Friday 10 March 2017

ಗಟ್ಟಿಗಿತ್ತಿ --- ಚಂದ್ರು ಎಂ ಹುಣಸೂರು

ಗಟ್ಟಿಗಿತ್ತಿ

ಹೋದವಾರ ಮನೆಬಿಟ್ಟು ಹೋದವ
ಎತ್ತ ಹೋದ; ಎಲ್ಲಾದರೂ ಕಂಡಿರಾ?
ಇವನ್ನ ಕಟ್ಟಿಕೊಂಡು ಏಸಿ ಏಸಿ
ನನ್ನ ಜೀವಮಾನವೇ ಬೆಂಡತ್ತಿ ಹೊಯ್ತು,,

ಮಧುವೆಯಾದ ನಾಲ್ಕು ತಿಂಗಳಲ್ಲಿ
ಕೂಲಿ ಮಾಡಲು ನಿಂತವಳು ಮೊನ್ನೆ ಮೊನ್ನೆ ಸ್ವಂತವಾದೆ
ಕೈಯಂಚಿನ ಮನೆ ಕೈಯಾಡದೆ
ಮಳೆ ನೀರು ಸೋರುತ್ತಿದೆ; ಅಲ್ಲ ಸುರಿಯುತ್ತಿದೆ
ಮನೆಯೊಳಗಿದ್ದು ನೆಂದವರ ಮಡಿಲು ನಾನು,,

ಪಿತ್ರಾರ್ಜಿತ ಅಂತ ಎರಡು ಎಕರೆ
ಕೆಂಪಶೆಟ್ಟಿಯ ಕೂಡಿ ಯಾರೋ
ಹಳೇಪೇಟೆಯ ಸಾಬರನ್ನ ಕರೆತಂದು ಮಾರನಿಂತ
ಹೇಗೋ ಸುದ್ಧಿ ಅರಿತು ಲಬಲಬನೆ ಬಾಯಿ ¨ಡಿದೆ,
ಗಂಜಿಇಕ್ಕುವ ಸುಖದಲ್ಲಿ ಕರುಳ ಮರೆತು
ತಣ್ಣಿರು ಬಟ್ಟೆ ಸುತ್ತಿಕೊಂಡು ನಾಳೆ ನೆನೆದೆ,,

ಮಸಿ ಮಡಕೆಯಲ್ಲಿ ಗಂಜಿಗಿಲ್ಲದ ಬಾಳು
ನೀನೋ ಸಾರಾಯಿ ಪ್ಯಾಕೇಟು, ಆಲದ ಮರದಡಿಯ ಇಸ್ಪೀಟು
ಹೀಗೆ ಮನಸಾ ಇಚ್ಚೆ ನಿನ್ನನೇ ನೀ ಮಾರಿಕೊಂಡೆ
ರಂಡೆ, ಮುಂಡೆ ಅಂತ ಸಾರಿ ಸಾರಿಸಲ ಬಡಿದೆ
ನೀ ಹೋಗಿ 10 ವರ್ಷವಾದರೂ ಇಂದು ನೋವಿದೆ
ಮೊಣ ಕೈಯ ಭಾಗ,

ಊರ ಸಾಲು ಬೇಲಿಗಳ ಸಾಗಿ ಸಾಗಿ
ಇದ್ದೆರೆಡು ಆಡುಗಳಲ್ಲಿ ಹದಿನಾರು ಮಾಡಿದೆ,
ನಡುನಡುವೆ ನೀ ಕದ್ದೊಯ್ದವೆಷ್ಟೋ
ಹಿರಿಮಗಳು ನೆರೆದಾಗ ಕೂರಿಸಿಕ್ಕುವ ಭಾಗ್ಯಬಂತು
ಅಂದೂ ನೀ ನಿನ್ನ ಚಾಳಿ ಬಿಡಲಿಲ್ಲ,
ದೊಡ್ಡವರ ಮಗಳಂತೆ ನಳನಳಿಸುತ್ತಿದ್ದ ಮಗಳು
ಬೆಣ್ಣೆ, ತುಪ್ಪ, ಬಾಡು-ಬಳ್ಳೆ ಇಲ್ಲ, ಅನ್ನವೇ
ನನ್ನ ಕೈಲಾಗಿದ್ದು,,

ಹಿಂದಿನವರ ಮೂಲೆಸೂರ ಬಚ್ಚಲು ಕಡಾಯ ನೀರು
ಆಗಲ ಪಜ್ಜಿ, ನೆನರ್ಲೆಕುಡಿ ಪಜ್ಜಿ, ಒಬ್ಬಳಿಗಾಗಿ ಅನ್ನ
ಕಷ್ಟ ತಿಳಿದು ಬಯಕೆಗಳನ್ನೇ ಬಾಯ್ಬಿಡದ ಮಗಳಿಗೆ
ಸಾಲು ಸಾಲು ಸಂಬಂಧ ಬರುವಾಗಲೂ ನಿನ್ನಿಂದಲೇ ನಕಾರ
ಅಂತು ಇಂತು ಸಾಲವೋ ಶೂಲವೋ ಆರಂಭಸ್ತರ ಗೃಹಣಿಯಾದಳು
ಹೋದ ಮನೆಯಲ್ಲಿ ನಮ್ಮ ಕೀರ್ತಿ ಕೊಂಡಾಡುವಂತೆ ದುಡಿದಳು,,

ಮಗನಂತಾದ ಅಳಿಯ ನನ್ನ ಯೋಗಕ್ಷೇಮ ವಹಿಸಿದ
ಕೊನೆಯ ದಾರಿಯ ಹೊತ್ತಿಗೆ ಸುಗುಣನಾಗಲು ನಿಂತೆ ನೀ
ಭೂಮಿಯನ್ನೇ ತ್ಯಜಿಸಿ, ದೇವರಿಗಿಂತ ಮೊದಲು ನಿನಗೆ ಹಾರ
ಹಾಕುವ ಸ್ಥಿತಿ ನನ್ನದು,,
ಇಳಿವಯಸ್ಸಿನವಳೆನ್ನದೆ ಹೊಲದಹಾದಿ ಮನೆಯ ಹಾದಿಗೆ
ಹಾಳುಜನರ ಜಗಳಕ್ಕೆ ಕೋರ್ಟು ಹತ್ತಬೇಕಾಯ್ತು,,
ತಾಲ್ಲೂಕು ಆಫೀಸಿನಲ್ಲಿ ಒಂದೊಂದು ಪತ್ರ ತಗಿಸಬೇಕಾದರೆ
ಕಾಲ್ನಡಿಗೆಯಲ್ಲೇ ತಲೆತುಂಬ ಸೆರಗಸುತ್ತಿ ಅಲೆದೆ,

ಈಗ ಎಪ್ಪತ್ತು ವರ್ಷ, ಏಕಾಂಗಿಯಾಗಿ ಮಲಗಿರುವಾಗ
ಹುಣ್ಣಿಮೆಯ ಬೆಳಕಿನ ಕೋಲು ಕಿಂಡಿ ಹೆಂಚಿನ ನಡುವೆ
ನೇರವಾಗಿ ಜೀವಮಾನವೆಲ್ಲ ಬಿದ್ದ ಜಾಗಕ್ಕೆ ಬೀಳುತ್ತಿದೆ,
ಒಮ್ಮೆ ಹಿಂದಿನದೆಲ್ಲ ನೆನೆದರೆ ಎಷ್ಟೊಂದು ನೆನಪುಗಳು
ಕಷ್ಟವಾದರೂ ಸುಖವಾದರೂ ನನ್ನ ಜೀವಪಯಣ ಸಾಧಾರಣವೇ?
ನೀನು ಹಾಯಾಗಿ ಗೋಡೆಯ ಫೋಟೋವಾದೆ,
ತೋಟದ ಮಧ್ಯದಲ್ಲಿ ದಗದಗ ಉರಿದೆ
ಕೊನೆ ಕಾಳು ಬೂದಿ ಹಾರುವವರೆಗೆ ನಾ ದೃಷ್ಟಿಸಿ
ನಿನ್ನೊಂದಿಗಿನ ಯುದ್ದ ಬಾಳು ನೆನೆದು ಬಿಕ್ಕಳಿಸಿದೆ

ಕುಡಿಯುತ್ತೀಯೋ, ಜೂಜಾಡುತ್ತೀಯೋ ನೀ ಇರಬೇಕಿತ್ತು!!

1 comment: