Thursday 16 March 2017

“ಬಣ್ಣದ ಜಗುಲಿ”-- ಚಂದ್ರು ಎಂ ಹುಣಸೂರು

“ಬಣ್ಣದ ಜಗುಲಿ”

ಹೊತ್ತು ಮುಳುಗೋ ಮುನ್ನ ಬೆಳ್ಳಕ್ಕಿ, ನವಿಲು
ಹೊತ್ತಾರೆ ಎದ್ನಂದ್ರೆ ಹಸುಮೂತ್ರ ಗಮಲು
ತಂಗಾಳು ತಿನ್ನಾಕೆ ಕೆನೆಮೊಸರು ಚಂದ
ತಿಂಗಾಳು ಬೆಳಗಾಕೆ ತಾನಾಗೇ ಬಂದ

ಏನೇ ಬೆಳೆದಾರು ಮಾರುದ್ದ, ನನ್ನುದ್ದ
ಯಾರೇ ಬಂದಾರು ಬಾಯ್ತುಂಬ ನಿಶ್ಯಬ್ಧ
ಸಹ್ಯಾದ್ರಿ ನನಗದುವೆ, ಮಲೆನಾಡ ಹಸುಗೂಸು
ಮುಳ್ಳೀನ ಬಿಲ್ಜಾಲ ಸಾವಲ್ಲಿ ಬಿಡಿಗಾಸು...

ಹೊಗೆಸೊಪ್ಪು ಹೊನ್ನಾಗಿ ಸುತ್ತೈತಿ ಊರ
ಹೊಸ ಹೆಣ್ಣು ಬಂದೌವ್ಳೆ ನೋಡೋಣು ಬಾರ
ಬೀರಪ್ಪ ಜಾತ್ರೇಗೆ ಗಾಡೀಲೆ ಹೋಗೋಣ
ಜವನಾದ ಕಂಪೀಗೆ ಇಡೀ ವರ್ಷ ಕಾಯೋಣ

ಅವ್ವಳಂತ ಅತ್ತೀಗೆ ಬರುವಲ್ಲಿ ಕಾಲ
ಇರಬೇಕು ಸುಖಕಾಗಿ ಒಂಚೂರು ಸಾಲ
ಹಸುತೊಳಿಯೊ ಮೊಗೆಕೆರೆಯೇ ನನ್ನೂರ ಅಮೃತ
ಆ ಹಾದಿಯ ಬಯಬಯಸಿ ಈ ಜೀವ ಸಾಗುತ

ನಂಬೀಕೆ ದ್ಯಾವ್ರಾಗಿ ಅಪ್ಪಾಗೆ ಹೆಸರು
ನಂಬೋಕೆ ಸಾಕೈತಿ ಹನಿಮಾತ್ರ ಉಸಿರು
ಮಾರೀಗುಡಿ “ಬಣ್ಣದ ಜಗುಲಿ” ನ್ಯಾಯಕ್ಕೆ ಮುಡಿಪು
ದೀಪಾವಳಿ ಜಾನುವಾರಿಗೆ ಜಾಸ್ತಿಯಾಯ್ತು ಹೊಳಪು

ಉಪ್ಪೆಸರಿನ ಕುಲದಲ್ಲಿ ದುಡಿಯಿನ್ನೂ ನರಳಿ
ನಗುವನ್ನೇ ತರುತೈತಿ ಆ ಬೆವರು ಮರಳಿ
ನೆರೆದೆಣ್ಣ ಮುಜುಗರಕೆ ಯುಗಯುಗದ ಯಾನ
ಮಾರಮ್ಮನ ಹಬ್ಬದಲಿ ಬಲಿಯೊಂದೇ ಮೌನ!!

ಚಂದ್ರು ಎಂ ಹುಣಸೂರು











No comments:

Post a Comment