Friday 24 April 2020


ಈಗಷ್ಟೇ ಹಾಲು ಜೇನು ಸಿನಿಮಾ ನೋಡಿ ಹನಿಗಣ್ಣಾಗಿ ಆಚೆ ಬಂದೆ. ಈ ಮುಂಚೆ ತುಂಬಾ ವರ್ಷಗಳ ಹಿಂದೆ ಆ ಸಿನಿಮಾ ನೋಡಿದ್ದರೂ ಈವತ್ತು ಹೊಸದಾಗಿ ನೋಡುತ್ತಿರುವ ಅನುಭವವಿತ್ತು. ಕೊನೆಯಲ್ಲಿ ಅವಳ ಅಗಲಿಕೆಯ ದುಃಖದ
ಉತ್ತುಂಗದ ಪರಾಕಾಷ್ಠೆ ತಲುಪಿದ ಅಭಿನಯ ನೋಡಬಾರದಿತ್ತು ಅನ್ನುವಷ್ಟು ನೋವಾಗುತ್ತದೆ. ಅಷ್ಟೊಂದು ಚೆನ್ನಾಗಿ ಯಾಕಾದರೂ ಅಭಿನಯಿಸುತ್ತಾರೊ ಅನಿಸುತ್ತದೆ.

ಇದೆ ಮೊದಲಲ್ಲ. ಕಾಮನಬಿಲ್ಲಿನಲ್ಲಿ ಅವರು ಕಾಮನಬಿಲ್ಲಾಗಿಯೇ ಉಳಿಯುವ ಅಪೂರ್ವ ಕಾಲಘಟ್ಟದಲ್ಲಿ ನಾವು ಅವರ ಒಳ್ಳೆಯತನಕ್ಕೆ ನೊಂದುಕೊಂಡೆವು.
ಕಸ್ತೂರಿ ನಿವಾಸದ ಕೊನೆ ಸೀನಿನಲ್ಲಿ ನಡೆದು ಹೋಗುತ್ತಾರಲ್ಲ ಆಗ ಅವರು ಸ್ವಲ್ಪ ಧೈರ್ಯ ತಂದುಕೊಳ್ಳಲಿ, ಅವರಿಗೆ ಯಾರಾದರೂ ಸಮಾಧಾನ ಮಾಡಿಬಿಡಲಿ, ಅವರ ಸ್ಥಿತಿ ನೋಡಲಾಗದೆ ಕಂಗಾಲಾದೆವು.

ಬಂಗಾರದ ಮನುಷ್ಯ 'ಆಗದು ಎಂದು ಕೈಕಟ್ಟಿ ಕುಳಿತರೆ' ಅಂದಾಗ ಕುಳಿತಿರುವ ನಾವು ಎದ್ದು ಹೊರಹೋಗಿ ಈಗಲೇ ಉಳಿದ ದುಡಿಮೆಯಲ್ಲಿ ತೊಡಗೋಣ ಅಂದುಕೊಂಡಿದ್ದೆವು. ರಾಜೀವ, ರಾಜೀವಪ್ಪ ಅನ್ನೋದು ಎಷ್ಟೊಂದು ಒಳ್ಳೆಯ ಹೆಸರು. ಯಾರನ್ನಾದರೂ ಹಾಗೆ ಕರೆಯೋಣ ಅಂದರೆ ನಮ್ಮ ಸುತ್ತಮುತ್ತ ಇಲ್ಲಾರಿಗೂ ಆ ಹೆಸರಿಲ್ಲ. ಯಾರಿಗಾದರೂ ನಾವೆ ಹೆಸರಿಡೋಣ ಅಂದರೆ ಅವರೆಲ್ಲ ಜಾತಕ, ಜ್ಯೋತಿಷ್ಯದ ಮುಖೇನ ಪದಗಳನ್ನು ಆಯ್ಕೆ ಮಾಡಿಕೊಂಡರು. ರಾಜೀವನಿಗೆ ಯಾವ ಜಾತಕದ ಬಲವಿತ್ತು. ಹಿಡಿದ ಛಲ ಸಾಧಿಸುವ ದುಡಿಮೆಯ ಬಲವಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ತನವಿತ್ತು. ಅವರ ತೋಟದ ದ್ರಾಕ್ಷಿ ನನಗೀಗಲೂ ಬಲುರುಚಿ.

ಗಂಗಾ ಯಮುನಾ ಸಂಗಮ, ಚೆಲುವೆಯೇ ನಿನ್ನ ನೋಡಲು, ನಾದಮಯ, ಓ ಪ್ರಿಯತಮೆ, ಓ ಗುಲಾಬಿಯೇ, ಹೀಗೆ ಯೋಚಿಸುತ್ತಿದ್ದರೆ ಪಟ್ಟಿ ಬೆಳೆಯುತ್ತಲೇ ಇರುತ್ತದೆ.

ಎಂದಿಗಿಂತ ಈಗ ಸೋಷಿಯಲ್ ಮೀಡಿಯಾಗಳ ಕೃಪೆಯಿಂದ ರಾಜಕುಮಾರರ ಅಭಿನಯ, ಹಾಡುಗಳನ್ನು ಹೊರತುಪಡಿಸಿ ಅವರು ಬದುಕಿದ ರೀತಿ ನಮ್ಮನ್ನು ತಂಗಾಳಿಯಂತೆ ತಲುಪುತ್ತಿದೆ. ಜಯಂತ ಕಾಯ್ಕಿಣಿ, ನಿಸಾರ್ ಅಹಮದ್ ಅವರಂತಹ ಮೇರು ಸಹೃದಯಿಗಳ ಬಾಯಲ್ಲಿ ರಾಜಕುಮಾರರ ವರ್ಣನೆ ಕೇಳುವ ಭಾಗ್ಯ ನಮಗಿಂದು ಯಥೇಚ್ಛವಾಗಿ ಲಭಿಸಿದೆ. ದಿನದಿಂದ ದಿನಕ್ಕೆ ವ್ಯಕ್ತಿತ್ವ ಅಜರಾಮರವಾಗಿ  ಅರಳುತ್ತಲೇ ಇದೆ. ಇಷ್ಟ ದೇವರನ್ನು ಕುರಿತು ಪ್ರಾರ್ಥಿಸುವುದ ಬಿಟ್ಟು ಸ್ವಾರ್ಥದಲ್ಲಿ ಅದ್ದಿಹೋಗಿರುವ ನಾವು ಇನ್ನೇನು ಮಾಡಲು ಸಾಧ್ಯ. ಅದೇ ಧನಿ ನಮ್ಮೊಡನಿರುತ್ತದೆ, ಅದೇ ಸ್ವಚ್ಛ ಕನ್ನಡ ನಮ್ಮನ್ನು ಜಾಗೃತರನ್ನಾಗಿಸುತ್ತದೆ. ಕೇಳಿದ್ದನ್ನು ಅನಿಸಿದ್ದನ್ನು ಹಂಚಿಕೊಂಡು ತೃಪ್ತರಾಗೋಣ. ಹಿಡಿತಕ್ಕೆ ಸಿಗದ ಕಾಮನಬಿಲ್ಲನ್ನು ಸದಾ ಹಿಡಿಯುವ ಪ್ರಯತ್ನ ಮಾಡೋಣ.....💓

- ಚಂದ್ರು ಎಂ ಹುಣಸೂರು
   24-04-2020

No comments:

Post a Comment