Friday 10 April 2020

ಗುರುಗಳನ್ನು ನೆನೆಯುತ್ತಾ...



ಗುರುಗಳಿಗೆ ಹುಟ್ಟು ಹಬ್ಬದ ಶುಭಾಶಯಗಳು.

ಕೆಲವೇ ವ್ಯಕ್ತಿಗಳ ಹುಟ್ಟು ಹಬ್ಬಗಳು ಹಾಗೂ ಇಷ್ಟದ ಹಬ್ಬಗಳು ಮರುಕಳಿಸಿದಾಗಷ್ಟೇ ನಮಗೆ 'ಅಯ್ಯೊ, ಆಗಲೇ ಬಂದುಬಿಡ್ತಾ, ಎಷ್ಟು ಫಾಸ್ಟಾಗಿ ಹೋಗ್ತಿದ್ಯಪ್ಪ ವರ್ಷಗಳು' ಅನ್ನಿಸೋದು. ಅದು ಶಿಲ್ಪ ಮೇಡಂ ವಿಚಾರದಲ್ಲಿ ನನಗೆ ಅನಿಸಿದೆ.

7-8 ವರ್ಷಗಳ ಹಿಂದೆ ಡಿಗ್ರಿಯಲ್ಲಿರುವಾಗ ಕೀಪ್ಯಾಡ್ ಮೊಬೈಲಿನಿಂದ ಮೆಸೆಜ್ ಮೂಲಕ 'ಭಯಭಕ್ತಿ'ಗಳಿಂದ ಮೇಡಂ ಗೆ ನನ್ನ ಮೊದಲ ವಿಷ್ ಕಳಿಸಿದ್ದೆ. ಆಗ ನಾನು ಬಿ ಎ(ಹೆಚ್ ಎಸ್ ಕೆ) ವಿದ್ಯಾರ್ಥಿ, ಮೇಡಂ ಕನ್ನಡ ಬೋಧಿಸುತ್ತಿದ್ದರು. ಕವನಗಳ ಗೀಳು ಆಗಷ್ಟೇ ನನ್ನನ್ನು ಸೆಳೆಯುತ್ತಿತ್ತು.‌ ವಿಚಿತ್ರ ಅಂದರೆ ಸಿನಿಮಾ ಹಾಡುಗಳೆ ನಮ್ಮ ಕವನಗಳ ಸಾಲಿನ ಮೂಲ ಬೇರು. ಹಕ್ಕಿ ಸಿಕ್ಕ ಸಿಕ್ಕ ಕಡೆ ಕಾಳು-ಕಡ್ಡಿ, ಹುಳ-ಉಪ್ಪಟೆ ಆಯ್ದು ತಿನ್ನುವಂತೆ ಯಾವುದೋ ಪುಸ್ತಕ ಓದುವುದು, ಯಾವುದೋ ಪೇಪರಿನ ಯಾವುದೋ ಕಾಲಂ ಓದುವುದು, ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಗುಂಪಾಗಿ ಕುಳಿತು ಕನ್ನಡ ಗದ್ಯಗಳನ್ನು ನಮಗೆ ಅರ್ಥವಾದಂತೆ ಅರ್ಥೈಸಿಕೊಳ್ಳುವುದು ನಮ್ಮ ಆವತ್ತಿನ ಓದಾಗಿತ್ತು. ಬರೆಯುವುದು ಯಾರಿಗೆ ಯಾಕೆ ಮತ್ತು ಹೇಗೆ ಎಂಬ ತಿಳುವಳಿಕೆಯಿಲ್ಲದ ಕಾಲಘಟ್ಟ. ಆಗ ಸಿಕ್ಕರು ನೋಡಿ ನಮ್ಮ ಶಿಲ್ಪ ಶ್ರೀ ಮೇಡಂ.

ತುಂಬಾ ಮೆಲುಧ್ವನಿಯಲ್ಲಿ ಪಾಠ ಮಾಡುತ್ತಿದ್ದರು. ಹೇಳಬೇಕಾದದ್ದನ್ನು ನೀಟಾಗಿ ಹೇಳುತ್ತಿದ್ದರು. ಆರ್ಭಟವಿರಲಿಲ್ಲ, ಆಲಾಪನೆಯಿರುತ್ತಿತ್ತು. ಡಿಗ್ರಿಯಲ್ಲಿ ಗಂಟೆಗೊಬ್ಬ ಅಧ್ಯಾಪಕರು ಬರುತ್ತಿದ್ದರು. ಒಬ್ಬರ ಕ್ಲಾಸ್ ಮುಗಿಯುತ್ತಿದ್ದಂತೆ ಮತ್ತೊಬ್ಬ ಅಧ್ಯಾಪಕ ಬರುವ ತನಕ ಹೊರಗೆ ಅಲೆಯಬಹುದಾಗಿತ್ತು. ಅದು ಒಂತರ ಚೆನ್ನಾಗಿತ್ತು. ಗಂಟೆಗಿಂತ ಹೆಚ್ಚು ಹೊತ್ತು ಕೂತಲ್ಲೆ ಕೂತು ಪಿಯುಸಿವರೆಗೆ ಬೇಸತ್ತಿದ್ದ ಎಲ್ಲರಿಗು ಇದೊಂತರ ಹೊಸದಾಗಿತ್ತು ಮತ್ತು ಮಜವಾಗಿತ್ತು. ಶಿಲ್ಪ ಮೇಡಂ ಸ್ಟಾಫ್ ರೂಮಿನಿಂದ ಹೊರ ಬರುತ್ತಿರುವಾಗಲೆ ನಮಗೆ ಗೊತ್ತಾಗುತ್ತಿತ್ತು ಈಗ ಇವರ ಕ್ಲಾಸ್ ನಮಗೆ ಅಂತ. ನಾವೆಲ್ಲ ಕಾರಿಡಾರಿನಲ್ಲೊ ಅಂಗಳದಲ್ಲೊ ನಿಂತಿದ್ದವರು ಗುರುಗಳನ್ನು ಹಿಂಬಾಲಿಸುತ್ತಿದ್ದೆವು. ಅವರ ವ್ಯಕ್ತಿತ್ವ, ಉಡುಗೆ ತೊಡುಗೆ, ನಮ್ಮೊಡನೆ ಅವರ ಮಾತು ಇವೆಲ್ಲ ಉಳಿದ ಅಧ್ಯಾಪಕರಿಗಿನ್ನ ವಿಭಿನ್ನವಾಗಿತ್ತು. ಅಂದರೆ ಸರಳವಾಗಿತ್ತು ಅನ್ನಬಹುದು.

100-150 ವಿದ್ಯಾರ್ಥಿಗಳಿಂದ ತರಗತಿ ತುಂಬಿರುತ್ತಿತ್ತು. ಹೆಚ್ ಪಿ ಕೆ & ಹೆಚ್ ಎಸ್ ಕೆ ವಿದ್ಯಾರ್ಥಿಗಳು ಕನ್ನಡದಲ್ಲಿ ಕಂಬೈನ್ಡ್ ಆಗುತ್ತಿದ್ದುದರಿಂದ ಮಿನಿ ಜಾತ್ರೆ ಅನ್ನಿ. ಮೇಡಂ ಬಂದ ಒಂದೆರೆಡು ನಿಮಿಷ ಗಿಜಿಗಿಜಿ ಶಬ್ಧ ನಮ್ಮದು. ಆಮೇಲೆ ನೀರವ ಮೌನ. ಅದೆಷ್ಟು ಚನ್ನಾಗಿ ಪಾಠ ಮಾಡುತ್ತಿದ್ದರು, ಈವತ್ತಿಗೆಲ್ಲ ಆ ನೆನಪು ಇಷ್ಟೊಂದು ಸೊಗಸಾಗಿರುತ್ತದೆ ಎಂಬ ಯಾವ ಕಲ್ಪನೆಯೂ ಇರಲಿಲ್ಲ. ಹಾಗೇನಾದರೂ ಇದ್ದಿದ್ದರೆ ಬಹುಶಃ ಇನ್ನೂ ಹೆಚ್ಚು ಹೆಚ್ಚಾಗಿ ಕಾಲೇಜು ಜೀವನದಲ್ಲಿ  ಮುಳುಗುತ್ತಿದ್ದೆವೊ ಏನೊ. ಗುರುಗಳನ್ನು ವಿನಾಕಾರಣ ಹೆಚ್ಚು ಹೆಚ್ಚು ಪ್ರಶ್ನಿಸುವ ಅಧಿಕ ಪ್ರಸಂಗದಂತಾ ನೆನಪು ಕೂಡ ಈವತ್ತಿಗೆ ಶ್ರೇಷ್ಠವಾಗಿಬಿಡುತ್ತಿತ್ತು.

ಮೇಡಂ ಸೀಮಿತ ಸ್ವರದಲ್ಲಿ ಪಾಠ ಮಾಡುವುದರಿಂದ ತರಗತಿ ತನ್ಮಯತೆಯಿಂದಿರುತ್ತಿತ್ತು. ಇಂಟರ್ನ್‌ಶಿಪ್‌ನಲ್ಲಿರುವರೇನೊ ಅನ್ನುವಷ್ಟು ಕಾಳಜಿಯಿಂದ ಆಸ್ಥೆಯಿಂದ ಸಂವಹಿಸುತ್ತಿದ್ದದ್ದು ಮತ್ತು ಅವರ 'ಕಾವ್ಯ ಕಾಳಜಿ'ಯಿಂದ ವಿಶೇಷ ಅನಿಸುತ್ತಿದ್ದರು.

ನನ್ನ ಕವನಗಳನ್ನು 'ಸಾವಧಾನ'ದಿಂದ ತಿದ್ದುತ್ತಿದ್ದರು. ಈಗ ಆ ಕವನಗಳನ್ನು ನೋಡಿದರೆ ನಮ್ಮ ಆಧಾರ್ ಫೋಟೊ ನೋಡಿದಂತೆಯೇ ಅನಿಸುತ್ತದೆ. ಆದರೆ ಒಂದು ಮಾತನ್ನಾದರೂ ತಾತ್ಸಾರದಿಂದ ಮೇಡಂ ನುಡಿದಿದ್ದರೆ ಆಗ ನನ್ನಲ್ಲಿ ಆಗುತ್ತಿದ್ದ ಗಾಯ ಅಪಾರ. ಕೆಲಸಕ್ಕೆ ಬಾರದ ಮುಜುಗರದ ವ್ಯಕ್ತಿತ್ವದವ ನಾನು. ಹೀಗಿರುವಾಗ ತಡವರಿಸಿದ ಹೆಜ್ಜೆಗಳಿಗು ಬಹುದೂರ ಕ್ರಮಿಸುವ ವಿಶ್ವಾಸ ಕೊಟ್ಟರು. ಅದನ್ನೆಲ್ಲ‌ ಮರೆವುದುಂಟೆ..

ನೋಡಿ, ಅನುಬಂಧ ಅನ್ನೋದು  ಜೀವನದಲ್ಲಿ ಬಹಳ ಮುಖ್ಯ. ಈವತ್ತಿಗೂ ಅದೇ ಕಾಳಜಿ, ಅದೇ ಪ್ರೀತಿ, ಅದೇ ಮಮತೆ. ಗುರುಗಳ ಹೃದಯ ದೊಡ್ಡದು. ಈಗ ನನ್ನ 'ಎಂಟಾಣೆ ಪೆಪ್ಪರುಮೆಂಟು' ಕವನ ಸಂಕಲನಕ್ಕೂ ಬೆನ್ನುಡಿ ಬರೆದಿದ್ದಾರೆ.‌ ಅವರ ಬಗ್ಗೆ ಹೆಚ್ಚು ಹೆಚ್ಚು ಹೇಳಬೇಕೆನಿಸುತ್ತದೆ. ಇನ್ನೂ ಸಾಕಷ್ಟು ಕಾಲಾವಕಾಶವಿದೆ, ‌ಹಂಚಿಕೊಳ್ಳೋಣ..

(ಗುರುಗಳು ಮತ್ತು ನನ್ನ ಸಂಭಾಷಣೆಯ ಸಣ್ಣ ತುಣುಕು)👇

ನಾನು:- ಮೇಡಂ ಪದ್ಯ
ಮೇಡಂ:- "ಇವಾಗ ಕ್ಲಾಸ್ ಇದೆ, ನಾನ್ ಆಮೇಲ್ ನೋಡಿ ಇಟ್ಟಿರ್ತೀನಿ. ಆದ್ರೆ ಮಧ್ಯಾಹ್ನ ಬಾ"😍😍

No comments:

Post a Comment