Friday 10 March 2017

ಪ್ಯಾಂಟ್ ನಾಗರೀಕತೆ ----- ಚಂದ್ರು ಎಂ ಹುಣಸೂರು

ಪ್ಯಾಂಟ್ ನಾಗರೀಕತೆ

ಬೆಲ್ಲು ಹೊಡೆದರೆ ಕೇಳಿಸಿಕೊಂಡು ಶಾಲೆಗೆ
ಊರಿನ ಶಾಲೆಯಲ್ಲಿ ಓದು ಬರಹ ಕಲಿತು
ಹುಣಸೂರಿನ ಖಾಸಗೀ ಶಾಲೆಗೆ ಅಪ್ಪ ಸೇರಿಸಿದರು.
ಮೊದಲ ದಿನ ಚಡ್ಡಿ ಧರಿಸಿದ್ದು ನಕ್ಕರಪ್ಪ ನಾಗರೀಕರು,
ಹೆಂಚಿನ ಶಾಲೆಯ ಬಿಸಿಲು ಕೋಲು ಇಲ್ಲ
ಕಿಟಕಿಯಿಂದಾಚೆ ಊರ ಕೆಂಚಣ್ಣನ ಉಳುಮೆಯು ಇಲ್ಲ,,

ಚಡ್ಡಿಗೆ ಸಂಪೂರ್ಣ ವಿದಾಯ
ಅರೆಬರೆ ಪ್ಯಾಂಟು, ಹವಾಯಿ ಚಪ್ಪಲಿ
ಪ್ರಥಮ ಶಾಲೆ ಕಲಿಸಿದ್ಧ ಶಿಸ್ತು ಮಗ್ಗುಲಲ್ಲಿ
ಜ್ವರ ಬಂದಾಗಲೋ, ಅಜ್ಜಿಯ ಊರಿಗೆ ಹೋಗುವಾಗಲೋ
ಕೆಂಪು ಬಸ್ಸಲ್ಲಿ ಹುಣಸೂರು, ಇಂದು ನಿತ್ಯವೂ ನಮಗೆ ಬಸ್ಸು
ಕಾಲಿಗೆ ಷೂ, ಕುತ್ತಿಗೆ ಟೈ, ಯೂನಿಫಾರ್ಮ್ ನನಗೆ..

ಮಕ್ಕಳ ದಿನಾಚರಣೆ ಪ್ರಯುಕ್ತ ಬೀರಪ್ಪನ ಜಾತ್ರಾ-
ಅಂಗಳದಲ್ಲಿ ಪಿಕ್ನಿಕ್ ಹೋದಾಗ ಊಟದ ಡಬ್ಬಿಯ ನೆನಪು
ಇಂದು ನಿತ್ಯವೂ ಬಗೆಬಗೆಯ ಬಕ್ಷ್ಯ, ಮನೆಯಲ್ಲಿ ಮಾಮೂಲಿ
ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವದ
ಟ್ಯಾಬ್ಲೋ, ಆನೆ, ಟೌನ್ ಹಾಲ್ಗಳಿಗೆ ಪ್ರಿಯ ಹಣಸೂರು
ಈಗ ನಮ್ಮ ನಿತ್ಯ ಸವಾರಿ,,

ಕಷ್ಟವೋ, ಸುಖವೋ ಅಪ್ಪ ಫೀಜು ಕೊಡುತ್ತಾನೆ
ತಡವಾಗಿ, ಕೊನೆ ಕೊನೆಯ ದಿನಾಂಕದಂದು
ಇದೇ ನಾಗರೀಕತೆ ಎಂದು ತಿಳಿದದ್ದೆ ದಿನವೂ ಷೂಗೆ
ಕೊಬ್ಬರಿ ಎಣ್ಣೆ ಪಾಲೀಶ್, ಸಾಕ್ಸ್ ಒಳಗೆ ತಾನೆ ಸಂಬಂಧವಿಲ್ಲ
ವಿ ಬಿ ಮಿಸ್ ರವರ ಜೀವಶಾಸ್ತ್ರ ಮರೆಯಲಾಗದು
ಎಂ ಕೆ ಯವರ ನನ್ನ ಕನ್ನಡ ಇಂದಿಗೂ ಜೇಬಲ್ಲಿದೆ

ಎಸ್ ಜಿ ಸಮಾಜ ಮುಂದುವರಿಯುತ್ತಲೇ ಇದೆ,,

No comments:

Post a Comment