Friday 10 March 2017

ಜಂಗಮನಾಗುವ ಕಡೆಗೆ:- ಚಂದ್ರು ಎಂ ಹುಣಸೂರು

ಎಲ್ಲರಿಗೂ ಏನಾದರೂ ಹೇಳಬೇಕೆನಿಸಿ...
ಇಂದು ನನ್ನ ಹುಟ್ಟಿದ ದಿನ. 
ನನಗಾವರೀತಿಯಲ್ಲೂ ಈ ದಿನ ಹೊಸದಾಗಿ, ಹೊಸದನ್ನು ಪ್ರಾರಂಭಿಸಲು ಅಥವಾ ಚನ್ನಾಗಿರಲು, ದಿನಪೂರ್ತಿ ಚೈತನ್ಯದಿಂದಲೇ ಕಳೆಯಬೇಕು ಎಂಬ ಋಣಾತ್ಮಕ ಅಗೋಚರ ಸಂತಸವಾಗಿ ಕಂಡಿಲ್ಲ. ಏಕೆಂದರೆ ಪ್ರತಿಯೊಬ್ಬರಿಗೂ ಬದುಕಿನ ರಂಗದಲ್ಲಿ ಇಂತಹದ್ದೊಂದು ಖಾಯಂ ಪಾತ್ರ ಮೀಸಲಿರುವಾಗ, ಬೇಡವೆಂದರೂ ಬೇಗ ಬೇಗ ಬರುವ ಇದಕ್ಕೆ ಯಾವ ಮರ್ಯಾದೆಯನ್ನು ಏತಕ್ಕಾಗಿ ನೀಡಲಿ ನೀವೇ ಹೇಳಿ. ಆದರೆ ಖುಷಿಯಾಗಿದ್ದು ನನ್ನ ಜನ್ಮದಿನಕ್ಕೆ ಶುಭಾಶಯ ಕೋರಿದವರ ರೀತಿಗಳಿಂದ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶುಭಾಶಯ ಕಳಿಸಿದವರ ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿದೆ. ಅದು ಯಾವ ಪುರುಷಾರ್ಥಕ್ಕೋ ನಾ ಕಾಣೆ. ಅಂತೂ ಸುಮ್ಮನೇ ಕೂರದಿದ್ದರೆ ನಮ್ಮವರು ಕುಳಿಸುವ ಯತ್ನ ಮಾಡಲಾರರು ಎಂಬ ಮಾತು ಸತ್ಯವಾಯಿತು. ನಮ್ಮಿಂದೇನಾದರೂ ಬಯಸುವ, ನಮ್ಮ ಕೈಲಾಗುವುದೇ ಎಂದು ಆಲೋಚಿಸುವ ಮುನ್ನ ನಮಗೆ ಚೈತನ್ಯ ತುಂಬಿ ಮುಂದೆ ತಳ್ಳುವ ಪ್ರಿಯ ಸಹೃದಯರಿಗೆ ಹಾಗೂ ಶುಭಾಶಯ ಕಳಿಸಿದವರಿಗೆ ನಾ ಹೃದ್ಮನ ಧನ್ಯೋಸ್ಮಿ.
ಮಾನವನ ಹುಟ್ಟು ವಿಶೇಷವೇನೂ ಇಲ್ಲದೆ ಪ್ರತಿಯೊಂದು ಜೀವಿಯ ಹುಟ್ಟಿನಂತೆ ಸ್ವಾಭಾವಿಕವಾಗಿಯೇ ಆಗುವಂತದ್ದಾಗಿರುವಾಗ ನಮ್ಮ ಹುಟ್ಟು ಹಬ್ಬವನ್ನು ಇತರರು ಸಹಿಸಿಕೊಂಡು ಸಂಭ್ರಮಿಸುವುದು ಸ್ವಲ್ಪ ಹೇಳಿಕೊಳ್ಳುವ ಸಂಗತಿಯೇ ಸೈ. ಯಾವ ಅರ್ಜಿಯನ್ನು ಆಕದೆ, ಯಾವ ಧರಣಿ, ಸತ್ಯಾಗ್ರಹ, ಹೋರಾಟವನ್ನು ಮಾಡದೆ, ಯಾವ ಆರ್ಡರ್ ಕೂಡ ಕೊಡದೆ, ಏತಕ್ಕೆ? ಏನು? ಎಂಬ ಯಾವ ಅರಿವೂ ಇಲ್ಲದೆ ಈ ಜನ್ಮ ದಕ್ಕಿದೆ. ಒಂದು ಮಾಂಸದ ಮುದ್ದೆಯಂತಿದ್ದ ಕಂದನಲ್ಲಿ ಸಹಸ್ರಾರು ಕನಸುಗಳನ್ನು ಇರಿಸಿ ಒಂದೊಂದು ಹೆಜ್ಜೆಯಲ್ಲಿಯೂ ಜೋಪೀಕರಿಸಿ ನಮ್ಮ ಬುಜಭಾಹು ಪ್ರಬಲತೆಯನ್ನು ನೋಡಿ ತಣ್ಣಗಾಗುವ ಜೀವಗಳಿವೆಯಲ್ಲ ಆ ಜೀವಗಳಿಗೆ ಈ ದಿನ ಖುಷಿಯಾಗಬೇಕು. ಖುಷಿಯಾಗಿದೆ. ಈ ದಿನವಲ್ಲವ ಚಂದ್ರ ಹುಟ್ಟಿದ್ದು ಅಂತ!
ಒಂದು ಜಿರಲೆಯ ಜನ್ಮದಷ್ಟೇ ಸಹಜ, ಭೂಮಂಡಲದಲ್ಲಿ ಮನುಜನ ಜನ್ಮ. ಆ ಜಿರಲೆಯೂ ಕೂಡ ತಾನು ಬದುಕುವುದಕ್ಕಾಗಿ, ತನ್ನ ವಂಶಾಭಿವೃದ್ಧಿಗಾಗಿ ಕ್ರಿಯಾಶೀಲವಾಗಿ, ಚಟುವಟಿಕೆಯಿಂದ ಹೋರಾಟಗಳ ನಡುನಡುವೆಯೇ ತನ್ನ ಆಯಸ್ಸನ್ನು ಮುಗಿಸುತ್ತದೆ. ಅದೇ ರೀತಿ ಮನುಷ್ಯನ ಜನ್ಮ. ಆದರೆ ಕೆಲವೊಮ್ಮೆ ಆ ಕೀಟಗಳಿಗಿಂತಲೂ ಹೀನಾಯನಾಗಿ ಮನುಷ್ಯ ವರ್ತಿಸುತ್ತಾನೆಂದರೆ ಹೇಗೆ ತಾನೆ ಹೀನನಾಗದೆ ಉತ್ತಮನಾಗುತ್ತಾನೆ. ಮಾತು ಮತ್ತು ಮನಸ್ಸು ನಮ್ಮ ಆಸ್ಥಿ. ಅದನ್ನು ದಿನೇ ದಿನೇ ಉತ್ತಮಪಡಿಸಿಕೊಂಡು ಮನೋಮಂಡಲದ ಉನ್ನತದಲ್ಲಿ ಕೆಲವರಿಗೆ ಮಾತ್ರ ದಕ್ಕುವ ಅಮೃತವನ್ನು ಪ್ರತಿಯೊಬ್ಬರೂ ಸವಿಯುವ ದಿಕ್ಕಿನೆಡೆಗೆ ನಾವು ಸಾಗಬೇಕಿದೆ. ಅದೂ ಆಗದಿದ್ದಾಗ ಈಗಾಗಲೇ ತುಂಬಿಕೊಂಡಿರುವ ಮನೋವ್ಯಾಕುಲತೆಯ ನ್ಯೂನಾಂಶಗಳನ್ನು, ನಾಶಯುಕ್ತ ಚಿಂತನೆಗಳನ್ನು ತೊಡೆಯುತ್ತಾ ಪ್ರಭುದ್ಧ ಪ್ರಸನ್ನರಾಗುವಲ್ಲಿ ಹೆಜ್ಜೆ ಇಡಬೇಕು.
ಪುಸ್ತಕದ ಓದು ಎಂದೂ ನಮ್ಮನ್ನು ಸುಸಂಸ್ಕøತರನ್ನಾಗಿಸುತ್ತದೆ ಎಂಬುದನ್ನು ನಂಬುವವನು ನಾನು. ಸಾಹಿತ್ಯ, ಕಲೆ, ಚಿಂತನೆ, ಸ್ವತಂತ್ರ, ಮಾನವೀಯತೆ, ಇನ್ನೂ ಮುಂತಾದ ಪಾಸಿಟೀವ್ ಪಾಸಿಬಲ್ ಗಳನ್ನು ಅಪ್ಪುತ್ತಾ, ಕೈಲಾದರೆ ಒಂದಿಬ್ಬರನ್ನು ಎಳೆಯುತ್ತಾ ಹೋಗಬೇಕು. ಮಂಧಹಾಸಕ್ಕೂ ಇಲ್ಲಿ ಬೆಂಬಲವಿದೆ. ಮಾಂಸದೂಟಕ್ಕೂ ಇಲ್ಲಿ ಅಷ್ಟೇ ಗೌರವವಿದೆ. ಪ್ರತಿಯೊಂದು ಘಟನೆಗಳು ಅವರವರ ವ್ಯಕ್ತಿ ಸ್ವಾತಂತ್ರ್ಯವೆಂಬ ಸ್ವಂತಿಕೆಯ ನೀತಿಗಳ ಚಲಾವಣೆಯಿಂದ  ಕೃತ್ಯ ಅಥವಾ ದುಸ್ಕøತ್ಯವೆಂಬ ನಾಮಫಲಕಗಳನ್ನು ಹೊಂದುತ್ತವೆ. ಹೀಗಿರುವಾಗ ನನಗೆ ಇದು ಸರಿಯೆನಿಸಿದಾಗ ಮಾಡುವಲ್ಲಿ ತಪ್ಪಿಲ್ಲ, ಜೊತೆಗೆ ನಾ ಮಾಡಿದ್ದೆಲ್ಲವೂ ಸರಿಯಲ್ಲ ಎನ್ನುವುದು ನಿಜವೇ ಆಗಿರುವಾಗ ಔಪಚಾರಿಕವಾಗಿಯೋ ಅನೌಪಚಾರಿಕವಾಗಿಯೋ ಪಡೆದ, ಪಡೆಯಬಹುದಾದ ಅನುಭವಗಳಿಂದ, ಚಿಂತನೆಗಳಿಂದ ಸಮಾಜದ ಪ್ರಗತಿಯನ್ನು ಕಾಪಾಡುವ ಹಿತದೃಷ್ಟಿಯ ಜೊತೆಗೆ ತಾನು ರಂಜನೀಯವಾಗಿಯೇ ಒಂದು ಜನ್ಮವನ್ನೂ ಕಳೆಯಬೇಕಿದೆ. ಹಾಗಾಗಿ ಏನೆಲ್ಲ ಸಾಧ್ಯತೆಗಳು ನಮ್ಮ ಜ್ಞಾನದೀವಟಿಗೆಯಲ್ಲಿಹವೋ ಅವನ್ನೆಲ್ಲ ಗುರ್ತಿಸುವ, ಕರತಲಾಮಲಗೊಳಿಸುವ, ಅರಳಿಸುವ, ಸಾಗಿಸುವ ಹೊಣೆಗೆ  ಸಮಯದ ಸದುಪಯೋಗ ಮತ್ತು ಸತ್ಯವಂತಿಕೆ ಇಲ್ಲಿ ಮುಖ್ಯ.
ಪ್ರತಿಯೊಬ್ಬರು ತಾವಿದ್ದ ಜಾಗದಲ್ಲಿಯೇ ಕ್ರೀಯಾಶೀಲರಾಗಿದ್ದೀರಿ. ನಿಮ್ಮನ್ನು ನೋಡಿ ‘ನಾವು ಯಾಕೆ ಹೀಗೆ’ ಎಂಬ ಕೊರಗೇ ನನಗೆ ಆದ್ಯ ಶಕ್ತಿಯಾಗಿ, ಪ್ರೇರಣೆಯಾಗಿ ಇನ್ನು ಮುಂದಾದರೂ ಒಂದು ಗಂಟೆ ಮೊದಲೇ ಎದ್ದು ಹಾಸಿಗೆಗೆ ವಿಶ್ರಾಂತಿ ನೀಡಬೇಕೆಂಬ ಕರುಣೆ ತರಲಿ. ಎಲ್ಲರಿಗೂ ಎಲ್ಲವೂ ಸಿಗಲಿ, ಸಿಗದಿದ್ದರೆ ಜನ್ಮ ತಡಕಾಡಲಿ....
ಇಲ್ಲಿ ನಾನು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದರೆ ನನ್ನ ಮನೆಯವರು ಗದ್ದೆ ಕುಯಲಿನಲ್ಲಿ ಬ್ಯುಸಿಯಾಗಿದ್ದಾರೆ. ಅವರ ಬೆವರ ಹನಿಯ ಲೆಕ್ಕಕ್ಕೆ ಭೂತಾಯಿ ಮೋಸಮಾಡಳು, ಕಾಳು ಧಾನ್ಯವನ್ನು ದೇವರೆನ್ನುವ ಅಪ್ಪ ನನ್ನ ಜೀವ. ಬಂದ ಕೆಲಸದವರಿಗೆ ಬುತ್ತಿಯಿಂದ ರುಚಿಯಾದ ಊಟ ಕೊಡುವ ನನ್ನಮ್ಮ ನನ್ನ ಜೀವ..


ಚಂದ್ರು ಎಂ ಹುಣಸೂರು

No comments:

Post a Comment