Thursday 16 March 2017

"ಹೆಂಗರುಳು"-- ಚಂದ್ರು ಎಂ ಹುಣಸೂರು

"ಹೆಂಗರುಳು"

ಹೋಗು ಹೋಗು ತಿರುಗಿ ನೋಡದೆ
ಎಲ್ಲಕ್ಕೂ ನನ್ನನ್ನೇ ಹೋಲಿಸಿ
ಎಲ್ಲವನ್ನು ನನ್ನಲ್ಲೆ ಹೊರಿಸಿ
ಏನಿಲ್ಲವೆಂಬಂತೆ ಆರಾಮಾಗಿ ಹೋಗುತ್ತೀಯಾ?
ನೋಡಿ ಕೂಡ ನೋಡದೆ, ಹೋಗು ಹೋಗು ಇರಲಿ!!

ಮಡಿಲೇ ಬೇಕಿತ್ತು ಆಗ
ಕಿರುಗೊರಕೆ ಹೊಡೆದು ಒದ್ದೆ ಮಾಡಲು
ಮೊಲೆಯೂಡುವಾಗ ಮುಚ್ಚಿದ ಸೆರಗ
ನೀ ಕಿತ್ತು ಕಿತ್ತು ಎಸೆಯುವಾಗಲೂ ನಾ ನಕ್ಕೆ
ಮುಲಾಜಿಲ್ಲದೆ ಅಂದು ಸುರಿದ ಸಿಂಬಳ ಈಗ ಇರಬೇಕಿತ್ತು
ನಾ ಮಾತನಾಡುವ ಪ್ರಮೇಯವೇ ಇರಲಿಲ್ಲ
ಈಗ ಹೋಗುತ್ತೀಯಾ? ಹೋಗು! ಪರವಾಗಿಲ್ಲ

ನಕ್ಷತ್ರ ಲೋಕದಲ್ಲಿ ನಾಳೆ ಬರುವ ನೆಂಟನೊಬ್ಬನಿದ್ದ
ಅವನ ತೋರಿಸಿ ತುತ್ತನೀಡಲು ಖಾಲಿಯಾಯ್ತು ಬಟ್ಟಲು
ಈ ಜಾಗವಿಲ್ಲದ ಸುಳ್ಳುಗಳ ನಡುವೆ
ನಿನಗೆ ನಾ ಎಷ್ಟು ಸುಳ್ಳು ಹೇಳಿಲ್ಲ
ಎಲ್ಲವೂ ನಿನ್ನ ಮೋರೆ ಅರಳಲಿ ಅಂತಲೇ ಅಲ್ಲವಾ?
ಕೇಳಿ ನಗುತ್ತಾ ಈಗ ಹೋಗುತ್ತೀಯಾ, ಹೋಗಿಬಿಡು
ತಡಮಾಡದೆ!

ಸೆರಗುಗಳ ಬದಲಾವಣೆಯಲ್ಲಿ ಮೌನಿ ನಾನು
ನನ್ನದೆಂಬ ಸ್ವಾರ್ಥದಲ್ಲಿ ಹೆಣವಾದರೂ
ಕೊನೆಗೂ ಹನಿಯಾಗಲಿಲ್ಲವಲ್ಲ ಆಸರೆಯ ಜೇನು
ಯಾವ ಭಗವಂತ ಬಂದಿದ್ದ ಆಗ
ಅಂಡುತೊಳೆದ ಅಂಗೈ ಈಗ ಸುಕ್ಕುಸುಕ್ಕಾಗಿ ಸಾಕ್ಷಿ ಅಳಿಸಿದೆ
ನನಗೆ ಗೊತ್ತು, ಎಲ್ಲವೂ ನಿನಗೂ ಗೊತ್ತು ಅಂತ
ಆದರೂ ಹೋಗ ನಿಂತೆಯಲ್ಲ, ಹೋಗಪ್ಪ ಇರಲಿ,

ಕನಸು ಕಾಣಬಹುದು ಅಂತ ಕಾಲು ಚಾಚಲು
ಏರಿದನೊಬ್ಬ ರಾಕ್ಷಸ, ಅದು ಸಾರಾಯಿಯ ಸಾಯುವ ಗಮಲು
ಒಂದು ಹೃದಯಕ್ಕೆ ನನ್ನನ್ನು ನಾ ಹಿಂಡುಕೊಂಡೆ
ಈತ ಹೇಳಿ ಕೇಳಿ ಹಿಂಡದೆ ಹಣ್ಣಲ್ಲದ ಕಾಯಿ ಕಿತ್ತು
ಹಾಸಿಗೆಯಲ್ಲಿನ ಅಮೃತವೂ ಮರೀಚಿಕೆಯಾಯಿತು!
ನನ್ನದಲ್ಲದ ಬಾಳು ನನ್ನದಾಯಿತಲ್ಲ ಅಂತ
ಹಣೆಬರಹವನ್ನೊಮ್ಮೆ ಆಲಿಸಿದೆ, ಅಲ್ಲಿ ನೀ ಕಂಡೆ
ಆದರೆ ಹೀಗೆ ಮಾಡುತ್ತೀಯಾ ಅಂತ ಅಲ್ಲಿರಲಿಲ್ಲ
ಸರಿ ನನ್ನ ಕಥೆ ಇದ್ದದ್ದೆ ಹೊರಡು, ಹೊರಡು!

ರಟ್ಟೆ ಶಕ್ತಿಯಾಗಿದೆ ಅಂತ ಹೊಟ್ಟೆಗೆ ಬಟ್ಟೆ ಕಟ್ಟಿದ್ದು ಉಂಟು
ಬೇಡವಾದ ನಾನು ಬೆತ್ತಲೆಯ ನಿನ್ನ ಸಹಿಸಿಕೊಳ್ಳಲಿಲ್ಲವಾ?
ಒಳಗಿನ ನೋವಿಗೆ ಒಂಟಿಯಾಗಿ ಕೂತು ಬಿಕ್ಕಳಿಸಲಿಲ್ಲವಾ?
ಜೋಳಿಗೆ ಹಿಡಿಯದ ಭಿಕ್ಷುಕಿಯಾಗಿ ಆಯ್ದು ತರಲಿಲ್ಲವಾ?
ಹಾಲಿರದ ಎದೆಗೆ ಕ್ಯಾಕರಿಸಿ ಉಗಿದು ಹೊಟ್ಟೆತುಂಬಾ ಉಣಿಸಿಲ್ಲವಾ?
ನೀನು ಹೋಗುತ್ತಿದ್ದರೂ ನಾ ಬಡಕೊಳ್ಳುತ್ತಿರೋದು
ನೀ ಬರುತ್ತೀಯಂತಲ್ಲ! ಹೆಂಗರುಳ ಕುದಿತಕ್ಕೆ
ತಿರುಗಿ ಬರೋದೆ ಇಲ್ಲ ನೀ, ಬರೋದು ಬೇಡ ನೀ

ಇನ್ನಾರಿಗೂ ಮಾಡದಿರು ಹೀಗೆ,
ಇನ್ನಾರಿಗೂ ಮಾಡದಿರು ಹೀಗೆ,
ನಾನು ಹೋಗುತ್ತೇನೆ!
ನಿನ್ನನ್ನೇ ಮತ್ತೆ ಎರಲು, ನೆನೆದು ನಿನ್ನ ಎದೆ ತುಂಬಿ ಬರಲು...!

ಚಂದ್ರು ಎಂ ಹುಣಸೂರು






No comments:

Post a Comment