Friday 10 March 2017

ಅರಿವಿಲ್ಲದ ಬಿರುನುಡಿ----- ಚಂದ್ರು ಎಂ ಹುಣಸೂರು

ಅರಿವಿಲ್ಲದ ಬಿರುನುಡಿ

ಈಗೀಗ ಅಪ್ಪ ನಿಷ್ಪ್ರಯೋಜಕನೆ
ಹರಟುವುದು ಹೆಚ್ಚು, ಮರೆವಂತೂ ಇನ್ನೂ ಹೆಚ್ಚು
ಮಾಡಿದ್ದನ್ನೇ ಮಾಡುತ್ತಾ ಶುಚಿಯಾದ ಬಟ್ಟೆಯಾಕದೆ
ಬಂದ ಗೆಳೆಯರೊಡನೆ ನನಗವಮಾನ,,
ಯಾಕಾದರೂ ಇವನ ಮಗನಾದೆನೋ
ಇವನಿಲ್ಲದಿದ್ದರೂ ನನಗೆ ಚಿಂತೆಯಿಲ್ಲ!!
ಹೌದು ಕಣಪ್ಪಾ, ನನಗೂ ಹಾಗೆ ಅನ್ನಿಸುತ್ತದೆ,,

ಕೇಳಿಗ,,
ಆವತ್ತು ನಿನ್ನವ್ವ ನಿನ್ನೆರುವ ಸಂಭ್ರಮ
ಎಲ್ಲರು ಇಲ್ಲೆ ಬೋರಕ್ಕನೋ ಸೀತಕ್ಕನೋ ಕರೆಸಿ
ಎಷ್ಟು ಹೆರಿಗೆ ಮಾಡಿಸಿಲ್ಲ ಅವರು ಎಂದರು, ನಿನ್ನಪ್ಪಗೆ
ಗೋವೈದ್ಯ ಶಂಕರಪ್ಪ ಹೇಳಿದ್ದರಂತೆ ಮೊದಲೆರಿಗೆ
ಮೈಸೂರಿನ ಚೆಲುವಾಂಬ ಆಸ್ಪತ್ರೆನಾಗೆ ಆಗಲಿ
ತಾಯಿ ಮಗುವಿಗೆ ಒಳ್ಳೇದು ಯಾವುದಕ್ಕೂ ಎಂದು,,

ಯಾಕೋ ಒಸಿ ನೋವು ಎಂದಳು ನಿಮ್ಮವ್ವ
ಶ್ರೀರಂಗಪ್ಪನ ಭಕ್ತಿ ಹುಂಡಿಯನ್ನು ಬಿರಬಿರನೆ ಒಡೆದು
ಜೋಳಮಾರಿ ಚಂದದ ಬಚ್ಚಲು ಕಟ್ಟಲು ಇಟ್ಟಿದ್ದನ್ನು
ಸೇರಿಸಿ ಗಂಟುಕಟ್ಟಿ ಉಟ್ಟ ಪಂಚೆಯಲ್ಲೆ ನಡೆನಿಂತ.
ಮಗನಾಗಮನಕ್ಕೆ ಯಾರತ್ತಿರ ಕೈಚಾಚೋಕೆ ಕೈಬರಲಿಲ್ಲೇನೊ
ನಿನ್ನವ್ವನ ಹಸಿಗೂಸಿನಂತೆ ಕರೆದೊಯ್ದ, ನಿಧಾನ ಮೆಲ್ಲೆ ಎನ್ನುತ್ತಲೆ
ಬಸ್ಸತ್ತಿದ ಒಂದು ಸೀಟಿನಲ್ಲಿ ನಿಮ್ಮವ್ವ, ಅವ ನಿಂತಿದ್ದಾನೆ

ಸಂಜೆ 5.30 ಆಟೋ ಚೆಲುವಾಂಬ ಮುಂದೆ
ಬಸ್ಸಿಗೇನೋ ದುಡ್ಡುಕೊಟ್ಟ, ಆಟೋಗೆ? ಇಲ್ಲ!!
ಬಸ್ಸಿಳಿಸುವ ಮುತುವರ್ಜಿಯ ನಡುವೆ ಗಂಟು ಬಿದ್ದುಹೋಗಿದೆ!
ಪರವಾಯಿಲ್ಲ ಬಸುರಿಯೆಂಗಸು ಎಂದ ತ್ರಿಚಕ್ರಕರುಣಾಮಯಿ
ಮೆಲ್ಲಗೆ, ನಿಧಾನವೆನ್ನುತ್ತ ಆಸ್ಪತ್ರೆ ನೋಡಿ ಹತಾಶನಾದರು
ಹೆಜ್ಜೆ ಹಾಕಿಸಿದ, ಬಂಡ ಧೈರ್ಯವೋ? ಆತ್ಮ ಸ್ಥೈರ್ಯವೋ?

ಹವಾಯಿ ಚಪ್ಪಲಿ ಇನ್ನೇನೊ ಸಾಯುವುದರಲ್ಲಿದೆ
ಬಿಳಿಯ ಪಂಚೆ ಬಣ್ಣ ಬದಲಿಸುವಲ್ಲಿದೆ
ಬರುವ ಬರದಲ್ಲಿ ಮುಖವನ್ನೆ ತೊಳೆದಿಲ್ಲ, ಊಟ ಹೇಗೆ?
ವಾರ್ಡಿಗೆ ಕರೆದೊಯ್ದು ಯಾಕೋ ನಿಮ್ಮವ್ವ ನೋವಿಲ್ಲ ಎಂದಳು
ಅವಳಲ್ಲೆ ಮಲಗಿಸಿ ಬಂದೆ ಎಂದು ಹೊರನಡೆದ
ಅನಕ್ಷರಸ್ತ, ಬಡರೈತ, ಅದೆಲ್ಲಿಂದ ತಂದನೋ 500ರೂ
ಎಡಗೈಗೆ ಯಾವುದೋ ಪಿನ್ನು ಚುಚ್ಚಿತ್ತು, ಬಿಳಿ ಪಟ್ಟಿ ಕಟ್ಟಿತ್ತು!

ತಾಯಿಯಾಗುವಳ ಹೊಟ್ಟೆಗೆ 2 ದೋಸೆ, ಸಾಕೆಂದಳು
ಇವನೇನು ತಿಂದನೋ, ನಿಲ್ಲಲಾಗದೆ ಬಸವಳಿಯುತಿದ್ದ
ರಾತ್ರಿ ನಿದಿರೆ ನಿನ್ನವ್ವನಿಗೆ, ಅಲ್ಲೆ ಬಾಗಿಲ ಬಳಿ ಕೂತ
ಉದ್ಭವ ಮೂರ್ತಿಯಂತೆ, ಕಣ್ಮುಚ್ಚಲಿಲ್ಲ, ಚಳಿಯೋ ಚಳಿ
5 ಗಂಟೆಯ ಜಾವಕೆ ನೋವು ಕಂಡು ನೀ ಹೊರಬರುವಲ್ಲಿದ್ದೆ
ಅವ ಹೊರನಿಂತು ಕೈ ಕೈ ಮುಗಿಯುತ್ತ ಕಣ್ಣೀರಿಟ್ಟ, ಗೊತ್ತಾಗದಂತೆ!

ಪಿಳಪಿಳನೆ ಕಣ್ಣು ಬಿಡುವಲ್ಲಿದ್ದ ನೀನು ಬೆಳ್ಳಗಿದ್ದೆ
ಸರ್ಕಾರಿ ಡಾಕ್ಟರಮ್ಮನಿಗೆ 100 ರೂ ಕೊಡಲೋದ
ಇವನ ಸ್ಥಿತಿಕಂಡು ಯಾವತಾನೆ ಪಡೆವ ಪಾಪ
ಒಂದು ದಿನ ತಂಗಿದ್ದು, ಮಾರನೇಯ ದಿನ ಮನೆಯಲ್ಲಿ
ನನ್ನ ನನ್ನ ಯಜಮಾನ ಬಂದ ಅಂತ ಮನೆಯಲ್ಲ ನಗುವೆ
ಸೀನಣ್ಣನ ಕಾಯನ್ ಬೂತ್ನಿಂದ ಬಳಗದವರಿಗೆಲ್ಲ ಫೋನು!

ನಿನ್ನಾಗಮನ ಅನುಭವಿಸಿದ್ದ ನರಳುತ್ತಲೇ
ಒಂದು ವಾರ ಜ್ವರಬಂದು ನರಳಿದ್ದ, ಇದ್ದ ರಕ್ತ ಮಾರಿದ್ದಕ್ಕೆ
ಬದುಕಿದ್ದೇ ಹೆಚ್ಚು, ನಿನ್ನ ಹುಟ್ಟು ಒಂದು ದಿನ
ಅಂದೇ ಅವನ ಪೆರದಾಟ ಇಂತಿರುವಾಗ, ಈವರೆಗೆ ಸುಮ್ಮನೇನಾ?
ದೃಢಕಾಯನಾಗಿರುವೆ ನೀನು, ಎಷ್ಟಿದೆ ನಿನ್ನಮೇಲೆ ಇನ್ನೂ ಕಾಳಜಿ
ನಿನಗರಿವಿಲ್ಲ, ನಿನಗೀಗ ಅವ ನಿಷ್ಪ್ರಯೋಜಕ, ನಿಜವೇ ಕಣೋ
ಇನ್ನೊಮ್ಮೆ ಹೇಳು ಕಂದ, ನಿನ್ನಪ್ಪ ನಿಷ್ಪ್ರಯೋಜಕನೇ??





No comments:

Post a Comment