದವು. ಮತ್ತೆ ಕಸವನ್ನೆಲ್ಲಾ ರೂಮಿನಲ್ಲಿ ಹರಡಿದೆ. ಆ ಬಿಲ್ಡಿಂಗಿನ ಗೇಟು ಯಾವಾಗ ತೆರೆದಿಡುತ್ತದೆ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ಮುಂದಾಗಿ ಸಮಯಕ್ಕಾಗಿ ಬದುಕಿದೆ. ಕಾಲುಂಗುರವಿಲ್ಲದ ಬೆರಳು ಸುಂದರವಾಗಿಯೇ ಕಂಡಿತು. ಥತ್ ನನ್ನ ಜನ್ಮಕ್ಕಿಷ್ಟು ಅನ್ನಿಸಿತು. ಬದಲಾಗಬೇಕು ಎಂದುಕೊಂಡೆ. ಸೂರ್ಯನಿಂದ ಬಚಾವಾಗಿದ್ದು ಸಾಕೆನಿಸಿತು. ಯಾವುದೋ ಸಾಧನೆಯಲ್ಲಿ ಗೆದ್ದು ಆಕಾಶದಲ್ಲಿ ಹಾರಾಡುವ ಹಾಗಾಯಿತು. ಜೈಲಲ್ಲಿದ್ದು ಜಾತ್ರೆಯಲ್ಲಿರುವಂತೆ, ದೀಪವಿಲ್ಲದೆ ಮನದ ಜ್ಯೋತಿ ಧಗ್ ಎಂದು ಹೊತ್ತಿ ಉರಿದಂತೆ, ಸಾಕುವ ಗಂಡನಿದ್ದರೂ ಮಗು ಬೇಡ ಅಂದುಕೊಳ್ಳುತ್ತಿದ್ದವಳು ಈಗ ಗಂಡನಿಲ್ಲದಿರುವಿಕೆಯಲ್ಲಿಯೂ ದತ್ತು ಪಡದಾದರೂ ಮಗು ಸಾಕುತ್ತೇನೆ ಎನ್ನುವ ಬಗೆಯ ಆಕಾಂಕ್ಷೆಗೆ, ಮಮತೆಯ ಉತ್ಕಟತೆಗೆ, ಮನುಷ್ಯತ್ವದ ಮಜಲಿಗೆ ಬರುವಾಗಲೇ ಕಟ್ಟಡದ ಗೇಟು ಮುಚ್ಚಿಕೊಳ್ಳುತ್ತಿತ್ತು. ನಂಬರ್ ಅನ್ನು ಗಟ್ಟಿಯಾಗಿ ಅದುಮಿಟ್ಟುಕೊಂಡು ಹೊಸ ಸೂರ್ಯನನ್ನು ನೋಡಿದಳು. ಆ ಕಿಟಕಿಯ ಕಂಬಿಯಲ್ಲಿ ಬಣ್ಣದ ಚಕ್ಕೆ ಎದ್ದು ಅದರ ಬಣ್ಣ ರೈಲು ಕಂಬಿಯನ್ನು ಹೋಲುತ್ತಿತ್ತು.

No comments:

Post a Comment