ಹೆಚ್ಚು ಹೆಚ್ಚು ಮಾತನಾಡು ಎಂದು ಬಯಸಿದಷ್ಟು ಅವ ಮೌನೀನೆ! ನಾನು ಯಾವ ತಪ್ಪು ಮಾಡಿದೆ ಅಂತ ನನಗೆ ಈ ಶಿಕ್ಷೆಯಾಯಿತೋ ಗೊತ್ತಿಲ್ಲ. ಬಾಲ್ಯದಿಂದಲೂ ಅವರಿವರಿಂದ ಗಿಂಡಿಸಿಕೊಳ್ಳುತ್ತಿದ ಕೆನ್ನೆಗಳು ಕೆಂಪಾಗುತ್ತಿದ್ದವು. ಮದುವೆಯಾದದ್ದೇ ಆಯಿತು ಉದ್ಯೋಗವಿಲ್ಲದೆ ಮಡುಗಟ್ಟಲು ಪ್ರಾರಂಭಿಸಿದವು! ಕೆಂಪಾಗುವುದನ್ನು ಮರೆತೇ ಬಿಟ್ಟವು!
ಮೊನ್ನೆ ದಸರಾ ಪ್ರಯುಕ್ತ ಮೈಸೂರಿಗೆ ಅಮ್ಮನ ಮನೆಗೆ ಹೋದೆ. ಏನೋ ಸಮಾಧಾನ; ಮತ್ತೇನೇನೋ ಕಳವಳ. ರಿಯಲ್ ಎಸ್ಟೇಟು ಮಾಡುತ್ತಾನೆ, ಬ್ಯುಸಿನೆಸ್ ಸ್ಕಿಲ್ ಚನ್ನಾಗಿದೆ ಅಂತ ಅಮಾಯಕಳಾದ ಅಮ್ಮನನ್ನು ಒಪ್ಪಿಸಿಯೇ ಬಿಟ್ಟರು. ಅವಳೋ ಜೀವನದುದ್ದಕ್ಕೂ ಕಣ್ಣೀರಲ್ಲೇ ಕೈತೊಳೆದವಳು. ಅದೆಷ್ಟು ಬಾರಿ ದಬ ದಬ ಅಂತ ದನಕ್ಕೆ ಬಡಿದ ಹಾಗೆ ಅಪ್ಪ ಬಡಿದನೋ ಗೊತ್ತಿಲ್ಲ. ಮೂರ್ಛೆ ಹೋದಳು; ಜ್ವರ ಬಂದು ನರಳಿದಳು; ಪದೇ ಪದೇ ಬಿಕ್ಕಳಿಸಿದಳು; ಆದರೆ ಸಾಯಲಿಲ್ಲ! ಒಂದು ಹೊಲಿಗೆ ಮಿಷನ್ನಿನ ಅಡಿಪಾಯವನ್ನು ಪಾದದಿಂದ ಮೆಟ್ಟು ಮೆಟ್ಟುತ್ತಲೇ ನಮ್ಮನ್ನೆಲ್ಲ ಸಾಕಿದಳು. ಅದು ಅಪ್ಪನ ಹೊಡೆತದ ಜೊತೆಜೊತೆಗೆ. ಅವನೇನೊ ಬಡಿಯೋದು ಸಾಕಾಗಿ ಹೋದ, ಮತ್ತೆ ಬಾರದ ಜಾಗಕ್ಕೆ! ಇವಳು ಉಳಿದಳು. ನಾಲ್ಕು ಹೆಣ್ಣು ಮಕ್ಕಳೇ ಆದ್ದರಿಂದ ಚಿಕ್ಕ ಗೂಡಲ್ಲಿ ಅವಡುಗಚ್ಚಿ ಬೆಳೆಸಿ ಒಬ್ಬೊಬ್ಬರನ್ನಾಗಿಯೇ ದಾರಿ ತೋರಿಸುತ್ತಾ ಬಂದಳು. ಅದೃಷ್ಟವೆಂಬುದೇ ನಮಗಿಲ್ಲ ಅಂದುಕೊಂಡೇ ಬದುಕಿದವರು ನಾವು. ನಮ್ಮ ಲೆಕ್ಕ ತಪ್ಪಾಗಿದ್ದು ದೊಡ್ಡಕ್ಕನ ಅದೃಷ್ಟ ಖುಲಾಯಿಸಿದಾಗ! ಒಳ್ಳೆಯ ಬಾವ, ಒಳ್ಳೆಯ ಮನೆ- ಇನ್ನೇನು ಇಂಗಿ ಹೋಗುವ ಹಳ್ಳದಿಂದ ಮೀನು ನದಿಗೆ ಹಾರಿದ ಹಾಗೆ ಹಾಯಾಗಿದ್ದಾಳೆ, ಹಾಯಾಗೇ ಇರಲಿ.
ನಾನು ಮೈಸೂರಿಗೆ ಬಂದು ನಾಲ್ಕು ದಿನವಾದರೂ ಬದುಕಿದ್ದೀಯಾ? ಸತ್ತಿದ್ದೀಯಾ? ಅಂತ ಕೇಳುವ ಆ ಒಂದು ಸೊಲ್ಲು ಸ್ವರವಾಗಲಿಲ್ಲ. ಯಾವುದೋ ಕೆಲಸದ ಮೇಲೆ ಮೈಸೂರಿನ ಸಮೀಪ ಬಂದಿದ್ದನಂತೆ. ಇಲ್ಲಿಗೆ ಬಂದು ಅಮ್ಮನನ್ನು ಮಾತನಾಡಿಸಿ ನನ್ನನ್ನು ಕರೆದೊಯ್ಯಬೇಕಿತ್ತಲ್ಲವಾ? ಅಮ್ಮನಿಗೆ ಎಲ್ಲವನ್ನು ನಾನು ಹೇಳುವುದಿಲ್ಲ. ನಾವು ಚನ್ನಾಗಿದ್ದೀವಿ ಅಂತ ಅವಳು ಚನ್ನಾಗಿದ್ದಾಳೆ, ಚನ್ನಾಗಿರಲಿ.
ಅತ್ತೆಯವರು ಕರೆಮಾಡಿದಾಗ ಹೇಳಿದ್ದು, ‘ಅಲ್ಲಿಗೇ ಬಂದದ್ದು ಈವತ್ತು ನೋಡು ಅಂತ’! ಏನನ್ನು ನೋಡಲಿ, ಯಾರನ್ನು ಬೇಡಲಿ, ಯಾರಲ್ಲಿ ಮೊರೆ ಇಡಲಿ. ಆತನ ದೃಷ್ಟಿಯಲ್ಲಿ ಇಷ್ಟವಿಲ್ಲದ ಒಂದು ಪ್ರಾಣಿಯೇ ಆಗಿರುವಾಗ ‘ನಾನು ನಿನ್ನ ಹೆಂಡತಿ! ನನ್ನನ್ನು ರೇಗಿಸು; ನನ್ನನ್ನು ಪೀಡಿಸು; ನನ್ನನ್ನ ನಗಿಸು; ನನ್ನನ್ನು ಬಳಸು ಅಂತ ನಾನೇ ಹೇಳಿದರೆ ಆ ಕೃತಕದ ಪ್ರೀತಿಗೂ ಅವ ಮುಂದಾಗುವವನಲ್ಲ. ಕೆಲ ಗಂಡಸರು ಅವರಿವರ ಎದುರಾದರೂ ಚನ್ನಾಗಿರುವಂತೆ ವರ್ತಿಸುತ್ತಾರಂತೆ- ನನಗದೂ ಸುಳ್ಳು ಅನಿಸತೊಡಗಿದೆ!.
ಇಲ್ಲಿಗೆ ಬಂದು ಅಮ್ಮನನ್ನು ನೋಡಿ ‘ಚನ್ನಾಗಿದ್ದೀರ’ ಅಂತ ಒಂದು ಮಾತು ಕೇಳಿದ್ದು ಇಲ್ಲವೇ ಇಲ್ಲ. ಅದಿರಲಿ ಮನೆಯೊಳಗೆ ಒಮ್ಮೆಯಾದರೂ ನಕ್ಕಿದ್ದೂ ಇಲ್ಲ. ಸಂಭ್ರಮದ ಮನೆಗು, ಸಾಧಾರಣವಾದ ಮನೆಗೂ, ಸಾವಿನ ಮನೆಗು ವ್ಯತ್ಯಾಸವೇ ಇಲ್ಲದ ಹಾಗೆ ಎಂದಾದರೂ ಒಮ್ಮೆ ಬರುವ, ಭಾವನೆಯನ್ನೇ ಬಾಯ್ಬಿಡದೆ ನಾಲಿಗೆಯನ್ನು ಇನ್ನೆಲ್ಲೋ ಬಳಸುವ ಇವನನ್ನು ಕಟ್ಟಿಕೊಳ್ಳುವ ಭಾಗ್ಯಕ್ಕೆ ಸೌಭಾಗ್ಯವತಿ, ಮುತೈದೆತನ ಅಂತ ಕರೆಯಬಹುದಾ?
ನಾನು ಹೆಚ್ಚು ಹೆಚ್ಚು ಹಠಮಾಡುತ್ತಿದ್ದವಳು ಆಗ. ಅಷ್ಟು ಇಲ್ಲದಿರೋ ಸಂದರ್ಭದಲ್ಲಿ ಕೇಳಿದ್ದು ದುಬಾರಿಯಾಗಿದ್ದರೆ ಅದಕ್ಕಿಂತ ಸ್ವಲ್ಪ ಕಡಿಮೆಯಾದದ್ದನ್ನಾದರೂ ಅಮ್ಮ ಕೊಡಿಸುತ್ತಿದ್ದಳು. ಅಪ್ಪ ಹೋದ ಮೇಲೆ ಅವಳಲ್ಲಿ ಉತ್ಸಾಹ ಬಂದಿತ್ತು. ಕೊರಗುತ್ತಿದ್ದಳೇನೋ ನನಗೆ ಗೊತ್ತಾಗುತ್ತಿರಲಿಲ್ಲ. ಆದರೆ ದೇವರ ಫೋಟೋಕ್ಕಿಂತ ಅಪ್ಪನ ಫೋಟೋಗೆ ಹೂ ತಪ್ಪುತ್ತಿರಲಿಲ್ಲ. ಹಬ್ಬದಲ್ಲಿ ಅಮ್ಮನ ಎರಡು ಬಲಿಷ್ಟ ಕೈಗಳ ಬೆರಳಿನ ನಡುವೆ ಹುದುಗಿನಿಂತ ಗಂಧದ ಕಡ್ಡಿ ಅಪ್ಪನ ಫೋಟೋದ ಮುಂದೆಯೇ ಹೆಚ್ಚು ಗಿರಕಿ ಹೊಡೆಯುತ್ತಿದ್ದವು ಅಂತ ನಾನೇನು ಹೊಸದಾಗಿ ಹೇಳಬೇಕಿಲ್ಲ. ಅಪ್ಪ ಕುಡಿದಾಗ ಹೊಡೆಯುತ್ತಿದ್ದನಾದರೂ ಅಮಾವಾಸ್ಯೆ-ಹುಣ್ಣಿಮೆಯ ಪ್ರೀತಿಗೇನೂ ಕೊರತೆಯಿರಲಿಲ್ಲ. ಅಪ್ಪ ಗಾಳಿ ಬೀಸಿದಂತೆ ತಂದ ಹೂ ಮಾರುವವನು ಬಾಳೇ ಎಲೆ ಮತ್ತು ಬಿಳಿದಾರ ಬಳಸಿ ಮಾಡಿದ ಪೊಟ್ಟಣದಲ್ಲಿನ ಮಲ್ಲಿಗೆಯ ನೆನಪಿನ ಗಳಿಗೆಗಳಿಗೆ ಧನ್ಯ ಅರ್ಪಿಸುತ್ತಿದ್ದಳೋ, ಇಲ್ಲ ತಾಳಿ ಕಟ್ಟಿಸಿಕೊಂಡ ಕರ್ಮಕ್ಕೆ ಕಟ್ಟುಬಿದ್ದು ಹಾಗೆ ಪೂಜಿಸುತ್ತಿದ್ದಳೋ ಗೊತ್ತಾಗುತ್ತಿಲ್ಲ.
ಅತ್ತೆಯ ಬಳಿ ತೂಕ ಹಾಕಿ ಮಾತಾಡಿ ಗಂಡನನ್ನು ಮಾತ್ರ ಸರ್ವಸ್ವ ಅಂದುಕೊಳ್ಳೋ ಹೆಣ್ಣು ನನಗೆ ನಿಜವಾಗಿ ಪುಣ್ಯವತಿಯಂತೆ ಕಾಣುತ್ತಾಳೆ. ಹಾಗೆಂದು ಅತ್ತೆಯೆಂದರೆ ದೂರವಿರಬೇಕು, ಬೇರೆಯಿರಬೇಕು ಎಂಬುದಲ್ಲ ನನ್ನ ಮಾತಿನ ಒಳಾರ್ಥ. ಗಂಡನಷ್ಟು ಹತ್ತಿರ ಮತ್ತಾರೂ ಇರಬಾರದು ಎಂಬ ಸಹಜ ಸ್ವಾರ್ಥ. ಇಷ್ಟೆಲ್ಲ ಲೆಕ್ಕಹಾಕುವ ನನ್ನ ಲೆಕ್ಕಾಚಾರದ ರಾಕೇಟಿನ ಪಟಾಕಿ ಮದುವೆಯೆಂಬ ಕಿಡಿ ಹೊತ್ತಿಸಿದ ಕೂಡಲೇ ನೇರವಾಗಿ ಗಗನಕ್ಕಾರಿ ಅರಳುವ ಬದಲು ಮದ್ದು ಸತ್ತು ಇಲ್ಲಿಯೇ ಉಳಿದು ಮಳೆಬಂದು, ನೆಂದು ಚರಂಡಿ ಸೇರಿತು. ಗಗನದ ಕನಸು ಇಂದಿಗೂ ನಿತ್ಯ ಕನಸಾಗಿ ಹಂಬಲಿಸಿಯೂ ಇಲ್ಲದವಳಂತೆ ಬಾಳ ಬೇಕಾಯಿತು.
ಅವ ರಾತ್ರಿ ಮಾತ್ರ ಕರೆಯುವ ಜಾಯಮಾನದವನು. ಹಗಲೊತ್ತಲ್ಲಿ ಹಾಸಿಗೆಗೆ ಮೇಲೆ ಯಾರೋ ಮಲಗಿದ ಅನುಭವವೇ ಇಲ್ಲ. ಹಾಗನ್ನುತ್ತಿದ್ದಂತೆ ಕೆರಳಿ ಹೇಳುವ ಹಾಸಿಗೆ ‘ಯಾಕಮ್ಮ ತಾಯಿ ಕಳೆದ ವಾರ ಜ್ವರ ಬಂದಾಗ ಮಲಗಿರಲಿಲ್ಲವಾ’? ಎಂದು ಪ್ರಶ್ನೆ ಎಸೆಯುತ್ತದೆ. ಹಾಸಿಗೆ ತುಂಬಾ ಪ್ರಾಮಾಣಿಕ. ಹಾಗಾಗಿ ನನ್ನ ಅವಸರದ ವಾಣಿಗೆ ಅಸ್ತು ಅನ್ನದೆ ತನ್ನ ಮಾತು ಎಸೆಯುತ್ತಾನೆ ಮೌನವಾಗಿಯೇ!
ಪಕ್ಕದ ಮನೆಯ ಅಜ್ಜಿ ಹೇಳಿದ್ದರು- ‘ಅವ ಕರೆದಾಗ ಒಪ್ಪದಿರು. ಆಗಲಾದರೂ ಅವ ಮಾತನಾಡಬೋದು’ ಅಂತ. ಅದನ್ನು ಪ್ರಯೋಗಿಸಿದೆ. ಆ ರಾತ್ರಿ ಊರಲ್ಲಿ ಹಬ್ಬವಿದ್ದರಿಂದ ಮನೆ ಖಾಲಿಯಾಗಿ ಅತ್ತೆ ಇಲ್ಲದಿರುವಿಕೆ ನನಗೆ ಕಾಡುತ್ತಿತ್ತು. ಯಾವಾಗಲೂ ವಟಗುಟ್ಟುತ್ತಿದ್ದ ನಾಲಿಗೆ ಮದುವೆಯಾದ ಮೇಲೆ ಮೃಗರೂಪಿ ಗಂಡನನ್ನು ಕಟ್ಟಿಕೊಂಡೆ ಅಂತ ಸುಮ್ಮನಾಗುವುದಾ?,, ಇಷ್ಟಿಷ್ಟು ಅಂತ ಅತ್ತೆಯೊಂದಿಗೆ ಎಲ್ಲವನ್ನು ಮಾತನಾಡಿಕೊಂಡೆ. ಮಾತಾಗಬೇಕಿದ್ದ ಮುಖ್ಯಗಳು ಎದೆಯಲ್ಲಿಯೇ ಉಳಿದವು. ಹೆಚ್ಚು ವಿನಯವಿಲ್ಲದ ಅತ್ತೆಯೊಂದಿಗೆ ಗತಿಯಿಲ್ಲದೆ ನಯವಾಗಿ ವರ್ತಿಸಿ ಅವರನ್ನು ಒಲಿಸಿಕೊಂಡಿದ್ದ ನನಗೆ ಅವರಿಲ್ಲದ ಈ ಕ್ಷಣ ಅಬಲೆಯಂತೆ, ಅನಾಥೆಯಂತೆ ಕಾಣತೊಡಗಿತ್ತು. ಅವ ಊಟಮಾಡಿ ಎಷ್ಟೋ ಹೊತ್ತಾದ ಮೇಲೆ ನಾನು ಉಂಡು ಒಡಕೆ ಮಂದಲಿಗೆಯ ಮೇಲೆ ಕೂತು ಎಷ್ಟೋ ರಾತ್ರಿಗಳಲ್ಲಿ ಕಣ್ಣೀರನ್ನು ಹೀರಿಕೊಂಡು ಬಾಯ್ಬಿಡದೆ ಮೌನಿಯಾಗಿರುವ ಮೋಸಗಾರ ‘ತಲೆದಿಂಬಿನ’ ಅರಿದ ಭಾಗ ಒಲೆಯುತ್ತಿದ್ದೆ. ರೂಮಿನಿಂದ ಬಂದವ ‘ಬಾ’ ಎಂದ. ಕತ್ತೆತ್ತಿ ನೋಡಿ ಮತ್ತೆ ಬಾಗಿ ‘ನನಗ್ಯಾಕೋ ಆಗುತ್ತಿಲ್ಲ’ ಎಂದೆ. ಏನೂ ಹೇಳದೆ, ಏನನ್ನೂ ಕೇಳದೆ ಸೀದಾ ಹಾಗೆಯೇ ಹೋಗಿ ಮಲಗಿ ನಿದ್ರೆ ಹೋದ. ರೂಮಿನಿಂದ ಗೊರಕೆಯ ಶಬ್ಧದ ನೀಳ ನೀಳವಾದ ತರಂಗಗಳು ಬಂದು ಕೊಲ್ಲುತ್ತಿವೆ. ಗೊರಕೆಯ ಪ್ರಚೋಧನೆಗೆ ಪ್ರತಿಕ್ರಿಯೆಯಾಗಿ ಕಣ್ಣೀರು ಲೀಲಾಜಾಲವಾಗಿ ಹರಿದು ಮನಸು ಭಾರವೇ ಆಯಿತು. ಈ ರೀತಿಯ ಉಪಾಯವನ್ನು ಇನ್ನೂ ಎರಡೂ ಬಾರಿ ಮಾಡಿ ನೋಡಿದೆ. ಫಲಿತಾಂಶ ಮಾತ್ರ ನೀಳವಾದ ಗೊರಕೆ ಶಬ್ಧವೇ ಸಿಕ್ಕಿದ್ದು. ಬೆಳವಣಿಗೆಯಾಗಿ ಅವ ಕುಡಿದು ಬರಲು ಪ್ರಾರಂಭಿಸಿದ್ದು ಮುಂದಿನ ಮಾತು. ಎಷ್ಟು ಬಾರಿ ಅತ್ತೆನೋ, ಅವಡುಗಚ್ಚಿ ನಡುಗಿದೆನೋ, ಮೂಲೆ ಸೇರಿ ಕಗ್ಗತ್ತಲಲ್ಲಿ ಕೊರಗಿದೆನೋ, ನನಗೆ ಮಾತ್ರ ಗೊತ್ತು. ಒಮ್ಮೆ ಉಕ್ಕಿ ಬಂದ ಸಂಕಟವನ್ನು ಅವನೆದರು ಹೊರಹಾಕಿದೆ. ‘ನಿನಗೇನಾಗಿದೆ? ಊಟ ಹಾಕುತ್ತಿಲ್ಲವಾ? ಹೊರಕ್ಕೆ ಕಳಿಸಿ ದುಡಿಸುತ್ತೇನಾ? ಇದ್ದರೆ ಇರು-ಯಾವ ತೊಂದರೆ ನಿನಗೆ’ ಎಂದುಬಿಟ್ಟ! ಹುತ್ತದಲ್ಲಿನ ಅಣಬೆಯಂತೆ ಎದ್ದು ಕುದಿಯುತ್ತಿರುವ ಬಯಕೆಗಳನ್ನು ಈಗ ಇವನೆದುರು ಹೇಳಿ ಮಾಡಿಸಿಕೊಳ್ಳಲು ಅದ್ಯಾವುದೋ ಶಕ್ತಿ ಬಿಡಲಿಲ್ಲ. ನನ್ನ ಬದುಕು ಇಷ್ಟೇ ಎಂಬ ನಿರ್ಧಾರಕ್ಕೆ ಬಂದೆ. ನನಸಾಗದವನ್ನೆಲ್ಲ ಯಾಕೆ ನೆನೆಯಲಿ ಅಂತ ಅಂದುಕೊಂಡಷ್ಟು ಕಂಡಿದ್ದ ಕನಸುಗಳು ಮಾತ್ರ ಎದೆಯ ಜಾಗ ಖಾಲಿ ಮಾಡುವ ಹಾಗೆ ಕಾಣುತ್ತಲೇ ಇಲ್ಲ.
ಅವನ ವರ್ತನೆ ಹೀಗಾದ ಮೇಲೆ ಕೇಳಿದ ಕೂಡಲೇ ಮೈ ಅರ್ಪಿಸಿ ಸಂಭಾಷಣೆಯಿಲ್ಲದ ಸಂಭೋಗದಿಂದ ಅವನಾದರೂ ತೃಪ್ತಿ ಹೊಂದಲಿ ಅಂತ ಅವನ ಹೆಂಡತಿಯಾಗಿ ಜವಬ್ಧಾರಿ ನಿಭಾಯಿಸುತ್ತಿದ್ದೀನಿ. ಅದೂ ಏಕೊ ಅಪರೂಪವಾಗುತ್ತಾ ಬಂದಿದೆ. ಪ್ರೀತಿಯೊಂದು ಇದ್ದಿದ್ದರೆ ಒಂದು ಬಾರಿಯ ಹಾಸಿಗೆಯ ಸುಖದಲ್ಲಿ ಒಂದು ವರ್ಷ ತಳ್ಳುತ್ತಿದ್ದೆ. ಆದರೆ ಈ ಬಗೆಯ ಸುಖ ಸಾಗಿ ಸಾಗಿ ಸಾರಿ ಸಾರಿ ಸಲ ಬಂದರೂ ಸಂಭೋಗವೆಂಬುದು ಸಂತಾಪ ಸೂಚಕವಾಗಿ ನಾನೇನು ಹೆಂಡತಿಯೋ ಸೂಳೆಯೋ ಎಂಬ ಅನುಮಾನ ಕಾಡಲು ಮುಂದಾಗಿದೆ.
ಕಾಲೇಜಿಗೆ ಹೋಗುವಾಗ ತಿನ್ನುತ್ತಿದ್ದ ಶ್ರೀ ಲಕ್ಷ್ಮಿ ಐಯ್ಯಂಗಾರ್ ಬೇಕರಿಯ ಪೇಡ ಈಗ ತಿನ್ನ ಬೇಕಲ್ಲ ಅಂತ ಅನಿಸುತ್ತಿತ್ತು. ತಂದುಕೊಡುವಂತೆ ಕೇಳಿಬಿಟ್ಟೆ. ಕೇಳಿದ ಎರಡು ವಾರವಾದ ಮೇಲೆ ಒಂದು ಕೆ.ಜಿ ಜಿಲೇಬಿ ಮನೆಗೆ ಬಂದು ಬಿತ್ತು. ಮರೆಯದೆ ಅದು ಸಿಗಲಿಲ್ಲ ಎಂದ. ಯಾರಿಗೆ ಬೇಕಾಗಿದೆ ಇದು? ನನಗಾಗಿ ಒಂದು ಕಡೆ ಇಲ್ಲವೆಂದಾಗ ಇನ್ನೊಂದು ಕಡೆ ಅರಸುವ ಗಂಡ ನನಗೆ ಬೇಕಾಗಿದ್ದು, ಸಾವಿರ ಕೆ.ಜಿ ಜಿಲೇಬಿ ತಂದು ಸುರಿವ ಸರದಾರನಲ್ಲ! ಎಂದು ಅಂತರಂಗದಲ್ಲಿ ಕೋಲಾಹಲ ಎಬ್ಬಿಸಿಕೊಂಡು ವಾದಿಸಿಬಿಟ್ಟೆ ಮೌನವಾಗಿ!
ಯೋಚಿಸುವ ವಯೋಮಾನ ನನ್ನದಲ್ಲದಿರುವಾಗ ಕಂಕಣಭಾಗ್ಯ ಕೂಡಿದ್ದೇ ತಪ್ಪಾಯಿತು. ಬಡಪಾಯಿ ಅಮ್ಮನ ನಂಬಿಕೆ ಸುಳ್ಳಾಗಿ ಇದೀಗ ನನ್ನ ಬದುಕಿನ ಸಜೀವ ದಹನವಾಗುತ್ತಿದೆ. ದೇಹಕ್ಕೆ ಬಯಕೆಯಾಗುವುದು ಪ್ರೀತಿಯಿಂದಲೇ ಅಲ್ಲವಾ? ಒಮ್ಮೆ ಸುಖಿಸಿ ಮರೆಯಾಗುವ ಗಂಡಸಾದರೂ ಅವಳ ಹೆಸರನ್ನು ಕೇಳುತ್ತಾನೆ. ಮತ್ತೆ ಈ ಕಡೆ ಬಂದಾಗ ನೀನೇ ಬೇಕೆಂದು ನಂಬರ್ ಕೂಡ ಕೇಳಿ ಪಡೆದು ನಕ್ಕು ಹೊರಡುತ್ತಾನೆ. ಇನ್ನೂ ಸದ್ಗುಣನಾಗಿದ್ದರೆ ಹೋಟೆಲ್, ಸಿನಿಮಾ ಅಂತ ಸುತ್ತಿಸಿ ಸುಖಿಸಿ ಮಾಯವಾಗುತ್ತಾನೆ. ಹಾಗಾದರೆ ನಾನೇನು? ಆ ಬಗೆಯ ಹೆಣ್ಣುಗಳ ಕಷ್ಟ ಅರ್ಥಮಾಡಿಕೊಳ್ಳಲಾ ನಾ ಹುಟ್ಟಿದ್ದು!
ಹೊಸ ಸೀರೆ ಕೊಡಿಸದಿದ್ದರೂ ಹರಿದ ಸೀರೆ ಕಂಡು ಯಾಕೆ ಹೊಲೆದುಕೊಂಡಿಲ್ಲ ಎಂದು ಕೇಳುವವನಾಗಬೇಕಿತ್ತು, ಒಡವೆ ಕೊಡಿಸದಿದ್ದರೂ ನಿನಗೆ ಒಡವೆ ಇಲ್ಲದೆಯೇ ಹೀಗೆ ಕಾಣತ್ತೀಯಲ್ಲಾ ಅಂತ ಹೊಗಳುವ ಚಕಿತನಾಗಬೇಕಿತ್ತು, ಹಾಸಿಗೆಯಲ್ಲದಿದ್ದರೂ ಮೆತ್ತಗಿನ ಎದೆಗೊರಕಿಕೊಳ್ಳುವ ರಸಿಕನಾಗಬೇಕಿತ್ತು, ಚಿಕ್ಕ ಹೊದಿಕೆಯಾದರೂ ಗಾಳಿ ಸುಳಿಯದಂತೆ ಅಪ್ಪುವವನಾಗಬೇಕಿತ್ತು, ಅಫೋಲೋ ಹಾಸ್ಪಿಟಲ್ನಲ್ಲಿ ಚಿಕಿತ್ಸೆ ಕೊಡಿಸದಿದ್ದರೂ ಮನೆಯಲ್ಲೇ ಮಲಗಿದವಳ ಕತ್ತಿನ ಬಿಸಿಯನ್ನು ಮತ್ತೆ ಮತ್ತೆ ಸ್ಪರ್ಶಿಸಿ ನೋಡಿ ಗುಳಿಗೆ ಕೊಟ್ಟು ಮರುಗುವವನಾಗಬೇಕಿತ್ತು, ಮಕ್ಕಳಾಗದಿದ್ದರೂ ನಾನೇ ನಿನ್ನ ಮಗುವಲ್ಲವಾ ಅನ್ನುವ ತುಂಟನಾಗಬೇಕಿತ್ತು, ಉತ್ತಮ ವಾಹನದಲ್ಲಿ ತಿರುಗಿಸದಿದ್ದರೂ ರಸ್ತೆ ಬದಿಯಲ್ಲಿ ಹಿಡಿದ ಕಿರುಬೆರಳ ಬಿಡದೆ ಬಂಧಿಸುವವನಾಗಬೇಕಿತ್ತು, ಮೃಷ್ಟಾನ್ನ ಭೋಜನ ಹಾಕದಿದ್ದರೂ ಕೈತುತ್ತು ನೀಡುವ ಮಮತೆಯುಳ್ಳವನಾಗಬೇಕಿತ್ತು, ಎಲ್ಲರೆದುರು ನನ್ನ ತಪ್ಪಿಗೆ ಸಣ್ಣಗೆ ಬೈದರು ತಕ್ಷಣದ ಏಕಾಂತದಲ್ಲಿ ಮುದ್ದಿಸುವ ವಿಸ್ಮಯಿಯಾಗಬೇಕಿತ್ತು, ಸುಖದ ಸುಪ್ಪತ್ತಿಗೆಯಲ್ಲಿಟ್ಟು ಮೌನಿಯಾಗಿ ದೂರ ಉಳಿವ ಬದಲು ಅಮ್ಮನ ಮನೆಯಿಂದ ಬೇಗ ಬರುವಂತೆ ಪೀಡಿಸುವ ಮಗು ಮನಸ್ಸಿನವನಾಗಬೇಕಿತ್ತು, ಸುಖವಾಗಿಯೇ ಹೆರಿಗೆಯಾಗುತ್ತದೆ ಅಂತ ಡಾಕ್ಟರ್ ಹೇಳಿದ್ದರೂ ಕ್ಷಣಕ್ಷಣ ಪರಿತಪಿಸುವ ಸಹಿಸಲಾರದವನಾಗಬೇಕಿತ್ತು, ದಂಡಿಸದೆ ಬಡಪಾಯಿಯಾಗಿ ನಿಲ್ಲುವ ಬದಲು ತಾನೇ ಕೊಟ್ಟ ಪೆಟ್ಟಿಗೆ ಬಂದ ಬಾಸುಂಡೆಗೆ ಸಾವಿರ ಮುತ್ತನಿಕ್ಕಿ ಹನಿಗಣ್ಣಾಗುವ ಹೆಂಗರುಳಿಗನಾಗಬೇಕಿತ್ತು, ಕೈ ತುಂಬ ದುಡ್ಡುಕೊಟ್ಟು ಹೋಗು ಎನ್ನುವ ಬದಲು ಅಮ್ಮನ ಮನೆಗೆ ತಾನೇ ಬಿಟ್ಟು ಉಷಾರು ಎಂದು ಹಣೆಯ ಮೇಲೆ ಮುತ್ತುದುರಿಸುವ ಮನ್ಮಥನಂತವನಾಗಬೇಕಿತ್ತು, ಜಾತ್ರೆಯಲ್ಲಿ ಬರೀ ತೇರನ್ನೇ ನೋಡುವ ಬದಲು ದೂರ ನಿಂತ ನನ್ನ ದುರುಗುಟ್ಟಿ ನೋಡಿ ಸನಿಹವಾಗುವಂತೆ ಸನ್ನೆ ಮಾಡುವ ಸೋಜಿಗದವನಾಗಬೇಕಿತ್ತು, ಸಂಬಂಧಿಕರ ಮದುವೆ ಕಾರ್ಯದಲ್ಲಿ ರಾತ್ರಿ ಹೆಂಗಸರೊಂದಿಗೆ ನಾ ಅನಿವಾರ್ಯವಾಗಿ ಮಲಗಲೇ ಬೇಕಾದಾಗ ನಿರೀಕ್ಷಿಸಿದಂತೆಯೇ ಬಂದು ನನ್ನ ಜಾಗದ ತನಿಖೆ ಮಾಡಿ ಸುಮ್ಮನೆ ಬಂದೆ ಎಂದು ಎಲ್ಲರಲ್ಲಿ ಹೇಳಿ ಕಣ್ಣಭಾಷೆಯಲ್ಲಿ ಶುಭರಾತ್ರಿ ಹೇಳಿ ಹೊರಡುವ ಬಿಟ್ಟಿರಲಾರದವನಾಗಬೇಕಿತ್ತು, ಸಾವಿರ ಜನ ನನ್ನ ಕಣ್ಣನ್ನು ಹೊಗಳುವುದಕ್ಕಿಂತ ಬಿದ್ದ ಕಸದಲ್ಲಿ ಕೆಂಪಾದ ಕಣ್ಣಿಗೆ ತಂಪಾದ ಮುತ್ತನೀಯುವ ಹೆಂಗರುಳಿಗನಾಗಬೇಕಿತ್ತು, ಮೌನಿಯಾಗಿಯೇ ಸುಖಿಸಿ ಮರೆಯಾಗುವ ಖಾಯಂ ಗಿರಾಕಿಯಾಗುವ ಬದಲು ದಿನರಾತ್ರಿ ಅಶ್ಲೀಲವಾಡುವ ಪೋಲಿಯಾದರೂ ಆಗಬೇಕಿತ್ತು, ಮೋಡದಂತ ಬಿಗಿದ ಎದೆಗೆ ತಂಗಾಳಿಯಂತೆ ನುಸುಳಿ ಸೋಕಿ ಒಲವ ಮಳೆಗರೆವ ಪ್ರಕೃತಿಯಂತವನಾಗಬೇಕಿತ್ತು!!!!
ಚಂದ್ರು ಎಂ ಹುಣಸೂರು





No words Chandra. Awesome, heart touching and thank u soooo much.....
ReplyDeleteTq dear...ದಯವಿಟ್ಟು ಸಾಹಿತ್ಯ ಓದಿ. ನಿಮ್ಮ ಮನೋವಿಕಾಸಕ್ಕೆ ಅದೊಂದೆ ಸುಲಭ ಹಾಗು ಸುಂದರ ಮಾರ್ಗ..
DeleteHiii vidya how r u...
Deleteಇದನ್ನು ನಾನು ಬಹಳಷ್ಟು ಬಾರಿ ಓದಿದ್ದೆನೆ ಅದಕ್ಕೆ reason ನಿಮಗೆ ಗೊತ್ತಿದೆ ಇದನ್ನು ಓದಿ please reply ಕೊಡಿ I'm waiting here from ur reply
ReplyDeleteಇದನ್ನು ನಾನು ಬಹಳಷ್ಟು ಬಾರಿ ಓದಿದ್ದೆನೆ ಅದಕ್ಕೆ reason ನಿಮಗೆ ಗೊತ್ತಿದೆ ಇದನ್ನು ಓದಿ please reply ಕೊಡಿ I'm waiting here from ur reply
ReplyDeleteHii
DeleteHii. Neeevyaru antha thilkolloke nanu wait madthidini. Reply me
Delete